PM Modi Speech: ಭಾರತದ ಎಲ್ಲ ನಾಗರಿಕರಿಗೂ ಉಚಿತ ಲಸಿಕೆ: ಪ್ರಧಾನಿ ನರೇಂದ್ರ ಮೋದಿ

| Updated By: ganapathi bhat

Updated on: Jun 07, 2021 | 5:46 PM

PM Narendra Modi Speech Today: ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾಷಣದ ಕ್ಷಣಕ್ಷಣದ ಮಾಹಿತಿಗಳು ಇಲ್ಲಿದೆ. ಕೊವಿಡ್-19 ಸೋಂಕು, ಲಸಿಕಾ ಅಭಿಯಾನದ ಕುರಿತಾಗಿ ಮೋಡಿ ಮಾತನಾಡಿದ್ದಾರೆ.

PM Modi Speech: ಭಾರತದ ಎಲ್ಲ ನಾಗರಿಕರಿಗೂ ಉಚಿತ ಲಸಿಕೆ: ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ

ದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು (ಜೂನ್ 7) ಸಂಜೆ 5 ಗಂಟೆಗೆ ದೇಶವನ್ನುದ್ದೇಶಿಸಿ ಭಾಷಣ ಮಾಡಿದ್ದಾರೆ. ಕೊರೊನಾ ಲಸಿಕೆ ನೀಡಿಕೆ ಮಾರ್ಗಸೂಚಿ, ಉಚಿತ ಲಸಿಕೆ, ನವೆಂಬರ್​ವರೆಗೆ ಬಡವರಿಗೆ ಉಚಿತ ಆಹಾರ ಧಾನ್ಯ, ಕೊರೊನಾ ವಿರುದ್ಧದ ಲಸಿಕೆ ತಯಾರಿ, ನೀಡಿಕೆ ಇತ್ಯಾದಿಯಲ್ಲಿ ಭಾರತೀಯರ ಸಾಧನೆ, ಶ್ರಮ, ಮುಂಚೂಣಿಯ ಕಾರ್ಯಕರ್ತರ ಸೇವೆ ಇತ್ಯಾದಿಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದಾರೆ. ಕೊರೊನಾ ವಿರುದ್ಧದ ಹೋರಾಟದಲ್ಲಿ ಭಾರತ ಜಯಗಳಿಸಲಿದೆ ಎಂಬ ವಿಶ್ವಾಸ ನನಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿ ಭಾಷಣ ಮುಕ್ತಾಯಗೊಳಿಸಿದ್ದಾರೆ.

ಕೊರೊನಾ ಸೋಂಕು, ಲಸಿಕಾ ಅಭಿಯಾನ ಅಥವಾ ಲಾಕ್​ಡೌನ್ ಮತ್ತಿತರ ಮುಂಜಾಗೃತಾ ಕ್ರಮಗಳ ಬಗ್ಗೆ ಮಾತನಾಡುವ ನಿರೀಕ್ಷೆ ಇತ್ತು. ಕೊರೊನಾ ಎರಡನೇ ಅಲೆಯಲ್ಲಿ ಬಹಳಷ್ಟು ಸಾವು- ನೋವು ಅನುಭವಿಸಿದ ಭಾರತವು ಈಗ ಮತ್ತೆ ಸುಧಾರಿಸಿಕೊಳ್ಳುತ್ತಿದೆ. ಕೊವಿಡ್ ಪ್ರಕರಣಗಳ ಸಂಖ್ಯೆ ದಿನೇದಿನೇ ಇಳಿಕೆಯಾಗುತ್ತಿದೆ.  ಕೊರೊನಾದಿಂದ ಗುಣಮುಖರಾದವರ ಪ್ರಮಾಣ ಏರಿಕೆಯಾಗುತ್ತಿದೆ. ಪಾಸಿಟಿವಿಟಿ ದರ ಕೂಡ ಇಳಿಕೆಯ ಹಾದಿಯಲ್ಲಿದೆ. ಅಲ್ಲದೆ, ಹಲವೆಡೆ ಲಾಕ್​ಡೌನ್ ಕಠಿಣ ನಿರ್ಬಂಧಗಳನ್ನು ಅಂತ್ಯಗೊಳಿಸುವ ಚರ್ಚೆಯಾಗುತ್ತಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾಷಣದ ಸಂಪೂರ್ಣ ವಿವರಗಳನ್ನು, ವಿವರವಾಗಿ ಈ ಕೆಳಗೆ ನೀಡಲಾಗಿದೆ.

LIVE NEWS & UPDATES

The liveblog has ended.
  • 07 Jun 2021 05:40 PM (IST)

    ಕೊರೊನಾ ವಿರುದ್ಧದ ಹೋರಾಟದಲ್ಲಿ ಭಾರತ ಜಯಗಳಿಸಲಿದೆ ಎಂಬ ವಿಶ್ವಾಸ ನನಗಿದೆ

    ಕೊರೊನಾ ಲಸಿಕೆ ನೀಡಿಕೆ ಮಾರ್ಗಸೂಚಿ, ಉಚಿತ ಲಸಿಕೆ, ನವೆಂಬರ್​ವರೆಗೆ ಬಡವರಿಗೆ ಉಚಿತ ಆಹಾರ ಧಾನ್ಯ, ಕೊರೊನಾ ವಿರುದ್ಧದ ಲಸಿಕೆ ತಯಾರಿ, ನೀಡಿಕೆ ಇತ್ಯಾದಿಯಲ್ಲಿ ಭಾರತೀಯರ ಸಾಧನೆ, ಶ್ರಮ, ಮುಂಚೂಣಿಯ ಕಾರ್ಯಕರ್ತರ ಸೇವೆ ಇತ್ಯಾದಿಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದಾರೆ. ಕೊರೊನಾ ವಿರುದ್ಧದ ಹೋರಾಟದಲ್ಲಿ ಭಾರತ ಜಯಗಳಿಸಲಿದೆ ಎಂಬ ವಿಶ್ವಾಸ ನನಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿ ಭಾಷಣ ಮುಕ್ತಾಯಗೊಳಿಸಿದ್ದಾರೆ.

