CBSE Class 12 Board Exams 2021: ಸಿಬಿಎಸ್ಇ 12ನೇ ತರಗತಿ ಪರೀಕ್ಷೆ ಬಗ್ಗೆ ಇಂದು ಪ್ರಧಾನಿ ಮೋದಿ ನೇತೃತ್ವದಲ್ಲಿ ಮಹತ್ವದ ಸಭೆ..
ಪ್ರಧಾನಿ ಮೋದಿಯವರು ಎಲ್ಲ ರಾಜ್ಯ ಸರ್ಕಾರಗಳನ್ನೊಳಗೊಂಡು ಸಭೆ ನಡೆಸಲಿದ್ದು, ಉನ್ನತ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ಸಭೆ ಬಳಿಕ ಸಿಬಿಎಸ್ಇ ಬಗ್ಗೆ ಪ್ರಕಟಣೆ ಹೊರಬೀಳಲಿದೆ. ಈ ನಿರ್ಧಾರ ಕುತೂಹಲ ಮೂಡಿಸಿದೆ.
ಕೊವಿಡ್ 19 ಕಾರಣದಿಂದ ಬಹುತೇಕ ಎಲ್ಲ ಪರೀಕ್ಷೆಗಳೂ ಮುಂದೂಡಲ್ಪಟ್ಟಿವೆ. ಕೆಲವು ರದ್ದಾಗಿವೆ. ಆದರೆ ಸಿಬಿಎಸ್ಇ 12ನೇ ತರಗತಿ ಪರೀಕ್ಷೆ ಬಗ್ಗೆ ಇನ್ನೂ ನಿಖರತೆ ಸಿಕ್ಕಿಲ್ಲ. ಸಿಬಿಎಸ್ಇ ಪರೀಕ್ಷೆ ನಡೆಸಬೇಕೋ-ಬಿಡಬೇಕೋ ಎಂಬ ಬಗ್ಗೆ ಇಂದು ಸಂಜೆ ಪ್ರಕಟಿಸುವುದಾಗಿ ಸುಪ್ರಿಂಕೋರ್ಟ್ಗೆ ಕೇಂದ್ರ ಸರ್ಕಾರ ತಿಳಿಸಿತ್ತು. ಇದಕ್ಕೆ ಸಂಬಂಧಪಟ್ಟಂತೆ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ನೇತೃತ್ವದಲ್ಲಿ ಸಭೆಯೂ ನಡೆಯಬೇಕಿತ್ತು. ಆದರೆ ಅವರು ಅನಾರೋಗ್ಯದಿಂದ ಏಮ್ಸ್ಗೆ ದಾಖಲಾಗಿರುವ ಕಾರಣ ಸಂಜೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ. ಈ ಉನ್ನತ ಮಟ್ಟದ ಸಭೆಯಲ್ಲಿ ಸಿಬಿಎಸ್ಇ 12 ನೇ ತರಗತಿ ಪರೀಕ್ಷೆ ರದ್ದು ಮಾಡುವುದೋ, ನಡೆಸುವುದೋ, ಮಾಡುವುದಾದರೂ ಹೇಗೆಲ್ಲ ಮಾಡಬಹುದು ಎಂಬ ಬಗ್ಗೆ ಚರ್ಚೆ ನಡೆಯಲಿದೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ.
ಪ್ರಧಾನಿ ಮೋದಿಯವರು ಎಲ್ಲ ರಾಜ್ಯ ಸರ್ಕಾರಗಳನ್ನೊಳಗೊಂಡು ಸಭೆ ನಡೆಸಲಿದ್ದು, ಉನ್ನತ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ಸಭೆ ಬಳಿಕ ಸಿಬಿಎಸ್ಇ ಬಗ್ಗೆ ಪ್ರಕಟಣೆ ಹೊರಬೀಳಲಿದೆ. ಸಿಬಿಎಸ್ಇ ಬಗ್ಗೆ ಕಳೆದ ಒಂದು ತಿಂಗಳಿಂದಲೂ ಚರ್ಚೆ ನಡೆಯುತ್ತಲೇ ಇದೆ. ಮೂರು ಆಯ್ಕೆಗಳನ್ನು ಕೇಂದ್ರ ಸರ್ಕಾರ ಮುಂದಿಟ್ಟಿದೆ. ಅದರಲ್ಲಿ ಮೊದಲನೇದು, ಕೇವಲ ಪ್ರಮುಖ ವಿಷಯಗಳ ಪರೀಕ್ಷೆಗಳನ್ನು ಮಾತ್ರ ನಡೆಸುವುದು, ಎರಡನೇಯದಾಗಿ ಶಾರ್ಟ್ ಉತ್ತರ ಸ್ವರೂಪದ ಪ್ರಶ್ನೆಗಳನ್ನು ನೀಡಿ ಪರೀಕ್ಷೆ ಮಾಡುವುದು ಮತ್ತು ಮೂರನೇದಾಗಿ ವಿದ್ಯಾರ್ಥಿಗಳ ಕಳೆದ ಮೂರು ವರ್ಷಗಳ ಶೈಕ್ಷಣಿಕ ಸಾಧನೆ ನೋಡಿ 12ನೇ ತರಗತಿಯಲ್ಲಿ ಪಾಸು ಮಾಡುವುದು..ಆದರೆ ಸದ್ಯಕ್ಕಂತೂ ಈ ವಿಚಾರ ಸುಪ್ರೀಂಕೋರ್ಟ್ನಲ್ಲಿದೆ. ಕೊವಿಡ್ ಸಾಂಕ್ರಾಮಿಕದ ಹೊತ್ತಲ್ಲಿ ಪರೀಕ್ಷೆಗಳನ್ನು ನಡೆಸಬಾರದು ಎಂದು 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ಸಿಬಿಎಸ್ಇ ಪರೀಕ್ಷೆ ಬಗ್ಗೆ ಕೇಂದ್ರ ಸರ್ಕಾರ ಏನೇ ಕ್ರಮ ಕೈಗೊಂಡರೂ ಜೂನ್ 3ರೊಳಗೆ ನಮಗೆ ತಿಳಿಸಬೇಕು ಎಂದು ಸುಪ್ರೀಂಕೋರ್ಟ್ ಸೂಚನೆ ನೀಡಿದೆ.
ಇದನ್ನೂ ಓದಿ: CBSE Exams 2021: ಸಿಬಿಎಸ್ಇ ಪರೀಕ್ಷೆ ರದ್ದತಿ ಕೋರಿ ವಿದ್ಯಾರ್ಥಿಗಳಿಂದ ಅರ್ಜಿ; ವಿಚಾರಣೆ ಮೇ 31ಕ್ಕೆ ಮುಂದೂಡಿದ ಸುಪ್ರೀಂ