ದೆಹಲಿ: ಎರಡು ಮೆಟ್ರೋ ಕಾರಿಡಾರ್‌ಗಳಿಗೆ ಶಂಕುಸ್ಥಾಪನೆ; ಪಿಎಂ ಸ್ವನಿಧಿ ಫಲಾನುಭವಿಗಳೊಂದಿಗೆ ಮೋದಿ ಸಂವಾದ

|

Updated on: Mar 14, 2024 | 7:29 PM

ಹಿಂದಿನ ಸರ್ಕಾರಗಳು ಬೀದಿ ಬದಿ ವ್ಯಾಪಾರಿಗಳ ಬಗ್ಗೆ ಎಂದಿಗೂ ಕಾಳಜಿ ವಹಿಸಲಿಲ್ಲ. ಬೀದಿ ವ್ಯಾಪಾರಿಗಳು ಅವಮಾನಗಳನ್ನು ಎದುರಿಸಿದರು, ಬ್ಯಾಂಕ್ ಸಾಲಗಳನ್ನು ಪಡೆಯಲು ಸಾಧ್ಯವಾಗಲಿಲ್ಲ. ಅತಿಯಾದ ಬಡ್ಡಿದರದಲ್ಲಿ ಬಂಡವಾಳವನ್ನು ಪಡೆಯಬೇಕಾಗಿರುವುದರಿಂದ ಅವರು ಒಂದು ಮೂಲೆಯಿಂದ ಇನ್ನೊಂದು ಮೂಲೆಗೆ ಓಡಬೇಕಾಗಿತ್ತು ಎಂದು ಮೋದಿ ಹೇಳಿದ್ದಾರೆ.

ದೆಹಲಿ: ಎರಡು ಮೆಟ್ರೋ ಕಾರಿಡಾರ್‌ಗಳಿಗೆ ಶಂಕುಸ್ಥಾಪನೆ; ಪಿಎಂ ಸ್ವನಿಧಿ ಫಲಾನುಭವಿಗಳೊಂದಿಗೆ ಮೋದಿ ಸಂವಾದ
ನರೇಂದ್ರ ಮೋದಿ
Follow us on

ದೆಹಲಿ ಮಾರ್ಚ್ 14 : ಜವಾಹರಲಾಲ್ ನೆಹರು  ಕ್ರೀಡಾಂಗಣದಲ್ಲಿ ದೆಹಲಿ ಮೆಟ್ರೋದ (Delhi Metro) 4 ನೇ ಹಂತದ ಎರಡು ಹೆಚ್ಚುವರಿ ಕಾರಿಡಾರ್‌ಗಳಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಇಂದು (ಗುರುವಾರ) ಶಂಕುಸ್ಥಾಪನೆ ಮಾಡಿದ್ದಾರೆ.  ದೆಹಲಿ ಮೆಟ್ರೋದ ಹಂತ – IV ಯೋಜನೆಯ ಈ ಎರಡು ಕಾರಿಡಾರ್‌ಗಳ ವೆಚ್ಚ ರೂ.8,399 ಕೋಟಿ ಆಗಿದ್ದು ಈ ಎರಡು ಮಾರ್ಗಗಳು 20.762 ಕಿ.ಮೀ ಉದ್ದವಿದೆ. ಇಂದರ್‌ಲೋಕ್ – ಇಂದ್ರಪ್ರಸ್ಥ ಕಾರಿಡಾರ್ ಗ್ರೀನ್ ಲೈನ್ ವಿಸ್ತರಣೆಯಾಗಿದ್ದು, ಇದು ರೆಡ್ , ಯೆಲ್ಲೋ, ವಿಮಾನ ನಿಲ್ದಾಣ, ಮಜೆಂಟಾ, ನೇರಳೆ ಮತ್ತು ಬ್ಲೂ ಲೈನ್ ನೊಂದಿಗೆ ಸಂಪರ್ಕಿಸುತ್ತದೆ. ಏತನ್ಮಧ್ಯೆ, ಲಜಪತ್ ನಗರ – ಸಾಕೇತ್ ಜಿ ಬ್ಲಾಕ್ ಕಾರಿಡಾರ್ ಸಿಲ್ವರ್, ಮೆಜೆಂಟಾ, ಪಿಂಕ್ ಮತ್ತು ವೈಲೆಟ್ ಲೈನ್ಸ್ ಅನ್ನು ಸಂಪರ್ಕಿಸುತ್ತದೆ ಎಂದು ಸರ್ಕಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಸರ್ಕಾರದ ಪ್ರಕಾರ, ಲಜಪತ್ ನಗರ-ಸಾಕೇತ್ ಜಿ ಬ್ಲಾಕ್ ಕಾರಿಡಾರ್ ಅನ್ನು ಸಂಪೂರ್ಣವಾಗಿ ಎಲಿವೇಟ್ ಮಾಡಲಾಗುವುದು . ಇದು ಎಂಟು ನಿಲ್ದಾಣಗಳನ್ನು ಹೊಂದಿರುತ್ತದೆ. ಇಂದ್ರಲೋಕ-ಇಂದ್ರಪ್ರಸ್ಥ ಕಾರಿಡಾರ್ 10 ನಿಲ್ದಾಣಗಳನ್ನು ಹೊಂದಿರುತ್ತದೆ.

