ಮರಾಠಾ ಮೀಸಲಾತಿ: ಮನೋಜ್ ಉಪವಾಸ ಸತ್ಯಾಗ್ರಹ ಅಂತ್ಯಗೊಂಡ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ಸಿಎಂ ಶಿಂಧೆ, ಹಲವು ನಿರ್ಧಾರ ಪ್ರಕಟ
ವಿಭಾಗೀಯ ಆಯುಕ್ತರು ಮತ್ತು ಜಿಲ್ಲಾಧಿಕಾರಿ ಕಚೇರಿಗಳಲ್ಲಿ ಪ್ರತ್ಯೇಕ ಸೆಲ್ ಸ್ಥಾಪಿಸಲು ಸೂಚಿಸಿದ ಮುಖ್ಯಮಂತ್ರಿ ಶಿಂಧೆ, ಮರಾಠಾ ಮೀಸಲಾತಿಗೆ ಸಂಬಂಧಿಸಿದ ನಡಾವಳಿಗಳ ಪ್ರಗತಿ ವರದಿಯನ್ನು ಪ್ರತಿ ವಾರ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲು ಸೂಚಿಸಿದ್ದಾರೆ.
ಮುಂಬೈ, ನವೆಂಬರ್ 4: ಮರಾಠಾ ಮೀಸಲಾತಿ (Maratha reservation) ಹೋರಾಟಗಾರ ಮನೋಜ್ ಜಾರಂಗೆ ಪಾಟೀಲ್ ಆಮರಣಾಂತ ಉಪವಾಸ ಸತ್ಯಾಗ್ರಹವನ್ನು ಹಿಂಪಡೆದ ಬೆನ್ನಲ್ಲೇ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ (Eknath Shinde) ಕಾರ್ಯಪ್ರವೃತ್ತರಾಗಿದ್ದಾರೆ. ಶಿಂಧೆ ಅವರು ಶನಿವಾರ ಮರಾಠವಾಡದಲ್ಲಿ ಕುಣಬಿ ದಾಖಲೆಗಳನ್ನು ಹುಡುಕುವ ಪ್ರಕ್ರಿಯೆಯೂ ಸೇರಿದಂತೆ ರಾಜ್ಯಾದ್ಯಂತ ಮಿಷನ್ ಮೋಡ್‌ನಲ್ಲಿ ಪ್ರಕ್ರಿಯೆಯನ್ನು ಜಾರಿಗೊಳಿಸಲು ವಿಭಾಗೀಯ ಆಯುಕ್ತರು ಮತ್ತು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ವಿಭಾಗೀಯ ಆಯುಕ್ತರು ಮತ್ತು ಜಿಲ್ಲಾಧಿಕಾರಿ ಕಚೇರಿಗಳಲ್ಲಿ ಪ್ರತ್ಯೇಕ ಸೆಲ್ ಸ್ಥಾಪಿಸಲು ಸೂಚಿಸಿದ ಮುಖ್ಯಮಂತ್ರಿ ಶಿಂಧೆ, ಮರಾಠಾ ಮೀಸಲಾತಿಗೆ ಸಂಬಂಧಿಸಿದ ನಡಾವಳಿಗಳ ಪ್ರಗತಿ ವರದಿಯನ್ನು ಪ್ರತಿ ವಾರ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲು ಸೂಚಿಸಿದ್ದಾರೆ. ಈ ಕಾರ್ಯವನ್ನು ಸಮನ್ವಯಗೊಳಿಸಲು ಸಚಿವಾಲಯದ ಮಟ್ಟದಲ್ಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶ್ರೇಣಿಯ ಅಧಿಕಾರಿಯನ್ನೂ ನೇಮಿಸಲಾಗಿದೆ ಎಂದು ಅವರುತ ತಿಳಿಸಿದ್ದಾರೆ.