  • 07 Jun 2021 05:37 PM (IST)

    ನವೆಂಬರ್​ವರೆಗೂ ಬಡವರಿಗೆ ಉಚಿತ ಆಹಾರ ಧಾನ್ಯ

    ನವೆಂಬರ್​ವರೆಗೂ ಬಡವರಿಗೆ ಉಚಿತ ಆಹಾರ ಧಾನ್ಯ ಕೊಡುತ್ತೇವೆ. ದೇಶದ 80 ಕೋಟಿ ಜನರಿಗೆ ಉಚಿತ ಧಾನ್ಯ ಸಿಗಲಿದೆ. ಭಾರತದಲ್ಲಿ ಲಸಿಕೆ ಅಭಿಯಾನ ಆರಂಭವಾದಾಗ ಬಡವರಿಗೆ ಸಿಗುತ್ತೋ ಇಲ್ವೋ ಎಂಬ ಆತಂಕವಿತ್ತು. ಆದರೆ ಭಾರತಕ್ಕೆ ಲಸಿಕೆ ಬಂದಾಗ ಇಂಥ ಚರ್ಚೆಗಳೂ ಹೆಚ್ಚಾದವು. ಲಸಿಕೆಯ ಆಧರಿಸಿ ಅನುಮಾನ ಬಿತ್ತುತ್ತಿರುವವರನ್ನೂ ದೇಶದ ಜನರು ಗಮನಿಸುತ್ತಿದ್ದಾರೆ. ಈ ಪಿಡುಗಿನ ಸಂದರ್ಭದಲ್ಲಿ ನಾವೆಲ್ಲರೂ ಜೊತೆಯಾಗಿರಬೇಕು. ಕೊರೊನಾ ವಿರುದ್ಧದ ಹೋರಾಟದಲ್ಲಿ ಭಾರತ ಜಯಗಳಿಸಲಿದೆ ಎಂಬ ವಿಶ್ವಾಸ ನನಗಿದೆ.


  • 07 Jun 2021 05:35 PM (IST)

    ರಾಜಕಾರಣದ ಮಾತುಗಳು ಈ ವೇಳೆ ಬೇಡ

    ಲಸಿಕೆ ವಿಚಾರದಲ್ಲಿ ಭಾರತವು ವಿಶ್ವದ ಹಲವು ದೇಶಗಳಿಗಿಂತ ಮುಂದಿದೆ. ಭಾರತದ ಕೊವಿನ್ ಮಾದರಿಯ ಪ್ಲಾಟ್​ಫಾರಂ ರೂಪಿಸಲು ಹಲವು ದೇಶಗಳು ಮುಂದೆ ಬಂದಿವೆ. ನಮಗೆ ಪ್ರತಿ ಡೋಸ್​ನ ಮಹತ್ವ ಅರ್ಥವಾಗಿದೆ. ಒಂದು ಡೋಸ್ ಲಸಿಕೆ ಒಂದು ಜೀವ ಉಳಿಸಬಹುದು. ರಾಜಕಾರಣದ ಮಾತುಗಳು ಈ ವೇಳೆ ಬೇಡ. ಅದು ಯಾರಿಗೂ ಇಷ್ಟವಾಗುವುದಿಲ್ಲ. ಲಸಿಕೆ ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಲಭ್ಯವಾಗಲಿದೆ. ಇದನ್ನು ಜನರಿಗೆ ತಲುಪಿಸುವುದು ಎಲ್ಲ ಜನನಾಯಕರ ಕರ್ತವ್ಯವಾಗಿದೆ.ಮಹಾಪಿಡುಗಿನ ಈ ಸಮಯದಲ್ಲಿ ಬಡವರ ಎಲ್ಲ ಅಗತ್ಯಗಳನ್ನು ಗಮನಿಸಿ, ನಾವು ಅವರ ಜೊತೆಗೆ ಇರುತ್ತೇವೆ.

  • 07 Jun 2021 05:33 PM (IST)

    ಭಾರತದ ಎಲ್ಲ ನಾಗರಿಕರಿಗೂ ಉಚಿತ ಲಸಿಕೆ

    ಭಾರತದ ಎಲ್ಲ ನಾಗರಿಕರಿಗೂ ಉಚಿತ ಲಸಿಕೆ ಕೊಡಲಾಗುವುದು. ಬಡವರು, ಮಧ್ಯಮ ವರ್ಗದವರು ಎಂಬ ಭೇದ ಇರುವುದಿಲ್ಲ. ಯಾರಿಗಾದರೂ ಉಚಿತ ಲಸಿಕೆಯ ಬದಲು ಖಾಸಗಿ ಆಸ್ಪತ್ರೆಗಳಲ್ಲಿ ಪಡೆಯುತ್ತೇವೆ ಎಂದಾದರೆ ಅದಕ್ಕೂ ಅವಕಾಶವಿದೆ. ದೇಶದಲ್ಲಿ ಉತ್ಪಾದನೆಯಾಗುವ ಒಟ್ಟು ಲಸಿಕೆ ಡೋಸ್​ಗಳ ಪೈಕಿ ಶೇ 25ರಷ್ಟು ಖಾಸಗಿ ವೈದ್ಯಕೀಯ ಸಂಸ್ಥೆಗಳ ಖರೀದಿಗೆ ಅವಕಾಶ ನೀಡಲಾಗುವುದು. ಗೆಲುವು ಬೇಕಾದವರು ಸುಲಭವಾಗಿ ಸೋಲೊಪ್ಪುವುದಿಲ್ಲ. ಕಠಿಣ ಪರಿಶ್ರಮದಿಂದ ಹೋರಾಡುತ್ತಾರೆ. ಪರಿಸ್ಥಿತಿ ಬದಲಾದಂತೆ ತಮ್ಮ ತಂತ್ರಗಳನ್ನೂ ಬದಲಿಸಿಕೊಳ್ಳುತ್ತಾರೆ.

