Makar Sankranti 2022: ಮಕರ ಸಂಕ್ರಾಂತಿಯಂದು 75 ಲಕ್ಷ ಜನರಿಂದ ಸೂರ್ಯ ನಮಸ್ಕಾರ
Surya Namaskar: ಹವಾಮಾನ ಬದಲಾವಣೆ ಮತ್ತು ಜಾಗತಿಕ ತಾಪಮಾನದ ಬಗ್ಗೆ ಸಂದೇಶಗಳನ್ನು ಮಕರ ಸಂಕ್ರಾಂತಿಯಂದು ನಡೆಯುವ ಸಾಮೂಹಿಕ ಸೂರ್ಯ ನಮಸ್ಕಾರ ಪ್ರದರ್ಶನದ ಸಮಯದಲ್ಲಿ ತಿಳಿಸಲು ಉದ್ದೇಶಿಸಲಾಗಿದೆ.
ನವದೆಹಲಿ: ಆಯುಷ್ ಸಚಿವಾಲಯವು ಮಕರ ಸಂಕ್ರಾಂತಿ (ಜನವರಿ 14) ಸಂದರ್ಭದಲ್ಲಿ ಜಾಗತಿಕವಾಗಿ 75 ಲಕ್ಷ ಜನರಿಗೆ ಸೂರ್ಯ ನಮಸ್ಕಾರ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಆಯೋಜಿಸಲಿದೆ. ಆಯುಷ್ ಸಚಿವಾಲಯದ ಹೇಳಿಕೆ ಪ್ರಕಾರ, ಎಲ್ಲಾ ಜೀವಗಳನ್ನು ಪೋಷಿಸುವ ಸೂರ್ಯನ ಕಿರಣಗಳಿಗೆ ಕೃತಜ್ಞತೆಯನ್ನು ತೋರಿಸಲು ಸಂಕ್ರಾಂತಿಯ ದಿನದಂದು ಸೂರ್ಯನಿಗೆ ವಂದಿಸಲು ಸೂರ್ಯ ನಮಸ್ಕಾರ ಮಾಡಲಾಗುತ್ತದೆ.
ವೈಜ್ಞಾನಿಕ ಮಾಹಿತಿ ಪ್ರಕಾರ, ಸೂರ್ಯ ನಮಸ್ಕಾರವು ರೋಗನಿರೋಧಕ ಶಕ್ತಿಯನ್ನು ಅಭಿವೃದ್ಧಿಪಡಿಸುತ್ತದೆ ಮತ್ತು ಚೈತನ್ಯವನ್ನು ಹೆಚ್ಚಿಸುತ್ತದೆ. ಕೊರೊನಾ ಸಾಂಕ್ರಾಮಿಕ ರೋಗ ಹೆಚ್ಚಾಗಿರುವ ಈ ಸಂದರ್ಭದಲ್ಲಿ ಸೂರ್ಯ ನಮಸ್ಕಾರ ಬಹಳ ಮುಖ್ಯವಾಗಿದೆ.
ದೇಶದಲ್ಲಿ ಕೊವಿಡ್ ಪ್ರಕರಣಗಳು ಹೆಚ್ಚುತ್ತಿರುವ ಕಾರಣದಿಂದ ಜನರಲ್ಲಿ ರೋಗನಿರೋಧಕ ಮಟ್ಟವನ್ನು ಹೆಚ್ಚಿಸುವುದು ಬಹಳ ಅಗತ್ಯವಾಗಿದೆ. ದೇಹವನ್ನು ಮಾತ್ರವಲ್ಲದೆ ಮನಸನ್ನು ಬಲಪಡಿಸಲು ಸಹಾಯ ಮಾಡುವ ಸೂರ್ಯ ನಮಸ್ಕಾರವನ್ನು ಮಾಡಲು ಹೆಚ್ಚು ಹೆಚ್ಚು ಜನರನ್ನು ಉತ್ತೇಜಿಸುವ ಗುರಿಯನ್ನು ಸಚಿವಾಲಯ ಹೊಂದಿದೆ ಎಂದು ಕೇಂದ್ರ ಆಯುಷ್ ಸಚಿವ ಸರ್ಬಾನಂದ ಸೋನೊವಾಲ್ ಹೇಳಿದ್ದಾರೆ.
ಸಾಂಕ್ರಾಮಿಕ ರೋಗ ಹರಡುತ್ತಿರುವ ಈ ಸಂದರ್ಭದಲ್ಲಿ ಜನರಲ್ಲಿ ನೈಸರ್ಗಿಕ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮಾರ್ಗವಾಗಿ ಯೋಗ, ಆಯುರ್ವೇದ, ಹೋಮಿಯೋಪತಿ, ಪ್ರಕೃತಿ ಚಿಕಿತ್ಸೆ ಮತ್ತು ಯುನಾನಿ ವೈದ್ಯಕೀಯ ಪದ್ಧತಿಗಳನ್ನು ಜನಪ್ರಿಯಗೊಳಿಸುವಲ್ಲಿ ಸಚಿವಾಲಯವು ಮತ್ತೊಮ್ಮೆ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ ಎಂದು ಸೋನೊವಾಲ್ ಹೇಳಿದ್ದಾರೆ.
