ಪೆಗಾಸಸ್ ಸ್ಪೈವೇರ್ನ್ನು ಮೋದಿ ಸರ್ಕಾರ 2017ರಲ್ಲಿ ಇಸ್ರೇಲ್ನಿಂದ ಖರೀದಿಸಿದ್ದಾಗಿ ವರದಿ; ದೇಶದ್ರೋಹವೆಂದ ರಾಹುಲ್ ಗಾಂಧಿ
ನ್ಯೂಯಾರ್ಕ್ ಟೈಂ The Battle for the World's Most Powerful Cyberweapon ಎಂಬ ಹೆಡ್ಲೈನ್ನಲ್ಲಿ ವರದಿ ಪ್ರಕಟಿಸಿದೆ. 2017ರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಇಸ್ರೇಲ್ಗೆ ಭೇಟಿ ಕೊಟ್ಟಿದ್ದರು. ಅದೇ ವೇಳೆ ಒಪ್ಪಂದವಾಯಿತು ಎಂದು ಹೇಳಿದೆ.
2017ರಲ್ಲಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಮತ್ತು ಗುಪ್ತಚರ ಇಲಾಖೆಗೆ ಸಂಬಂಧಪಟ್ಟ ಸಾಧನಗಳ ಖರೀದಿ ಒಪ್ಪಂದದ ಭಾಗವಾಗಿ ಅಂದಿನ ಕೇಂದ್ರ ಸರ್ಕಾರ (ಬಿಜೆಪಿ ಸರ್ಕಾರ) ಇಸ್ರೇಲ್ನಿಂದ ಪೆಗಾಸಸ್ ಸ್ಪೈವೇರ್ನ್ನು ಖರೀದಿ ಮಾಡಿತ್ತು ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಅದರ ಬೆನ್ನಲ್ಲೇ ಕಾಂಗ್ರೆಸ್ ಸೇರಿ ಪ್ರತಿಪಕ್ಷಗಳು ಬಿಜೆಪಿ ಸರ್ಕಾರದ ವಿರುದ್ಧ ತೀವ್ರವಾಗಿ ಟೀಕಿಸುತ್ತಿವೆ. ಅಂದಿನ ಶಸ್ತ್ರಾಸ್ತ್ರ ಒಪ್ಪಂದದ ಪ್ಯಾಕೇಜ್ನಲ್ಲಿ ಕ್ಷಿಪಣಿ ಖರೀದಿಯೂ ಸೇರ್ಪಡೆಯಾಗಿತ್ತು ಎಂದೂ ನ್ಯೂಯಾರ್ಕ್ ಟೈಂ ವರದಿಯಲ್ಲಿ ಉಲ್ಲೇಖಿಸಿದೆ. ಅಂದಹಾಗೆ, ಈ ಪೆಗಾಸಸ್ ಸ್ಪೈವೇರ್ 2021ರಲ್ಲಿ ಭರ್ಜರಿ ಸುದ್ದಿ ಮಾಡಿತ್ತು. ಭಾರತದಲ್ಲಿ ಇಸ್ರೇಲಿ ಮೂಲದ ಪೆಗಾಸಸ್ ಬಳಸಿ, ರಾಜಕಾರಣಿಗಳು, ಪತ್ರಕರ್ತರು, ಮತ್ತಿತರ ಗಣ್ಯರೆಲ್ಲ ಸೇರಿ 300ಕ್ಕೂ ಹೆಚ್ಚು ಜನರ ಫೋನ್ ಟ್ಯಾಪ್ ಮಾಡಲಾಗಿದೆ ಎಂದು ದಿ ವೈರ್ ಪ್ರಕಟಿಸಿತ್ತು. ಹಾಗೇ ಬಹುಮುಖ್ಯವಾಗಿ ಯಾರೆಲ್ಲರ ಫೋನ್ ಟ್ಯಾಪ್ ಆಗಿದೆ ಎಂಬ ಹೆಸರುಗಳನ್ನೂ ಬಹಿರಂಗಪಡಿಸಲಾಗಿತ್ತು. ಅದರಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಸೇರಿ ಅನೇಕರ ಹೆಸರುಗಳು ಇದ್ದವು. ಈ ಪೆಗಾಸಸ್ ಸ್ನೂಪಿಂಗ್ ಕುರಿತು ತನಿಖೆ ನಡೆಸಲು ಸುಪ್ರೀಂಕೋರ್ಟ್ನಿಂದ ಸಮಿತಿ ರಚಿಸಲಾಗಿದ್ದು, ತನಿಖೆ ನಡೆಯುತ್ತಲೂ ಇದೆ. ಹೀಗಿರುವಾಗ ನ್ಯೂಯಾರ್ಕ್ ಟೈಮ್ಸ್ ಹೀಗೆ ವರದಿ ಮಾಡಿದೆ.