  • 07 Jun 2021 05:31 PM (IST)

    ಜೂನ್ 21ರ ನಂತರ ದೇಶದಲ್ಲಿ 18 ವರ್ಷ ದಾಟಿದ ಎಲ್ಲರಿಗೂ ಲಸಿಕೆ ಕೊಡುವ ಅಭಿಯಾನ

    ಪ್ರಯತ್ನಗಳ ನಂತರ ಕೆಲ ರಾಜ್ಯಗಳು ಹಿಂದಿನ ವ್ಯವಸ್ಥೆಗಳೇ ಸರಿಯಿತ್ತು ಎಂಬ ಅಭಿಪ್ರಾಯಕ್ಕೆ ಬಂದವು. ಲಸಿಕೆಗಳ ವಿಚಾರದಲ್ಲಿ ರಾಜ್ಯಗಳು ತಮ್ಮ ಅಭಿಪ್ರಾಯವನ್ನು ಬದಲಿಸಿಕೊಂಡವು. ನಮಗೂ ದೇಶದ ಜನರ ಹಿತವೇ ಮುಖ್ಯ. ಹೀಗಾಗಿಯೇ ಮತ್ತೆ ಜನವರಿಯಲ್ಲಿ ಇದ್ದ ವ್ಯವಸ್ಥೆಯನ್ನೇ ತಂದೆವು. ರಾಜ್ಯಗಳಲ್ಲಿ ಲಸಿಕೆಗೆ ಸಂಬಂಧಿಸಿದಂತೆ ಇದ್ದ ಶೇ 25ರಷ್ಟು ಹೊಣೆಗಾರಿಕೆಯನ್ನೂ ಭಾರತ ಸರ್ಕಾರವೇ ತೆಗೆದುಕೊಳ್ಳಲಿದೆ. ಮುಂದಿನ ಎರಡು ವಾರಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೊಸ ಮಾರ್ಗದರ್ಶಿ ಸೂತ್ರಗಳ ಅನ್ವಯ ಲಸಿಕೆ ಅಭಿಯಾನಕ್ಕೆ ಹೊಸ ವೇಗ ಕೊಡುತ್ತದೆ. ಯೋಗ ದಿನವೂ ಇರುವ ಜೂನ್ 21ರ ನಂತರ ದೇಶದಲ್ಲಿ 18 ವರ್ಷ ದಾಟಿದ ಎಲ್ಲರಿಗೂ ಲಸಿಕೆ ಕೊಡುವ ಅಭಿಯಾನ ಹೊಸ ವೇಗದಿಂದ ನಡೆಯಲಿದೆ. ಭಾರತ ಸರ್ಕಾರವೇ ಎಲ್ಲ ರಾಜ್ಯಗಳಿಗೂ ಉಚಿತವಾಗಿ ಕೊಡಲಿದೆ.

  • 07 Jun 2021 05:29 PM (IST)

    ಸಂವಿಧಾನದ ಪ್ರಕಾರ ಆರೋಗ್ಯ ಎನ್ನುವುದು ರಾಜ್ಯ ಹೊಣೆಗಾರಿಕೆ

    ಒಂದು ಅಳತೆ ಎಲ್ಲರಿಗೂ ಅನ್ವಯಿಸುವುದಿಲ್ಲ ಎಂಬ ಮಾತು ಕೇಳಿಬಂತು. ಸಂವಿಧಾನದ ಪ್ರಕಾರ ಆರೋಗ್ಯ ಎನ್ನುವುದು ರಾಜ್ಯ ಹೊಣೆಗಾರಿಕೆ. ಹೀಗಾಗಿಯೇ ಕೇಂದ್ರ ಸರ್ಕಾರವು ಬೃಹತ್ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಿ ರಾಜ್ಯಗಳಿಗೆ ಕೊಟ್ಟಿತು. ಸ್ಥಳೀಯ ಮಟ್ಟದಲ್ಲಿ ಕರ್ಫ್ಯೂ, ಲಾಕ್​ಡೌನ್, ಕಂಟೇನ್​ಮೆಂಟ್ ವಲಯದ ಅಧಿಕಾರ ರಾಜ್ಯ ಸರ್ಕಾರಗಳಿಗೆ ಕೊಡಲಾಯಿತು. ಜನವರಿಯಿಂದ ಏಪ್ರಿಲ್​ವರೆಗೆ ಲಸಿಕೆ ಅಭಿಯಾನ ಕೇಂದ್ರದ ಉಸ್ತುವಾರಿಯಲ್ಲಿಯೇ ನಡೆಯಿತು. ಜನರು ಉತ್ಸಾಹದಿಂದ ಲಸಿಕೆ ಹಾಕಿಸಿಕೊಳ್ಳುತ್ತಿದ್ದು. ಕೆಲ ರಾಜ್ಯ ಸರ್ಕಾರಗಳು ಲಸಿಕೆ ಹೊಣೆಯನ್ನು ನಮಗೂ ಕೊಡಿ ಎಂದು ಕೇಳಿದವು. ಲಸಿಕೆಗಾಗಿ ವಯೋಮಿತಿ ಏಕೆ ಎಂಬೆಲ್ಲಾ ಪ್ರಶ್ನೆಗಳು ಬಂದವು. ಮಾಧ್ಯಮದ ಒಂದು ವರ್ಗ ಈ ವಿಚಾರದಲ್ಲಿ ಒಂದು ಆಂದೋಲನವೇ ನಡೆಯಿತು. ಈ ವಿಚಾರದಲ್ಲಿ ಒಂದು ಸಹಮತ ಬಂದಿತು. ರಾಜ್ಯ ಸರ್ಕಾರಗಳೂ ಪ್ರಯತ್ನ ಮಾಡುತ್ತವೆ ಎಂದರೆ ನಾವು ಅವಕಾಶ ಕೊಡಬೇಕಿತ್ತು. ಹೀಗಾಗಿ ನಾವು ಅಭಿಯಾನದಲ್ಲಿ ಒಂದು ಬದಲಾವಣೆ ತಂದೆವು. ಹೊಣೆಗಾರಿಕೆಯನ್ನು ಅವರಿಗೂ ಕೊಡೋಣ ಅಂತ ನಿರ್ಧರಿಸಿದೆವು. ಅವರೂ ಪ್ರಯತ್ನಿಸಿದರು. ಅವರಿಗೆ ವಿಶ್ವದ ಪರಿಸ್ಥಿತಿ ಏನು ಅಂತ ಆಗ ಅರ್ಥವಾಯಿತು.