ಸೂರ್ಯನಿಗೆ ನೇರವಾಗಿ ಒಡ್ಡಿಕೊಳ್ಳುವುದರಿಂದ ಮಾನವ ದೇಹಕ್ಕೆ ವಿಟಮಿನ್ ಡಿ ಸಿಗುತ್ತದೆ. ಇದನ್ನು ಅನೇಕ ವೈದ್ಯಕೀಯ ಶಾಖೆಗಳು ವ್ಯಾಪಕವಾಗಿ ಶಿಫಾರಸು ಮಾಡುತ್ತಿವೆ. ಹವಾಮಾನ ಬದಲಾವಣೆ ಮತ್ತು ಜಾಗತಿಕ ತಾಪಮಾನದ ಬಗ್ಗೆ ಸಂದೇಶಗಳನ್ನು ಮಕರ ಸಂಕ್ರಾಂತಿಯಂದು ನಡೆಯುವ ಸಾಮೂಹಿಕ ಸೂರ್ಯ ನಮಸ್ಕಾರ ಪ್ರದರ್ಶನದ ಸಮಯದಲ್ಲಿ ತಿಳಿಸಲು ಉದ್ದೇಶಿಸಲಾಗಿದೆ.
ಸೂರ್ಯ ನಮಸ್ಕಾರದಲ್ಲಿ ದೇಹ ಮತ್ತು ಮನಸಿನ ಸಮನ್ವಯದೊಂದಿಗೆ 12 ಹಂತಗಳಲ್ಲಿ ಎಂಟು ಭಂಗಿಗಳನ್ನು ನಡೆಸಲಾಗುತ್ತದೆ. ಆಜಾದಿ ಕಾ ಅಮೃತ್ ಮಹೋತ್ಸವದ ಬ್ಯಾನರ್ ಅಡಿಯಲ್ಲಿ ರಾಷ್ಟ್ರೀಯ ಯೋಗಾಸನ ಕ್ರೀಡಾ ಒಕ್ಕೂಟ ಜನವರಿ 1ರಿಂದ ಫೆಬ್ರವರಿ 7ರವರೆಗೆ 750 ಮಿಲಿಯನ್ ಸೂರ್ಯ ನಮಸ್ಕಾರದ ಯೋಜನೆಯನ್ನು ನಡೆಸಲು ನಿರ್ಧರಿಸಿದೆ. ಸೂರ್ಯ ನಮಸ್ಕಾರದಲ್ಲಿ ಜನವರಿ 26ರಂದು ಸಂಗೀತ ಪ್ರದರ್ಶನವನ್ನು ಸಹ ಆಯೋಜಿಸಲಾಗಿದೆ.
ಕೆಲವು ದಿನಗಳ ಹಿಂದೆ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯು ‘ಆಜಾದಿ ಕಾ ಅಮೃತ್ ಮಹೋತ್ಸವ’ದಲ್ಲಿ ಪ್ರಸ್ತಾವಿತ ‘ಸೂರ್ಯ ನಮಸ್ಕಾರ’ಕ್ಕೆ ತನ್ನ ವಿರೋಧವನ್ನು ವ್ಯಕ್ತಪಡಿಸಿತ್ತು. ಈ ಕಾರ್ಯಕ್ರಮದಲ್ಲಿ ಮುಸ್ಲಿಂ ವಿದ್ಯಾರ್ಥಿಗಳು ಭಾಗವಹಿಸಬಾರದು, ಮುಸ್ಲಿಂ ವಿದ್ಯಾರ್ಥಿಗಳು ಸೂರ್ಯ ನಮಸ್ಕಾರ ಮಾಡಬಾರದು ಎಂದು ಸೂಚಿಸಿತ್ತು.
ಇದನ್ನೂ ಓದಿ: ಮುಸ್ಲಿಂ ವಿದ್ಯಾರ್ಥಿಗಳು ಸೂರ್ಯ ನಮಸ್ಕಾರ ಮಾಡಬಾರದು; ಸರ್ಕಾರದ ಆದೇಶಕ್ಕೆ ಇಸ್ಲಾಂ ಸಂಘಟನೆ ಆಕ್ಷೇಪ
Health Tips: ಸೂರ್ಯ ನಮಸ್ಕಾರದ ಜತೆಗೆ ಈ 5 ವ್ಯಾಯಾಮ; ಆರೋಗ್ಯಯುತ ಜೀವನಕ್ಕಾಗಿ ಈ ಅಭ್ಯಾಸ ಮುಂದುವರಿಸಿ