ದೆಹಲಿ: ಕೊರೊನಾ ಬಿಕ್ಕಟ್ಟಿನ ನಡುವೆ ಬಿಹಾರ ಮೊದಲ ಹಂತದ ಮತದಾನ ಯಶಸ್ವಿಯಾಗಿದೆ. 1066 ಅಭ್ಯರ್ಥಿಗಳ ಭವಿಷ್ಯ ಇವಿಎಂನಲ್ಲಿ ಭದ್ರವಾಗಿದೆ. ಮತ್ತೊಂದ್ಕಡೆ 2ನೇ ಹಂತದ ಚುನಾವಣೆಗೂ ರಾಜಕೀಯ ಪಕ್ಷಗಳ ನಾಯಕರು ಪ್ರಚಾರ ಆರಂಭಿಸಿದ್ದಾರೆ. ಚುನಾವಣಾ ಕಾವು ಮತ್ತಷ್ಟು ಏರಿದೆ.
ರಾಷ್ಟ್ರ ರಾಜಕಾರಣದಲ್ಲಿ ಕುತೂಹಲ ಕೆರಳಿಸಿರುವ ಬಿಹಾರ ವಿಧಾನಸಭೆಯ ಮೊದಲ ಹಂತದ ಚುನಾವಣೆಗೆ ಬಿರುಸಿನ ಮತದಾನ ನಡೆದಿದೆ. ಕೆಲ ಮತಗಟ್ಟೆಗಳಲ್ಲಿ ಮತಯಂತ್ರಗಳಲ್ಲಿ ಕಂಡುಬಂದ ದೋಷದಿಂದಾಗಿ ವೋಟಿಂಗ್ ತಡವಾಗಿ ಆರಂಭವಾಗಿತ್ತು. ಇಂತಹ ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿದರೆ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದೆ ಮತದಾನ ಶಾಂತಿಯುತವಾಗಿ ನಡೆದಿದೆ. ಬಿಹಾರದ 71 ಕ್ಷೇತ್ರಗಳಲ್ಲಿ ಒಟ್ಟು ಶೇ 53.34 ಮತದಾನ ನಡೆದಿದೆ. ಕಳೆದ ವರ್ಷಕ್ಕೆ ಹೋಲಿಸಿದ್ರೆ ಈ ವರ್ಷ ಒಂದು ಪರ್ಸೆಂಟ್ ಮತದಾನ ಕಡಿಮೆ ಆಗಿದೆ.
8 ಸಚಿವರ ಭವಿಷ್ಯ ಮತಯಂತ್ರದಲ್ಲಿ ಭದ್ರ!
ಔರಂಗಾಬಾದ್‌ನ ದೀಬ್ರಾದಲ್ಲಿ 2 ಸ್ಫೋಟಕಗಳು ಪತ್ತೆಯಾಗಿದ್ದು ಸಿಆರ್‌ಪಿಎಫ್ ಪೊಲೀಸರು ಅವುಗಳನ್ನ ವಿಫಲಗೊಳಿಸಿದ್ರು. ಚುನಾವಣಾ ಕಣದಲ್ಲಿ 1066 ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗಿಳಿದಿದ್ರು. 1066 ಅಭ್ಯರ್ಥಿಗಳ ಪೈಕಿ 8 ಸಚಿವರ ರಾಜಕೀಯ ಭವಿಷ್ಯವನ್ನು ಮತದಾರರು ನಿರ್ಧರಿಸಿದ್ದಾರೆ.
