Viral Video: ಸಂಪ್ರದಾಯಬದ್ಧವಾಗಿ ಸೀರೆಯುಟ್ಟು ಕುದುರೆ ಸವಾರಿ ಮಾಡ್ತಾರೆ ಈ ಮೊನಾಲಿಸಾ; ಹಳ್ಳಿ ಮಹಿಳೆಗೆ ಯೂಟ್ಯೂಬ್ನಲ್ಲಿ ಭರ್ಜರಿ ಫಾಲೋವರ್ಸ್
ಮೊನಾಲಿಸಾ ತನ್ನ ಸಾಧನೆಯ ಎಲ್ಲ ಕ್ರೆಡಿಟ್ನ್ನೂ ಪತಿ ಬದ್ರಿ ನಾರಾಯಣ ಭದ್ರಾ ಅವರಿಗೇ ನೀಡುವುದಾಗಿ ಹೇಳಿಕೊಂಡಿದ್ದಾರೆ. ಅವರು ಸಾಮಾಜಿಕ ಕಾರ್ಯಕರ್ತರಾಗಿದ್ದು, ಕ್ರಿಯೇಟಿವ್ ಡೈರೆಕ್ಟರ್ ಕೂಡ ಹೌದು.
ಒಡಿಶಾದ ಜೈಪುರ ಜಿಲ್ಲೆಯ ಜಹಾಲ್ ಎಂಬ ಹಳ್ಳಿಯಲ್ಲಿ ಮಹಿಳೆಯೊಬ್ಬರಿದ್ದಾರೆ..ಹೆಸರು ಮೊನಾಲಿಸಾ ಭದ್ರಾ. ಇವರೀಗ ಸೋಷಿಯಲ್ ಮೀಡಿಯಾದಲ್ಲಿ ತುಂಬ ಟ್ರೆಂಡ್ ಆಗುತ್ತಿರುವ ಮಹಿಳೆ. ಸಂಪ್ರದಾಯಬದ್ಧವಾಗಿ ಸೀರೆಯುಟ್ಟು, ಕುದುರೆ ಸವಾರಿ ಮಾಡ್ತಾರೆ..ಟ್ರಕ್, ಬುಲೆಟ್ ಓಡಿಸ್ತಾರೆ..ಅಷ್ಟೇ ಅಲ್ಲ, ಟ್ರ್ಯಾಕ್ಟರ್ನಿಂದ ಹೊಲವನ್ನೂ ಉಳುತ್ತಾರೆ. ನೆನಪಿರಲಿ ಅಷ್ಟೂ ಕೆಲಸವನ್ನೂ ಸೀರೆ ಉಟ್ಟು, ಕೈತುಂಬ ಬಳೆತೊಟ್ಟು ಮಾಡೋದ್ರಿಂದ ತುಂಬ ವಿಶೇಷ ಅನ್ನಿಸ್ತಾರೆ. ಅಪ್ಪಟ ಗೃಹಿಣಿಯಾಗಿರುವ ಇವರು ಸದ್ಯ ಯೂಟ್ಯೂಬ್ ಸ್ಟಾರ್. ಲಕ್ಷಾಂತರ ಜನ ಫಾಲೋವರ್ಸ್ ಕೂಡ ಇವರಿಗೆ ಇದ್ದಾರೆ.
ಮೊನಾಲಿಸಾ ತಾವು ಬುಲೆಟ್, ಟ್ರಕ್ ಓಡಿಸುವ ವಿಡಿಯೋಗಳನ್ನು ತಮ್ಮ ಯೂಟ್ಯೂಬ್ ಚಾನಲ್ಗಳಲ್ಲಿ ಪೋಸ್ಟ್ ಮಾಡುತ್ತಾರೆ. 2016ರ ಮೇ ತಿಂಗಳಲ್ಲಿ ಇವರ ಯೂಟ್ಯೂಬ್ ಚಾನಲ್ ಕ್ರಿಯೇಟ್ ಆಗಿದ್ದು, ಸದ್ಯ 2.26 ಮಿಲಿಯನ್ ಮಂದಿ ಸಬ್ಸ್ಕ್ರೈಬ್ ಆಗಿದ್ದಾರೆ.