ನ್ಯೂಯಾರ್ಕ್ ಟೈಮ್ಸ್ The Battle for the World’s Most Powerful Cyberweapon ಎಂಬ ಹೆಡ್ಲೈನ್ನಲ್ಲಿ ವರದಿ ಪ್ರಕಟಿಸಿದೆ. 2017ರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಇಸ್ರೇಲ್ಗೆ ಭೇಟಿ ಕೊಟ್ಟಿದ್ದರು. ಇಸ್ರೇಲ್ಗೆ ಭೇಟಿ ನೀಡಿದ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಎಂಬ ಹೆಗ್ಗಳಿಕೆಯೊಂದಿಗೆ ಇತಿಹಾಸ ಸೃಷ್ಟಿಸಿದರು. ಇದೇ ಭೇಟಿ ವೇಳೆ ಭಾರತ -ಇಸ್ರೇಲ್ ನಡುವೆ 2 ಬಿಲಿಯನ್ ಯುಎಸ್ ಡಾಲರ್ ಮೊತ್ತದ ರಕ್ಷಣಾ ಒಪ್ಪಂದ ನಡೆಯಿತು. ಅದಕ್ಕೆ ಎರಡೂ ದೇಶಗಳು ಸಹಿ ಹಾಕಿದವು. ಇದೇ ವೇಳೆ ಪೆಗಾಸಸ್ ಸ್ಪೈವೇರ್ನ್ನು ಕೂಡ ಭಾರತದ ಕೇಂದ್ರ ಸರ್ಕಾರ ಇಸ್ರೇಲ್ನಿಂದ ಖರೀದಿ ಮಾಡಿದೆ. ಈ ಸ್ಪೈವೇರ್ನ್ನು ಎನ್ಎಸ್ಒ ಎಂಬ ಇಸ್ರೇಲ್ ಸಂಸ್ಥೆ ಉತ್ಪಾದಿಸಿದ್ದು, ಇದು ಮಿಲಿಟರಿ ದರ್ಜೆಯ ಸಾಫ್ಟ್ವೇರ್ ಆಗಿದೆ ಎಂದು ನ್ಯೂಯಾರ್ಕ್ ಟೈಮ್ಸ್ ಹೇಳಿದೆ. ಅಲ್ಲದೆ, ಇಸ್ರೇಲ್ ಪೆಗಾಸಸ್ನ್ನು ಕೇವಲ ಭಾರತಕ್ಕೆ ಮಾತ್ರವಲ್ಲ, ಪೋಲೆಂಡ್, ಹಂಗೇರಿಗಳಿಗೂ ಮಾರಾಟ ಮಾಡಿದ್ದಾಗಿ ಉಲ್ಲೇಖಿಸಿದೆ.
ಮೋದಿ ಸರ್ಕಾರದಿಂದ ದೇಶದ್ರೋಹ ! ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದ ಬೆನ್ನಲ್ಲೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ಪ್ರಜಾಪ್ರಭುತ್ವದ ಪ್ರಾಥಮಿಕ ಸಂಸ್ಥೆಗಳು, ರಾಜಕಾರಣಿಗಳು, ಸಾರ್ವಜನಿಕ ವಲಯದ ಕೆಲವು ವ್ಯಕ್ತಿಗಳ ಮೇಲೆ ಕಣ್ಣಿಡಲು ಮೋದಿ ಸರ್ಕಾರ ಈ ಪೆಗಾಸಸ್ನ್ನು ಖರೀದಿಸಿದೆ. ಇದರಿಂದಾಗಿ ಸರ್ಕಾರಿ ಕಾರ್ಯಕಾರಿಗಳು, ಪ್ರತಿಪಕ್ಷಗಳ ನಾಯಕರು, ಸಶಸ್ತ್ರ ಪಡೆಗಳು, ನ್ಯಾಯಾಂಗ ಕ್ಷೇತ್ರದ ಅನೇಕರ ಫೋನ್ ಟ್ಯಾಪ್ ಆಗಿದೆ. ಇದು ದೇಶದ್ರೋಹ. ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ದೇಶದ್ರೋಹವನ್ನೇ ಮಾಡಿತು ಎಂದು ಆರೋಪಿಸಿದ್ದಾರೆ.