ಮತದಾನದ ದಿನ ರಾಹುಲ್ ಮತಯಾಚನೆ ಆರೋಪ
ಇದರ ಮಧ್ಯೆ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮತಯಾಚನೆಯ ಟ್ವೀಟ್‌ಗಳನ್ನು ಮಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ, ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಬಿಜೆಪಿ ನೀಡಿರುವ ದೂರಿನಲ್ಲಿ ಕಾಂಗ್ರೆಸ್ ನಾಯಕ ಟ್ವೀಟ್ ಮೂಲಕ ಮಹಾಮೈತ್ರಿಗೆ ಮತಯಾಚಿಸಿದ್ದಾರೆ. ಮೊದಲ ಹಂತದ ಮತದಾನದ ಮತದಾರರಿಗೆ ಮನವಿ ಮಾಡುವ ಹೇಳಿಕೆ ನೀಡಿದ್ದಾರೆ ಅಂತಾ ಆರೋಪಿಸಲಾಗಿದೆ. ಮೊದಲ ಹಂತದ ಚುನಾವಣೆಯ ಬಹಿರಂಗ ಪ್ರಚಾರ ಅವಧಿ ಪೂರ್ಣಗೊಂಡ ನಂತರ ರಾಹುಲ್ ಸಾಮಾಜಿಕ ಜಾಲತಾಣದಲ್ಲಿ, ತಮ್ಮ ಪಕ್ಷಕ್ಕೆ ಮತ ನೀಡಲು ಮನವಿ ಮಾಡಿದ್ದಾರೆ. ಇದು ನೀತಿ ಸಂಹಿತಿಯ ಉಲ್ಲಂಘನೆ. ಇದರ ವಿರುದ್ಧ ಕ್ರಮ ಕೈಗೊಳ್ಳಬೇಕು ಅಂತಾ ಒತ್ತಾಯಿಸಲಾಗಿದೆ.
2ನೇ ಹಂತದ ಮತದಾನದ ಕ್ಷೇತ್ರಗಳಿಗೆ ಮೋದಿ ಎಂಟ್ರಿ
ಬಿಹಾರ ವಿಧಾನಸಭೆ ಚುನಾವಣೆಯ 2ನೇ ಹಂತದ ಪ್ರಚಾರವನ್ನು ಮೋದಿ ಆರಂಭಿಸಿದ್ದಾರೆ. ಅಯೋಧ್ಯೆ ಮತ್ತು ಜಂಗಲ್ ರಾಜ್ ವಿಷಯಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಿದ್ದಾರೆ. ನಿನ್ನೆ ನಡೆದ ಚುನಾವಣಾ ಪ್ರಚಾರ ಱಲಿಯಲ್ಲಿ ರಾಮ ಮಂದಿರ ಏಕೆ ನಿರ್ಮಿಸುತ್ತಿಲ್ಲ ಅಂತಾ ಬಿಜೆಪಿ ವಿರುದ್ಧ ಟೀಕೆ ಮಾಡ್ತಿದ್ದವರು ಈಗ ಹೊಗಳುವ ಸ್ಥಿತಿ ನಿರ್ಮಾಣವಾಗಿದೆ ಅಂತಾ ಹೇಳಿದ್ದಾರೆ. ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣ ಆರಂಭವಾಗಿದೆ. ಹೀಗಾಗಿ, ವಿರೋಧ ಪಕ್ಷಗಳಿಗೆ ಈ ವಿಷಯದ ಬಗ್ಗೆ ಮಾತನಾಡಲು ವಿಷಯವೇ ಇಲ್ಲ ಅಂದಿದ್ದಾರೆ. ಬಿಹಾರದ ಆರ್ಥಿಕ ಅಭಿವೃದ್ದಿಗೆ ನಿತೀಶ್ ಕುಮಾರ್ ಶ್ರಮ ಅಪಾರ ಅನ್ನೋ ಮೂಲಕ ನಿತೀಶ್ರನ್ನ ಹೊಗಳಿದ್ದಾರೆ.
ಒಟ್ನಲ್ಲಿ ಬಿಹಾರ ಚುನಾವಣೆಯ ಮೊದಲ ಹಂತದ ಮತದಾನ ಯಶಸ್ವಿಯಾಗಿ ಮುಗಿದಿದ್ದು, ಮುಂದಿನ ಹಂತ ಅಂದರೆ 2ನೇ ಹಂತಕ್ಕಾಗಿ ಸಕಲ ಸಿದ್ಧತೆ ಸಾಗಿದೆ. ಹೀಗಾಗಿ ಘಟಾನುಘಟಿ ನಾಯಕರು ಅಖಾಡಕ್ಕೆ ಎಂಟ್ರಿಕೊಟ್ಟು, ಮತದಾರರನ್ನು ಓಲೈಸುತ್ತಿದ್ದಾರೆ.