ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮ 88ನೇ ಆವೃತ್ತಿಯ ಮನ್ ಕೀ ಬಾತ್ನ್ನು, ಪ್ರಧಾನಮಂತ್ರಿಗಳ ಸಂಗ್ರಹಾಲಯ (Prime Ministers’ museum)ದ ಬಗ್ಗೆ ಪ್ರಸ್ತಾಪ ಮಾಡುವ ಮೂಲಕ ಶುರು ಮಾಡಿದರು. ಈ ಪ್ರಧಾನಿಗಳ ಸಂಗ್ರಹಾಲಯವನ್ನು ಏಪ್ರಿಲ್ 14 ಅಂಬೇಡ್ಕರ್ ಜಯಂತಿಯಂದು ದೆಹಲಿಯಲ್ಲಿ ಪ್ರಧಾನಿ ಮೋದಿಯವರೇ ಉದ್ಘಾಟಿಸಿದ್ದಾರೆ. ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ಪ್ರಧಾನಮಂತ್ರಿ ಹುದ್ದೆಗೆ ಏರಿದ ಎಲ್ಲರಿಗೆ ಸಂಬಂಧಪಟ್ಟ ನೆನಪುಗಳು, ವಿಷಯಗಳು, ಸ್ಮರಣಿಕೆಗಳನ್ನು ಈ ಮ್ಯೂಸಿಯಂ ಒಳಗೊಂಡಿದೆ. ಎಲ್ಲ ಪ್ರಧಾನಿಗಳಿಗೆ ಗೌರವ ಸಲ್ಲಿಸುವ ಸಲುವಾಗಿ ಇದನ್ನು ನಿರ್ಮಾಣ ಮಾಡಲಾಗಿದ್ದು, ಇಂದಿನ ಮನ್ ಕೀ ಬಾತ್ನಲ್ಲಿ ಮೊದಲಿಗೆ ಇದೇ ವಿಚಾರವನ್ನು ಪ್ರಧಾನಿ ಮೋದಿ ಪ್ರಸ್ತಾಪ ಮಾಡಿದರು. ‘ಈ ಸಂಗ್ರಹಾಲಯಕ್ಕೆ ಅನೇಕ ಜನರು ತಮ್ಮ ವೈಯಕ್ತಿಕ ಸಂಗ್ರಹಗಳನ್ನು ಮತ್ತು ಪ್ರಾಚೀನ ಕಲಾಕೃತಿಗಳನ್ನು ಕೊಡುಗೆ ನೀಡುತ್ತಿದ್ದಾರೆ. ಈ ಮೂಲಕ ಸಾಂಸ್ಕೃತಿಕ ಪರಂಪರೆಯನ್ನು ಸಮಾಜದೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಇದು ನಿಜಕ್ಕೂ ಶ್ಲಾಘನೀಯ’ ಎಂದು ಪ್ರಧಾನಿ ಹೇಳಿದರು. ಅಷ್ಟೇ ಅಲ್ಲ, ಈ ಮ್ಯೂಸಿಯಂಗೆ ಪ್ರತಿಯೊಬ್ಬರೂ ಒಮ್ಮೆಯಾದರೂ ಭೇಟಿ ಕೊಡಬೇಕು ಎಂದು ಹೇಳಿದರು.
