ದೇಶದಲ್ಲಿ 3 ವಾರಗಳಲ್ಲಿ 31,219 ಬ್ಲ್ಯಾಕ್​ ಫಂಗಸ್ ಪ್ರಕರಣಗಳು ಮತ್ತು 2,109 ಸಾವು; ಕರ್ನಾಟಕದಲ್ಲಿ 2,282 ಕೇಸ್​, 157 ಸಾವು

7,057 ಪ್ರಕರಣಗಳು ಮತ್ತು 609 ಸಾವುಗಳೊಂದಿಗೆ ಮಹಾರಾಷ್ಟ್ರ ರಾಜ್ಯವು ಬ್ಲ್ಯಾಕ್​ ಫಂಗಸ್​​ನ ಸೋಂಕಿನ ಪ್ರಮಾಣದಲ್ಲೂ ಅಗ್ರಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿರುವ ಗುಜರಾತ್​ನಲ್ಲಿ 5,418 ಪ್ರಕರಣಗಳು ಮತ್ತು 323 ಸಾವುಗಳು ವರದಿಯಾಗಿವೆ.

ದೇಶದಲ್ಲಿ 3 ವಾರಗಳಲ್ಲಿ 31,219 ಬ್ಲ್ಯಾಕ್​ ಫಂಗಸ್ ಪ್ರಕರಣಗಳು ಮತ್ತು 2,109 ಸಾವು; ಕರ್ನಾಟಕದಲ್ಲಿ 2,282 ಕೇಸ್​, 157 ಸಾವು
ಬ್ಲ್ಯಾಕ್​ ಫಂಗಸ್ ಸೋಂಕಿತ ಮಹಿಳೆ

ಕೋವಿಡ್​-19 ಪಿಡುಗಿನ ಎರಡನೇ ಅಲೆ ಶಾಂತವಾಗುತ್ತಿದೆ ಅಂಥ ಜನ ನಿಟ್ಟಿಸಿರು ಬಿಡುತ್ತಿರುವಾಗಲೇ ಈ ಅವಧಿಯಲ್ಲಿ ಸೋಂಕಿತರಾಗಿ ಚೇತರಿಸಿಕೊಂಡವರಲ್ಲಿ ಮ್ಯುಕರ್​ಮೈಕೋಸಿಸ್ ಅಥವಾ ಬ್ಲ್ಯಾಕ್​ ಫಂಗಸ್​​ನ ಭೀತಿ ಕಾಡುತ್ತಿದೆ. ಈ ಭಯಾನಕ ರೋಗದ ಮರಣ ಪ್ರಮಾಣ ಶೇಕಡಾ 50ರಷ್ಟಿದ್ದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಕಳೆದ ಮೂರು ವಾರಗಳಲ್ಲಿ ಸೋಂಕಿನ ಪ್ರಮಾಣ ಶೇಕಡಾ 150ರಷ್ಟು ಬೆಳೆದಿದೆ. ದೇಶದ ನಾನಾ ಭಾಗಗಳಲ್ಲಿ ಸುಮಾರು 20 ದಿನಗಳಲ್ಲಿ 31,216 ಪ್ರಕರಣಗಳು ಮತ್ತು ಈ ಸೋಂಕಿನಿಂದ 2,109 ಸಾವುಗಳು ವರದಿಯಾಗಿವೆ. ಈ ರೋಗದ ಚಿಕಿತ್ಸೆಗೆ ಅತ್ಯಶ್ಯಕವಾಗಿರುವ ಅಂಫೋಟೆರಿಸನ್-ಬಿ ಡ್ರಗ್ ಅಭಾವ ತೀವ್ರವಾಗಿರುವುದರಿಂದ ಪ್ರಕರಣಗಳ ಸಂಖ್ಯೆ ಹೆಚ್ಚಲು ಒಂದು ಕಾರಣ ಎಂದು ಹೇಳಲಾಗುತ್ತಿದೆ.

7,057 ಪ್ರಕರಣಗಳು ಮತ್ತು 609 ಸಾವುಗಳೊಂದಿಗೆ ಮಹಾರಾಷ್ಟ್ರ ರಾಜ್ಯವು ಬ್ಲ್ಯಾಕ್​ ಫಂಗಸ್​​ನ ಸೋಂಕಿನ ಪ್ರಮಾಣದಲ್ಲೂ ಅಗ್ರಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿರುವ ಗುಜರಾತ್​ನಲ್ಲಿ 5,418 ಪ್ರಕರಣಗಳು ಮತ್ತು 323 ಸಾವುಗಳು ವರದಿಯಾಗಿವೆ. 2,976 ಕೇಸುಗಳೊಂದಿಗೆ ರಾಜಸ್ತಾನವು ಮೂರನೇ ಸ್ಥಾನದಲ್ಲಿದೆ. ಮೇ 25ರಂದು ಮಹಾರಾಷ್ಟ್ರದಲ್ಲಿ 2,770 ಮತ್ತು ಗುಜರಾತ್​ನಲ್ಲಿ 2,859 ಬ್ಲ್ಯಾಕ್​ ಫಂಗಸ್​ ಪ್ರಕರಣಗಳು ಪತ್ತೆಯಾಗಿದ್ದವು.

