ದೇಶದ 100ಕ್ಕೂ ಹೆಚ್ಚು ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲು ಅಭಾವ (Coal Shortage) ಉಂಟಾಗಿದ್ದು, ಇದರಿಂದ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಹೇಳಲಾಗುತ್ತಿದೆ. ಈ ಸಂಬಂಧ ನಿನ್ನೆ ಗೃಹ ಸಚಿವ ಅಮಿತ್ ಶಾ (Amit Shah), ಕೇಂದ್ರ ಇಂಧನ ಸಚಿವ ಆರ್.ಕೆ.ಸಿಂಗ್ ಮತ್ತು ಕಲ್ಲಿದ್ದಲು ಸಚಿವ ಪ್ರಲ್ಹಾದ್ ಜೋಶಿಯವರೊಟ್ಟಿಗೆ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಇನ್ನೂ ಕೆಲವು ಕೇಂದ್ರ ಸಚಿವರು ಪಾಲ್ಗೊಂಡಿದ್ದರು. ಅದರ ಬೆನ್ನಲ್ಲೇ ಈಗ ಪ್ರಧಾನಮಂತ್ರಿ ಕಚೇರಿ (PMO) ಕೂಡ ಇಂದು ಪರಿಶೀಲನಾ ಸಭೆ ನಡೆಸಲಿದೆ. ಭಾರತದಲ್ಲಿ ವಿದ್ಯುತ್ ಸ್ಥಾವರಗಳಲ್ಲಿ ಎಷ್ಟರ ಮಟ್ಟಿಗೆ ಕಲ್ಲಿದ್ದಲು ಕೊರತೆ ಉಂಟಾಗಿದೆ? ನಿವಾರಿಸಲು ಏನೆಲ್ಲ ಕ್ರಮ ಕೈಗೊಳ್ಳಬೇಕು? ಎಂಬಿತ್ಯಾದಿ ವಿಷಯಗಳ ಬಗ್ಗೆ ಚರ್ಚೆ, ಪರಿಶೀಲನೆಗಳು ಈ ಸಭೆಯಲ್ಲಿ ನಡೆಯಲಿವೆ.
ದೇಶದಲ್ಲಿ ಯಾವ ಭಾಗದಲ್ಲಿಯೂ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳುವುದಿಲ್ಲ ಎಂದು ಈಗಾಗಲೇ ಕೇಂದ್ರ ಕಲ್ಲಿದ್ದಲು ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ. ಹಾಗಿದ್ದಾಗ್ಯೂ ಪಂಜಾಬ್, ರಾಜಸ್ಥಾನ, ದೆಹಲಿ, ತಮಿಳುನಾಡು ಈ ಬಗ್ಗೆ ಧ್ವನಿ ಎತ್ತಿವೆ. ಕಲ್ಲಿದ್ದಲು ಪೂರೈಕೆ ಸಾಕಾಗುತ್ತಿಲ್ಲ. ಹೀಗಾದರೆ ವಿದ್ಯುತ್ ಪೂರೈಕೆ ಕಷ್ಟವಾಗಲಿದೆ ಎಂದೂ ಹೇಳಿಕೊಂಡಿವೆ. ವಿದ್ಯುತ್ ಕೊರತೆ ಎದುರಾಗಿದ್ದು, ಪರಿಸ್ಥಿತಿ ಬಿಗಡಾಯಿಸುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯಗಳಿಗೆ ಕಲ್ಲಿದ್ದಲು ಪೂರೈಕೆಯನ್ನು ಸರಿಯಾಗಿ ಮಾಡಬೇಕು. ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಮಧ್ಯಸ್ಥಿಕೆ ವಹಿಸಬೇಕು ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಪಂಜಾಬ್ ಸಿಎಂ ಚರಣಜಿತ್ ಸಿಂಗ್ ಛನ್ನಿ ಕೇಂದ್ರಕ್ಕೆ ಪತ್ರವನ್ನೂ ಬರೆದಿದ್ದಾರೆ.
ಇನ್ನು ದೇಶದ ಉಷ್ಣಸ್ಥಾವರಗಳಲ್ಲಿ ಕಲ್ಲಿದ್ದಲು ಅಭಾವ ಉಂಟಾಗಿದೆ. ಇದು ದೇಶದಲ್ಲಿ ವಿದ್ಯುತ್ ವ್ಯತ್ಯಯ ಸಮಸ್ಯೆಗೆ ಕಾರಣವಾಗಬಹುದು ಎಂದು ಕೇಂದ್ರ ವಿದ್ಯುತ್ ಪ್ರಾಧಿಕಾರ ಬಿಡುಗಡೆ ಮಾಡಿದ ಡಾಟಾದಲ್ಲಿ ಉಲ್ಲೇಖವಾಗಿದೆ. ಕಲ್ಲಿದ್ದಲು ಬಳಸಿ ವಿದ್ಯುತ್ ಉತ್ಪಾದನೆ ಮಾಡುವ ಒಟ್ಟು 135 ಥರ್ಮಲ್ ಸ್ಥಾವರಗಳಲ್ಲಿ ಸುಮಾರು 106 ಸ್ಥಾವರಗಳು (ಶೇ.80) ಕಲ್ಲಿದ್ದಲು ಸಮಸ್ಯೆ ಎದುರಿಸುತ್ತಿವೆ. ಅವರ ಬಳಿ ಇನ್ನು 6-7 ದಿನಗಳಿಗೆ ಸಾಕಾಗುವಷ್ಟು ಮಾತ್ರ ಕಲ್ಲಿದ್ದಲು ಸಂಗ್ರಹ ಇದೆ ಎಂದು ಅಕ್ಟೋಬರ್ 5ರಂದು ಬಿಡುಗಡೆ ಮಾಡಿದ ಮಾಹಿತಿಯಲ್ಲಿ ತಿಳಿಸಲಾಗಿತ್ತು. ಅಂದಿನಿಂದಲೂ ಒಂದು ಆತಂಕದ ವಾತಾವರಣ ಶುರುವಾಗಿದೆ. ಆದರೆ ಕೇಂದ್ರ ಇಂಧನ ಸಚಿವಾಲಯ ಮತ್ತು ಕಲ್ಲಿದ್ದಲು ಸಚಿವಾಲಯಗಳು ಇದನ್ನು ಅಲ್ಲಗಳೆದಿವೆ. ಕಲ್ಲಿದ್ದಲು ಸಾಕಷ್ಟು ಪೂರೈಕೆ ಮಾಡಲಾಗುತ್ತಿದೆ. ವಿದ್ಯುತ್ ಅಭಾವ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿವೆ.
ಇದನ್ನೂ ಓದಿ: ನಿಮ್ಮ ಈ ಕೆಲವು ದಿನನಿತ್ಯದ ಅಭ್ಯಾಸಗಳು ಮೂತ್ರಪಿಂಡದ ಆರೋಗ್ಯಕ್ಕೆ ಹಾನಿಯುಂಟು ಮಾಡಬಹುದು! ಎಚ್ಚರ
ಸ್ಟಾರ್ ಚಿತ್ರಗಳ ಜೊತೆ ಡಾರ್ಲಿಂಗ್ ಕೃಷ್ಣ ಪೈಪೋಟಿ: ಅ.15ಕ್ಕೆ ಶ್ರೀಕೃಷ್ಣ ಜಿಮೇಲ್ ಡಾಟ್ ಕಾಮ್ ಬಿಡುಗಡೆ