ನಗದು ರಹಿತವಾಗಿ ಡೇ ಔಟ್ಗೆ ಹೋಗಿ
ಇಂದಿನ ಮನ್ ಕೀ ಬಾತ್ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಆನ್ಲೈನ್ ವ್ಯವಹಾರ, ಡಿಜಿಟಲ್ ಪಾವತಿಯ ಬಗ್ಗೆಯೂ ಮಾತನಾಡಿದರು. ಈಗೀಗ ಸಣ್ಣಸಣ್ಣ ಹಳ್ಳಿಗಳಲ್ಲೂ ಜನರು ಯುಪಿಐ (ಏಕೀಕೃತ ಪಾವತಿಗಳ ಇಂಟರ್ಫೇಸ್) ಬಳಸುತ್ತಿದ್ದಾರೆ. ಅಂಗಡಿಗಳ ಮಾಲೀಕರು ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಇಟ್ಟುಕೊಳ್ಳುತ್ತಿದ್ದಾರೆ. ಹಾಗೇ, ಗ್ರಾಹಕರೂ ಅದನ್ನು ಸರಿಯಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಈ ಆನ್ಲೈನ್ ಪಾವತಿ ವ್ಯವಸ್ಥೆ ಡಿಜಿಟಲ್ ಆರ್ಥಿಕತೆಯನ್ನು ಉತ್ತೇಜಿಸುತ್ತಿದೆ. ಪ್ರತಿದಿನ ಏನಿಲ್ಲವೆಂದರೂ 20 ಸಾವಿರ ಕೋಟಿ ರೂಪಾಯಿಗಳಷ್ಟು ಆನ್ಲೈನ್ ವಹಿವಾಟು ನಡೆಯುತ್ತಿದೆ ಎಂದು ಹೇಳಿದರು. ಅಷ್ಟೇ ಅಲ್ಲ, ಈಗ ಜನರು ಆರಾಮಾಗಿ ಕ್ಯಾಶ್ಲೆಸ್ ಡೇಔಟ್ಗೆ (ನಗದು ರಹಿತವಾಗಿ) ಹೋಗಬಹುದು ಎಂದೂ ಅಭಿಪ್ರಾಯಪಟ್ಟರು.
ಜಲಸಂರಕ್ಷಣೆಯ ಮಹತ್ವ
ಪ್ರಧಾನಿ ನರೇಂದ್ರ ಮೋದಿ ಸಾಮಾನ್ಯವಾಗಿ ಪದೇಪದೆ ಜಲಸಂರಕ್ಷಣೆ ಬಗ್ಗೆ ಮಾತನಾಡುತ್ತಾರೆ. ಇಂದಿನ ಮನ್ ಕೀ ಬಾತ್ನಲ್ಲೂ ಕೂಡ ಅವರು ನೀರಿನ ರಕ್ಷಣೆಯ ಬಗ್ಗೆ ಮಾತನಾಡಿದರು. ನೀರನ್ನು ಮಿತವಾಗಿ ಬಳಸುವುದು, ಮಾಲಿನ್ಯವಾಗದಂತೆ ತಡೆಯುವುದು ಈ ಸಮಾಜದ ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದೂ ಹೇಳಿದರು. ಅಭಿವೃದ್ಧಿಯೆಡೆಗೆ ದಾಪುಗಾಲು ಹಾಕುತ್ತಿರುವ ನಮ್ಮ ದೇಶದ ಸಂಕಲ್ಪಗಳಲ್ಲಿ ಜಲಸಂರಕ್ಷಣೆಯೂ ಒಂದು. ಹಾಗೇ, ಮುಂಬರುವ ದಿನಗಳಲ್ಲಿ ಪ್ರತಿ ಜಿಲ್ಲೆಯಲ್ಲೂ 75 ಅಮೃತ ಸರೋವರಗಳ ನಿರ್ಮಾಣದ ಗುರಿಯಿದೆ ಎಂದು ಪ್ರಧಾನಿ ತಿಳಿಸಿದರು. ನೀರು ಒಂದು ಪ್ರಮುಖ ನೈಸರ್ಗಿಕ ಸಂಪನ್ಮೂಲ. ಪ್ರತಿ ಜೀವಿಗಳ ಮೂಲಭೂತ ಅವಶ್ಯಕತೆ ಇದು ಎಂದು ಧರ್ಮಗ್ರಂಥದಲ್ಲೇ ಉಲ್ಲೇಖವಿದೆ ಎಂದು ಹೇಳಿದರು.
ಇದನ್ನೂ ಓದಿ: ರೇವಣ್ಣ, ಭವಾನಿ ವಿರುದ್ಧ ಸ್ಪರ್ಧೆಗೆ ನಾನು ರೆಡಿ: ಹಾಸನದಲ್ಲಿ ಸವಾಲು ಹಾಕಿದ ಪ್ರೀತಂಗೌಡ