
ನವದೆಹಲಿ, ಅಕ್ಟೋಬರ್ 7: ಸರ್ಕಾರದ ಮುಖ್ಯಸ್ಥರಾಗಿ ಸತತ 25 ವರ್ಷಗಳ ಆಡಳಿತಾವಧಿಯನ್ನು ಪೂರ್ಣಗೊಳಿಸಿದ ಸಂದರ್ಭದಲ್ಲಿ, ಪ್ರಧಾನಿ ನರೇಂದ್ರ ಮೋದಿ ಇಂದು ಮಾಜಿ ಉಪಪ್ರಧಾನಿ ಹಾಗೂ ಬಿಜೆಪಿ ಮುಖಂಡ ಎಲ್.ಕೆ. ಅಡ್ವಾಣಿ ಅವರ ನಿವಾಸಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದರು. 2001ರ ಅಕ್ಟೋಬರ್ 7ರಿಂದ ಪ್ರಧಾನಿ ಮೋದಿ ಅವರು ಸತತವಾಗಿ ಸರ್ಕಾರದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮೊದಲು 3 ಅವಧಿಗೆ ಗುಜರಾತ್ ಮುಖ್ಯಮಂತ್ರಿಯಾಗಿ ಹಾಗೂ ನಂತರ ಸತತ 3 ಲೋಕಸಭಾ ಚುನಾವಣೆಗಳಲ್ಲಿ ಗೆಲುವು ಸಾಧಿಸಿ ಭಾರತದ ಪ್ರಧಾನಮಂತ್ರಿಯಾಗಿ ಅವರು ಕಾರ್ಯನಿರ್ವಹಿಸುತ್ತಿದ್ದಾರೆ.
ಎಲ್‌ಕೆ ಅಡ್ವಾಣಿ ಅವರ ಭೇಟಿಯ ಕುರಿತು ‘ಎಕ್ಸ್’ (X) ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, “ಅಡ್ವಾಣಿ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ಅವರ ಆಶೀರ್ವಾದ ಪಡೆದೆ. ಅವರ ದಶಕಗಳ ಸಾರ್ವಜನಿಕ ಸೇವೆ ಮತ್ತು ನಮ್ಮ ರಾಷ್ಟ್ರೀಯ ಜೀವನಕ್ಕೆ ಅವರು ನೀಡಿದ ಕೊಡುಗೆಯು ಶಾಶ್ವತ ಛಾಪನ್ನು ಮೂಡಿಸಿದೆ. ಭಾರತದ ಪ್ರಗತಿಯನ್ನು ಬಲಪಡಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ” ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಭಾರತದ ಘನತೆ ಹೆಚ್ಚಿಸಿದ ಮುತ್ಸದ್ದಿ: ಮೋದಿಯವರ 25 ವರ್ಷಗಳ ಆಡಳಿತ ಮೈಲಿಗಲ್ಲು ಕೊಂಡಾಡಿದ ಜಾಗತಿಕ ಗಣ್ಯರು
ಇದಕ್ಕೂ ಮುನ್ನ, ಸರ್ಕಾರದ ಮುಖ್ಯಸ್ಥರಾಗಿ ಕಾಲು ಶತಮಾನ ಪೂರೈಸಿದ ನೆನಪಿಗಾಗಿ ಆಯೋಜಿಸಲಾಗಿದ್ದ ‘ವಿಕಸಿತ ಭಾರತ ಸಂಕಲ್ಪ ಸಭೆ’ಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, “ವಿ ವಿಲ್ ಡೂ ಇಟ್” (ನಾವು ಇದನ್ನು ಸಾಧಿಸಲಿದ್ದೇವೆ) ಎಂಬ ನೂತನ ಘೋಷಣೆಯನ್ನು ನೀಡಿದರು. 2047ರ ವೇಳೆಗೆ ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರಲ್ಲದೆ, ಚುನಾವಣೆಯ ಸಮಯದಲ್ಲಿ ಕಂಡುಬರುವ ಜಾತಿಯಾಧಾರಿತ ವಿಭಜನೆಗಳು ದೇಶದ ಹಾದಿಯಲ್ಲಿ ದೊಡ್ಡ ಸವಾಲಾಗಿವೆ ಎಂದು ಎಚ್ಚರಿಸಿದರು.
Met Advani Ji at his residence and sought his blessings.
His decades of public service and contribution to our national life have left a lasting imprint.
He has played a pivotal role in strengthening India’s progress. https://t.co/ib51lx4CkU
— Narendra Modi (@narendramodi) October 7, 2026
ದೇಶಾದ್ಯಂತ ‘ಸೇವಾ ಸಂಕಲ್ಪ ಅಭಿಯಾನ’:
ಪ್ರಧಾನಿ ಮೋದಿಯವರ 25 ವರ್ಷಗಳ ಆಡಳಿತವನ್ನು ಸಂಭ್ರಮಿಸಲು ಬಿಜೆಪಿ ದೇಶಾದ್ಯಂತ ‘ಸೇವಾ ಸಂಕಲ್ಪ ಅಭಿಯಾನ’ ಹಮ್ಮಿಕೊಂಡಿದ್ದು, ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ‘ವಿಕಸಿತ ಭಾರತ ಸಂಕಲ್ಪ ಸಭೆ’ ಮತ್ತು ದಿಶಾ ಪಂಜಿನ ಮೆರವಣಿಗೆಗಳನ್ನು ಆಯೋಜಿಸಲಾಗಿತ್ತು. ‘ವಿಕಸಿತ ಭಾರತ 2047’ ಗುರಿ ತಲುಪಲು ಈ ವೇಳೆ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