  • 07 Jun 2021 05:27 PM (IST)

    ಕೊರೊನಾದ 2ನೇ ಅಲೆಯ ಮೊದಲೇ ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ಕೊಡದಿದ್ದರೆ ಏನಾಗ್ತಿತ್ತು?

    ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕೆಲಸಗಾರರು, 45 ವರ್ಷ ದಾಟಿದವರಿಗೆ ಲಸಿಕೆ ಕೊಡುವ ಪ್ರಕ್ರಿಯೆ ಬಹಳ ಬೇಗ ಆರಂಭಿಸಿದೆವು. ಕೊರೊನಾದ 2ನೇ ಅಲೆಯ ಮೊದಲೇ ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ಕೊಡದಿದ್ದರೆ ಏನಾಗ್ತಿತ್ತು ಯೋಚಿಸಿ. ವೈದ್ಯರು, ನರ್ಸಿಂಗ್ ಸಿಬ್ಬಂದಿ, ಆ್ಯಂಬುಲೆನ್ಸ್​ ಡ್ರೈವರ್​, ಸ್ವಚ್ಛತಾ ಕಾರ್ಮಿಕರಿಗೆ ಲಸಿಕೆ ಹಾಕಿಸದಿದ್ದರೆ ಏನಾಗುತ್ತಿತ್ತು? ಅವರಿಗೆ ಲಸಿಕೆ ಸಿಕ್ಕ ಕಾರಣದಿಂದಲೇ ಅವರು ಇತರರ ಆರೋಗ್ಯ ಕಾಪಾಡಲು ತೊಡಗಿಸಿಕೊಳ್ಳಲು ಆಯಿತು ಎಂದು ಲಸಿಕೆ ನೀಡಿಕೆ ಪ್ರಕ್ರಿಯೆ ಬಗ್ಗೆ ಮೋದಿ ಮಾತನಾಡಿದರು.

  • 07 Jun 2021 05:24 PM (IST)

    ಭಾರತವೂ ಇತರ ದೇಶಗಳಿಗಿಂತ ಹಿಂದುಳಿದಿಲ್ಲ

    ಲಸಿಕೆ ರೂಪಿಸಿದ ನಂತರವೂ ವಿಶ್ವದ ಕೆಲವೇ ದೇಶಗಳಲ್ಲಿ ಲಸಿಕೆ ಹಾಕಿಸುವ ಪ್ರಕ್ರಿಯೆ ಆರಂಭವಾಯಿತು. ವಿಶ್ವ ಆರೋಗ್ಯ ಸಂಸ್ಥೆಯು ಲಸಿಕೆಗಳಿಗೆ ಸಂಬಂಧಿಸಿದಂತೆ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿತು. ಭಾರತವೂ ಇತರ ದೇಶಗಳು ಅನುಸರಿಸುತ್ತಿರುವ ಅತ್ಯುತ್ತಮ ಮಾರ್ಗಗಳನ್ನು ಅನುಸರಿಸುತ್ತಿದೆ. ಕೇಂದ್ರ ಸರ್ಕಾರವು ವಿವಿಧ ಮುಖ್ಯಮಂತ್ರಿಗಳು, ಸಂಸದರ ಜೊತೆಗೆ ಸಂವಾದ ನಡೆಸಿದೆ.

  • 07 Jun 2021 05:22 PM (IST)

