ರಾಹುಲ್ ಗಾಂಧಿ ಟ್ವೀಟ್ ವಿರುದ್ಧ ಅಸ್ಸಾಂನಲ್ಲಿ ಸಾವಿರಾರು ದೂರುಗಳು ದಾಖಲು
ಈ ಪೈಕಿ ಬಹುತೇಕ ದೂರುಗಳನ್ನು ಬಿಜೆಪಿ ಮತ್ತು ಅದರ ಅಂಗಸಂಸ್ಥೆಗಳೇ ದಾಖಲಿಸಿವೆ. ತಮ್ಮ ಟ್ವೀಟ್ನಲ್ಲಿ ಈಶಾನ್ಯ ಭಾರತವನ್ನು ಉಲ್ಲೇಖಿಸಿಲ್ಲ ಎನ್ನುವುದು ಬಿಜೆಪಿಯ ಆಕ್ಷೇಪ.
ಗುವಾಹತಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ‘ಸ್ಪಿರಿಟ್ ಆಫ್ ಇಂಡಿಯಾ’ ಟ್ವೀಟ್ ಖಂಡಿಸಿ ಅಸ್ಸಾಂನಲ್ಲಿ ಸೋಮವಾರ ಸಾವಿರಾರು ದೂರುಗಳು ದಾಖಲಾಗಿವೆ. ಈ ಪೈಕಿ ಬಹುತೇಕ ದೂರುಗಳನ್ನು ಬಿಜೆಪಿ ಮತ್ತು ಅದರ ಅಂಗಸಂಸ್ಥೆಗಳೇ ದಾಖಲಿಸಿವೆ. ರಾಹುಲ್ ಗಾಂಧಿ ಕುರಿತು ಮಾತನಾಡುವಾಗ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ‘ತಂದೆ-ಮಗ’ ಎಂದು ಹೀಗಳೆದಿದ್ದರು. ಇದನ್ನು ಖಂಡಿಸಿ ಅಸ್ಸಾಂನ ವಿದ್ಯಾರ್ಥಿ ಮತ್ತು ಯುವ ಕಾಂಗ್ರೆಸ್ ಘಟಕಗಳು ಅಸ್ಸಾಂ ಸೇರಿದಂತೆ ದೇಶದ ವಿವಿಧೆಡೆ ಪೊಲೀಸರಿಗೆ ದೂರು ಸಲ್ಲಿಸಿದ್ದವು. ತಮ್ಮ ಟ್ವೀಟ್ನಲ್ಲಿ ಈಶಾನ್ಯ ಭಾರತದ ಬಗ್ಗೆ ಏನನ್ನೂ ಪ್ರಸ್ತಾಪಿಸದ ರಾಹುಲ್ ಗಾಂಧಿ ಅವರು ದೇಶದ ಇತರ ರಾಜ್ಯಗಳಿಂದ ಅಸ್ಸಾ ಅನ್ನು ಪ್ರತ್ಯೇಕಿಸುತ್ತಿದ್ದಾರೆ. ಇಂಥ ಟ್ವೀಟ್ಗಳ ಮೂಲಕ ರಾಹುಲ್ ಗಾಂಧಿ ಅವರು ದೇಶದಲ್ಲಿ ಸೌಹಾರ್ದ ಕದಡಲು ಯತ್ನಿಸುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ಆಕ್ಷೇಪಿಸಿದರು.
ಕಳೆದ ಫೆಬ್ರುವರಿ 10ರಂದು ಟ್ವೀಟ್ ಮಾಡಿದ್ದ ರಾಹುಲ್ ಗಾಂಧಿ, ‘ನಮ್ಮ ಒಕ್ಕೂಟವೇ ನಮ್ಮ ಬಲ. ನಮ್ಮದು ಸಂಸ್ಕೃತಿ, ವೈವಿಧ್ಯತೆ, ಭಾಷೆ, ಜನರು, ರಾಜ್ಯಗಳ ಒಕ್ಕೂಟದಲ್ಲಿ ನಮಗೆ ಬಲವಿದೆ. ಕಾಶ್ಮೀರದಿಂದ ಕೇರಳದವರೆಗೆ, ಗುಜರಾತ್ನಿಂದ ಪಶ್ಚಿಮ ಬಂಗಾಳದವರೆಗೆ ಭಾರತವು ಹಲವು ಸುಂದರ ಬಣ್ಣಗಳನ್ನು ಹೊಂದಿವೆ. ಭಾರತದ ಆಶಯವನ್ನು ಧಿಕ್ಕರಿಸಬಾರದು’ ಎಂದು ಹೇಳಿದ್ದರು. ರಾಹುಲ್ ಗಾಂಧಿ ಅವರು ಈ ಟ್ವೀಟ್ ಮೂಲಕ ಭಾರತ ಒಕ್ಕೂಟದ ವಿರುದ್ಧ ಯುದ್ಧ ಸಾರಿದ್ದಾರೆ. ಚೀನಾದ ಅಜೆಂಡಾ ಜೊತೆಗೆ ಕೈಜೋಡಿಸಿದ್ದಾರೆ ಎಂದು ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಕಾರ್ಯಕರ್ತರು ಆರೋಪಿಸಿದ್ದರು.
