ಹಾಸನ:ಜೆಡಿಎಸ್ ಪಕ್ಷದ ತವರೂರು ಅನಿಸಿರುವ ಹಾಸನ ಜಿಲ್ಲೆಯಲ್ಲಿ ಬಹುಮತವಿದ್ದರೂ JDSಗೆ ಅಧಿಕಾರದ ಚುಕ್ಕಾಣಿಯಿಂದ ದೂರ ಉಳಿಯುವಂತಾಗಿದೆ. ಮುಖ್ಯವಾಗಿ ಮೀಸಲಾತಿ ನೀತಿ ಮೂಲಕ ಆಡಳಿತಾರೂಢ ಬಿಜೆಪಿ ಸರ್ಕಾರ JDSಗೆ ಬರೆ ಹಾಕಿದೆ.
ಏನಾಗಿದೆಯೆಂದ್ರೆ ಸರ್ಕಾರದ ಈ ನಿರ್ಧಾರದಿಂದ ಹಾಸನ ನಗರ ಸಭೆ ಹಾಗೂ ಅರಸೀಕೆರೆ ನಗರಸಭೆಯಲ್ಲಿ ಜೆಡಿಎಸ್ಗೆ ಟಾಂಗ್ ಕೊಟ್ಟಂತಾಗಿದೆ. ಎರಡೂ ನಗರಸಭೆಗೆ ಪರಿಶಿಷ್ಟ ವರ್ಗ (ಎಸ್.ಟಿ) ಅಭ್ಯರ್ಥಿಗೆ ಅಧ್ಯಕ್ಷ ಸ್ಥಾನ ಮೀಸಲಿನಿಂದ ಜೆಡಿಎಸ್ ಗೆ ಭಾರೀ ನಿರಾಸೆಯುಂಟಾಗಿದೆ.
35 ಸದಸ್ಯ ಬಲದ ಹಾಸನ ನಗರಸಭೆಯಲ್ಲಿ JDS 17 ಸ್ಥಾನ ಗೆದ್ದು, ಅಧಿಕಾರ ಗದ್ದುಗೆ ಏರೋ ಕನಸು ಕಂಡಿತ್ತು. ಆದ್ರೆ ಇತ್ತ 13 ಸ್ಥಾನ ಗೆದ್ದರೂ ಮೀಸಲಾತಿ ಬಲದಿಂದ ಅಧಿಕಾರ ಚುಕ್ಕಾಣಿ ಹಿಡಿಯೋಕೆ ಬಿಜೆಪಿ ಸಜ್ಜಾಗಿ ಕುಳಿತಿದೆ.
ಅರಸೀಕೆರೆ ನಗರಸಭೆಯಲ್ಲೂ.. ಇನ್ನು, ಅರಸೀಕೆರೆ ನಗರಸಭೆಯಲ್ಲೂ 22 ಸ್ಥಾನ ಗೆದ್ದ ಜೆಡಿಎಸ್ ಗೆ ಅಧಿಕಾರ ಸಿಗೊಲ್ಲ. ಐವರು ಸದಸ್ಯರನ್ನು ಹೊಂದಿರೋ ಬಿಜೆಪಿಗೇ ಅಧ್ಯಕ್ಷ ಸ್ಥಾನ ಅಲಂಕರಿಸೊ ಭಾಗ್ಯ ಬಂದೊದಗಿದೆ. ಎರಡೂ ಕಡೆ ಜೆಡಿಎಸ್ ಸದಸ್ಯರೇ ಇಲ್ಲದ ಮೀಸಲಾತಿ ಪ್ರಕಟವಾಗಿದೆ!
ಶಾಸಕ ಪ್ರೀತಂ ಗೌಡ ತಂತ್ರಗಾರಿಕೆಯೇ ಕಾರಣ ಜಿ.ಪಂ ನಲ್ಲೂ ಸ್ಪಷ್ಟ ಬಹುಮತ ಇದ್ದರೂ ಜೆಡಿಎಸ್ ಅಧಿಕಾರದಿಂದ ದೂರವಾಗುವ ಪ್ರಸಂಗ ಎದುರಾಗಿತ್ತು. ಇದರ ಬೆನ್ನಲ್ಲೇ ಇದೀಗ ಜೆಡಿಎಸ್ ಗೆ ಎರಡೆರಡು ಕಡೆ ಭಾರೀ ನಿರಾಸೆಯಾಗಿದೆ. ಒಟ್ನಲ್ಲಿ ಸರ್ಕಾರದ ಮೀಸಲಾತಿ ನಿಗದಿ ಜಿಲ್ಲೆಯಲ್ಲಿ ತೀವ್ರ ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿದೆ. ಇದಕ್ಕೆಲ್ಲ ಶಾಸಕ ಪ್ರೀತಂ ಗೌಡ ತಂತ್ರಗಾರಿಕೆಯೇ ಕಾರಣ ಎನ್ನಲಾಗಿದೆ.
ರಾಜಕೀಯ ದುರುದ್ದೇಶದಿಂದ ಮೀಸಲಾತಿ ನಿಗದಿ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲು ವಿಚಾರದಲ್ಲಿ ರಾಜ್ಯ ಸರ್ಕಾರ ನಿನ್ನೆ ಹೊರಡಿಸಿರುವ ಆದೇಶದಿಂದ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ ಎಂದು ಹಾಸನದಲ್ಲಿ ಅರಸೀಕೆರೆ JDS ಶಾಸಕ ಶಿವಲಿಂಗೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜಕೀಯ ದುರುದ್ದೇಶದಿಂದ ಮೀಸಲಾತಿ ನಿಗದಿ ಮಾಡಲಾಗಿದೆ. ಈ ಬಗ್ಗೆ ಕಾನೂನು ಹೋರಾಟ ಮಾಡಿಯೇ ತೀರುತ್ತೇವೆ. ಸುಪ್ರೀಂಕೋರ್ಟ್ಗೆ ಹೋಗಿಯಾದ್ರು ನಾವು ಬಿಡೋದಿಲ್ಲ. ಸ್ವಾರ್ಥ, ಅಧಿಕಾರ ಲಾಲಸೆಯಿಂದ ಈ ರೀತಿ ಮಾಡಲಾಗಿದೆ. ಯಡಿಯೂರಪ್ಪ ಸರ್ಕಾರದಲ್ಲಿ ಕಾಣದ ಕೈಗಳು ಕೆಲಸ ಮಾಡ್ತಿವೆ. ಮೀಸಲಾತಿ ನಿಗದಿ ವಿಚಾರದಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಕೈ ಕಟ್ಟಿ ಹಾಕಲಾಗಿದೆ. ಹಿಂಬದಿ ರಾಜಕೀಯ ಮಾಡುವವರು ಹೀಗೆ ಮಾಡುತ್ತಿದ್ದಾರೆ ಎಂದು ಅರಸೀಕೆರೆ ಶಾಸಕ ಶಿವಲಿಂಗೇಗೌಡ ಹೇಳಿದ್ದಾರೆ.