ಮಹಾರಾಷ್ಟ್ರದ ನಾಸಿಕ್‌ನ ಕಾಲಾರಾಮ್ ದೇವಸ್ಥಾನದಲ್ಲಿ ‘ಸ್ವಚ್ಛತಾ ಅಭಿಯಾನ’ದಲ್ಲಿ ಮೋದಿ ಭಾಗಿ

|

Updated on: Jan 12, 2024 | 4:40 PM

ದೇವಸ್ಥಾನಕ್ಕೆ ಭೇಟಿ ನೀಡಿದ ನಂತರ, ನಾಸಿಕ್‌ನ ತಪೋವನ ಮೈದಾನದಲ್ಲಿ ರಾಷ್ಟ್ರೀಯ ಯುವ ಮಹೋತ್ಸವವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಜನವರಿ 22 ರಂದು ಅಯೋಧ್ಯೆಯಲ್ಲಿ ಭಗವಾನ್ ರಾಮನ ವಿಗ್ರಹವನ್ನು ಪ್ರತಿಷ್ಠಾಪಿಸುವ ಮೊದಲು ರಾಷ್ಟ್ರದಾದ್ಯಂತ ದೇವಾಲಯಗಳಲ್ಲಿ ಶುಚಿಗೊಳಿಸುವ ಪ್ರಯತ್ನಗಳನ್ನು ಕೈಗೊಳ್ಳುವಂತೆ ಜನರನ್ನು ಒತ್ತಾಯಿಸಿದರು.

ಮಹಾರಾಷ್ಟ್ರದ ನಾಸಿಕ್‌ನ ಕಾಲಾರಾಮ್ ದೇವಸ್ಥಾನದಲ್ಲಿ ‘ಸ್ವಚ್ಛತಾ ಅಭಿಯಾನ’ದಲ್ಲಿ ಮೋದಿ ಭಾಗಿ
ನರೇಂದ್ರ ಮೋದಿ
Follow us on

ಮುಂಬೈ ಜನವರಿ 12: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಶುಕ್ರವಾರ ಮಹಾರಾಷ್ಟ್ರದ ನಾಸಿಕ್‌ನ ಕಾಲಾರಾಮ್ ದೇವಸ್ಥಾನದಲ್ಲಿ ‘ಸ್ವಚ್ಛತಾ ಅಭಿಯಾನ’ದಲ್ಲಿ (Swachhata Abhiyan) ಭಾಗವಹಿಸಿದರು. ಅದೇ ವೇಳೆ ಭಾರತದ ಅತಿ ಉದ್ದದ ಸಮುದ್ರ ಸೇತುವೆ, 21.8 ಕಿಲೋಮೀಟರ್ ಉದ್ದದ ಮುಂಬೈ ಟ್ರಾನ್ಸ್-ಹಾರ್ಬರ್ ಲಿಂಕ್​​ನ್ನು (MTHL) ಪ್ರಧಾನಿ ಔಪಚಾರಿಕವಾಗಿ ಉದ್ಘಾಟಿಸಿದರು. ಪ್ರಧಾನಿ ಮೋದಿ ಅವರು ಕಾಲಾರಾಮ್ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ್ದು ಸಂತ ಏಕನಾಥ್ ಮರಾಠಿಯಲ್ಲಿ ಬರೆದ ‘ಭಾವಾರ್ಥ ರಾಮಾಯಣ’ ಶ್ಲೋಕಗಳನ್ನು ಆಲಿಸಿದರು. ಇದಕ್ಕೂ ಮುನ್ನ ನಾಸಿಕ್‌ನಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ಅಂಗವಾಗಿ ಅವರ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿದರು.

ಶುಕ್ರವಾರ ಬೆಳಗ್ಗೆ ರಾಷ್ಟ್ರೀಯ ಯುವಜನೋತ್ಸವದ ಉದ್ಘಾಟನೆಗೂ ಮುನ್ನ ಮಹಾರಾಷ್ಟ್ರದ ನಾಸಿಕ್‌ನಲ್ಲಿ ಮೋದಿ ಮೆಗಾ ರೋಡ್‌ಶೋ ನಡೆಸಿದ್ದಾರೆ. ಪ್ರಧಾನಿ ಮೋದಿ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಉಪ ಮುಖ್ಯಮಂತ್ರಿಗಳಾದ ದೇವೇಂದ್ರ ಫಡ್ನವಿಸ್ ಮತ್ತು ಅಜಿತ್ ಪವಾರ್ ಅವರೊಂದಿಗೆ ಶ್ರೀ ಕಾಲಾರಾಮ್ ಮಂದಿರಕ್ಕೆ ಭೇಟಿ ನೀಡಿದ್ದಾರೆ.


