PM Narendra Modi ಕೊವಿಡ್ ವಿರುದ್ಧದ ಹೋರಾಟದಲ್ಲಿ ಲಸಿಕೆಯೇ ನಮ್ಮ ಸುರಕ್ಷಾ ಕವಚ: ನರೇಂದ್ರ ಮೋದಿ
PM Modi Address the Nation: ನಮಗೆ ಮೆಡಿಕಲ್ ಆಕ್ಸಿಜನ್ ಇಷ್ಟೊಂದು ಬೇಕಾಗುತ್ತದೆ ಎಂದು ಎಂದಿಗೂ ನಾವು ಊಹಿಸಿರಲ್ಲ. ಇದನ್ನು ಪೂರೈಸಲು ಯುದ್ಧೋಪಾದಿಯಲ್ಲಿ ನಾವು ಕೆಲಸ ಮಾಡಿದೆವು. ಆಕ್ಸಿಜನ್ ಎಕ್ಸ್ಪ್ರೆಸ್ ರೈಲುಗಳನ್ನು ಓಡಿಸಿದೆವು, ಏರ್ಫೋರ್ಸ್ ವಿಮಾನಗಳು ಆಕ್ಸಿಜನ್ ಸಾಗಿಸಿದವು
ದೆಹಲಿ: ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಕೊರೊನಾ ಬಿಕ್ಕಟ್ಟಿನಿಂದ ವಿಶ್ವದ ಹಲವು ದೇಶಗಳಂತೆ ಭಾರತವೂ ಕಷ್ಟನಷ್ಟ ಅನುಭವಿಸಿತು. ಕಳೆದ 100 ವರ್ಷಗಳಲ್ಲಿ ಇತಿಹಾಸ ಕಂಡ ದೊಡ್ಡ ಮಹಾಮಾರಿ ಇದು. ಆಧುನಿಕ ವಿಶ್ವವು ಇಂಥ ಮಹಾಮಾರಿಯನ್ನು ಆಧುನಿಕ ಜಗತ್ತು ಕಂಡು-ಕೇಳಿರಲಿಲ್ಲ, ನೋಡಿರಲಿಲ್ಲ. ನಮಗೆ ಮೆಡಿಕಲ್ ಆಕ್ಸಿಜನ್ ಇಷ್ಟೊಂದು ಬೇಕಾಗುತ್ತದೆ ಎಂದು ಎಂದಿಗೂ ನಾವು ಊಹಿಸಿರಲ್ಲ. ಇದನ್ನು ಪೂರೈಸಲು ಯುದ್ಧೋಪಾದಿಯಲ್ಲಿ ನಾವು ಕೆಲಸ ಮಾಡಿದೆವು. ಆಕ್ಸಿಜನ್ ಎಕ್ಸ್ಪ್ರೆಸ್ ರೈಲುಗಳನ್ನು ಓಡಿಸಿದೆವು, ಏರ್ಫೋರ್ಸ್ ವಿಮಾನಗಳು ಆಕ್ಸಿಜನ್ ಸಾಗಿಸಿದವು. ನೌಕಾಪಡೆಯ ನೆರವು ಪಡೆಯಲಾಯಿತು. ವಿಶ್ವದ ಯಾವುದೇ ದೇಶದಲ್ಲಿ ಆಕ್ಸಿಜನ್ ಸಿಗುತ್ತೆ ಎಂದರೂ ಅದನ್ನು ಪ್ರಯತ್ನಪಟ್ಟು ತರಿಸಿಕೊಂಡೆವು. ಅತ್ಯಗತ್ಯ ವಸ್ತುಗಳ ಉತ್ಪಾದನೆಯನ್ನು ಹಲವು ಪಟ್ಟು ಹೆಚ್ಚಿಸಿದೆವು ಎಂದಿದ್ದಾರೆ.
