ದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರನ್ನು ತನ್ನ ಸೋದರ ಎಂದು ಹೇಳುವ ಪಾಕಿಸ್ತಾನ ಮೂಲದ ಖಮರ್ ಮೊಹ್ಸಿನ್ ಶೇಖ್ (Qamar Shaikh Mohsin) ರಕ್ಷಾಬಂಧನಕ್ಕೆ (Raksha Bandhan) ಕೆಲ ದಿನಗಳು ಬಾಕಿಯಿರುವಂತೆಯೇ ರಾಖಿ ಕಳಿಸಿಕೊಟ್ಟಿದ್ದು, ಅವರಿಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯಸ್ಸು ಕೋರಿ ಪತ್ರ ಬರೆದಿದ್ದಾರೆ. 2024ರ ಮಹಾ ಚುನಾವಣೆಯಲ್ಲಿ ಗೆಲುವು ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದಾರೆ. ಮೋದಿ ಅವರ ಭೇಟಿಗೆ ಈ ವರ್ಷ ಅವಕಾಶ ಸಿಗಬಹುದು ಎಂಬ ನಿರೀಕ್ಷೆಯಲ್ಲಿರುವ ಅವರು, ಅಗತ್ಯ ಸಿದ್ಧತೆ ಮಾಡಿಕೊಂಡಿದ್ದಾರೆ.
‘ಅವರು (ಪ್ರಧಾನಿ ಮೋದಿ) ಈ ವರ್ಷ ನನ್ನನ್ನು ದೆಹಲಿಗೆ ಕರೆಸಿಕೊಳ್ಳಬಹುದು ಎಂಬ ನಿರೀಕ್ಷೆಯಿದೆ. ನಾನು ಅಗತ್ಯ ಸಿದ್ಧತೆ ಮಾಡಿಕೊಂಡಿದ್ದೇನೆ. ಅವರಿಗೆ ಕಟ್ಟಲೆಂದು ನಾನೇ ಸ್ವತಃ ಕಸೂತಿ ವಿನ್ಯಾಸದಲ್ಲಿ ರಾಖಿ ತಯಾರಿಸಿದ್ದೇನೆ’ ಮೊಹ್ಸಿನ್ ಶೇಖ್ ಹೇಳಿದರು. ‘ಮೋದಿ ಅವರು ಇನ್ನೊಮ್ಮೆ ಭಾರತದ ಪ್ರಧಾನಿಯಾಗುತ್ತಾರೆ ಎನ್ನುವ ಬಗ್ಗೆ ನನಗೆ ಯಾವುದೇ ಸಂಶಯವಿಲ್ಲ. ಅವರಿಗೆ ಆ ಸಾಮರ್ಥ್ಯವಿದೆ, ಅವರು ಆ ಸ್ಥಾನಕ್ಕೆ ಅರ್ಹರಾಗಿದ್ದಾರೆ. ಪ್ರತಿಬಾರಿಯೂ ಅವರೇ ಪ್ರಧಾನಿಯಾಗಲಿ ಎಂದು ನಾನು ಹಾರೈಸುತ್ತೇನೆ’ ಎಂದು ನುಡಿದರು.
ಮೋದಿ ಅವರಿಗೆ ಶೇಖ್ ಮೊಹ್ಸಿನ್ ಅವರು ಪ್ರತಿವರ್ಷವೂ ರಾಖಿ ಮತ್ತು ರಕ್ಷಾ ಬಂಧನದ ಶುಭಾಶಯ ಪತ್ರವನ್ನು ಕಳಿಸಿಕೊಡುತ್ತಿದ್ದಾರೆ. ಪಾಕಿಸ್ತಾನ ಮೂಲದ ಶೇಖ್ ಮೊಹ್ಸಿನ್ ಭಾರತೀಯನನ್ನು ಮದುವೆಯಾದ ನಂತರ ಭಾರತದಲ್ಲಿಯೇ ನೆಲೆಸಿದ್ದಾರೆ. ಕಳೆದ 25 ವರ್ಷಗಳಿಂದಲೂ ಮೋದಿ ಅವರಿಗೆ ರಾಖಿ ಕಟ್ಟುತ್ತಿದ್ದೇನೆ ಎಂದು ಹೇಳಿದ್ದಾರೆ.
ಮೋದಿ ಅವರು ಆರ್ಎಸ್ಎಸ್ ಕಾರ್ಯಕರ್ತರಾಗಿದ್ದಾಗ ಮೊದಲ ಬಾರಿಗೆ ರಾಖಿ ಕಟ್ಟಿದ್ದೆ ಎಂದು ಶೇಖ್ ಮೊಹ್ಸಿನ್ ನೆನಪಿಸಿಕೊಳ್ಳುತ್ತಾರೆ. ಮುಂದಿನ ಶುಕ್ರವಾರ (ಆಗಸ್ಟ್ 12) ರಕ್ಷಾ ಬಂಧನದ ಆಚರಣೆಯಿದೆ.
Published On - 7:04 am, Mon, 8 August 22