ಬೆಂಗಳೂರು: ಬ್ಲ್ಯಾಕ್ ಫಂಗಸ್ ಕಾಯಿಲೆಯ ಚಿಕಿತ್ಸೆಗೆ ಬಳಸುವ ಔಷಧಿಯನ್ನು ಕಾಳಸಂತೆಯಲ್ಲಿ ಮಾರಲು ಯತ್ನಿಸಿದ ಆರೋಪಿಯನ್ನು ಸಿಸಿಬಿ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಕುಂದಲಹಳ್ಳಿ ಗೇಟ್ ಬಳಿ ಆರೋಪಿ ರಾಮ್ ಮೋಹನ್ನನ್ನು ಬಂಧಿಸಲಾಗಿದೆ. ಬಂಧಿತನಿಂದ ₹4.5 ಲಕ್ಷ ಮೌಲ್ಯದ 80 ಮಾತ್ರೆ, 17 ಇಂಜೆಕ್ಷನ್‌ಗಳನ್ನು ಜಪ್ತಿ ಮಾಡಲಾಗಿದೆ. ಕೆ.ಆರ್.ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕದಲ್ಲಿ ಬ್ಲ್ಯಾಕ್ ಫಂಗಸ್ ಸೋಂಕು ಈವರೆಗೆ 157 ಜೀವಗಳನ್ನು ಬಲಿ ತೆಗೆದುಕೊಂಡಿದೆ. ಜೂನ್ 9ರ ಹೊತ್ತಿಗೆ ರಾಜ್ಯದಲ್ಲಿ 2,282 ಮಂದಿಯಲ್ಲಿ ಬ್ಲ್ಯಾಕ್ ಫಂಗಸ್ ಸೋಂಕು ಕಾಣಿಸಿಕೊಂಡಿತ್ತು. ಈ ಪೈಕಿ 1,947 ಮಂದಿ ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದರೆ, 102 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. 76 ಮಂದಿ ವೈದ್ಯಕೀಯ ಸಲಹೆಗೆ ವಿರುದ್ಧವಾಗಿ ಆಸ್ಪತ್ರೆಗಳಿಂದ ಹೊರಗೆ ಹೋಗಿದ್ದಾರೆ ಎಂದು ರಾಜ್ಯ ಸರ್ಕಾರವು ಕರ್ನಾಟಕ ಹೈಕೋರ್ಟ್ಗೆ ಕಳೆದ ಗುರುವಾರ ಮಾಹಿತಿ ನೀಡಿತ್ತು.
ಬೆಂಗಳೂರು ನಗರ ಜಿಲ್ಲೆಯಲ್ಲಿ 787 ಮಂದಿಯಲ್ಲಿ ಬ್ಲ್ಯಾಕ್ ಫಂಗಸ್ ಸೋಂಕು ದೃಢಪಟ್ಟಿದೆ. 692 ಮಂದಿ ಚಿಕಿತ್ಸೆ ಪಡೆಯುತ್ತಿದ್ದರೆ, 55 ಜನರು ಸಾವನ್ನಪ್ಪಿದ್ದಾರೆ. 31 ಜನರು ಗುಣಮುಖರಾಗಿದ್ದಾರೆ. ಧಾರವಾಡ 202, ಬೆಳಗಾವಿ 138 ಮತ್ತು ಕಲಬುರ್ಗಿಯಲ್ಲಿ 137 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.
ಪ್ರಕರಣದ ವಿಚಾರಣೆ ನಡೆಸಿದ್ದ ಹೈಕೋರ್ಟ್ ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ ಶೀಘ್ರ ಮಾರ್ಗದರ್ಶಿ ಸೂತ್ರ ಪ್ರಕಟಿಸುವಂತೆ ಸೂಚಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
(Police Arrest Person Who Tries to Sell Black Fungus Drug in Black Market)
ಇದನ್ನೂ ಓದಿ: ದೇಶದಲ್ಲಿ 3 ವಾರಗಳಲ್ಲಿ 31,219 ಬ್ಲ್ಯಾಕ್ ಫಂಗಸ್ ಪ್ರಕರಣಗಳು ಮತ್ತು 2,109 ಸಾವು; ಕರ್ನಾಟಕದಲ್ಲಿ 2,282 ಕೇಸ್, 157 ಸಾವು
ಇದನ್ನೂ ಓದಿ: ಬೆಂಗಳೂರಿನಲ್ಲಿ 10 ವರ್ಷದೊಳಗಿನ ಮೂವರು ಮಕ್ಕಳಿಗೆ ಬ್ಲ್ಯಾಕ್ ಫಂಗಸ್ ಪತ್ತೆ
Published On - 11:14 pm, Fri, 11 June 21