ಪ್ರಧಾನಿ ನರೇಂದ್ರ ಮೋದಿ ಇಂದು ತಮ್ಮ ರೇಡಿಯೋ ಕಾರ್ಯಕ್ರಮ ಮನ್ ಕೀ ಬಾತ್ (Mann Ki Baat) ಮೂಲಕ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. 2022ರ ಮೊದಲ ಆವೃತ್ತಿಯ ಮನ್ ಕೀ ಬಾತ್ ಇದಾಗಿದ್ದು, ಬೆಳಗ್ಗೆ 11.30ರಿಂದ ಪ್ರಧಾನಿ ಮೋದಿ (PM Narendra Modi) ಮಾತನಾಡಲಿದ್ದಾರೆ. ಒಟ್ಟಾರೆ ಇಂದು ಪ್ರಸಾರವಾಗುವುದು 85ನೇ ಎಪಿಸೋಡ್ನ ಮನ್ ಕೀ ಬಾತ್. ಪ್ರತಿತಿಂಗಳ ಕೊನೇ ಭಾನುವಾರ ನರೇಂದ್ರ ಮೋದಿಯವರ ಮನ್ ಕೀ ಬಾತ್ ರೇಡಿಯೋ ಕಾರ್ಯಕ್ರಮ ನಡೆಯಲಿದ್ದು, ಅದರಲ್ಲಿ ರಾಜಕೀಯ ಹೊರತಾಗಿ ಅನೇಕ ಮಹತ್ವದ ವಿಚಾರಗಳ ಕುರಿತು ಮಾತನಾಡುವರು. ಇದು ಆಲ್ ಇಂಡಿಯಾ ರೇಡಿಯೋ ಮತ್ತು ದೂರದರ್ಶನದ ಎಲ್ಲ ನೆಟ್ವರ್ಕ್ಗಳಲ್ಲಿ, ಎಐಆರ್ ನ್ಯೂಸ್ ಮತ್ತು ಮೊಬೈಲ್ ಆ್ಯಪ್ನಲ್ಲಿ ಪ್ರಸಾರವಾಗಲಿದೆ. ಆಲ್ ಇಂಡಿಯಾ ರೇಡಿಯೋದ ನ್ಯೂಸ್ವೆಬ್ಸೈಟ್ ಮತ್ತು newsonair ಮೊಬೈಲ್ ಆ್ಯಪ್ನಲ್ಲೂ ಕೂಡ ಮನ್ ಕೀ ಬಾತ್ ಕೇಳಬಹುದು. ಅದರೊಂದಿಗೆ ಆಲ್ ಇಂಡಿಯಾ ರೇಡಿಯೋ ನ್ಯೂಸ್, ಡಿಡಿ ನ್ಯೂಸ್ ಪಿಎಂಒ, ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಯೂಟ್ಯೂಬ್ ಚಾನಲ್ಗಳಲ್ಲಿ ಕೂಡ ನೇರ ಪ್ರಸಾರ ಆಗಲಿದೆ. ಈ ಬಗ್ಗೆ ಕಳೆದ ವಾರ ಟ್ವೀಟ್ ಮಾಡಿದ್ದ ಪ್ರಧಾನಿ ಕಾರ್ಯಾಲಯ, ಜನವರಿ 30ರಂದು ಮಹಾತ್ಮ ಗಾಂಧೀಜಿ ಪುಣ್ಯತಿಥಿ ಇದೆ. ಅವರ ಸ್ಮರಣೆಯ ನಂತರ ಬೆಳಗ್ಗೆ 11.30ಕ್ಕೆ ಪ್ರಧಾನಿ ಮೋದಿ ಮನ್ ಕೀ ಬಾತ್ ಉದ್ದೇಶಿಸಿ ಮಾತನಾಡುವರು ಎಂದು ಮಾಹಿತಿ ನೀಡಿತ್ತು.