ವಿದೇಶಗಳಲ್ಲಿ ಲಭ್ಯವಿದ್ದ ಔಷಧಿಗಳನ್ನು ತರಿಸಲು ಹಗಲಿರಳು ಶ್ರಮಿಸಿದೆವು. ಕೊರೊನಾದಂಥ ರೂಪ ಬದಲಿಸುವ ದುಷ್ಕರ್ಮಿಯ ವಿರುದ್ಧದ ಹೋರಾಟಕ್ಕೆ ಮಾಸ್ಕ್, 2 ಗಜದ ಅಂತರ ದೊಡ್ಡ ಅಸ್ತ್ರಗಳು. ಇಂದು ವಿಶ್ವದಲ್ಲಿಯೇ ಲಸಿಕೆಗೆ ಅತಿಹೆಚ್ಚು ಬೇಡಿಕೆಯಿದೆ. ಇದರ ಹೋಲಿಕೆಯಲ್ಲಿ ಉತ್ಪಾದನೆಯ ಪ್ರಮಾಣ ಕಡಿಮೆ. ನಮ್ಮ ಬಳಿ ಭಾರತದಲ್ಲಿ ಉತ್ಪಾದನೆಯ ಲಸಿಕೆ ಇಲ್ಲದಿದ್ದರೆ ಭಾರತದಂಥ ವಿಶಾಲ ದೇಶದಲ್ಲಿ ಏನಾಗುತ್ತಿತ್ತು? ಸುಮ್ಮನೆ ಒಮ್ಮನೆ ಯೋಚಿಸಿ.
ಕಳೆದ ಕೆಲ ವರ್ಷಗಳ ಇತಿಹಾಸ ನೋಡಿದರೆ, ಭಾರತಕ್ಕೆ ವಿದೇಶಗಳ ಲಸಿಕೆ ಪಡೆಯಲು ದಶಕಗಳು ಬೇಕಾಗುತ್ತಿದ್ದವು. ಅಲ್ಲಿ ಲಸಿಕೆಗಳು ಹಂಚಿದ್ದು ಮುಗಿದ ನಂತರವೂ ನಮಗೆ ಲಸಿಕೆ ಬರುತ್ತಿರಲಿಲ್ಲ. ಪೊಲಿಯೊ, ದಡಾರದ ವಿಚಾರದಲ್ಲಿ ಇಂಥದ್ದೇ ಪರಿಸ್ಥಿತಿ ಅನುಭವಿಸಿದ್ದೆವು.
ಕೊರೊನಾಕ್ಕೆ ಮೊದಲೂ ಇತರ ಕಾಯಿಲೆಗಳಿಗೆ ಭಾರತದಲ್ಲಿ ಲಸಿಕೆ ಹಾಕಿಸಿಕೊಂಡವರ ಸಂಖ್ಯೆ ಕಡಿಮೆ ಎಂಬುದು ಆತಂಕದ ವಿಚಾರ. ದೇಶದಲ್ಲಿ ಸಂಪೂರ್ಣ ಲಸಿಕಾಕರಣ ಆಗಬೇಕು. ಇದು ವರ್ಷಗಟ್ಟಲೆ ಆಗಬಹುದು ಎಂಬ ಆತಂಕ ವ್ಯಕ್ತವಾಯಿತು. ಹೀಗಾಗಿಯೇ ಇಂದ್ರಧನುಷ್ ಯೋಜನೆಯ ಮೂಲಕ ಲಸಿಕೆ ಹಾಕುವ ಪ್ರಮಾಣ ಹೆಚ್ಚಿಸಿದೆವು.
ಹೀಗಾಗಿ ಕೇವಲ 5 ವರ್ಷಗಳಲ್ಲಿ ಲಸಿಕೆ ಹಾಕಿಸಿಕೊಳ್ಳುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಯಿತು. ನಮಗೆ ನಮ್ಮ ದೇಶದ ಬಡವರ ಬಗ್ಗೆ, ಅವರ ಮಕ್ಕಳ ಬಗ್ಗೆ ಚಿಂತೆಯಿತ್ತು. ಅವರಿಗೆ ಲಸಿಕೆ ಸಿಗುವುದಿಲ್ಲ ಎಂಬ ಆತಂಕವಿತ್ತು. ಭಾರತವು ಇಂಥ ಆಪತ್ತನ್ನು ಹೇಗೆ ಎದುರಿಸುತ್ತದೆ ಎಂದು ಇಡೀ ವಿಶ್ವ ಕುತೂಹಲ ವ್ಯಕ್ತಪಡಿಸಿತ್ತು. ನೀತಿ ಸ್ಪಷ್ಟವಾಗಿದ್ದರೆ, ಆಶಯಗಳಲ್ಲಿ ಪ್ರಾಮಾಣಿಕತೆಯಿದ್ದರೆ ಸಂಕಷ್ಟದಿಂದ ಬಿಡುಗಡೆಯ ದಾರಿ ಕಾಣಿಸುತ್ತದೆ. ನಮ್ಮ ದೇಶದ ಎರಡು ಕಂಪನಿಗಳು ಲಸಿಕೆ ಒದಗಿಸಿದವು. ನಾವು ವಿಶ್ವದ ಹಲವು ದೇಶಗಳಿಗಿಂತ ಲಸಿಕೆ ಕೊಡುವ ವಿಚಾರದಲ್ಲಿ ಮುಂದಿದ್ದೇವೆ.
