ಯುಎಸ್​​ನಿಂದ ಭಾರತಕ್ಕೆ ಮರಳಿದ ಪ್ರಧಾನಿ ಮೋದಿ; ಬಿಜೆಪಿ ನಾಯಕರಿಂದ ಭರ್ಜರಿ ಸ್ವಾಗತ

| Updated By: Lakshmi Hegde

Updated on: Sep 26, 2021 | 1:21 PM

PM Narendra Modi: ಅಮೆರಿಕದಲ್ಲಿ ಜೋ ಬೈಡೆನ್​ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಮೇಲೆ ಇದೇ ಮೊದಲ ಬಾರಿಗೆ ಪ್ರಧಾನಿ ಮೋದಿ ಯುಎಸ್​ಗೆ ಭೇಟಿ ನೀಡಿದ್ದರು.

ಯುಎಸ್​​ನಿಂದ ಭಾರತಕ್ಕೆ ಮರಳಿದ ಪ್ರಧಾನಿ ಮೋದಿ; ಬಿಜೆಪಿ ನಾಯಕರಿಂದ ಭರ್ಜರಿ ಸ್ವಾಗತ
ಪ್ರಧಾನಿ ನರೇಂದ್ರ ಮೋದಿ
Follow us on

ಸೆ.23ರಿಂದ ಮೂರು ದಿನಗಳ ಯುಎಸ್​ ಪ್ರವಾಸದಲ್ಲಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi) ಇಂದು (ಭಾನುವಾರ-ಸೆ.26) ಭಾರತಕ್ಕೆ ಆಗಮಿಸಿದ್ದಾರೆ. ಇಂದು ದೆಹಲಿಯ ಪಾಲಂ ತಾಂತ್ರಿಕ ವಿಮಾನ ನಿಲ್ದಾಣಕ್ಕೆ ಬಂದಿಳಿದ ನರೇಂದ್ರ ಮೋದಿಯವರನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ (JP Nadda) ಸೇರಿ ಹಲವು ಮುಖಂಡರು ಸ್ವಾಗತಿಸಿದರು. ಬಹುದೊಡ್ಡ ಹೂವಿನ ಹಾರ ಹಾಕಿ, ಶಾಲು ಹೊದೆಸಿದರು. ಏರ್​ಪೋರ್ಟ್​​ನಲ್ಲಿ ತಮ್ಮನ್ನು ಸ್ವಾಗತಿಸಿದ ಬಿಜೆಪಿ ನಾಯಕರಿಗೆ ಧನ್ಯವಾದ ಸಲ್ಲಿಸಿದ ಅವರು, ಅಲ್ಲಿಂದ ತಮ್ಮ ನಿವಾಸದ ಕಡೆಗೆ ಹೊರಟರು. 

ಅಮೆರಿಕದಲ್ಲಿ ಜೋ ಬೈಡೆನ್​ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಮೇಲೆ ಇದೇ ಮೊದಲ ಬಾರಿಗೆ ಪ್ರಧಾನಿ ಮೋದಿ ಯುಎಸ್​ಗೆ ಭೇಟಿ ನೀಡಿದ್ದರು. ಸೆಪ್ಟೆಂಬರ್​ 23ರಂದು ಅಮೆರಿಕಕ್ಕೆ ತೆರಳಿದ ಅವರು ಅಂದು ಯುಎಸ್​ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್​, ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್​ ಮಾರಿಸನ್​ ಮತ್ತು ಜಪಾನ್​ ಪ್ರಧಾನಿ  ಯೋಶಿಹಿದೆ ಸುಗಾರನ್ನು ಭೇಟಿಯಾಗಿ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಕಮಲಾ ಹ್ಯಾರಿಸ್​ಗೆ ಅವರ ತಾತ ಗೋಪಾಲನ್​​ ಅವರಿಗೆ ಸಂಬಂಧಪಟ್ಟ ಅಧಿಸೂಚನೆಯನ್ನು ಉಡುಗೊರೆಯಾಗಿ ಕೊಟ್ಟಿದ್ದರು.

ಇನ್ನು ಎರಡನೇ ದಿನ ಅಂದರೆ ಸೆಪ್ಟೆಂಬರ್​ 24ರಂದು ಕ್ವಾಡ್​ ಶೃಂಗಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಇದು ಅಮೆರಿಕ, ಭಾರತ, ಆಸ್ಟ್ರೇಲಿಯಾ, ಜಪಾನ್​ ದೇಶಗಳನ್ನೊಂಡ ಸಂಘಟನೆಯಾಗಿದ್ದು, ನಾಲ್ಕೂ ರಾಷ್ಟ್ರಗಳ ನಾಯಕರು ಭಾಗವಹಿಸಿ, ಜಾಗತಿಕ ಶಾಂತಿ ಸ್ಥಾಪನೆ ಬಗ್ಗೆ ಚರ್ಚಿಸಿದರು. ಅದರಲ್ಲೂ ಮುಖ್ಯವಾಗಿ ಇಂಡೋ-ಫೆಸಿಪಿಕ್​ ಪ್ರದೇಶದ ಅಭಿವೃದ್ಧಿ, ಶಾಂತಿ ಸ್ಥಾಪನೆಯ ಬಗ್ಗೆ ಮಾತುಕತೆ ನಡೆಸಿದರು.

ನಂತರ ಸೆಪ್ಟೆಂಬರ್​ 25ರಂದು ವಿಶ್ವಸಂಸ್ಥೆಯ 76ನೇ ಸಾಮಾನ್ಯ ಸಭೆಯಲ್ಲಿ ಭಾಷಣ ಮಾಡಿದ್ದಾರೆ. ಪಾಕಿಸ್ತಾನ ಹಾಗೂ ಚೀನಾ ವಿರುದ್ಧ ಪರೋಕ್ಷವಾಗಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಅಫ್ಘಾನಿಸ್ತಾನದ ಬೆಳವಣಿಗೆ ಬಗ್ಗೆ ಮಾತನಾಡಿ, ಅಫ್ಘಾನ್​ ನೆಲವನ್ನು ಭಯೋತ್ಪಾದನೆ ಕೃತ್ಯಗಳಿಗೆ ಬಳಸಿಕೊಳ್ಳಬೇಡಿ ಎಂದು ತಾಲಿಬಾನಿಗಳಿಗೆ ಸಂದೇಶ ನೀಡಿದ್ದರು.

ಇದನ್ನೂ ಓದಿ: PM Modi in UNGA Summit: ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಆರಂಭ

Mann ki Baat: ವಿಶ್ವ ನದಿಗಳ ದಿನವನ್ನು ನೆನಪಿಸಿದ ಪ್ರಧಾನಿ ಮೋದಿ; ವರ್ಷಕ್ಕೊಮ್ಮೆಯಾದರೂ ನದಿಗಳ ಉತ್ಸವ ನಡೆಸಲು ಮನ್​ ಕೀ ಬಾತ್​​ನಲ್ಲಿ ಕರೆ

(PM Narendra Modi landed in India after concluding his three day visit to the US)