ನಿವೃತ್ತ ನ್ಯಾಯಾಧೀಶ ಸಂದೀಪ್ ಶಿಂಧೆ ಅಧ್ಯಕ್ಷತೆಯ ಸಮಿತಿಯನ್ನು ಈಗ ರಾಜ್ಯಾದ್ಯಂತ ವಿಸ್ತರಿಸಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಇದೇ ವೇಳೆ ಜಿಲ್ಲಾಧಿಕಾರಿಗಳು ಸಮರೋಪಾದಿಯಲ್ಲಿ ಕ್ರಮ ಕೈಗೊಂಡು ಪ್ರಾಯೋಗಿಕ ದತ್ತಾಂಶಕ್ಕೆ ಅಗತ್ಯವಿರುವ ಮಾಹಿತಿಯನ್ನು ಒಂದು ತಿಂಗಳೊಳಗೆ ಹಿಂದುಳಿದ ವರ್ಗಗಳ ಆಯೋಗಕ್ಕೆ ನೀಡಬೇಕು ಎಂದು ಮುಖ್ಯಮಂತ್ರಿಗಳು ಸೂಚಿಸಿದ್ದಾರೆ.
ಇಷ್ಟೇ ಅಲ್ಲದೆ, ಮುಖ್ಯಮಂತ್ರಿಗಳು ವರ್ಷಾ ನಿವಾಸದಲ್ಲಿ ಮುಖ್ಯ ಕಾರ್ಯದರ್ಶಿ ಮನೋಜ್ ಸೌನಿಕ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಆಡಳಿತ ಇಲಾಖೆ) ನಿತಿನ್ ಗಾದ್ರೆ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಹಣಕಾಸು ಇಲಾಖೆ) ನಿತಿನ್ ಕರೀರ್, ಕಂದಾಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜಗೋಪಾಲ್ ದೇವೋರಾ, ಸಾಮಾಜಿಕ ನ್ಯಾಯ ಇಲಾಖೆ ಕಾರ್ಯದರ್ಶಿ ಸುಮಂತ್ ಭಾಂಗೆ ಅವರೊಂದಿಗೆ ಸಭೆ ನಡೆಸಿದರು. ಮರಾಠಾ ಮೀಸಲಾತಿಗಾಗಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಮನೋಜ್ ಜಾರಂಗೆ ಅವರು ಶುಕ್ರವಾರ ರಾಜ್ಯ ಸರ್ಕಾರದ ನಿಯೋಗದೊಂದಿಗೆ ಚರ್ಚಿಸಿದ ಅಂಶಗಳ ಕುರಿತು ವಿಸ್ತೃತ ಚರ್ಚೆ ನಡೆಸಲಾಯಿತು. ಈ ಸಂದರ್ಭದಲ್ಲಿ ರಾಜ್ಯದ ವಿಭಾಗೀಯ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಿದ್ದರು. ಬಳಿಕ ಇಲಾಖೆಯಲ್ಲಿನ ಕುಣಬಿ ದಾಖಲೆಗಳ ಪರಿಶೀಲನೆ ಕಾರ್ಯವನ್ನು ಮುಖ್ಯಮಂತ್ರಿ ಪರಿಶೀಲಿಸಿದರು.