ವಿಶ್ವಾಸೇನ ಸಿದ್ಧಃ ಎನ್ನುವುದು ನಮ್ಮ ಮಂತ್ರ. ನಮಗೆ ನಮ್ಮ ಮೇಲೆ ವಿಶ್ವಾಸವಿದ್ದಾಗ ಮಾತ್ರ ಗೆಲುವು ಸಿಗುತ್ತದೆ. ನಮಗೆ ನಮ್ಮ ವಿಜ್ಞಾನಿಗಳ ಮೇಲೆ ವಿಶ್ವಾಸವಿತ್ತು. ಅವರು ಅತ್ಯಂತ ಕಡಿಮೆ ಸಮಯದಲ್ಲಿ ಲಸಿಕೆ ಸಿದ್ಧಪಡಿಸುತ್ತಾರೆ ಎಂಬ ನಿರೀಕ್ಷೆಯಿತ್ತು.
ಹೀಗಾಗಿಯೇ ನಾವು ಲಸಿಕಾಕರಣಕ್ಕೆ ಬೇಕಾದ ಸೌಕರ್ಯ ಹೊಂದಿಸಿಕೊಳ್ಳಲು ಆರಂಭಿಸಿದೆವು ಕಳೆದ ವರ್ಷ ಏಪ್ರಿಲ್ನಲ್ಲಿ ಕೊರೊನಾದ ಕೆಲವೇ ಪ್ರಕರಣಗಳಿದ್ದಾಗ ಕೊರೊನಾ ಲಸಿಕಾ ಕಾರ್ಯಪಡೆ ರೂಪಿಸಿ ಕೆಲಸ ಆರಂಭಿಸಿದೆವು. ಲಸಿಕೆ ತಯಾರಿಸುವ ಕಂಪನಿಗಳಿಗೆ ಅನುದಾನ, ಸಹಕಾರ ಕೊಟ್ಟೆವು. ಟ್ರಯಲ್ಗಳನ್ನು ಮುಗಿಸಲು ಸಹಾಯ ಮಾಡಿದೆವು.
ಆತ್ಮನಿರ್ಭರ್ ಪ್ಯಾಕೇಜ್ ಅಡಿಯಲ್ಲಿ ಕೊವಿಡ್ ಪ್ಯಾಕೇಜ್ ಮೂಲಕ ಕೋಟ್ಯಂತರ ರೂಪಾಯಿ ಖರ್ಚು ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಲಸಿಕೆಗಳ ಲಭ್ಯತೆ ಇನ್ನೂ ಹೆಚ್ಚಲಿದೆ. ದೇಶದ 7 ಕಂಪನಿಗಳು ಲಸಿಕೆ ತಯಾರಿಸುತ್ತಿವೆ. 3 ಟ್ರಯಲ್ಗಳು ನಡೆಯುತ್ತಿವೆ. ಇತರ ದೇಶಗಳ ಕಂಪನಿಗಳಿಂದಲೂ ಲಸಿಕೆ ಖರೀದಿ ಪ್ರಕ್ರಿಯೆಯನ್ನು ಆರಂಭಿಸಿದ್ದೇವೆ. ಕೆಲ ತಜ್ಞರ ಮೂಲಕ ಮಕ್ಕಳ ಸುರಕ್ಷೆ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ. ಮಕ್ಕಳಿಗೆ ಲಸಿಕೆ ನೀಡುವ ಟ್ರಯಲ್ ನಡೆಯುತ್ತಿದೆ. ಮೂಗಿನ ಮೂಲಕ ಕೊಡುವ (ನೇಸಲ್) ಲಸಿಕೆಯ ಟ್ರಯಲ್ ಸಹ ನಡೆಯುತ್ತಿದೆ. ಈ ಲಸಿಕೆಯಲ್ಲಿ ಸಫಲತೆ ಸಿಕ್ಕರೆ ಭಾರತದಲ್ಲಿ ಲಸಿಕೆ ಅಭಿಯಾನ ಇನ್ನಷ್ಟು ವೇಗ ಪಡೆಯುತ್ತದೆ. ಇಷ್ಟು ಕಡಿಮೆ ಸಮಯದಲ್ಲಿ ಲಸಿಕೆ ಮಾಡುವುದರಿಂದ ವಿಶ್ವದ ಜನಸಮುದಾಯಕ್ಕೆ ಅನುಕೂಲವಾಗಿದೆ.
