ರೇವಣ್ಣ, ಭವಾನಿ ವಿರುದ್ಧ ಸ್ಪರ್ಧೆಗೆ ನಾನು ರೆಡಿ: ಹಾಸನದಲ್ಲಿ ಸವಾಲು ಹಾಕಿದ ಪ್ರೀತಂಗೌಡ
ಕರ್ನಾಟಕದಲ್ಲಿ ಹಲವು ಆಶ್ಚರ್ಯಕರ ಸಂಗತಿಗಳು ನಡೆಯಲಿವೆ. ಸ್ವಲ್ಪ ಸಮಯ ಕಾದು ನೋಡಿ ಎಂದು ಬಿಜೆಪಿ ಶಾಸಕ ಪ್ರೀತಂಗೌಡ ಹೇಳಿದರು.
ಹಾಸನ: ಕರ್ನಾಟಕದಲ್ಲಿ ಹಲವು ಆಶ್ಚರ್ಯಕರ ಸಂಗತಿಗಳು ನಡೆಯಲಿವೆ. ಸ್ವಲ್ಪ ಸಮಯ ಕಾದು ನೋಡಿ ಎಂದು ಬಿಜೆಪಿ ಶಾಸಕ ಪ್ರೀತಂಗೌಡ ಹೇಳಿದರು. ಯಾರು ಯಾವ ಪಕ್ಷಕ್ಕೆ ಸೇರುತ್ತಾರೆ ಎನ್ನುವುದಕ್ಕೆ ಕಾಲವೇ ಉತ್ತರ ಹೇಳಲಿದೆ. ಪಕ್ಷಕ್ಕೆ ಬನ್ನಿ ಎಂದು ನಾವು ಯಾರಿಗೂ ಆಹ್ವಾನ ಪತ್ರಿಕೆ ಕೊಟ್ಟಿಲ್ಲ. ಮುಂದಿನ ದಿನಗಳಲ್ಲಿ ನೀವೆಲ್ಲರೂ ಆಶ್ಚರ್ಯಪಡುವ ಹಲವು ಸಂಗತಿಗಳು ನಡೆಯಲಿವೆ ಎಂದರು. ಹಾಸನದಿಂದ ಸ್ಪರ್ಧಿಸುವಂತೆ ಜೆಡಿಎಸ್ನ ಹಿರಿಯ ನಾಯಕ ಎಚ್.ಡಿ.ರೇವಣ್ಣ ಮತ್ತು ಅವರ ಪತ್ನಿ ಭವಾನಿ ಅವರಿಗೆ ನಾನೇ ಆಹ್ವಾನ ನೀಡುತ್ತೇನೆ. ಅವರು ಸ್ಪರ್ಧಿಸಿದರೆ ನನಗೆ ಸಂತೋಷ. ರೆಡಿಯಾಗಿ ಬರಬೇಕಿದ್ದು ಅವರು, ನಾನು ರೆಡಿಯಾಗಿದ್ದೇನೆ ಎಂದು ಸವಾಲು ಹಾಕಿದರು.
ಹಾಸನದಿಂದ ಯಾರು ಸ್ಪರ್ಧಿಸಬೇಕೆಂದು ತಾಯಿ ಹಾಸನಾಂಬೆ ಮತ್ತು ಪುರದಮ್ಮ ಅವರಿಗೆ ಹೇಳಿದ್ದೇನೆ. ಹಲವು ಶಾಸಕರು ಜೆಡಿಎಸ್ ಪಕ್ಷ ಬಿಡಲಿರುವ ಕುರಿತು ಕೇಳಿಬರುತ್ತಿರುವ ಮಾತುಗಳ ಕುರಿತು ಪ್ರತಿಕ್ರಿಯಿಸಿದ ಅವರು, ಅವರ ಮನೆಯ ಸಮಸ್ಯೆಗಳನ್ನು ಅವರೇ ಬಗೆಹರಿಸಿಕೊಳ್ತಾರೆ ಎಂದಷ್ಟೇ ಮುಗುಂ ಆಗಿ ಉತ್ತರಿಸಿದರು.