    ಮುಂದಿನ ದಿನಗಳಲ್ಲಿ ಲಸಿಕೆಗಳ ಲಭ್ಯತೆ ಇನ್ನೂ ಹೆಚ್ಚಲಿದೆ

    ಆತ್ಮನಿರ್ಭರ್​ ಪ್ಯಾಕೇಜ್​ನಡಿ ಕೊವಿಡ್​ ಪ್ಯಾಕೇಜ್​ ಮೂಲಕ ಕೋಟ್ಯಂತರ ರೂಪಾಯಿ ಖರ್ಚು ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಲಸಿಕೆಗಳ ಲಭ್ಯತೆ ಇನ್ನೂ ಹೆಚ್ಚಲಿದೆ. ದೇಶದ 7 ಕಂಪನಿಗಳು ಲಸಿಕೆ ತಯಾರಿಸುತ್ತಿವೆ. 3 ಟ್ರಯಲ್​ಗಳು ನಡೆಯುತ್ತಿವೆ. ಇತರ ದೇಶಗಳ ಕಂಪನಿಗಳಿಂದಲೂ ಲಸಿಕೆ ಖರೀದಿ ಪ್ರಕ್ರಿಯೆಯನ್ನು ಆರಂಭಿಸಿದ್ದೇವೆ. ಕೆಲ ತಜ್ಞರ ಮೂಲಕ ಮಕ್ಕಳ ಸುರಕ್ಷೆ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ. ಮಕ್ಕಳಿಗೆ ಲಸಿಕೆ ನೀಡುವ ಟ್ರಯಲ್ ನಡೆಯುತ್ತಿದೆ. ಮೂಗಿನ ಮೂಲಕ ಕೊಡುವ (ನೇಸಲ್) ಲಸಿಕೆಯ ಟ್ರಯಲ್ ಸಹ ನಡೆಯುತ್ತಿದೆ. ಈ ಲಸಿಕೆಯಲ್ಲಿ ಸಫಲತೆ ಸಿಕ್ಕರೆ ಭಾರತದಲ್ಲಿ ಲಸಿಕೆ ಅಭಿಯಾನ ಇನ್ನಷ್ಟು ವೇಗ ಪಡೆಯುತ್ತದೆ. ಇಷ್ಟು ಕಡಿಮೆ ಸಮಯದಲ್ಲಿ ಲಸಿಕೆ ಮಾಡುವುದರಿಂದ ವಿಶ್ವದ ಜನಸಮುದಾಯಕ್ಕೆ ಅನುಕೂಲವಾಗಿದೆ.

  • 07 Jun 2021 05:17 PM (IST)

    ವಿಶ್ವಾಸೇನ ಸಿದ್ಧಃ ಎನ್ನುವುದು ನಮ್ಮ ಮಂತ್ರ

    ವಿಶ್ವಾಸೇನ ಸಿದ್ಧಃ ಎನ್ನುವುದು ನಮ್ಮ ಮಂತ್ರ. ನಮಗೆ ನಮ್ಮ ಮೇಲೆ ವಿಶ್ವಾಸವಿದ್ದಾಗ ಮಾತ್ರ ಗೆಲುವು ಸಿಗುತ್ತದೆ. ನಮಗೆ ನಮ್ಮ ವಿಜ್ಞಾನಿಗಳ ಮೇಲೆ ವಿಶ್ವಾಸವಿತ್ತು. ಅವರು ಅತ್ಯಂತ ಕಡಿಮೆ ಸಮಯದಲ್ಲಿ ಲಸಿಕೆ ಸಿದ್ಧಪಡಿಸುತ್ತಾರೆ ಎಂಬ ನಿರೀಕ್ಷೆಯಿತ್ತು. ಹೀಗಾಗಿಯೇ ನಾವು ಲಸಿಕಾಕರಣಕ್ಕೆ ಬೇಕಾದ ಸೌಕರ್ಯ ಹೊಂದಿಸಿಕೊಳ್ಳಲು ಆರಂಭಿಸಿದೆವು. ಕಳೆದ ವರ್ಷ ಏಪ್ರಿಲ್​ನಲ್ಲಿ ಕೊರೊನಾದ ಕೆಲವೇ ಪ್ರಕರಣಗಳಿದ್ದಾಗ ಕೊರೊನಾ ಲಸಿಕಾ ಕಾರ್ಯಪಡೆ ರೂಪಿಸಿ ಕೆಲಸ ಆರಂಭಿಸಿದೆವು. ಲಸಿಕೆ ತಯಾರಿಸುವ ಕಂಪನಿಗಳಿಗೆ ಅನುದಾನ, ಸಹಕಾರ ಕೊಟ್ಟೆವು. ಟ್ರಯಲ್​ಗಳನ್ನು ಮುಗಿಸಲು ಸಹಾಯ ಮಾಡಿದೆವು ಎಂದು ಮೋದಿ ವಿವರಿಸಿದರು.

  • 07 Jun 2021 05:16 PM (IST)

    ಪ್ರಾಮಾಣಿಕತೆಯಿದ್ದರೆ ಸಂಕಷ್ಟದಿಂದ ಬಿಡುಗಡೆಯ ದಾರಿ ಕಾಣಿಸುತ್ತದೆ

    ನಮಗೆ ನಮ್ಮ ದೇಶದ ಬಡವರ ಬಗ್ಗೆ, ಅವರ ಮಕ್ಕಳ ಬಗ್ಗೆ ಚಿಂತೆಯಿತ್ತು. ಅವರಿಗೆ ಲಸಿಕೆ ಸಿಗುವುದಿಲ್ಲ ಎಂಬ ಆತಂಕವಿತ್ತು. ಭಾರತವು ಇಂಥ ಆಪತ್ತನ್ನು ಹೇಗೆ ಎದುರಿಸುತ್ತದೆ ಎಂದು ಇಡೀ ವಿಶ್ವ ಕುತೂಹಲ ವ್ಯಕ್ತಪಡಿಸಿತ್ತು. ನೀತಿ ಸ್ಪಷ್ಟವಾಗಿದ್ದರೆ, ಆಶಯಗಳಲ್ಲಿ ಪ್ರಾಮಾಣಿಕತೆಯಿದ್ದರೆ ಸಂಕಷ್ಟದಿಂದ ಬಿಡುಗಡೆಯ ದಾರಿ ಕಾಣಿಸುತ್ತದೆ. ನಮ್ಮ ದೇಶದ ಎರಡು ಕಂಪನಿಗಳು ಲಸಿಕೆ ಒದಗಿಸಿದವು. ನಾವು ವಿಶ್ವದ ಹಲವು ದೇಶಗಳಿಗಿಂತ ಲಸಿಕೆ ಕೊಡುವ ವಿಚಾರದಲ್ಲಿ ಮುಂದಿದ್ದೇವೆ ಎಂದು ಮೋದಿ ಹೇಳಿದರು.