ಮೊನಾಲಿಸಾ ತನ್ನ ಸಾಧನೆಯ ಎಲ್ಲ ಕ್ರೆಡಿಟ್ನ್ನೂ ಪತಿ ಬದ್ರಿ ನಾರಾಯಣ ಭದ್ರಾ ಅವರಿಗೇ ನೀಡುವುದಾಗಿ ಹೇಳಿಕೊಂಡಿದ್ದಾರೆ. ಅವರು ಸಾಮಾಜಿಕ ಕಾರ್ಯಕರ್ತರಾಗಿದ್ದು, ಕ್ರಿಯೇಟಿವ್ ಡೈರೆಕ್ಟರ್ ಕೂಡ ಹೌದು. ಬದ್ರಿ ನಾರಾಯಣ್ ಅವರೇ ತಮ್ಮ ಪತ್ನಿಯನ್ನು ಸಾಮಾಜಿಕ ಜಾಲತಾಣದಲ್ಲಿ ಪರಿಚಯಿಸಿದ್ದು. ಈಗ ಮೊನಾಲಿಸಾ ಯೂಟ್ಯೂಬ್ನಲ್ಲಿ ತಮ್ಮ ಒಂದು ವಿಡಿಯೋ ಅಪ್ಲೋಡ್ ಮಾಡಿದರೆ ಸುಮಾರು1.5 ಲಕ್ಷ ರೂ.ಗೂ ಅಧಿಕ ಹಣ ಗಳಿಸುತ್ತಿದ್ದಾರೆ. ಇವರ ಚಾನೆಲ್ಗೆ ಭೇಟಿ ನೀಡಿದರೆ, ಅಲ್ಲಿ ಮೊನಾಲಿಸಾ ಅವರು ಗದ್ದೆ ಹೂಳುವುದು, ನೆಟ್ಟಿ ಮಾಡುವುದು, ದೇವಸ್ಥಾನ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ವೋಲ್ವೋ ಬಸ್ ಚಾಲನೆ ಮಾಡಿದ್ದು ಸೇರಿ ಹಲವು ವಿಧದ ವಿಡಿಯೋಗಳನ್ನು ನೋಡಬಹುದು. ಆದರೆ ಪ್ರತಿಕೆಲಸವನ್ನೂ ಸಂಪ್ರದಾಯಬದ್ಧವಾಗಿ ಸೀರೇ ಉಟ್ಟೇ ಮಾಡುತ್ತಾರೆ. ಇದರ ಹೊರತಾಗಿ ಮೊನಾಲಿಸಾ ಪ್ರಾಣಿ ಪ್ರಿಯೆಯೂ ಹೌದು. ಕೋತಿ ಮರಿಗಳನ್ನು ತಮ್ಮ ಮಕ್ಕಳಂತೆ ನೋಡಿಕೊಳ್ಳುತ್ತಾರೆ. ತನ್ನ ಮಗಳೊಂದಿಗೆ ಸೇರಿ ಆ ಮರಿಗಳಿಗೆ ಆಹಾರ ಉಣಬಡಿಸುತ್ತಾರೆ. ಹಲವು ಸಾಕುಪ್ರಾಣಿಗಳಿರುವ ಇವರ ಮನೆ ಥೇಟ್ ಝೂನಂತೆ ಕಾಣುತ್ತದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಹಿಳಾ ಹೋರಾಟಗಾರ್ತಿ ನಾಝಿಯಾ ಅಫ್ರಿನ್, ನಮ್ಮದು ಪುರುಷ ಪ್ರಧಾನ ಸಮಾಜ. ಇಲ್ಲಿ ಮಹಿಳೆಯರು ನಾಲ್ಕು ಗೋಡೆ ಮಧ್ಯೆಯೇ ಇರಬೇಕು ಎಂದು ಪುರುಷರು ಬಯಸುತ್ತಾರೆ. ಅದೇ ಕಾರಣಕ್ಕೆ ಹಿಂಸಿಸಲ್ಪಡುತ್ತಾರೆ. ಹೀಗಿರುವಾಗ ಮೊನಾಲಿಸಾ ಅವರನ್ನು ನೋಡಿದರೆ ಖುಷಿಯಾಗುತ್ತದೆ. ಇವರು ನಮಗೆಲ್ಲ ಮಾದರಿಯಾಗಿದ್ದಾರೆ ಎಂದು ಹೇಳಿದ್ದಾರೆ.
Published On - 4:13 pm, Mon, 7 June 21