ಪ್ರಧಾನಿ ನರೇಂದ್ರ ಮೋದಿ ಕಾಶ್ಮೀರ ಭೇಟಿಗೆ ಕೆಲವೇ ಗಂಟೆಗಳ ಮೊದಲು ಸಮಾವೇಶ ಸ್ಥಳದಿಂದ 8 ಕಿಮೀ ದೂರದಲ್ಲಿ ಸ್ಫೋಟ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Apr 24, 2022 | 10:12 AM

ಕಾಶ್ಮೀರದ ಲಯಿನಾ ಗ್ರಾಮದ ಸಮೀಪ ಸ್ಫೋಟದ ತೀವ್ರತೆ ಆಳವಾದ ಕುಳಿಯೊಂದು ಉಂಟಾಗಿದ್ದು, ಸ್ಫೋಟಕ್ಕೆ ನಿಜವಾದ ಕಾರಣ ಏನು ಎಂದು ತಿಳಿದುಬಂದಿಲ್ಲ. ಭಾನುವಾರ ನಸುಕಿನ 4.30ರಲ್ಲಿ ಸ್ಫೋಟದ ಸದ್ದು ಕೇಳಿಸಿದೆ.

ಪ್ರಧಾನಿ ನರೇಂದ್ರ ಮೋದಿ ಕಾಶ್ಮೀರ ಭೇಟಿಗೆ ಕೆಲವೇ ಗಂಟೆಗಳ ಮೊದಲು ಸಮಾವೇಶ ಸ್ಥಳದಿಂದ 8 ಕಿಮೀ ದೂರದಲ್ಲಿ ಸ್ಫೋಟ
ಸ್ಫೋಟದ ಸ್ಥಳವನ್ನು ಪೊಲೀಸರು ಪರಿಶೀಲಿಸಿದರು.
Follow us on

ಶ್ರೀನಗರ: ಪ್ರಧಾನಿ ನರೇಂದ್ರ ಮೋದಿ ಅವರ ಬಹುನಿರೀಕ್ಷಿತ ಜಮ್ಮು ಕಾಶ್ಮೀರ ಭೇಟಿಗೆ ಕೆಲವೇ ಗಂಟೆಗಳ ಮೊದಲು ಸಮಾವೇಶ ನಡೆಯುವ ಸ್ಥಳದಿಂದ ಕೇವಲ 8 ಕಿಮೀ ದೂರದಲ್ಲಿ ಭಾರೀ ಸ್ಫೋಟ ಕೇಳಿಬಂದಿದೆ. ಲಯಿನಾ ಗ್ರಾಮದ ಸಮೀಪ ಸ್ಫೋಟದ ತೀವ್ರತೆ ಆಳವಾದ ಕುಳಿಯೊಂದು ಉಂಟಾಗಿದ್ದು, ಸ್ಫೋಟಕ್ಕೆ ನಿಜವಾದ ಕಾರಣ ಏನು ಎಂದು ತಿಳಿದುಬಂದಿಲ್ಲ. ಭಾನುವಾರ ನಸುಕಿನ 4.30ರಲ್ಲಿ ಸ್ಫೋಟದ ಸದ್ದು ಕೇಳಿಸಿದೆ. ಜಮ್ಮು ಜಿಲ್ಲೆಯ ಬಿಶ್​ನ್ಹಾ ತಾಲ್ಲೂಕಿನಲ್ಲಿ ಸ್ಫೋಟ ಸಂಭವಿಸಿರುವ ಸ್ಥಳವು ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮ ನಡೆಯಲಿರುವ ಸ್ಥಳದಿಂದ ಕೇವಲ 8 ಕಿಮೀ ದೂರದಲ್ಲಿದೆ. ಸಮಾವೇಶದಲ್ಲಿ ಭಾರೀ ಜನಸ್ತೋಮ ಸೇರುವ ಸಾಧ್ಯತೆಯಿದೆ. ಸ್ಫೋಟದಿಂದ ಉಂಟಾಗಿರುವ ಕುಳಿಯ ಬಳಿ ಪೊಲೀಸರು ಮತ್ತು ಗ್ರಾಮಸ್ಥರು ನೆರೆದಿದ್ದಾರೆ. ಈ ಪ್ರದೇಶದಲ್ಲಿ ಸ್ಫೋಟದ ನಂತರ ಆತಂಕದ ಪರಿಸ್ಥಿತಿ ಉಂಟಾಗಿದೆ.

ಆಗಸ್ಟ್ 2019ರಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದ 370ನೇ ವಿಧಿ ನೀಡಿದ್ದ ವಿಶೇಷ ಸ್ಥಾನಮಾನ ಹಿಂಪಡೆದ ನಂತರ ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಕಾಶ್ಮೀರ ಕಣಿಗೆಗೆ ಅಧಿಕೃತ ಭೇಟಿ ನೀಡುತ್ತಿದ್ದು, ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಲಿದ್ದಾರೆ. ಲಯಿನಾ ಗ್ರಾಮವು ಹಾವುಕಡಿತದ ಚಿಕಿತ್ಸೆಗೆ ಪ್ರಸಿದ್ಧವಾಗಿರುವ ಗ್ರಾಮ.

