ಪ್ರಧಾನಿ ನರೇಂದ್ರ ಮೋದಿ(Narendra Modi) ಕೃಷ್ಣನ ದ್ವಾರಕೆ(Dwarka)ಯನ್ನು ಕಣ್ತುಂಬಿಕೊಳ್ಳಲು ನವಿಲುಗರಿಗಳ ಹಿಡಿದು ಸಮುದ್ರದಾಳಕ್ಕೆ ಹಾರಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಗುಜರಾತ್ ಪ್ರವಾಸದ ಎರಡನೇ ದಿನಕ್ಕೆ ಕಾಲಿಟ್ಟಿದ್ದಾರೆ. ಇಂದು ಸ್ಕೂಬಾ ಡೈವಿಂಗ್ ಮೂಲಕ ದ್ವಾರಕೆಗೆ ತೆರಳಿದ್ದಾರೆ, ಮುಳುಗಡೆಯಾಗಿರುವ ದ್ವಾರಕಾನಗರಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದ್ದಾರೆ.
ಶ್ರೀಕೃಷ್ಣ ದ್ವಾರಕೆಯ ರಾಜನಾಗಿದ್ದ, ಪ್ರಧಾನಿ ಮೋದಿ ನಗರದ ಭವ್ಯತೆ ಹಾಗೂ ಸಮೃದ್ಧಿಯನ್ನು ನೆನಪಿಸಿಕೊಂಡು ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ, ಅವರು ದ್ವಾರಕಾದಲ್ಲಿ ಸುದರ್ಶನ ಸೇತುವನ್ನು ಉದ್ಘಾಟಿಸಿದರು, ಇದು ದೇಶದ ಅತಿ ಉದ್ದದ ಕೇಬಲ್ ಬೆಂಬಲಿತ ಸೇತುವೆಯಾಗಿದೆ.
6 ವರ್ಷಗಳ ಹಿಂದೆ ಈ ಸೇತುವೆಯ ಶಂಕುಸ್ಥಾಪನೆ ಮಾಡಲು ನನಗೆ ಅವಕಾಶ ಸಿಕ್ಕಿತ್ತು ಎಂದು ಪ್ರಧಾನಿ ಹೇಳಿದರು. ಈ ಸೇತುವೆಯು ಓಖಾವನ್ನು ಬೆಟ್ ದ್ವಾರಕಾ ದ್ವೀಪಕ್ಕೆ ಸಂಪರ್ಕಿಸುತ್ತದೆ. ಈ ಸೇತುವೆಯು ದ್ವಾರಕಾಧೀಶನ ದರ್ಶನವನ್ನು ಸುಲಭಗೊಳಿಸುತ್ತದೆ ಮತ್ತು ಈ ಸ್ಥಳದ ದೈವಿಕತೆಯನ್ನು ಹೆಚ್ಚಿಸುತ್ತದೆ. ಈ ವೇಳೆ ಪ್ರಧಾನಿ ಮೋದಿ ಕಾಂಗ್ರೆಸ್ ವಿರುದ್ಧವೂ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಕಾಲದಲ್ಲಿ ಆಗುತ್ತಿದ್ದ ಹಗರಣಗಳನ್ನು ತಡೆದಿದ್ದೇವೆ ಎಂದರು.
ಮತ್ತಷ್ಟು ಓದಿ: Sudarshan Setu: ಗುಜರಾತ್ನಲ್ಲಿ ದೇಶದ ಅತಿ ಉದ್ದದ ಸುದರ್ಶನ ಕೇಬಲ್ ಸೇತುವೆ ಉದ್ಘಾಟಿಸಿದ ಪ್ರಧಾನಿ ಮೋದಿ
ನೀರಿನಲ್ಲಿ ಮುಳುಗಿರುವ ದ್ವಾರಕಾ ನಗರದಲ್ಲಿ ಪ್ರಾರ್ಥನೆ ಸಲ್ಲಿಸುವುದು ಬಹಳ ದೈವಿಕ ಅನುಭವವಾಗಿದೆ. ಆಧ್ಯಾತ್ಮಿಕ ವೈಭವ ಮತ್ತು ಶಾಶ್ವತ ಭಕ್ತಿಯ ಪ್ರಾಚೀನ ಯುಗಕ್ಕೆ ನಾನು ಸಂಪರ್ಕ ಹೊಂದಿದ್ದೇನೆ. ಶ್ರೀ ಕೃಷ್ಣನು ನಮ್ಮೆಲ್ಲರನ್ನು ಆಶೀರ್ವದಿಸಲಿ ಎಂದು ಬೇಡಿಕೊಂಡು ಅದೇ ಸಮಯದಲ್ಲಿ ಅವರು ಸಮುದ್ರದಲ್ಲಿ ನವಿಲು ಗರಿಗಳನ್ನು ಅರ್ಪಿಸಿದರು.
ಹಿಂದೂ ಧರ್ಮಗ್ರಂಥಗಳಲ್ಲಿ ಉಲ್ಲೇಖಿಸಲಾದ ಪೌರಾಣಿಕ ನಗರವಾದ ದ್ವಾರಕಾವನ್ನು ಶ್ರೀಕೃಷ್ಣನು ಆಳುತ್ತಿದ್ದನೆಂದು ನಂಬಲಾಗಿದೆ. ಹಿಂದೂ ನಂಬಿಕೆಯ ಪ್ರಕಾರ, ಕೃಷ್ಣನು ಭೂಮಿಯಿಂದ ನಿರ್ಗಮಿಸಿದ ನಂತರ ನಗರವು ಅಂತಿಮವಾಗಿ ಸಮುದ್ರದಾಳಕ್ಕೆ ಹೋಗಿ ಬಳಿಕ ಕಾಣದಾಯಿತು.
ನಾನು ಸಮುದ್ರದ ಆಳಕ್ಕೆ ಹೋಗಿ ಪ್ರಾಚೀನ ದ್ವಾರಕಾ ನಗರದ ‘ದರ್ಶನ’ ಮಾಡಿದೆ. ಪುರಾತತ್ತ್ವ ಶಾಸ್ತ್ರಜ್ಞರು ನೀರಿನ ಅಡಿಯಲ್ಲಿ ಅಡಗಿರುವ ದ್ವಾರಕಾ ನಗರದ ಬಗ್ಗೆ ಸಾಕಷ್ಟು ಬರೆದಿದ್ದಾರೆ. ನಮ್ಮ ಧರ್ಮಗ್ರಂಥಗಳಲ್ಲಿಯೂ, ದ್ವಾರಕಾದ ಬಗ್ಗೆ ಹೇಳಲಾಗುತ್ತದೆ, ಇದು ಸುಂದರವಾದ ದ್ವಾರಗಳು ಮತ್ತು ಎತ್ತರದ ಕಟ್ಟಡಗಳನ್ನು ಹೊಂದಿರುವ ನಗರ ಎಂದು ಹೇಳಲಾಗುತ್ತದೆ ಎಂದರು.
‘‘ನವಿಲುಗರಿಗಳನ್ನು ತೆಗೆದುಕೊಂಡು ಹೋಗಿ ಶ್ರೀಕೃಷ್ಣನ ಪಾದಗಳಿಗೆ ಅರ್ಪಿಸಬೇಕೆಂಬ ಹಲವು ವರ್ಷಗಳ ಕನಸು ಇದೀಗ ನನಸಾಗಿದೆ’’ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:55 pm, Sun, 25 February 24