ಲಸಿಕೆ ರೂಪಿಸಿದ ನಂತರವೂ ವಿಶ್ವದ ಕೆಲವೇ ದೇಶಗಳಲ್ಲಿ ಲಸಿಕೆ ಹಾಕಿಸುವ ಪ್ರಕ್ರಿಯೆ ಆರಂಭವಾಯಿತು. ವಿಶ್ವ ಆರೋಗ್ಯ ಸಂಸ್ಥೆಯು ಲಸಿಕೆಗಳಿಗೆ ಸಂಬಂಧಿಸಿದಂತೆ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿತು. ಭಾರತವೂ ಇತರ ದೇಶಗಳು ಅನುಸರಿಸುತ್ತಿರುವ ಅತ್ಯುತ್ತಮ ಮಾರ್ಗಗಳನ್ನು ಅನುಸರಿಸುತ್ತಿದೆ. ಕೇಂದ್ರ ಸರ್ಕಾರವು ವಿವಿಧ ಮುಖ್ಯಮಂತ್ರಿಗಳು, ಸಂಸದರ ಜೊತೆಗೆ ಸಂವಾದ ನಡೆಸಿದೆ. ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕೆಲಸಗಾರರು, 45 ವರ್ಷ ದಾಟಿದವರಿಗೆ ಲಸಿಕೆ ಕೊಡುವ ಪ್ರಕ್ರಿಯೆ ಬಹಳ ಬೇಗ ಆರಂಭಿಸಿದೆವು. ಕೊರೊನಾದ 2ನೇ ಅಲೆಯ ಮೊದಲೇ ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ಕೊಡದಿದ್ದರೆ ಏನಾಗ್ತಿತ್ತು ಯೋಚಿಸಿ.
ವೈದ್ಯರು, ನರ್ಸಿಂಗ್ ಸಿಬ್ಬಂದಿ, ಆ್ಯಂಬುಲೆನ್ಸ್ ಡ್ರೈವರ್, ಸ್ವಚ್ಛತಾ ಕಾರ್ಮಿಕರಿಗೆ ಲಸಿಕೆ ಹಾಕಿಸದಿದ್ದರೆ ಏನಾಗುತ್ತಿತ್ತು? ಅವರಿಗೆ ಲಸಿಕೆ ಸಿಕ್ಕ ಕಾರಣದಿಂದಲೇ ಅವರು ಇತರರ ಆರೋಗ್ಯ ಕಾಪಾಡಲು ತೊಡಗಿಸಿಕೊಳ್ಳಲು ಆಯಿತು. ಒಂದು ಅಳತೆ ಎಲ್ಲರಿಗೂ ಅನ್ವಯಿಸುವುದಿಲ್ಲ ಎಂಬ ಮಾತು ಕೇಳಿಬಂತು. ಸಂವಿಧಾನದ ಪ್ರಕಾರ ಆರೋಗ್ಯ ಎನ್ನುವುದು ರಾಜ್ಯ ಹೊಣೆಗಾರಿಕೆ. ಹೀಗಾಗಿಯೇ ಕೇಂದ್ರ ಸರ್ಕಾರವು ಬೃಹತ್ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಿ ರಾಜ್ಯಗಳಿಗೆ ಕೊಟ್ಟಿತು.
ಮೋದಿ ಭಾಷಣ ಇಲ್ಲಿ ವೀಕ್ಷಿಸಿ
Published On - 5:11 pm, Mon, 7 June 21