ಕೇರಳ ಮುಖ್ಯಮಂತ್ರಿ ಪಿಣರಯಿ ವಿಜಯನ್ ಜೊತೆ ಪ್ರಧಾನಿ ನರೇಂದ್ರ ಮೋದಿ ಚರ್ಚೆ: ಮಳೆ, ಭೂಕುಸಿತದಿಂದ ಮೃತಪಟ್ಟವರಿಗೆ ಸಂತಾಪ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Oct 17, 2021 | 6:44 PM

ಕೇರಳದಲ್ಲಿ ಮಳೆ ಮತ್ತು ಭೂಕುಸಿತದಿಂದ ಈವರೆಗೆ 18 ಮಂದಿ ಮೃತಪಟ್ಟಿದ್ದು ಕೋಟ್ಯಂತರ ರೂಪಾಯಿ ನಷ್ಟವಾಗಿದೆ.

ಕೇರಳ ಮುಖ್ಯಮಂತ್ರಿ ಪಿಣರಯಿ ವಿಜಯನ್ ಜೊತೆ ಪ್ರಧಾನಿ ನರೇಂದ್ರ ಮೋದಿ ಚರ್ಚೆ: ಮಳೆ, ಭೂಕುಸಿತದಿಂದ ಮೃತಪಟ್ಟವರಿಗೆ ಸಂತಾಪ
ಕೇರಣ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಪ್ರಧಾನಿ ನರೇಂದ್ರ ಮೋದಿ
Follow us on

ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರೊಂದಿಗೆ ಮಾತನಾಡಿ ಕೇರಳದಲ್ಲಿ ಮಳೆ ಮತ್ತು ಭೂಕುಸಿತದಿಂದ ಉಂಟಾಗಿರುವ ಸಂಕಷ್ಟ ಪರಿಸ್ಥಿತಿಯ ಮಾಹಿತಿ ಪಡೆದುಕೊಂಡರು. ಕೇರಳದಲ್ಲಿ ಮಳೆ ಮತ್ತು ಭೂಕುಸಿತದಿಂದ ಈವರೆಗೆ 18 ಮಂದಿ ಮೃತಪಟ್ಟಿದ್ದು ಕೋಟ್ಯಂತರ ರೂಪಾಯಿ ನಷ್ಟವಾಗಿದೆ. ಜೀವಹಾನಿಯ ಬಗ್ಗೆ ವಿಷಾದ ವ್ಯಕ್ತಪಡಿಸಿದ ಪ್ರಧಾನಿ, ರಾಜ್ಯ ಸರ್ಕಾರಕ್ಕೆ ಎಲ್ಲ ರೀತಿಯ ಅಗತ್ಯ ನೆರವು ಒದಗಿಸುವ ಭರವಸೆ ನೀಡಿದರು.

ಕೇರಳದ ಪರಿಸ್ಥಿತಿ ಅವಲೋಕಿಸಿದೆ. ಅಧಿಕಾರಿಗಳು ಸ್ಥಳದಲ್ಲಿದ್ದು ಸಂತ್ರಸ್ತರಿಗೆ ಅಗತ್ಯ ನೆರವು ಒದಗಿಸುತ್ತಿದ್ದಾರೆ. ಗಾಯಾಳುಗಳಿಗೆ ಅಗತ್ಯ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಎಲ್ಲರ ಸುರಕ್ಷೆ ಮತ್ತು ಕ್ಷೇಮಕ್ಕಾಗಿ ಪ್ರಾರ್ಥಿಸುತ್ತೇನೆ ಎಂದು ನರೇಂದ್ರ ಮೋದಿ ಹೇಳಿದ್ದಾರೆ.