  • 07 Jun 2021 05:14 PM (IST)

    ಭಾರತದಲ್ಲಿ ಸಂಪೂರ್ಣ ಲಸಿಕಾಕರಣ ಆಗಬೇಕು

    ಕೊರೊನಾಕ್ಕೆ ಮೊದಲೂ ಇತರ ಕಾಯಿಲೆಗಳಿಗೆ ಭಾರತದಲ್ಲಿ ಲಸಿಕೆ ಹಾಕಿಸಿಕೊಂಡವರ ಸಂಖ್ಯೆ ಕಡಿಮೆ ಎಂಬುದು ಆತಂಕದ ವಿಚಾರ. ದೇಶದಲ್ಲಿ ಸಂಪೂರ್ಣ ಲಸಿಕಾಕರಣ ಆಗಬೇಕು. ಇದು ವರ್ಷಗಟ್ಟಲೆ ಆಗಬಹುದು ಎಂಬ ಆತಂಕ ವ್ಯಕ್ತವಾಯಿತು. ಹೀಗಾಗಿಯೇ ಇಂದ್ರಧನುಷ್ ಯೋಜನೆಯ ಮೂಲಕ ಲಸಿಕೆ ಹಾಕುವ ಪ್ರಮಾಣ ಹೆಚ್ಚಿಸಿದೆವು. ಹೀಗಾಗಿ ಕೇವಲ 5 ವರ್ಷಗಳಲ್ಲಿ ಲಸಿಕೆ ಹಾಕಿಸಿಕೊಳ್ಳುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಯಿತು.

  • 07 Jun 2021 05:11 PM (IST)

    ಲಸಿಕೆಯ ಬಗ್ಗೆ, ಭಾರತದಲ್ಲಿ ಅದರ ಉತ್ಪಾದನೆಯ ಮಹತ್ವದ ಬಗ್ಗೆ ಮೋದಿ ಮಾತು

    ಕೊರೊನಾದಂಥ ರೂಪ ಬದಲಿಸುವ ದುಷ್ಕರ್ಮಿಯ ವಿರುದ್ಧದ ಹೋರಾಟಕ್ಕೆ ಮಾಸ್ಕ್​, 2 ಗಜದ ಅಂತರ ದೊಡ್ಡ ಅಸ್ತ್ರಗಳು. ಈ ಹೋರಾಟದಲ್ಲಿ ಲಸಿಕೆ ಎನ್ನುವುದು ನಮ್ಮ ಸುರಕ್ಷಾ ಕವಚ. ಇಂದು ವಿಶ್ವದಲ್ಲಿಯೇ ಲಸಿಕೆಗೆ ಅತಿಹೆಚ್ಚು ಬೇಡಿಕೆಯಿದೆ. ಇದರ ಹೋಲಿಕೆಯಲ್ಲಿ ಉತ್ಪಾದನೆಯ ಪ್ರಮಾಣ ಕಡಿಮೆ ಇದೆ. ನಮ್ಮ ಬಳಿ ಭಾರತದಲ್ಲಿ ಉತ್ಪಾದನೆಯ ಲಸಿಕೆ ಇಲ್ಲದಿದ್ದರೆ ಭಾರತದಂಥ ವಿಶಾಲ ದೇಶದಲ್ಲಿ ಏನಾಗುತ್ತಿತ್ತು? ಸುಮ್ಮನೆ ಒಮ್ಮನೆ ಯೋಚಿಸಿ. ಕಳೆದ ಕೆಲ ವರ್ಷಗಳ ಇತಿಹಾಸ ನೋಡಿದರೆ, ಭಾರತಕ್ಕೆ ವಿದೇಶಗಳ ಲಸಿಕೆ ಪಡೆಯಲು ದಶಕಗಳು ಬೇಕಾಗುತ್ತಿದ್ದವು. ಅಲ್ಲಿ ಲಸಿಕೆಗಳು ಹಂಚಿದ್ದು ಮುಗಿದ ನಂತರವೂ ನಮಗೆ ಲಸಿಕೆ ಬರುತ್ತಿರಲಿಲ್ಲ. ಪೊಲಿಯೊ, ದಡಾರದ ವಿಚಾರದಲ್ಲಿ ಇಂಥದ್ದೇ ಪರಿಸ್ಥಿತಿ ಅನುಭವಿಸಿದ್ದೆವು.

  • 07 Jun 2021 05:07 PM (IST)