ಪಿಎಂ ಸ್ವನಿಧಿ ಯೋಜನೆಯ ಫಲಾನುಭವಿಗಳೊಂದಿಗೆ ಮೋದಿ ಸಂವಾದ

ಪಿಎಂ ಸ್ವನಿಧಿ ಯೋಜನೆಯ ಫಲಾನುಭವಿಗಳೊಂದಿಗೆ ಪ್ರಧಾನಿ ಮೋದಿ ಸಂವಾದ ನಡೆಸಿದ್ದು, ದೆಹಲಿಯ 5,000 ಬೀದಿ ವ್ಯಾಪಾರಿಗಳು ಸೇರಿದಂತೆ 1 ಲಕ್ಷ ಬೀದಿ ವ್ಯಾಪಾರಿಗಳಿಗೆ ಯೋಜನೆಯಡಿ ಸಾಲ ವಿತರಿಸಿದರು. ಇಲ್ಲಿಯವರೆಗೆ, ದೇಶಾದ್ಯಂತ 62 ಲಕ್ಷಕ್ಕೂ ಹೆಚ್ಚು ಬೀದಿ ಬದಿ ವ್ಯಾಪಾರಿಗಳಿಗೆ ₹10,978 ಕೋಟಿಗೂ ಹೆಚ್ಚು ಮೊತ್ತದ 82 ಲಕ್ಷಕ್ಕೂ ಹೆಚ್ಚು ಸಾಲವನ್ನು ವಿತರಿಸಲಾಗಿದೆ ಎಂದು ಪತ್ರಿಕಾ ಪ್ರಕಟಣೆ ಹೇಳಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ, “ಇಂದಿನ ಕಾರ್ಯಕ್ರಮ ಪ್ರಧಾನಮಂತ್ರಿ ಸ್ವನಿಧಿ ಮಹೋತ್ಸವವು ನಮ್ಮ ಸುತ್ತಮುತ್ತ ಇರುವವರಿಗೆ ಸಮರ್ಪಿತವಾಗಿದೆ. ಅವರಿಲ್ಲದೆ ನಾವು ನಮ್ಮ ಜೀವನವನ್ನು ಕಲ್ಪಿಸಿಕೊಳ್ಳಲಾಗುವುದಿಲ್ಲ. ಕೊವಿಡ್ ಸಮಯದಲ್ಲಿ ಈ ಬೀದಿ ವ್ಯಾಪಾರಿಗಳ ಶಕ್ತಿಯನ್ನು ನಾವು ನೋಡಿದ್ದೇವೆ .ಇಂದು, ನಾನು ಈ ಸಮಾರಂಭದಲ್ಲಿ ನಮ್ಮ ಪ್ರತಿಯೊಬ್ಬ ಬೀದಿ ವ್ಯಾಪಾರಿಗಳು ಮತ್ತು ರಸ್ತೆ ಬದಿಯಲ್ಲಿ ಮಾರಾಟ ಮಾಡುವವರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ.” ಎಂದು ಹೇಳಿದ್ದಾರೆ.

ಹಿಂದಿನ ಸರ್ಕಾರಗಳು ಬೀದಿ ಬದಿ ವ್ಯಾಪಾರಿಗಳ ಬಗ್ಗೆ ಎಂದಿಗೂ ಕಾಳಜಿ ವಹಿಸಲಿಲ್ಲ. ಬೀದಿ ವ್ಯಾಪಾರಿಗಳು ಅವಮಾನಗಳನ್ನು ಎದುರಿಸಿದರು, ಬ್ಯಾಂಕ್ ಸಾಲಗಳನ್ನು ಪಡೆಯಲು ಸಾಧ್ಯವಾಗಲಿಲ್ಲ. ಅತಿಯಾದ ಬಡ್ಡಿದರದಲ್ಲಿ ಬಂಡವಾಳವನ್ನು ಪಡೆಯಬೇಕಾಗಿರುವುದರಿಂದ ಅವರು ಒಂದು ಮೂಲೆಯಿಂದ ಇನ್ನೊಂದು ಮೂಲೆಗೆ ಓಡಬೇಕಾಗಿತ್ತು. “ಮೋದಿಯವರ ಗ್ಯಾರಂಟಿ” ಯಿಂದಾಗಿ ಅವರು  ಸರಳ ದರದಲ್ಲಿ ಬ್ಯಾಂಕ್‌ಗಳಿಂದ ಸಾಲವನ್ನು ಪಡೆಯಬಹುದು. 62 ಲಕ್ಷಕ್ಕೂ ಹೆಚ್ಚು ಜನರಿಗೆ ಸುಮಾರು 11,000 ಕೋಟಿ ಸಾಲ ನೀಡಲಾಗಿದೆ ಎಂದು ಮೋದಿ ಹೇಳಿದ್ದಾರೆ.