ಕೇರಳಕ್ಕೆ ಎಲ್ಲ ನೆರವು ಒದಗಿಸುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ ಭರವಸೆ ನೀಡಿದ್ದರು. ಕೇರಳದ ಮಳೆ ಮತ್ತು ಪ್ರವಾಹ ಪರಿಸ್ಥಿತಿಯನ್ನು ನಿರಂತರವಾಗಿ ಗಮನಿಸುತ್ತಿದ್ದೇವೆ. ಅಗತ್ಯ ಕೇಂದ್ರ ಸರ್ಕಾರವು ಎಲ್ಲ ಅಗತ್ಯ ನೆರವು ಒದಗಿಸಲಿದೆ ಎಂದು ಹೇಳಿದರು. ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳದ ತಂಡಗಳನ್ನು ಸ್ಥಳಕ್ಕೆ ಕಳುಹಿಸಿಕೊಡಲಾಗಿದೆ ಎಂದು ಅಮಿತ್ ಶಾ ಟ್ವೀಟ್ ಮಾಡಿದ್ದರು.

ರಾಜ್ಯದಲ್ಲಿ ಶುಕ್ರವಾರ ರಾತ್ರಿಯಿಂದಾಚೆಗೆ ಭಾರೀ ಮಳೆಯಾಗುತ್ತಿದ್ದು, ಇಡುಕ್ಕಿ, ಕೊಟ್ಟಾಯಂ ಪ್ರದೇಶಗಳಲ್ಲಿ ಭೂ ಕುಸಿತ ತೀವ್ರವಾಗಿದೆ. ರಕ್ಷಣಾ ಕಾರ್ಯಾಚರಣೆಗೆ ಸೇನೆಯ ನೆರವು ದೊರೆತಿದೆಯಾದರೂ ಸಾವಿನ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಕೇರಳ ಕರಾವಳಿಗೆ ಹೊಂದಿಕೊಂಡಂತೆ ಇರುವ ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಸಂಭವಿಸಿದ್ದು ಮುಂದಿನ ಕೆಲ ದಿನಗಳವರೆಗೆ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆಯ ಪ್ರಕಟಣೆ ತಿಳಿಸಿದೆ.

ಕರ್ನಾಟಕದ ದಕ್ಷಿಣ ಒಳನಾಡು ಮತ್ತು ದಕ್ಷಿಣ ತಮಿಳುನಾಡಿನ ಕೆಲ ಜಿಲ್ಲೆಗಳಲ್ಲಿಯೂ ಮುಂದಿನ ದಿನಗಳಲ್ಲಿ ಮಳೆ ಹೆಚ್ಚಾಗುವ ಸಾಧ್ಯತೆಯಿದೆ. ಕೇರಳ ಮತ್ತು ಮಾಹೆಯಲ್ಲಿ ಭಾನುವಾರ ಅಲ್ಲಲ್ಲಿ ಭಾರಿ ಮಳೆಯಾಗಬಹುದು. ನಂತರದ ದಿನಗಳಲ್ಲಿ ಮಳೆ ಪ್ರಮಾಣ ಕಡಿಮೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಇದನ್ನೂ ಓದಿ: Kerala Floods ಪ್ರವಾಹದ ನಡುವೆ ಬಸ್ ಚಲಾಯಿಸಿದ ಕೇರಳ ಆರ್​​ಟಿಸಿ ಚಾಲಕ ಅಮಾನತು; ತಬಲಾ ನುಡಿಸುವ ವಿಡಿಯೊದೊಂದಿಗೆ ಪ್ರತಿಕ್ರಿಯಿಸಿದ ಚಾಲಕ
ಇದನ್ನೂ ಓದಿ: Kerala floods ಕೇರಳದಲ್ಲಿ ಪ್ರವಾಹ ಸಂಕಷ್ಟದಲ್ಲಿರುವ ಜನರಿಗೆ ಎಲ್ಲ ರೀತಿಯ ಸಹಾಯ ಮಾಡಲು ಕೇಂದ್ರ ಸಿದ್ಧ: ಅಮಿತ್ ಶಾ ಭರವಸೆ

Published On - 6:41 pm, Sun, 17 October 21