ನವದೆಹಲಿ, ನವೆಂಬರ್ 4: ಛತ್ತೀಸ್‌ಗಢದ (Chhattisgarh) ಕನ್ಕೇರ್‌ನಲ್ಲಿ (Kanker) ಚುನಾವಣಾ ಪ್ರಚಾರ ರ‍್ಯಾಲಿಯಲ್ಲಿ ತಮ್ಮ ಚಿತ್ರ ಬಿಡಿಸಿಕೊಂಡು ಬಂದು ಅಭಿಮಾನ ಪ್ರದರ್ಶಿಸಿದ್ದ ಬಾಲಕಿ ಆಕಾಂಕ್ಷಾಗೆ ಪತ್ರ ಬರೆಯುವ ಮೂಲಕ ಪ್ರಧಾನಿ ನರೇಂದ್ರ ಮೋದಿ (Narendra Modi) ಮೆಚ್ಚುಗೆ ಸೂಚಿಸಿದ್ದಾರೆ. ಆ ಮೂಲಕ ನುಡಿದಂತೆ ನಡೆದಿದ್ದಾರೆ. ಕನ್ಕೇರ್ ರ‍್ಯಾಲಿಯಲ್ಲಿ ಪ್ರಧಾನಿ ಭಾಷಣದ ವೇಳೆ ಜನ ಸಮೂಹದ ಮಧ್ಯೆ ಬಾಲಕಿಯೊಬ್ಬಳು ತಾನು ಬಿಡಿಸಿದ್ದ ಮೋದಿಯವರ ಚಿತ್ರವನ್ನು ತೋರಿಸಲು ಯತ್ನಿಸಿದ್ದಳು. ವೇದಿಕೆಯಿಂದ ಇದನ್ನು ಮೋದಿ ಗಮನಿಸಿದ್ದರು.
ಬಾಲಕಿಯನ್ನು ಉದ್ದೇಶಿಸಿ ಮಾತನಾಡಿದ್ದ ಮೋದಿ, ‘ನಾನು ನಿನ್ನ ಚಿತ್ರವನ್ನು ನೋಡಿದ್ದೇನೆ. ತುಂಬಾ ಚೆನ್ನಾಗಿ ರಚಿಸಿದ್ದಿ. ನಾನು ನಿನ್ನನ್ನು ಆಶೀರ್ವದಿಸುತ್ತೇನೆ. ಇಷ್ಟು ಹೊತ್ತು ನಿಂತು ನಿನಗೆ ಸುಸ್ತಾಗಿರಬಹುದು. ಕುಳಿತುಕೊ’ ಎಂದು ಹೇಳಿದ್ದರು. ಅಷ್ಟೇ ಅಲ್ಲದೆ, ಬಾಲಕಿ ಬಿಡಿಸಿದ ಚಿತ್ರವನ್ನು ಕೊಡುವಂತೆ ಅಲ್ಲಿದ್ದ ಪೊಲೀಸರಿಗೆ ಹೇಳಿದ ಮೋದಿ, ಅದರ ಮೇಲೆ ವಿಳಾಸ ಬರೆಯುವಂತೆ ಸೂಚಿಸಿದ್ದರು. ನಾನು ಬಾಲಕಿಗೆ ಪತ್ರ ಬರೆಯುತ್ತೇನೆ ಎಂದು ಭರವಸೆ ನೀಡಿದ್ದರು. ಇದೀಗ ಮೋದಿ ಅದರಂತೆ ನಡೆದುಕೊಂಡಿದ್ದಾರೆ.