ಮರಾಠ ಸಮುದಾಯಕ್ಕೆ ಮೀಸಲಾತಿ ನೀಡುವ ಬಗ್ಗೆ ರಾಜ್ಯ ಸರಕಾರ ಗಂಭೀರವಾಗಿ ಕ್ರಮ ಕೈಗೊಳ್ಳುತ್ತಿದೆ. ಇದಕ್ಕಾಗಿ ಜಿಲ್ಲಾಧಿಕಾರಿಗಳು ಮರಾಠವಾಡ ಹಾಗೂ ರಾಜ್ಯದ ಇತರೆ ಜಿಲ್ಲೆಗಳಲ್ಲಿ ಸ್ವಯಂ ಚಾಲಿತವಾಗಿ ಕುಣಬಿ ದಾಖಲೆಗಳನ್ನು ಪರಿಶೀಲಿಸಲು ಸಮರೋಪಾದಿಯಲ್ಲಿ ಅಭಿಯಾನ ಕೈಗೊಳ್ಳಬೇಕು. ಇದಕ್ಕಾಗಿ ಅಪರ ಜಿಲ್ಲಾಧಿಕಾರಿ ಶ್ರೇಣಿಯ ಅಧಿಕಾರಿ ಹಾಗೂ ಅವರ ನಿಯಂತ್ರಣದಲ್ಲಿರುವ ಸಿಬ್ಬಂದಿ ಲಭ್ಯವಾಗುವಂತೆ ನೋಡಿಕೊಳ್ಳಬೇಕು. ಅವರಿಗೆ ಅಗತ್ಯ ಸಿಬ್ಬಂದಿ ಹಾಗೂ ಸಲಕರಣೆಗಳನ್ನು ಕೂಡಲೇ ಒದಗಿಸುವಂತೆ ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಸೂಚಿಸಿದರು.
ಸಚಿವರ ಮಟ್ಟದಲ್ಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನಿತಿನ್ ಗಾದ್ರೆ, ಮುಖ್ಯಮಂತ್ರಿ ಕಚೇರಿಯ ಪ್ರಧಾನ ಕಾರ್ಯದರ್ಶಿ ವಿಕಾಸ್ ಖರ್ಗೆ, ವಿಭಾಗೀಯ ಮಟ್ಟದಲ್ಲಿ ವಿಭಾಗೀಯ ಆಯುಕ್ತರು ಮತ್ತು ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳು ಇದನ್ನು ಮೇಲ್ವಿಚಾರಣೆ ಮಾಡುತ್ತಾರೆ ಎಂದು ಮುಖ್ಯಮಂತ್ರಿ ಶಿಂಧೆ ಹೇಳಿದರು.
ಕುಣಬಿ ಮರಾಠ, ಮರಾಠ ಕುಣಬಿ ಪ್ರಮಾಣ ಪತ್ರ ನೀಡುವ ಪ್ರಕ್ರಿಯೆ ಚುರುಕು
ನಿವೃತ್ತ ನ್ಯಾಯಮೂರ್ತಿ ಶಿಂಧೆ ನೇತೃತ್ವದ ಸಮಿತಿಯ ಆದೇಶವನ್ನು ರಾಜ್ಯಾದ್ಯಂತ ವಿಸ್ತರಿಸಲಾಗಿದೆ. ಮರಾಠವಾಡದಲ್ಲಿ ದಾಖಲೆಗಳನ್ನು ಪರಿಶೀಲಿಸಿದ ರೀತಿಯಲ್ಲೇ ರಾಜ್ಯಾದ್ಯಂತ ಜಾರಿಯಾಗಬೇಕು ಎಂದು ಮುಖ್ಯಮಂತ್ರಿಗಳು ಇದೇ ಸಂದರ್ಭದಲ್ಲಿ ಹೇಳಿದರು. ಮರಾಠವಾಡದಲ್ಲಿ ಶಿಂಧೆ ಸಮಿತಿ ಶಿಫಾರಸ್ಸು ಮಾಡಿರುವ ಸಾಕ್ಷ್ಯಾಧಾರಗಳ ಆಧಾರದಲ್ಲಿ ಕುಣಬಿ ಮರಾಠ, ಮರಾಠ ಕುಣಬಿ ಪ್ರಮಾಣ ಪತ್ರ ನೀಡುವ ಪ್ರಕ್ರಿಯೆ ಚುರುಕುಗೊಳಿಸಬೇಕು ಹಾಗೂ ಜಿಲ್ಲಾ ಅಧಿಕಾರಿಗಳು, ತಹಸೀಲ್ದಾರರು, ಜಾತಿ ನೋಂದಣಿ ಸಮಿತಿ ಅಧಿಕಾರಿಗಳು ಹಾಗೂ ನೌಕರರಿಗೆ ತರಬೇತಿ ನೀಡಬೇಕು ಎಂದು ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ಹೇಳಿದರು.