ರಾಜಕೀಯ ಪ್ರೇರಿತ ಹೋರಾಟ
ಹಾಸನ ನಗರ ಹಾಯ್ದುಹೋಗಿರುವ ಹೆದ್ದಾರಿ ಬಳಿ ಟ್ರಕ್ ಟರ್ಮಿನಲ್ ಆರಂಭಿಸುವುದರಿಂದ ಟ್ರಾಫಿಕ್ ಸಮಸ್ಯೆ ಉಂಟಾಗುವುದಿಲ್ಲ. ನಗರದ ಒಳಗೆ ಬಂದರೆ ಜನರಿಗೆ ಸಮಸ್ಯೆ ಆಗುತ್ತದೆ. ರಾಜಘಟ್ಟ ಬಳಿಯ ಟ್ರಕ್ ಟರ್ಮಿನಲ್ ಸ್ಥಳಾಂತರ ಮಾಡಬೇಕೆಂಬ ಬೇಡಿಕೆ ಹಲವು ವರ್ಷಗಳಿಂದ ಇತ್ತು. ಟರ್ಮಿನಲ್ ವಿರುದ್ಧ ಗ್ರಾಮಸ್ಥರು ಪ್ರತಿಭಟನೆ ಮಾಡಿಲ್ಲ ಎಂದರು. ಪ್ರತಿಭಟನೆ ಮಾಡುತ್ತಿರುವ ಗ್ರಾಮದ ಮುಖಂಡನೊಬ್ಬ ಡಾಬಾ ಮಾಡಿಕೊಂಡು ರಸ್ತೆಪಕ್ಕದಲ್ಲಿಯೇ ಮದ್ಯ ಮಾರಾಟ ಮಾಡುವುದು ಸರಿಯೇ ಎಂದು ಪ್ರಶ್ನಿಸಿದರು.
ಹಾಸನ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನಾನು ಮಾಡಿರುವ ಅಭಿವೃದ್ಧಿ ಕೆಲಸಗಳು ಒಪ್ಪಿಗೆಯಾಗಿದ್ದರೆ ನನಗೆ ಮತದಾರರ ಆಶೀರ್ವಾದ ಸಿಗಲಿ. ರೇವಣ್ಣ ಮಾಡಿರುವ ಕೆಲಸಗಳು ಇಷ್ಟವಾಗಿದ್ದರೆ ಅವರಿಗೆ ಮತ ಕೊಡುವ ಬಗ್ಗೆ ಜನರೇ ತೀರ್ಮಾನ ಮಾಡಲಿ. ಹಾಸನ ಕ್ಷೇತ್ರದಲ್ಲಿ ರೇವಣ್ಣ ಅಥವಾ ಭವಾನಿ ಯಾರೇ ಬಂದರೂ ಚುನಾವಣೆ ಎದುರಿಸಲು ಸಿದ್ಧನಿದ್ದೇನೆ ಎಂದರು.
ಹಾಸನದಲ್ಲಿ ಸುಸಜ್ಜಿತ ತಾಲ್ಲೂಕು ಕಚೇರಿ ಕಟ್ಟಡ ನಿರ್ಮಿಸಬೇಕು ಎಂದುಕೊಂಡಿದ್ದೇನೆ. ಈ ಕೆಲಸಕ್ಕೆ ರೇವಣ್ಣ ಅಪ್ಪಣೆ ಬೇಕೆ? ಹಾಸನ ಇವರ ಮನೆ ಆಸ್ತಿ ಅಲ್ಲ. ಪ್ರೀತಂ ಗೌಡ ಹೆಬ್ಬೆಟ್ಟಲ್ಲ. ಎರಡು ಹೋಬಳಿ ಅವರ ಕ್ಷೇತ್ರಕ್ಕೆ ಸೇರಿರಬಹುದು, ಹಾಗೆಂದು ಇಡೀ ತಾಲ್ಲೂಕಿಗೆ ಸಂಬಂಧಿಸಿದಂತೆ ನಿರ್ಧಾರ ಕೈಗೊಳ್ಳುವ ಅಧಿಕಾರ ಯಾರು ಕೊಟ್ಟವರು ಯಾರು? ತಾಲ್ಲೂಕು ಕಚೇರಿಯಲ್ಲಿ ಆಡಳಿತಕ್ಕೆ ಸಂಬಂಧಿಸಿದ ಚಟುವಟಿಕೆ ಮಾಡಿಕೊಳ್ಳಲಿ ಎಂದು ನುಡಿದರು.
ಇದನ್ನೂ ಓದಿ: ಯಾರದೋ ತಪ್ಪಿನಿಂದಾಗಿ ಪ್ರೀತಂ ಗೌಡ ಗೆದ್ದಿದ್ದಾರೆ; ಬಂದಷ್ಟೇ ವೇಗದಲ್ಲಿ ಹೋಗುತ್ತಾರೆ ಬಿಡಿ- ಹೆಚ್‌ಡಿ ಕುಮಾರಸ್ವಾಮಿ ಹೇಳಿಕೆ
ಇದನ್ನೂ ಓದಿ: ಶಾಸಕ ಪ್ರೀತಂ ಗೌಡ ತಂತ್ರಗಾರಿಕೆ: ಹಾಸನದಲ್ಲಿ ಮತ್ತೆ JDS ಕೈ ತಪ್ಪಿದ ಅಧಿಕಾರ