ಬಿಜೆಪಿ ಸರ್ಕಾರ ಬಡವರು ಮತ್ತು ಮಧ್ಯಮ ವರ್ಗದವರ ಬದುಕು ಹಸನಾಗಿಸಲು ರ ಹಗಲಿರುಳು ಶ್ರಮಿಸುತ್ತಿದೆ ಎಂದು ಹೇಳಿದ್ದಾರೆ.

ಮೋದಿ ಭಾಷಣ

ಭ್ರಷ್ಟಾಚಾರ, ದುರಾಡಳಿತ ಮತ್ತು ದೇಶವಿರೋಧಿ ಕಾರ್ಯಸೂಚಿಯನ್ನು ಉತ್ತೇಜಿಸುವ ಪ್ರತಿಪಕ್ಷ  ಇಂಡಿಯಾ ಬಣವು ಭ್ರಷ್ಟಾಚಾರ ಮತ್ತು ತುಷ್ಟೀಕರಣ ಮಾಡುತ್ತಿದೆ.ಅದನ್ನು ಕಿತ್ತೊಗೆಯಲು ನಾನಿಲ್ಲಿದ್ದೇನೆ ಎಂದು ಮೋದಿ ಹೇಳಿದ್ದು, ನಮ್ಮ ಸಿದ್ಧಾಂತವು ಜನಕಲ್ಯಾಣದ ಮೂಲಕ ದೇಶದ ಕಲ್ಯಾಣವನ್ನು ಖಾತ್ರಿಪಡಿಸುತ್ತದೆ ಎಂದಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ದೆಹಲಿಯಲ್ಲಿ ಒಗ್ಗೂಡಿರುವ ಪ್ರತಿಪಕ್ಷಗಳ ಮೈತ್ರಿಯನ್ನು ಗುರಿಯಾಗಿಸಿದ ಮೋದಿ, ಅವರು ಹಗಲು ರಾತ್ರಿ ನನ್ನನ್ನು ನಿಂದಿಸುವ ಕಾರ್ಯಸೂಚಿಯಲ್ಲಿ ಒಟ್ಟಾಗಿ ಬಂದಿದ್ದಾರೆ ಎಂದು ಹೇಳಿದರು. ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ ಕೈಜೋಡಿಸಿದ್ದು, ಎಲ್ಲಾ ಏಳು ಲೋಕಸಭಾ ಕ್ಷೇತ್ರಗಳು ಬಿಜೆಪಿ ವಶದಲ್ಲಿವೆ.

ಇದನ್ನೂ ಓದಿ: ರೈತರು ಒಗ್ಗಟ್ಟಾಗಿದ್ದಾರೆ, ಪ್ರತಿಭಟನೆ ಮುಗಿಯುವುದಿಲ್ಲ: ರಾಕೇಶ್ ಟಿಕಾಯತ್

ಕೇಂದ್ರದ ಬಿಜೆಪಿ ಸರ್ಕಾರವು ರಾಷ್ಟ್ರ ರಾಜಧಾನಿಯಲ್ಲಿ ಬಡ ಮತ್ತು ಮಧ್ಯಮ ವರ್ಗದ ಜನರ ಜೀವನವನ್ನು ಸುಧಾರಿಸಲು ಕೆಲಸ ಮಾಡುತ್ತಿದೆ, ಭಾರತೀಯ ನಗರಗಳಲ್ಲಿ ಸಂಚಾರ ಸುಗಮಗೊಳಿಸಲು ಮತ್ತು ಮಾಲಿನ್ಯವನ್ನು ತಡೆಯಲು ಪ್ರಾಮಾಣಿಕ ಪ್ರಯತ್ನಗಳನ್ನು ಮಾಡುತ್ತಿದೆ. ದೆಹಲಿಯಲ್ಲಿ 1,000 ಕ್ಕೂ ಹೆಚ್ಚು ಎಲೆಕ್ಟ್ರಿಕ್ ಬಸ್‌ಗಳನ್ನು ನಿಯೋಜಿಸಲಾಗಿದೆ. ನಗರದ ಪರಿಧಿಯ ಸುತ್ತ ಎಕ್ಸ್‌ಪ್ರೆಸ್‌ವೇಗಳ ವಿಸ್ತರಣೆ ಮತ್ತು ಅದರ ಮೆಟ್ರೋ ನೆಟ್‌ವರ್ಕ್‌ನ ಹೆಚ್ಚಳವನ್ನು ಮೋದಿ ಎತ್ತಿ ತೋರಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