ಪ್ರಧಾನಿ ನರೇಂದ್ರ ಮೋದಿ ಭೇಟಿಯ ಹಿನ್ನೆಲೆಯಲ್ಲಿ ಕಣಿವೆ ರಾಜ್ಯದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಸುನ್​ಜ್ವಾನ್​ನಲ್ಲಿ ಶುಕ್ರವಾರ ಭದ್ರತಾ ಪಡೆಗಳಿದ್ದ ಬಸ್​ ಮೇಲೆ ಉಗ್ರರು ದಾಳಿ ನಡೆಸಿದ್ದರು. ನಂತರ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಭದ್ರತಾ ಸಿಬ್ಬಂದಿ ಹುತಾತ್ಮರಾಗಿ ಇಬ್ಬರು ಗಾಯಗೊಂಡಿದ್ದರು. ದಾಳಿ ನಡೆಸಿದ್ದ ಇಬ್ಬರು ಉಗ್ರರನ್ನು ಭದ್ರತಾ ಪಡೆಗಳು ಕೊಂದುಹಾಕಿದ್ದವು. ಈ ಉಗ್ರರು ಆತ್ಮಾಹುತಿ ಜಾಕೆಟ್ ಧರಿಸಿದ್ದರು. ಶ್ರೀನಗರದಲ್ಲಿ ದೊಡ್ಡಮಟ್ಟದ ಸಾವುನೋವಿಗೆ ಕಾರಣವಾಗುವ ದಾಳಿ ನಡೆಸುವುದು ಅವರ ಉದ್ದೇಶವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಕುಲ್ಗಾಂನಲ್ಲಿ ನಡೆದಿದ್ದ ಮತ್ತೊಂದು ಎನ್​ಕೌಂಟರ್​ನಲ್ಲಿ ಭದ್ರತಾಪಡೆಗಳು ಇಬ್ಬರು ಉಗ್ರರನ್ನು ಕೊಂದಿದ್ದವು. ಇವರಿಬ್ಬರು ಪಾಕ್​ನಿಂದ ಬಂದಿದ್ದ ಜೈಶ್-ಎ-ಮೊಹಮದ್ ಸಂಘಟನೆಯ ಉಗ್ರರಾಗಿದ್ದರು.

ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ಕಾಶ್ಮೀರದಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಪಲ್ಲಿ ಪ್ರದೇಶದಲ್ಲಿ ಪ್ರಧಾನಿಗೆ ವೈಭವದ ಸ್ವಾಗತಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬಿಜೆಪಿ ಆಯೋಜಿಸಿರುವ ಈ ಕಾರ್ಯಕ್ರದಲ್ಲಿ ಸಾವಿರಾರು ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಪಂಚಾಯತ್ ರಾಜ್ ವ್ಯವಸ್ಥೆಯ ಪ್ರಾಮುಖ್ಯತೆಯನ್ನು ಸಾರಿಹೇಳುವ ಕಾರ್ಯಕ್ರಮವೊಂದರ ಅಧ್ಯಕ್ಷತೆಯನ್ನೂ ಪ್ರಧಾನಿ ನರೇಂದ್ರ ಮೋದಿ ವಹಿಸಲಿದ್ದಾರೆ. ಇಂದು ಪಂಚಾಯತ್ ರಾಜ್ ದಿನವೂ ಹೌದು.

ಪ್ರಧಾನಿ ನರೇಂದ್ರ ಮೋದಿ ಅವರು ಇಂದಿನ ಭೇಟಿಯು ಕಣಿವೆ ರಾಜ್ಯವನ್ನು ಅಭಿವೃದ್ಧಿಯ ಹೊಸ ಪಥದತ್ತ ಮುನ್ನಡೆಸುವಲ್ಲಿ ಮಹತ್ವದ ಮೈಲಿಗಲ್ಲಾಗುತ್ತದೆ ಎಂದು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ವರದಿಗಾರರಿಗೆ ತಿಳಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಆಗಸ್ಟ್ 2019ರ ನಂತರ ಪ್ರಧಾನಿ ನರೇಂದ್ರ ಮೋದಿ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಂದೆಯೂ ಹಲವು ಬಾರಿ ಗಡಿ ನಿಯಂತ್ರಣ ರೇಖೆಯಲ್ಲಿ ನಿಯೋಜನೆಗೊಂಡಿದ್ದ ಸೇನಾ ತುಕಡಿಗಳನ್ನು ಪ್ರಧಾನಿ ಮೋದಿ ಭೇಟಿಯಾಗಿದ್ದರು.

ಪ್ರಧಾನಿ ನರೇಂದ್ರ ಮೋದಿ ಅವರು ₹ 20,000 ಕೋಟಿಗೂ ಹೆಚ್ಚು ಮೊತ್ತದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಕೇಂದ್ರಾಡಳಿತ ಪ್ರದೇಶಗಳ ಎರಡು ಪ್ರದೇಶಗಳ ನಡುವೆ ಸರ್ವಋತು ಸಂಪರ್ಕ ಕಲ್ಪಿಸುವ ಬನಿಹಾಲ್-ಖಾಜಿಗುಂಡ್ ರಸ್ತೆ ಸುರಂಗ ಮಾರ್ಗವನ್ನೂ ಮೋದಿ ಲೋಕಾರ್ಪಣೆ ಮಾಡಲಿದ್ದಾರೆ.

ಇದನ್ನೂ ಓದಿ: ಇಂದು ಜಮ್ಮು ಕಾಶ್ಮೀರಕ್ಕೆ ಪ್ರಧಾನಿ ನರೇಂದ್ರ ಮೋದಿ: ವಿಶೇಷ ಸ್ಥಾನಮಾನ ರದ್ದತಿ ನಂತರ ಕಣಿವೆ ರಾಜ್ಯಕ್ಕೆ ಮೊದಲ ಅಧಿಕೃತ ಭೇಟಿ

ಇದನ್ನೂ ಓದಿ: Viral Video: ಜಮ್ಮುವಿನಲ್ಲಿ ಸೈನಿಕರಿದ್ದ ಬಸ್ ಮೇಲೆ ಉಗ್ರರ ದಾಳಿಯ ಶಾಕಿಂಗ್ ವಿಡಿಯೋ ವೈರಲ್