Modi Govt bought Pegasus to spy on our primary democratic institutions, politicians and public. Govt functionaries, opposition leaders, armed forces, judiciary all were targeted by these phone tappings. This is treason.
Modi Govt has committed treason.
— Rahul Gandhi (@RahulGandhi) January 29, 2022
ರಾಜ್ಯಸಭೆ ಪ್ರತಿಪಕ್ಷ ನಾಯಕ, ಹಿರಿಯ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ್ ಖರ್ಗೆ ಟ್ವೀಟ್ ಮಾಡಿ, ಮೋದಿ ಸರ್ಕಾರ ಯಾಕೆ ಭಾರತದ ಶತ್ರುವಿನಿಂತೆ ವರ್ತಿಸುತ್ತಿದೆ. ಭಾರತದ ನಾಗರಿಕರ ವಿರುದ್ಧ ಯುದ್ಧಸ್ನೇಹಿ ಶಸ್ತ್ರಗಳನ್ನು ಬಳಸುವುದು ಯಾಕೆ? ಹೀಗೆ ಅಕ್ರಮ ಪೆಗಾಸಸ್ ಮೂಲಕ ಸ್ನೂಪಿಂಗ್ ಮಾಡುವುದು ದೇಶದ್ರೋಹ. ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ. ನಮಗೆ ನ್ಯಾಯ ಸಿಗುತ್ತದೆ ಎಂಬ ಭರವಸೆ ಇದೆ ಎಂದಿದ್ದಾರೆ.
Why did Modi Govt act like the enemies of India and use a warfare weapon against Indian citizens?
Illegal snooping using Pegasus amounts to treason. No one is above the law and we will ensure that justice is served.https://t.co/qTIqg3yNdq
— Mallikarjun Kharge (@kharge) January 29, 2022
ಇನ್ನು 2021ರಲ್ಲಿ ಈ ಪೆಗಾಸಸ್ನ ಸುದ್ದಿ ಹೊರಬಿದ್ದಾಗ ದೊಡ್ಡ ಮಟ್ಟದಲ್ಲಿ ವಿವಾದ ಸೃಷ್ಟಿಯಾಗಿತ್ತು. ಗೃಹ ಸಚಿವ ಅಮಿತ್ ಶಾ ಸೇರಿ ಹಲವರು ಸಚಿವರು ರಾಜೀನಾಮೆ ನೀಡಬೇಕು ಎಂದು ಪ್ರತಿಪಕ್ಷಗಳು ಆಗ್ರಹಿಸಿದ್ದವು. ಹೀಗೆ ಇದೇ ವಿಚಾರದಲ್ಲಿ ಗಲಾಟೆ ನಡೆಯುತ್ತ, ತನಿಖೆಗೆ ಆದೇಶ ಮಾಡುತ್ತ, ಸಂಸತ್ತಿನ ಮುಂಗಾರು ಅಧಿವೇಶನಕ್ಕೂ ತಡೆಯುಂಟಾಗಿತ್ತು.
ಇದನ್ನೂ ಓದಿ: ಹಣ ಡಬಲ್ ಮಾಡಿಕೊಡುವುದಾಗಿ ವಂಚಿಸುತ್ತಿದ್ದ ಗ್ಯಾಂಗ್ ಸೆರೆ; 20 ಕೋಟಿ ಮೊತ್ತದ ನಕಲಿ ನೋಟು, 2 ಕಾರುಗಳು ವಶಕ್ಕೆ
Published On - 2:37 pm, Sat, 29 January 22