ಇದನ್ನೂ ಓದಿ: ಉಪವಾಸ ಸತ್ಯಾಗ್ರಹ ಹಿಂಪಡೆದ ಮನೋಜ್ ಜಾರಂಗೆ ಪಾಟೀಲ್: ಮರಾಠ ಸಮುದಾಯಕ್ಕೆ ಕೃತಜ್ಞತೆ ಸಲ್ಲಿಸಿದ ಸಿಎಂ ಶಿಂಧೆ
ಮರಾಠಾ ಮೀಸಲಾತಿಗೆ ಸಂಬಂಧಿಸಿದಂತೆ ಎರಡು ಹಂತಗಳಲ್ಲಿ ಆಡಳಿತವು ಕಾರ್ಯನಿರ್ವಹಿಸುತ್ತಿದ್ದು, ರಾಜ್ಯಾದ್ಯಂತ ಕುಣಬಿ ದಾಖಲೆಗಳ ಪರಿಶೀಲನೆ ಪ್ರಕ್ರಿಯೆ ಆರಂಭಿಸಿದೆ. ಮತ್ತೊಂದೆಡೆ ಪ್ರಾಯೋಗಿಕ ದತ್ತಾಂಶವನ್ನು ಸಲ್ಲಿಸಲು ಜಿಲ್ಲೆಗಳ ಅಧಿಕಾರಿಗಳು ತಕ್ಷಣ ಅಗತ್ಯ ಮಾಹಿತಿಯನ್ನು ಸಲ್ಲಿಸಬೇಕು ಎಂದು ಹೇಳಿದರು. ಪ್ರಾಯೋಗಿಕ ದತ್ತಾಂಶ ಸಂಗ್ರಹಿಸಲು ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್, ಗೋಖಲೆ ಇನ್‌ಸ್ಟಿಟ್ಯೂಟ್ ಆಫ್ ಪಾಲಿಟಿಕ್ಸ್ ಅಂಡ್ ಎಕನಾಮಿಕ್ಸ್ ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಪಾಪ್ಯುಲೇಶನ್ ಸ್ಟಡೀಸ್‌ನ ಸಹಾಯ ಪಡೆಯಲು ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಮುಖ್ಯಮಂತ್ರಿಗಳು ಸೂಚಿಸಿದರು.
ಮಹಿಳಾ ಉದ್ಯಮಿಗಳಿಗೆ ಸಾಲ ವಿತರಣೆಗೆ ವಿಶೇಷ ಯೋಜನೆ
ಅಣ್ಣಾಸಾಹೇಬ ಪಾಟೀಲ ಆರ್ಥಿಕ ಅಭಿವೃದ್ಧಿ ನಿಗಮದ ಮೂಲಕ ನೀಡಲಾಗುವ ಸಾಲಗಳು ತಕ್ಷಣವೇ ದೊರೆಯುವಂತೆ ಕ್ರಮಕೈಗೊಳ್ಳಲು ಸೂಚಿಸಿದ ಮುಖ್ಯಮಂತ್ರಿಗಳು, ಮಹಿಳಾ ಉದ್ಯಮಿಗಳಿಗೆ ಸಾಲ ವಿತರಣೆಗೆ ವಿಶೇಷ ಯೋಜನೆ ಸಿದ್ಧಪಡಿಸುವಂತೆ ಸೂಚಿಸಿದರು. ಈ ನಿಟ್ಟಿನಲ್ಲಿ ಬ್ಯಾಂಕ್‌ಗಳ ಸಭೆ ನಡೆಸುವಂತೆಯೂ ಮುಖ್ಯಮಂತ್ರಿ ಸೂಚಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