ಬಿಜೆಪಿ ನಾಯಕರು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಶೇರ್ ಮಾಡಿರುವ ವೀಡಿಯೊದಲ್ಲಿ, ಪ್ರಧಾನಿ ಮೋದಿ ಗೋದಾವರಿ ದಡದಲ್ಲಿರುವ ನಾಸಿಕ್‌ನ ಪಂಚವಟಿ ಪ್ರದೇಶದಲ್ಲಿ ನೆಲೆಗೊಂಡಿರುವ ಕಾಲಾರಾಮ್ ದೇವಾಲಯದ ಆವರಣವನ್ನು  ಒರೆಸುತ್ತಿರುವುದನ್ನು ಕಾಣಬಹುದು.


ದೇವಸ್ಥಾನಕ್ಕೆ ಭೇಟಿ ನೀಡಿದ ನಂತರ, ನಾಸಿಕ್‌ನ ತಪೋವನ ಮೈದಾನದಲ್ಲಿ ರಾಷ್ಟ್ರೀಯ ಯುವ ಮಹೋತ್ಸವವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಜನವರಿ 22 ರಂದು ಅಯೋಧ್ಯೆಯಲ್ಲಿ ಭಗವಾನ್ ರಾಮನ ವಿಗ್ರಹವನ್ನು ಪ್ರತಿಷ್ಠಾಪಿಸುವ ಮೊದಲು ರಾಷ್ಟ್ರದಾದ್ಯಂತ ದೇವಾಲಯಗಳಲ್ಲಿ ಶುಚಿಗೊಳಿಸುವ ಪ್ರಯತ್ನಗಳನ್ನು ಕೈಗೊಳ್ಳುವಂತೆ ಜನರನ್ನು ಒತ್ತಾಯಿಸಿದರು.

ರಾಮಮಂದಿರದಲ್ಲಿ ‘ಪ್ರಾಣ ಪ್ರತಿಷ್ಠಾ’ದ ಸಂದರ್ಭದಲ್ಲಿ, ದೇಶದ ಎಲ್ಲಾ ದೇವಾಲಯಗಳು ಮತ್ತು ದೇಗುಲಗಳಲ್ಲಿ ಸ್ವಚ್ಛತಾ ಅಭಿಯಾನವನ್ನು ಕೈಗೊಳ್ಳಬೇಕು ಎಂದು ನಾನು ಪ್ರತಿಯೊಬ್ಬರಲ್ಲಿಯೂ ವಿನಂತಿಸುತ್ತೇನೆ.ಇಂದು ನಾನು ಕಾಲಾರಾಮ್ ದೇವಾಲಯಕ್ಕೆ ಭೇಟಿ ನೀಡುವ ಮತ್ತು ದೇವಾಲಯದ ಆವರಣವನ್ನು ಸ್ವಚ್ಛಗೊಳಿಸುವ ಸೌಭಾಗ್ಯವನ್ನು ಹೊಂದಿದ್ದೇನೆ ಎಂದು ಅವರು ಹೇಳಿದ್ದಾರೆ

ಇದನ್ನೂ ಓದಿ: ರಾಮಲಲ್ಲಾ ಪ್ರಾಣಪ್ರತಿಷ್ಠೆಗೂ ಮುನ್ನ 11 ದಿನಗಳ ವಿಶೇಷ ವ್ರತ ಆಚರಣೆ, ಮೋದಿ ವಿಡಿಯೋ ಸಂದೇಶ

‘ಅಮೃತ್ ಕಾಲ’ವನ್ನು ರಾಷ್ಟ್ರದ ಯುವಜನರಿಗೆ ‘ಸುವರ್ಣಯುಗ’ ಎಂದು ಉಲ್ಲೇಖಿಸಿದ ಪ್ರಧಾನಿ ಮೋದಿ, ಭಾರತದ ಯುವ ಶಕ್ತಿಯು ಅಗ್ರ 5 ಜಾಗತಿಕ ಆರ್ಥಿಕತೆಗಳಲ್ಲಿ ಸ್ಥಾನ ಪಡೆಯಲು ಕಾರಣ ಎಂದಿದ್ದಾರೆ. ಭಾರತವು ವಿಶ್ವದ ಟಾಪ್ 3 ಸ್ಟಾರ್ಟ್-ಅಪ್ ವ್ಯವಸ್ಥೆಗಳಲ್ಲಿ ಒಂದಾಗಿದೆ. ಭಾರತವು ಹೊಸ ಆವಿಷ್ಕಾರಗಳನ್ನು ಮಾಡುತ್ತಿದೆ, ಭಾರತವು ದಾಖಲೆಯ ಪೇಟೆಂಟ್‌ಗಳನ್ನು ಸಲ್ಲಿಸುತ್ತಿದೆ. ಈ ಎಲ್ಲದರ ಹಿಂದೆ ದೇಶದ ಯುವಜನತೆ ಇದೆ. ಅಮೃತ್ ಕಾಲ ದೇಶದ ಯುವಕರ ಸುವರ್ಣ ಯುಗ ಎಂದು ಮೋದಿ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

 

Published On - 4:33 pm, Fri, 12 January 24