ಕೇಂದ್ರ ಆರೋಗ್ಯ ಇಲಾಖೆಯ ಮೂಲಗಳ ಪ್ರಕಾರ ಛತ್ತೀಸ್​ಗಡ್​ನಲ್ಲಿ ಬ್ಲ್ಯಾಕ್​ ಫಂಗಸ್​​ನಿಂದ 17 ಜನ ಸಾವನ್ನಪ್ಪಿದ್ದಾರೆ ಮತ್ತು ಇದರ ಜೊತೆ ಬೇರೆ ಕಾಯಿಲೆಗಳಿಂದಲೂ ನರಳುತ್ತಿದ್ದ 11 ಜನ ಸಹ ಸೋಂಕಿಗೆ ಬಲಿಯಾಗಿದ್ದಾರೆ. ಬುಧವಾರದವರೆಗೆ ರಾಜ್ಯದಲ್ಲಿ ಬ್ಲ್ಯಾಕ್​ ಫಂಗಸ್​​ನ 276 ಕೇಸ್​ಗಳು ವರದಿಯಾಗಿವೆ.

ಹಾಗೆಯೇ ಗುರುವಾರದಂದು ಕರ್ನಾಟಕ ಹೈಕೋರ್ಟ್​ಗೆ ಸಲ್ಲಿಸಿರುವ ಮಾಹಿತಿಯಲ್ಲಿ ರಾಜ್ಯ ಸರ್ಕಾರವು ರಾಜ್ಯದಲ್ಲಿ ಜೂನ್​ 9 ರವರಗೆ 2,282 ಬ್ಲ್ಯಾಕ್​ ಫಂಗಸ್ ಪ್ರಕರಣಗಳಿವೆ ಎಂದ ಹೇಳಿದೆ. ಮುಖ್ಯ ನ್ಯಾಯಾಧೀಶ ನ್ಯಾಯಮೂರ್ತಿ ಎ ಎಸ್ ಓಕಾ ಮತ್ತು ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರನ್ನೊಳಗೊಂಡ ಪೀಠದೆದುರು ರಾಜ್ಯದ ಹೆಚ್ಚುವರಿ ಅಡ್ವೋಕೇಟ್ ಜನರಲ್ ಧ್ಯಾನ್ ಚಿನ್ನಪ್ಪ ಸರ್ಕಾರದ ಪರ ನೀಡಿರುವ ಮಾಹಿತಿಯನ್ವಯ, 2,282 ಸೋಂಕಿತರಲ್ಲಿ 1,947 ಜನ ಚಿಕಿತ್ಸೆ ಪಡೆಯುತ್ತಿದ್ದರೆ, 102 ಜನ ಗುಣಮುಖರಾಗಿದ್ದಾರೆ. ಬ್ಲ್ಯಾಕ್​ ಫಂಗಸ್ ಸೋಂಕಿಗೆ 157 ಜನ ಬಲಿಯಾಗಿದ್ದಾರೆ ಮತ್ತು 76 ಜನರನ್ನು ವೈದ್ಯಕೀಯ ಸಲಹೆಗೆ ವಿರುದ್ಧವಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್​ ಮಾಡಲಾಗಿದೆ ಎಂದು ಚಿನ್ನಪ್ಪ ಪೀಠಕ್ಕೆ ತಿಳಿಸಿದರು.