    ಮೆಡಿಕಲ್ ಆಕ್ಸಿಜನ್ ಇಷ್ಟೊಂದು ಬೇಕಾಗುತ್ತದೆ ಎಂದು ಎಂದಿಗೂ ಊಹಿಸಿರಲ್ಲ

    ಕೊವಿಡ್ ವಿರುದ್ಧದ ಹೋರಾಟಕ್ಕೆ ಬೇಕಾದ ಎಲ್ಲ ಸೌಕರ್ಯಗಳನ್ನು ತುರ್ತಾಗಿ ನಾವು ಹೊಂದಿಸಿಕೊಂಡೆವು. ನಮಗೆ ಮೆಡಿಕಲ್ ಆಕ್ಸಿಜನ್ ಇಷ್ಟೊಂದು ಬೇಕಾಗುತ್ತದೆ ಎಂದು ಎಂದಿಗೂ ನಾವು ಊಹಿಸಿರಲ್ಲ. ಇದನ್ನು ಪೂರೈಸಲು ಯುದ್ಧೋಪಾದಿಯಲ್ಲಿ ನಾವು ಕೆಲಸ ಮಾಡಿದೆವು. ಆಕ್ಸಿಜನ್ ಎಕ್ಸ್​ಪ್ರೆಸ್​ ರೈಲುಗಳನ್ನು ಓಡಿಸಿದೆವು, ಏರ್​ಫೋರ್ಸ್ ವಿಮಾನಗಳು ಆಕ್ಸಿಜನ್ ಸಾಗಿಸಿದವು. ನೌಕಾಪಡೆಯ ನೆರವು ಪಡೆಯಲಾಯಿತು. ವಿಶ್ವದ ಯಾವುದೇ ದೇಶದಲ್ಲಿ ಆಕ್ಸಿಜನ್ ಸಿಗುತ್ತೆ ಎಂದರೂ ಅದನ್ನು ಪ್ರಯತ್ನಪಟ್ಟು ತರಿಸಿಕೊಂಡೆವು.ಅತ್ಯಗತ್ಯ ವಸ್ತುಗಳ ಉತ್ಪಾದನೆಯನ್ನು ಹಲವು ಪಟ್ಟು ಹೆಚ್ಚಿಸಿದೆವು ಎಂದು ಮೋದಿ ಕೊರೊನಾ ತಂದೊಡ್ಡಿದ ಸಂಕಷ್ಟವನ್ನು ಅದಕ್ಕೆ ಪ್ರತಿಯಾಗಿ ಭಾರತ ಹೋರಾಡಿದ ರೀತಿಯನ್ನು ನೆನೆದಿದ್ದಾರೆ.

  • 07 Jun 2021 05:04 PM (IST)

    ಭಾಷಣ ಆರಂಭಿಸಿದ ಮೋದಿ

    ಕೊರೊನಾ ಬಿಕ್ಕಟ್ಟಿನಿಂದ ವಿಶ್ವದ ಹಲವು ದೇಶಗಳಂತೆ ಭಾರತವೂ ಕಷ್ಟನಷ್ಟ ಅನುಭವಿಸಿತು. ಕಳೆದ 100 ವರ್ಷಗಳಲ್ಲಿ ಇತಿಹಾಸ ಕಂಡ ದೊಡ್ಡ ಮಹಾಮಾರಿ ಇದು. ಇಂಥ ಮಹಾಮಾರಿಯನ್ನು ಆಧುನಿಕ ಜಗತ್ತು ಕಂಡು-ಕೇಳಿರಲಿಲ್ಲ, ನೋಡಿರಲಿಲ್ಲ ಎಂದು ಪ್ರಧಾನಿ ಭಾಷಣ ಆರಂಭಿಸಿದ್ದಾರೆ. ಕೊರೊನಾ ಸೋಂಕಿನ ಬಗ್ಗೆ ಮೋದಿ ಮಾತನಾಡುತ್ತಿದ್ದಾರೆ.

  • 07 Jun 2021 04:53 PM (IST)

    ಮೋದಿ ಭಾಷಣ ಇಲ್ಲಿ ನೋಡಿ

    ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣ ನರೇಂದ್ರ ಮೋದಿ ಯುಟ್ಯೂಬ್ ಚಾನೆಲ್​ನಲ್ಲಿ ನೇರ ಪ್ರಸಾರ.

  • 07 Jun 2021 04:50 PM (IST)

    ಕಳೆದ ಭಾಷಣದಲ್ಲಿ ಮೈಕ್ರೊ ಕಂಟೇನ್​ಮೆಂಟ್​ ವಲಯಗಳ ಪ್ರಸ್ತಾಪ

    ದೇಶದಲ್ಲಿ ಕೊರೊನಾ ಪಿಡುಗು ವ್ಯಾಪಕವಾಗಿ ಹರಡಲು ಆರಂಭವಾದ ನಂತರ ಪ್ರಧಾನಿ ನರೇಂದ್ರ ಮೋದಿ ಹಲವು ಬಾರಿ ದೇಶವನ್ನು ಉದ್ದೇಶಿಸಿ ಮಾತನಾಡಿದ್ದರು. ಅವರ ಇತ್ತೀಚಿನ ಭಾಷಣ ನಡೆದದ್ದು ಏಪ್ರಿಲ್ 20ರಂದು. ಸಂಪೂರ್ಣ ಲಾಕ್​ಡೌನ್ ಬದಲು ಮೈಕ್ರೊ ಕಂಟೇನ್​ಮೆಂಟ್ ವಲಯಗಳ ರಚನೆ, ನಿರ್ವಹಣೆ ಬಗ್ಗೆ ಗಮನ ಕೊಡುವಂತೆ ಮೋದಿ ಆ ಭಾಷಣದಲ್ಲಿ ಸಲಹೆ ಮಾಡಿದ್ದರು. ಕೊರೊನಾ ಸೋಂಕಿತರ ನೆರವಿಗೆ ಧಾವಿಸುವಂತೆ ಯುವಜನತೆಯನ್ನು ವಿನಂತಿಸಿದ್ದರು.

  • 07 Jun 2021 04:47 PM (IST)

    ಮೋದಿ ಭಾಷಣದ ಬಗ್ಗೆ ಹೆಚ್ಚಿದ ಕುತೂಹಲ

    ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾಷಣದಲ್ಲಿ ಏನೆಲ್ಲಾ ವಿಚಾರ ಚರ್ಚೆಯಾಗಬಹುದು ಎಂಬ ಬಗ್ಗೆ ಟಿವಿ9 ಡಿಜಿಟಲ್ ವರದಿ ಇಲ್ಲಿದೆ ಓದಿ.

  • 07 Jun 2021 04:44 PM (IST)

    ರಾಜ್ಯಗಳಿಗೆ ಕೇಂದ್ರದಿಂದಲೇ ಲಸಿಕೆ ಪೂರೈಕೆ ಸಾಧ್ಯತೆ?