ಭಾರತವನ್ನು ವಿವರಿಸುವ ಟ್ವೀಟ್ನಲ್ಲಿ ರಾಹುಲ್ ಗಾಂಧಿ ಅವರು ಬೇಕೆಂದೇ ಈಶಾನ್ಯ ಭಾರತವನ್ನು ಉಲ್ಲೇಖಿಸಿಲ್ಲ. ಹೀಗೆ ಮಾಡುವ ಮೂಲಕ ಉದ್ದೇಶಪೂರ್ವಕವಾಗಿಯೇ ಈಶಾನ್ಯ ಭಾರತವನ್ನು ನಿರ್ಲಕ್ಷಿಸಿದ್ದಾರೆ ಎಂದು ಬಿಜೆವೈಎಂ ದೂರಿದೆ. ರಾಹುಲ್ ಅವರ ಟ್ವೀಟ್ ಭಾರತದ ಭೌಗೋಳಿಕ ಅಖಂಡತೆಗೆ ಬೆದರಿಕೆ ಒಡ್ಡಿದೆ ಎಂದು ಬಿಜೆವೈಎಂನ ಮಾಧ್ಯಮ ಸಂಯೋಜಕ ಬಿಸ್ವಜಿತ್ ಖೌಂಡ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಅಸ್ಸಾಂನ ಬಿಜೆಪಿ ಯುವ ಮೋರ್ಚಾ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ 1000ಕ್ಕೂ ಹೆಚ್ಚು ದೂರುಗಳನ್ನು ದಾಖಲಿಸಿದೆ. ಆದರೆ ಯಾವುದೇ ಪೊಲೀಸ್ ಠಾಣೆಯಲ್ಲಿ ಈ ದೂರು ಆಧರಿಸಿ ಎಫ್ಐಆರ್ ದಾಖಲಾಗಿದೆಯೇ ಎಂಬ ಮಾಹಿತಿ ಲಭ್ಯವಾಗಿಲ್ಲ.
ಬಿಜೆವೈಎಂ ಸಲ್ಲಿಸಿರುವ ದೂರಿನಲ್ಲಿ ಅರುಣಚಲ ಪ್ರದೇಶ ವಿಚಾರವನ್ನು ಪ್ರಸ್ತಾಪಿಸಿದೆ. ‘ಈ ಟ್ವೀಟ್ನಲ್ಲಿ ರಾಹುಲ್ ಗಾಂಧಿ ಅವರು ಅರುಣಾಚಲ ಪ್ರದೇಶವನ್ನು ಉದ್ದೇಶಪೂರ್ವಕವಾಗಿ ಕೈಬಿಡುವ ಮೂಲಕ ಚೀನಾ ಪರವಾದ ನಿಲುವು ತಳೆದಿದ್ದಾರೆ. ಇದು ಈ ದೇಶದ ಹಳೆಯ ರಾಜಕೀಯ ಪಕ್ಷದ ಮನಃಸ್ಥಿತಿಯನ್ನು ತೋರುತ್ತದೆ’ ಎಂದು ಹೇಳಿದೆ. ಭಾರತಕ್ಕೆ ಕಾಂಗ್ರೆಸ್ ಪಕ್ಷವೇ ದುರಾದೃಷ್ಟ ಮತ್ತು ರಾಹುಲ್ ಗಾಂಧಿ ಅವರೇ ಈ ದೇಶದ ಸಮಸ್ಯೆ ಎಂದು ಹೇಳಿಕೆಯು ತಿಳಿಸಿದೆ. ಬಿಜೆಪಿ ಮಹಿಳಾ ಮೋರ್ಚಾ ಸಹ ಅಸ್ಸಾಂನ ವಿವಿಧ ಪೊಲೀಸ್ ಠಾಣೆಗಳಲ್ಲಿ ದೂರು ನೀಡಿದ್ದಾರೆ ಎಂದು ಬಿಜೆಪಿ ವಕ್ತಾರರು ತಿಳಿಸಿದ್ದಾರೆ.
ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿ, ಅರವಿಂದ್ ಕೇಜ್ರಿವಾಲ್ ಹಿಂದಿವೆ ನಿಗೂಢ ಶಕ್ತಿಗಳು: ಪಂಜಾಬ್ನಲ್ಲಿ ರಾಹುಲ್ ಗಾಂಧಿ
ಇದನ್ನೂ ಓದಿ: ನಾನು ಸತ್ಯವನ್ನಷ್ಟೇ ಹೇಳುತ್ತೇನೆ, ಸುಳ್ಳು ಕೇಳಬೇಕೆಂದರೆ ಪ್ರಧಾನಿ ಮೋದಿ, ಅರವಿಂದ್ ಕೇಜ್ರಿವಾಲ್ ಭಾಷಣ ಕೇಳಿ: ರಾಹುಲ್ ಗಾಂಧಿ