ಇದನ್ನೂ ಓದಿ: ಛತ್ತೀಸ್‌ಗಢ ಚುನಾವಣಾ ಪ್ರಚಾರ ಸಭೆಯಲ್ಲಿ ತಾನು ಬಿಡಿಸಿದ ಚಿತ್ರ ತೋರಿಸಿದ ಬಾಲಕಿ; ಮೋದಿ ಮೆಚ್ಚುಗೆ
‘ಪ್ರಿಯ ಆಕಾಂಕ್ಷಾ, ಶುಭ ಹಾರೈಕೆಗಳು ಮತ್ತು ಆಶೀರ್ವಾದಗಳು. ಕನ್ಕೇರ್‌ನಲ್ಲಿ ಕಾರ್ಯಕ್ರಮಕ್ಕೆ ನೀವು ತಂದಿದ್ದ ಸ್ಕೆಚ್ ನನಗೆ ತಲುಪಿದೆ. ಈ ಪ್ರೀತಿಯ ಅಭಿವ್ಯಕ್ತಿಗೆ ತುಂಬಾ ಧನ್ಯವಾದಗಳು. ಭಾರತದ ಹೆಣ್ಣುಮಕ್ಕಳು ದೇಶದ ಉಜ್ವಲ ಭವಿಷ್ಯ. ನಿಮ್ಮೆಲ್ಲರಿಂದ ನಾನು ಪಡೆಯುವ ಈ ಪ್ರೀತಿ ಮತ್ತು ವಾತ್ಸಲ್ಯವು ರಾಷ್ಟ್ರದ ಸೇವೆಯಲ್ಲಿ ನನ್ನ ಶಕ್ತಿಯಾಗಿದೆ. ನಮ್ಮ ಹೆಣ್ಣುಮಕ್ಕಳಿಗಾಗಿ ಆರೋಗ್ಯಕರ, ಸುರಕ್ಷಿತ ಮತ್ತು ಸುಸಜ್ಜಿತ ರಾಷ್ಟ್ರವನ್ನು ನಿರ್ಮಿಸುವುದು ನಮ್ಮ ಗುರಿಯಾಗಿದೆ. ನಾನು ಯಾವಾಗಲೂ ಛತ್ತೀಸ್‌ಗಢದ ಜನರಿಂದ ಬಹಳಷ್ಟು ಪ್ರೀತಿಯನ್ನು ಪಡೆದಿದ್ದೇನೆ. ದೇಶದ ಪ್ರಗತಿ ಪಥದಲ್ಲಿ ರಾಜ್ಯದ ಜನತೆ ಕೂಡ ಉತ್ಸಾಹದಿಂದ ಕೊಡುಗೆ ನೀಡಿದ್ದಾರೆ. ಮುಂದಿನ 25 ವರ್ಷಗಳು ನಿಮ್ಮಂತಹ ಯುವ ಗೆಳೆಯರಿಗೆ ಮತ್ತು ದೇಶಕ್ಕೆ ಮಹತ್ವದ್ದಾಗಲಿದೆ. ಈ ವರ್ಷಗಳಲ್ಲಿ ನಮ್ಮ ಯುವ ಪೀಳಿಗೆ, ವಿಶೇಷವಾಗಿ ನಿಮ್ಮಂತಹ ಹೆಣ್ಣು ಮಕ್ಕಳು ತಮ್ಮ ಕನಸುಗಳನ್ನು ನನಸಾಗಿಸುತ್ತಾರೆ ಮತ್ತು ದೇಶದ ಭವಿಷ್ಯಕ್ಕೆ ಹೊಸ ದಿಕ್ಕನ್ನು ಒದಗಿಸುತ್ತಾರೆ. ನೀವು ಕಷ್ಟಪಟ್ಟು ಓದಿ, ನಿಮ್ಮ ಯಶಸ್ಸಿನಿಂದ ನಿಮ್ಮ ಕುಟುಂಬಕ್ಕೆ, ಸಮಾಜಕ್ಕೆ ಮತ್ತು ದೇಶಕ್ಕೆ ಕೀರ್ತಿ ತರುತ್ತೀರಿ. ನಿಮ್ಮ ಉಜ್ವಲ ಭವಿಷ್ಯಕ್ಕಾಗಿ ಶುಭ ಹಾರೈಕೆಗಳೊಂದಿಗೆ, ನಿಮ್ಮ ನರೇಂದ್ರ ಮೋದಿ’ ಎಂದು ಬಾಲಕಿಗೆ ಬರೆದ ಪತ್ರದಲ್ಲಿ ಪ್ರಧಾನಿ ಉಲ್ಲೇಖಿಸಿದ್ದಾರೆ.
ಮತ್ತಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