
ನವದೆಹಲಿ: ವಿಶ್ವದ ಶ್ರೀಮಂತ ಉದ್ಯಮಿ, ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ (Bill Gates) ಲಟ್ಟಣಿಗೆ ಹಿಡಿದು ರೋಟಿ (Roti) ಮಾಡಿದ ಮಾಡಿದ ವಿಡಿಯೊ ಶುಕ್ರವಾರ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಇದೀಗ ಪ್ರಧಾನಿ ನರೇಂದ್ರ ಮೋದಿ (Narendra Modi) ಸಹ ಬಿಲ್ ಗೇಟ್ಸ್ ರೋಟಿ ವಿಡಿಯೊಗೆ ಮನಸೋತಿದ್ದಾರೆ. ಸಾಮಾಜಿಕ ಮಾಧ್ಯಮ ತಾಣ ಇನ್ಸ್ಟಾಗ್ರಾಂನಲ್ಲಿ (Instagram) ಬಿಲ್ ಗೇಟ್ಸ್ (Bill Gates) ಪೋಸ್ಟ್ ಆಗಿರುವ ವಿಡಿಯೋಗೆ ಮೋದಿ ‘ಸೂಪರ್’ ಎಂದು ಕಮೆಂಟ್ ಮಾಡಿದ್ದಾರೆ. ಜತೆಗೆ, ‘ಭಾರತದಲ್ಲಿ ಸಿರಿಧಾನ್ಯ ಇತ್ತೀಚಿನ ಟ್ರೆಂಡ್ ಆಗಿದೆ. ಸಿರಿಧಾನ್ಯಗಳಿಂದ ಅನೇಕ ತಿಂಡಿಗಳನ್ನು ತಯಾರಿಸುತ್ತಾರೆ. ನೀವು ಅದನ್ನೂ ಪ್ರಯತ್ನಿಸಬಹುದು’ ಎಂದು ಸಲಹೆ ನೀಡಿದ್ದಾರೆ. ಆರೋಗ್ಯಕ್ಕೆ ಪೂರಕ ಎನ್ನುವ ಕಾರಣಕ್ಕೆ ದೇಶದಲ್ಲಿ ಸದ್ಯ ಸಿರಿಧಾನ್ಯದ ಬಳಕೆ ಬಗ್ಗೆ ಜನ ಹೆಚ್ಚಿನ ಒಲವು ವ್ಯಕ್ತಪಡಿಸುತ್ತಿದ್ದಾರೆ.
ಅಮೆರಿಕದ ಖ್ಯಾತ ಬಾಣಸಿಗ ಈಟಾನ್ ಬರ್ನಾಥ್ ಜತೆ ರೋಟಿ ತಯಾರಿಸುತ್ತಿರುವ ವಿಡಿಯೋವನ್ನು ಬಿಲ್ ಗೇಟ್ಸ್ ಶುಕ್ರವಾರ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದರು.
‘ನಾವಿಬ್ಬರೂ ಜತೆಯಾಗಿ ಭಾರತದ ರೋಟಿ ತಯಾರಿಸಿದೆವು. ಈಟಾನ್ ಹಿಂದೊಮ್ಮೆ ಭಾರತದ ಬಿಹಾರಕ್ಕೆ ಪ್ರವಾಸ ತೆರಳಿದ್ದಾಗ ಗೋಧಿ ಬೆಳೆಯುವ ರೈತರನ್ನು ಬೇಟಿಯಾಗಿದ್ದರು. ಹೊಸ ಇಳುವರಿ ತಂತ್ರಜ್ಞಾನಗಳ ಸಹಾಯದಿಂದ ಅವರ ಇಳುವರಿಯನ್ನು ಹೆಚ್ಚಿಸಲಾಗಿದೆ. ಈಟಾನ್ ಅವರು ಅತ್ಯಂತ ಚೆನ್ನಾಗಿ ರೋಟಿ ತಯಾರಿಸುವುದರಲ್ಲಿ ಪ್ರಸಿದ್ಧರಾಗಿರುವ, ದೀದಿ ಕೀ ರಸೋಯಿ ಸಮುದಾಯ ಕ್ಯಾಂಟೀನ್ಗಳನ್ನು ನಡೆಸುತ್ತಿರುವ ಮಹಿಳೆಯರನ್ನೂ ಭೇಟಿಯಾಗಿದ್ದರು’ ಎಂದು ವಿಡಿಯೋದ ಜತೆಗೆ ಬಿಲ್ಗೇಟ್ಸ್ ಬರೆದುಕೊಂಡಿದ್ದಾರೆ.
ಬಿಲ್ ಗೇಟ್ಸ್ ಜತೆ ರೋಟಿ ಮಾಡಿದೆ ಎಂದು ಈಟಾನ್ ಬರ್ನಾಥ್ ಸಹ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ.
ಬಿಲ್ ಗೇಟ್ಸ್ ರೋಟಿ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಅನೇಕರು ಕಾಲೆಳೆದಿದ್ದಾರೆ. ರೋಟಿಯನ್ನು ಹೇಗೆ ತಯಾರಿಸಬಾರದು ಎಂಬುದನ್ನು ಬಿಲ್ ಗೇಟ್ಸ್ ತೋರಿಸಿಕೊಟ್ಟಿದ್ದಾರೆ ಎಂದು ಕೆಲವರು ತಮಾಷೆ ಮಾಡಿದ್ದಾರೆ. ಇನ್ನು ಅನೇಕರು ಶ್ರೀಮಂತ ಉದ್ಯಮಿ ಭಾರತದ ರೋಟಿ ಮಾಡಿ ವಿಡಿಯೋ ಹಂಚಿಕೊಂಡದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Published On - 3:10 pm, Sat, 4 February 23