ಇಂದು ಮಹಾತ್ಮ ಗಾಂಧೀಜಿ ಪುಣ್ಯತಿಥಿ ಹಿನ್ನೆಲೆಯಲ್ಲಿ ದೇಶಾದ್ಯಂತ ಹುತಾತ್ಮರ ದಿನ ಆಚರಣೆ ನಡೆಯುತ್ತಿದೆ. ಪ್ರಧಾನಿ ಮೋದಿ ಇಂದು ತಮ್ಮ ಮನ್ ಕೀ ಬಾತ್ನಲ್ಲಿ ಮಹಾತ್ಮ ಗಾಂಧಿ ಬಗ್ಗೆ ಮಾತನಾಡಲಿದ್ದಾರೆ, ಪುಣ್ಯತಿಥಿಯಂದು ಅವರನ್ನು ಸ್ಮರಿಸಲಿದ್ದಾರೆ ಎಂದು ಹೇಳಲಾಗಿದೆ. ಮೋದಿಯವರ ಮನ್ ಕೀ ಬಾತ್ ಕೇಳಲು ಹೆಚ್ಚೆಚ್ಚು ಜನರು ಪಾಲ್ಗೊಳ್ಳುವಂತೆ ಬೂತ್ ಮಟ್ಟದಲ್ಲಿ ಸರಿಯಾಗಿ ವ್ಯವಸ್ಥೆ ಮಾಡುವಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಪಕ್ಷದ ಕಾರ್ಯಕರ್ತರಿಗೆ ಸೂಚನೆ ನೀಡಿದ್ದಾರೆ ಎಂದು ವರದಿಯಾಗಿದೆ.
ಈ ವರ್ಷದ ಮೊದಲ ಮನ್ ಕೀ ಬಾತ್ ಬಗ್ಗೆ ಟ್ವೀಟ್ ಮಾಡಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ, ಮನ್ ಕೀ ಬಾತ್ನಲ್ಲಿ ಏನೆಲ್ಲ ವಿಚಾರಗಳನ್ನು ಮಾತನಾಡಬಹುದು ಎಂಬ ಬಗ್ಗೆ ಅಭಿಪ್ರಾಯ ಶೇರ್ ಮಾಡಿಕೊಳ್ಳಿ ಎಂದು ನಾಗರಿಕರಿಗೆ ಹೇಳಿದ್ದರು. ಜನವರಿ 30ರಂದು ಈ ವರ್ಷದ ಮೊದಲ ಮನ್ ಕೀ ಬಾತ್ ಕಾರ್ಯಕ್ರಮ ನಡೆಯಲಿದೆ. ಅದಕ್ಕೆ ಪೂರಕವಾಗಿ ಸ್ಫೂರ್ತಿದಾಯಕ ಕತೆಗಳು, ವಿಷಯಗಳನ್ನು ನೀವು ಹಂಚಿಕೊಳ್ಳುತ್ತೀರಿ ಎಂಬ ಭರವಸೆ ಇದೆ. ನೀವು ನಿಮ್ಮ ಅಭಿಪ್ರಾಯವನ್ನು mygovindia ಅಥವಾ NaMo App ಮೂಲಕ ಹಂಚಿಕೊಳ್ಳಬಹುದು. ಹಾಗೇ, ಧ್ವನಿ ಸಂದೇಶವನ್ನು ರೆಕಾರ್ಡ್ ಮಾಡಿ 1800-11-7800ಕ್ಕೆ ಕಳಿಸಬಹುದು ಎಂದಿದ್ದರು.
ಇದನ್ನೂ ಓದಿ: ರತನ್ ಟಾಟಾ ಕುಟುಂಬ ಶ್ರೀಮಂತರಾಗಿದ್ದು ಹೇಗೆ? ಈ ವೆಬ್ ಸಿರೀಸ್ನಲ್ಲಿ ಸಿಗಲಿದೆ ಸಂಪೂರ್ಣ ವಿವರ
Published On - 9:19 am, Sun, 30 January 22