ದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಜನವರಿ 12, ಬುಧವಾರ ತಮಿಳುನಾಡಿನಲ್ಲಿ (Tamilnadu) 11 ಹೊಸ ಸರ್ಕಾರಿ ವೈದ್ಯಕೀಯ ಕಾಲೇಜುಗಳನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಲಿದ್ದಾರೆ. ಪ್ರಧಾನ ಮಂತ್ರಿಗಳ ಕಚೇರಿ (PMO) ಪ್ರಕಾರ, ಜನವರಿ 12 ರಂದು ವೈದ್ಯಕೀಯ ಕಾಲೇಜುಗಳ ಜೊತೆಗೆ ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಕ್ಲಾಸಿಕಲ್ ತಮಿಳಿನ (CICT) ಹೊಸ ಕ್ಯಾಂಪಸ್ ಕೂಡ ಚೆನ್ನೈನಲ್ಲಿ ಉದ್ಘಾಟನೆಯಾಗಲಿದೆ. ಈ ಹೊಸ ವೈದ್ಯಕೀಯ ಕಾಲೇಜುಗಳನ್ನು ಅಂದಾಜು ₹ 4,000 ಕೋಟಿ ವೆಚ್ಚದಲ್ಲಿ ಸ್ಥಾಪಿಸಲಾಗುತ್ತಿದ್ದು, ಈ ಪೈಕಿ ₹ 2,145 ಕೋಟಿ ಕೇಂದ್ರ ಸರ್ಕಾರ ಮತ್ತು ಉಳಿದವುಗಳನ್ನು ತಮಿಳುನಾಡು ಸರ್ಕಾರ ಒದಗಿಸಿದೆ ಎಂದು ಪಿಎಂಒ ತಿಳಿಸಿದೆ. ವಿರುದುನಗರ, ನಾಮಕ್ಕಲ್, ದಿ ನೀಲಗಿರಿ, ತಿರುಪ್ಪೂರ್, ತಿರುವಳ್ಳೂರು, ನಾಗಪಟ್ಟಣಂ, ದಿಂಡಿಗಲ್, ಕಲ್ಲಕುರಿಚಿ, ಅರಿಯಲೂರ್, ರಾಮನಾಥಪುರಂ ಮತ್ತು ಕೃಷ್ಣಗಿರಿ ಜಿಲ್ಲೆಗಳಲ್ಲಿ ಹೊಸ ವೈದ್ಯಕೀಯ ಕಾಲೇಜುಗಳು ಸ್ಥಾಪನೆಯಾಗಲಿವೆ. ಕೈಗೆಟಕುವ ದರದಲ್ಲಿ ವೈದ್ಯಕೀಯ ಶಿಕ್ಷಣವನ್ನು ಉತ್ತೇಜಿಸಲು ಮತ್ತು ದೇಶದ ಎಲ್ಲಾ ಭಾಗಗಳಲ್ಲಿ ಆರೋಗ್ಯ ಮೂಲಸೌಕರ್ಯವನ್ನು ಸುಧಾರಿಸಲು ಪ್ರಧಾನ ಮಂತ್ರಿಯವರ ನಿರಂತರ ಪ್ರಯತ್ನದ ಭಾಗವಿದು ಎಂದು ಪಿಎಂಒ ಹೇಳಿದೆ. ಸರ್ಕಾರಿ ಅಥವಾ ಖಾಸಗಿ ವೈದ್ಯಕೀಯ ಕಾಲೇಜು ಇಲ್ಲದ ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸುವ ಯೋಜನೆಯ ಭಾಗವಾಗಿ ಈ ಕಾಲೇಜುಗಳ ಉದ್ಘಾಟನೆ ಮಾಡಲಾಗುತ್ತಿದೆ.
PM Narendra Modi will inaugurate 11 new government medical colleges across Tamil Nadu and the new campus of Central Institute of Classical Tamil, Chennai, on 12th January, video conferencing: PMO
(file photo) pic.twitter.com/M9JSXl8Htj
— ANI (@ANI) January 10, 2022
ಈ ಕಾಲೇಜುಗಳು 1,450 ಸೀಟುಗಳ ಸಾಮರ್ಥ್ಯವನ್ನು ಹೊಂದಿರುತ್ತವೆ ಎಂದು ಪ್ರಧಾನಿಯವರ ಕಚೇರಿ ಹೇಳಿದೆ. ಏತನ್ಮಧ್ಯೆ, ಚೆನ್ನೈನಲ್ಲಿರುವ ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಕ್ಲಾಸಿಕಲ್ ತಮಿಳಿನ (ಸಿಐಸಿಟಿ) ಹೊಸ ಕ್ಯಾಂಪಸ್ ಅನ್ನು ₹24 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಇದು ವಿಶಾಲವಾದ ಗ್ರಂಥಾಲಯ, ಇ-ಲೈಬ್ರರಿ, ಸೆಮಿನಾರ್ ಹಾಲ್‌ಗಳು ಮತ್ತು ಮಲ್ಟಿಮೀಡಿಯಾ ಹಾಲ್‌ನೊಂದಿಗೆ ಸುಸಜ್ಜಿತವಾಗಿರುತ್ತದೆ.
ಸಿಐಸಿಟಿ ಕೇಂದ್ರ ಶಿಕ್ಷಣ ಸಚಿವಾಲಯದ ಅಡಿಯಲ್ಲಿ ಸ್ವಾಯತ್ತ ಸಂಸ್ಥೆಯಾಗಿದ್ದು, ಭಾಷೆಯ ಪ್ರಾಚೀನತೆ ಮತ್ತು ಅನನ್ಯತೆಯನ್ನು ಸ್ಥಾಪಿಸಲು ಸಂಶೋಧನಾ ಚಟುವಟಿಕೆಗಳನ್ನು ಮಾಡುವ ಮೂಲಕ ಶಾಸ್ತ್ರೀಯ ತಮಿಳು ಭಾಷೆಯ ಪ್ರಚಾರಕ್ಕೆ ಕೊಡುಗೆ ನೀಡುತ್ತದೆ. ಇನ್ಸ್ಟಿಟ್ಯೂಟ್ ಲೈಬ್ರರಿಯು 45,000 ಪ್ರಾಚೀನ ತಮಿಳು ಪುಸ್ತಕಗಳ ಶ್ರೀಮಂತ ಸಂಗ್ರಹವನ್ನು ಹೊಂದಿದೆ.
ಇದು ವಿವಿಧ ಭಾರತೀಯ ಮತ್ತು 100 ವಿದೇಶಿ ಭಾಷೆಗಳಲ್ಲಿ ‘ತಿರುಕ್ಕುರಲ್’ ಅನ್ನು ಅನುವಾದಿಸಿ ಪ್ರಕಟಿಸುವ ಗುರಿಯನ್ನು ಹೊಂದಿದೆ.
ಇದನ್ನೂ ಓದಿ: National Youth Festival 2022: ಜ. 12ಕ್ಕೆ ರಾಷ್ಟ್ರೀಯ ಯುವಜನೋತ್ಸವ; ಯುವಕರಿಂದ ಸಲಹೆ, ಐಡಿಯಾಗಳನ್ನು ಆಹ್ವಾನಿಸಿದ ಮೋದಿ