    ಕೇಂದ್ರ ಸರ್ಕಾರವೇ ಲಸಿಕೆ ಖರೀದಿಸಿ ದೇಶದ ಎಲ್ಲ ರಾಜ್ಯಗಳಿಗೂ ವಿತರಿಸಬಹುದು ಎಂಬ ಸುಳಿವನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಮುಂಜಾನೆ ನೀಡಿದ್ದರು.

    ಪ್ರಧಾನಿ ಮೋದಿ ಭಾಷಣದ ಬಗ್ಗೆ ಟ್ವೀಟ್ ಮೂಲಕ ಮಾಹಿತಿ ನೀಡಿದ್ದರು:

  • 07 Jun 2021 04:37 PM (IST)

    ಲಸಿಕೆ ನೀಡಿಕೆ ಕುರಿತು ಭರವಸೆ ನೀಡಬಹುದು

    ದೇಶದಲ್ಲಿ ಲಸಿಕಾ ಅಭಿಯಾನ ವೇಗವಾಗಿ ಸಾಗಬೇಕು ಎಂಬ ಬಗ್ಗೆ ಒತ್ತಡವಿದೆ. ವಿಪಕ್ಷಗಳು, ರಾಜ್ಯ ಆಡಳಿತಗಳು, ಸ್ಥಳೀಯ ಆಡಳಿತಗಳು ಹಾಗೂ ಜನರು ಸಹಿತ ಲಸಿಕೆಗಾಗಿ ಬೇಡಿಕೆ ಇಡುತ್ತಿದ್ದಾರೆ. ಆದಷ್ಟು ಬೇಗ ಲಸಿಕೆ ನೀಡಿಕೆ ಆದರೆ ಕೊರೊನಾ ಸೋಂಕು ಹರಡುವಿಕೆ ತಡೆಗಟ್ಟಬಹುದು ಎಂದು ತಜ್ಞರ ಅಭಿಪ್ರಾಯವೂ ಇದೆ. ಹೀಗಾಗಿ, ಲಸಿಕೆ ನೀಡುವ ಕುರಿತು ಮೋದಿ ಭರವಸೆ ನೀಡುವ ಸಾಧ್ಯತೆ ಇದೆ. 18 ರಿಂದ 44 ವರ್ಷದವರಿಗೆ ವ್ಯಾಕ್ಸಿನ್ ನೀಡುವ ಕುರಿತು ಭರವಸೆ ನೀಡಬಹುದು. ವರ್ಷಾಂತ್ಯದೊಳಗೆ ಲಸಿಕೆ ನೀಡಿಕೆ ಪೂರ್ಣಗೊಳಿಸುವ ಬಗ್ಗೆ ಮಾತನಾಡಬಹುದು. ಜೊತೆಗೆ, ಮೂರನೇ ಅಲೆ ಎದುರಿಸಲು ಹೇಗೆ ತಯಾರಿ ನಡೆಸಬೇಕು ಎಂಬ ಬಗ್ಗೆ ಸಲಹೆ ನೀಡಬಹುದು.

  • 07 Jun 2021 04:34 PM (IST)

    ಮುಂಚೂಣಿಯ ಕಾರ್ಯಕರ್ತರಿಗೆ ಮೋದಿ ಧನ್ಯವಾದ ತಿಳಿಸಬಹುದು

    ಕೊರೊನಾ ಸೋಂಕಿನ ಸಂದರ್ಭದಲ್ಲೂ ಕಾರ್ಯನಿರ್ವಹಿಸಿದ ವೈದ್ಯಕೀಯ ಸಿಬ್ಬಂದಿಗಳು, ಮುಂಚೂಣಿ ಕೆಲಸಗಾರರಿಗೆ ಮೋದಿ ಧನ್ಯವಾದ ಹೇಳುವ ಸಾಧ್ಯತೆ ಇದೆ. ಕೊರೊನಾ ಎರಡನೇ ಅಲೆ ನಿಯಂತ್ರಣಕ್ಕೆ ಶ್ರಮಿಸುತ್ತಿರುವವರಿಗೆ ಮೋದಿ ಕೃತಜ್ಞತೆ ಹೇಳಬಹುದು ಎಂದು ಅಂದಾಜಿಸಲಾಗಿದೆ.

  • 07 Jun 2021 04:30 PM (IST)

    ಅನ್​ಲಾಕ್ ಬಗ್ಗೆ ಮೋದಿ ಮಾತು ಸಾಧ್ಯತೆ

    ಕೆಲವೇ ಕ್ಷಣಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಆರಂಭವಾಗಲಿದೆ. ದೇಶವನ್ನುದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಲಿದ್ದಾರೆ. ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿರುವುದರಿಂದ ಅನ್​ಲಾಕ್ ವೇಳೆ ಜನರು ಹೇಗೆ ಜಾಗೃತರಾಗಿರಬೇಕು ಎಂದು ಮೋದಿ ಸಲಹೆ ನೀಡುವ ಸಾಧ್ಯತೆ ಅಂದಾಜಿಸಲಾಗಿದೆ. ದೆಹಲಿ ಹಾಗೂ ಮುಂಬೈನಲ್ಲಿ ಅನ್​ಲಾಕ್ ಪ್ರಕ್ರಿಯೆ ಶುರುಮಾಡಲಾಗಿದೆ. ಅನ್​ಲಾಕ್ ಆದರೂ ಜನರು ಎಚ್ಚರಿಕೆಯಿಂದ ಇರಬೇಕಾದ ಬಗ್ಗೆ ಮೋದಿ ಮಾತನಾಡುವ ಸಾಧ್ಯತೆ ಇದೆ.

Published On - 5:40 pm, Mon, 7 June 21

Follow us on