ಕೆಲವೇ ದಿನಗಳು ಬಾಕಿ ಇರುವ ದೀಪಾವಳಿ ಹಬ್ಬದ ಆಚರಣೆಗೆ ಮನೆಗಳಲ್ಲಿ ತಯಾರಿಗಳು ನಡೆಯುತ್ತಿರುತ್ತವೆ. ಇನ್ನು ಮಹಿಳೆಯರು ಹಬ್ಬದ ಪ್ರಯುಕ್ತ ಯಾವ ಯಾವ ತಿಂಡಿ ತಿನಿಸುಗಳನ್ನು ಮಾಡಬೇಕೆಂದು ಯೋಚಿಸುತ್ತಿರುತ್ತಾರೆ. ಹಬ್ಬ ಆಗಮಿಸುತ್ತಿದ್ದಂತೆ ಎಲ್ಲರ ಗಮನ ಬಟ್ಟೆ ಖರೀದಿಸುವ ಕಡೆಗೆ ಇರುತ್ತದೆ. ಈ ನಡುವೆ ಪ್ರಧಾನಿ ನರೇಂದ್ರ ಮೋದಿ ದೇಶದ ಜನರಿಗೆ ಒಂದು ಕಿವಿಮಾತನ್ನು ಹೇಳಿದ್ದಾರೆ.
ಹಬ್ಬಕ್ಕಾಗಿ ಹಲವು ವಸ್ತುಗಳನ್ನು ಖರೀದಿಸುವ ಅನಿವಾರ್ಯತೆ ಇರುತ್ತದೆ. ಇಂತಹ ವಸ್ತುಗಳನ್ನು ಸ್ಥಳಿಯ ಅಂಗಡಿಗಳಲ್ಲಿ ಖರೀದಿಸಿ ಇದರಿಂದ ದೇಶದ ಆರ್ಥಿಕತೆ ವೃದ್ದಿಯಾಗುತ್ತದೆ ಎಂದು ಮೋದಿ ತಿಳಿಸಿದರು.
ಕರೊನಾ ಅಟ್ಟಹಾಸದಿಂದ ದೇಶದ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಹೊಸ ಹೊಸ ಯೋಜನೆಗಳನ್ನು ದೇಶದಲ್ಲಿ ಜಾರಿಗೊಳಿಸಲು ಆರ್ಥಿಕ ಕೊರತೆ ಎದುರಾಗಿದೆ. ಹೀಗಾಗಿ ಸ್ವಲ್ಪ ಮಟ್ಟಿಗೆ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ನಿಮ್ಮ ನಿಮ್ಮ ಸ್ಥಳೀಯ ಅಂಗಡಿಗಳಲ್ಲಿ ವಸ್ತುಗಳನ್ನು ಖರೀದಿಸುವುದು ಒಳಿತು ಎಂದು ಮೋದಿ ತಿಳಿ ಹೇಳಿದರು.
ಪ್ರಧಾನಿ ಮೋದಿ ಅವರ ಈ ತೀರ್ಮಾನ ಬಹುತೇಕ ವ್ಯಾಪಾರಸ್ಥರಿಗೆ ಪ್ರಿಯವಾಗಿದ್ದು, ಟಿವಿ9 ಡಿಜಿಟಲ್ ನೊಂದಿಗೆ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ಹಬ್ಬಕ್ಕೆ ನಾನಾ ಬಗೆಯ ಹಣ್ಣುಗಳ ಅವಶ್ಯಕತೆ ಇದೆ. ವ್ಯಾಪಾರ ಕಡಿಮೆಯಾಗುವುದರಿಂದ ಹಣ್ಣುಗಳು ಕೊಳೆತು ಭಾರಿ ನಷ್ಟವಾಗುತ್ತದೆ. ಸ್ಥಳಿಯ ವ್ಯಾಪಾರಿಗಳಿಗೆ ಅನುಕೂಲವಾಗಲು ಸ್ಥಳಿಯ ವಸ್ತುಗಳನ್ನು ಖರೀದಿಸಬೇಕೆಂಬ ಮೋದಿಯವರ ಈ ನಿರ್ಣಯ ಸಂತೋಷವನ್ನು ನೀಡಿದೆ ಎಂದು ಚಿಕ್ಕಮಗಳೂರು ಜೆಲ್ಲೆಯ ಭಾರಧ್ವಜ್ ಫ್ರೂಟ್ ಸ್ಟೋರ್ ಮಾಲಿಕ ಶ್ರೀನಿಧಿ ಹೇಳಿದರು.
ಕೇವಲ ಹಬ್ಬಗಳಲ್ಲಿ ಮಾತ್ರವಲ್ಲ ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಮತ್ತು ವ್ಯಾಪಾರಿಗಳ ಜೀವನ ನಡೆಸಲು ಸ್ಥಳೀಯರು ಸದಾ ಸ್ಥಳೀಯ ಸಾಮಾಗ್ರಿಗಳನ್ನೇ ಕೊಳ್ಳಬೇಕು. ಈ ಕುರಿತ ಮೋದಿಯ ಆಲೋಚನೆ ಮೆಚ್ಚುಗೆ ನೀಡಿದೆ ಎಂದು ಶಿವಮೊಗ್ಗ ಜಿಲ್ಲೆಯ ಲಕ್ಷ್ಮಿ ಹಾರ್ಡ್ ವೇರ್ ಮಾಲಿಕ ಮಂಜುನಾಥ್ ಅಭಿಪ್ರಾಯಪಟ್ಟರು.
ಸಣ್ಣ ಪುಟ್ಟ ವ್ಯಾಪಾರಸ್ಥರು ಹೆಚ್ಚೆಚ್ಚು ಲಾಭವನ್ನು ಗಳಿಸಲು ಸಾಧ್ಯವಾಗುವುದಿಲ್ಲ. ಸಣ್ಣ ವಸ್ತುಗಳಿಗೆ ಕಡಿಮೆ ಪ್ರಮಾಣದಲ್ಲಿಯೇ ಲಾಭ ದೊರಕುವುದು. ಹಬ್ಬದ ವೇಳೆಯಲ್ಲಿ ಅಧಿಕ ವಸ್ತುಗಳನ್ನು ಶೇಖರಿಸಿಡಲಾಗಿರುತ್ತದೆ. ಗ್ರಾಹಕರು ಖರೀದಿಸದೇ ಇದ್ದಾಗ ಆತಂಕ ಉಂಟಾಗುತ್ತದೆ ಎಂದು ತೀರ್ಥಹಳ್ಳಿ ಮೂಲದ ದಿನಸಿ ವ್ಯಾಪಾರಿ ಅಳಲುತೋಡಿಕೊಂಡರು.
ಕರೊನಾ ಹಾವಳಿಯಿಂದ ಈಗಾಗಲೇ ತೀರಾ ನಷ್ಟವನ್ನು ಅನುಭವಿಸಿದ್ದೇವೆ. ಇಂತಹ ವೇಳೆಯಲ್ಲೂ ಆನ್ ಲೈನ್ ಶಾಪ್ ಗಳತ್ತ ಮುಖ ಮಾಡಿದರೆ ಬದುಕು ಎದುರಿಸುವುದು ಕಷ್ಟವಾಗುತ್ತದೆ ಎಂಬುದು ಕಿರಣ್ ಅಭಿಪ್ರಾಯ.