ಛತ್ತೀಸ್​ಗಡ್​ನಲ್ಲಿ ಇದುವೆರೆಗೆ ಬ್ಲ್ಯಾಕ್​ ಫಂಗಸ್​​ನಿಂದ ಸೋಂಕಿತರಾಗಿದ್ದ 28 ಜನ ಮರಣಿಸಿದ್ದಾರೆ. ಆದರೆ ಅವರಲ್ಲಿ 17 ಜನರ ಸಾವಿಗೆ ಬ್ಲ್ಯಾಕ್​ ಫಂಗಸ್ ಕಾರಣವಾಗಿದ್ದರೆ ಉಳಿದ 11 ಜನರು ಇತರ ಕಾಯಿಲೆಗಳಿಂದಲೂ ಬಳಲುತ್ತಿದ್ದರಿಂದ ಸಾವನ್ನಪ್ಪಿದ್ದಾರೆ ಎಂದು ಛತ್ತೀಸ್​ಗಡ್​ ರಾಜ್ಯ ಅರೋಗ್ಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಬ್ಲ್ಯಾಕ್​ ಫಂಗಸ್ ಸೋಂಕಿನಿಂದ ಸತ್ತಿರುವ 17 ಜನರಲ್ಲಿ 6 ಜನ ರಾಯ್ಪುರ್​ನಲ್ಲಿರುವ ಆಲ್​-ಇಂಡಿಯಾ ಇನ್​ಸ್ಟಿಟ್ಯೂಟ್​ ಆಫ್​ ಮೆಡಿಕಲ್​ ಸೈನ್ಸ್​ನಲ್ಲಿ (ಎಐಐಎಮ್​ಎಸ್) ಸಾವಿಗೀಡಾಗಿದ್ದರೆ, ಏಳು ಜನ ಖಾಸಗಿ ಆಸ್ಪತ್ರೆಗಳಲ್ಲಿ, ಇಬ್ಬರು ರಾಯ್ಗಡ್ ಮೆಡಿಕಲ್​ ಕಾಲೇಜಿನಲ್ಲಿ, ಭಿಲ್ಲಾಯಿ ಸೆಕ್ಟರ್ 9 ಆಸ್ಪತ್ರೆಯೊಂದರಲ್ಲಿ ಮತ್ತು ಬಿಲಾಸ್ಪುರ್​ನಲ್ಲಿರುವ ಛತ್ತೀಸ್​ಗಡ್​ ಇನ್​ಸ್ಟಿಟ್ಯೂಟ್​ ಆಫ್​ ಮೆಡಿಕಲ್​ ಸೈನ್ಸ್​ನಲ್ಲಿ (ಸಿಐಎಮ್​ಎಸ್) ತಲಾ ಒಬ್ಬರು ಸಾವನ್ನಪ್ಪಿದ್ದಾರೆ. ಉಳಿದ 11 ಸಾವುಗಳ ಪೈಕಿ 8 ಜನ ಎಐಐಎಮ್​ಎಸ್ ದಾಖಲಾಗಿದ್ದರು, ಒಬ್ಬರು ಸೆಕ್ಟರ್​ 9 ಆಸ್ಪತ್ರೆ ಮತ್ತು ಇನ್ನೊಬ್ಬರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು ಎಂದು ಅಧಿಕಾರಿ ಹೇಳಿದ್ದಾರೆ.

ಉತ್ತರ ಪ್ರದೇಶದಲ್ಲಿ 1,744 ಬ್ಲ್ಯಾಕ್​ ಫಂಗಸ್ ಕೇಸ್​ಗಳು ಪತ್ತೆಯಾಗಿವೆ ಮತ್ತು 142 ಜನ ಅದಕ್ಕೆ ಬಲಿಯಾಗಿದ್ದಾರೆ. ಹಾಗೆಯೇ, ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ 1,200 ಪ್ರಕರಣಗಳು ಮತ್ತ 125 ಸಾವುಗಳು ವರದಿಯಾಗಿವೆ. ಮೇ 25ರಂದು ಉತ್ತರ ಪ್ರದೇಶದಲ್ಲಿ ಕೇವಲ 701 ಪ್ರಕರಣಗಳಿದ್ದರೆ ಅದರ ಪಕ್ಕದ ದೆಹಲಿಯಲ್ಲಿ 119 ಪ್ರಕಣಗಳಿದ್ದವು.

ಒಂದು ಗಂಭೀರ ಸ್ವರೂಪದ ಫಂಗಲ್​ ಸೋಂಕು ಆಗಿರುವ ಬ್ಲ್ಯಾಕ್​ ಫಂಗಸ್ ಡಯಾಬಿಟಿಸ್​ನಿಂದ ಬಾಧಿತರಾಗಿರುವ ಕೋವಿಡ್​ ಸೋಂಕಿತರಲ್ಲಿ ಮತ್ತು ಸೋಂಕಿನಿಂದ ಚೇತರಿಸಿಕೊಂಡ ನಂತರ ರೋಗ ನಿರೋಧಕ ಶಕ್ತಿ ಕ್ಷೀಣಿಸಿರುವ ಜನರಲ್ಲಿ ಕಾಣಿಸಿಕೊಳ್ಳುತ್ತಿದೆ. ಬ್ಲ್ಯಾಕ್​ ಫಂಗಸ್ ಸೋಂಕು ಎರಡನೇ ಅಲೆ ಶುರುವಾದ ನಂತರ ಮಾತ್ರ ಜನರನ್ನು ಕಾಡುತ್ತಿದೆ.

ಇದನ್ನೂ ಓದಿ: Black Fungus: ಕರ್ನಾಟಕಕ್ಕೆ 9750 ವಯಲ್ಸ್ ಬ್ಲ್ಯಾಕ್ ಫಂಗಸ್ ಔಷಧ ಹಂಚಿಕೆ: ಸದಾನಂದ ಗೌಡ