Assam Violence: ಒತ್ತುವರಿ ತೆರವುಗೊಳಿಸಲು ಬಂದ ಪೊಲೀಸರೊಂದಿಗೆ ಸಂಘರ್ಷ: ಇಬ್ಬರ ಸಾವು, ಜನರ ಮೇಲಿನ ಹಲ್ಲೆ ಕ್ಯಾಮೆರಾದಲ್ಲಿ ದಾಖಲು

ಪೊಲೀಸರು ಮತ್ತು ನಾಗರಿಕ ನಡುವಣ ಸಂಘರ್ಷದ ವೇಳೆ ಬಂದೂಕು, ಲಾಠಿಗಳಿಂದ ಸಜ್ಜಿತರಾಗಿದ್ದ ಪೊಲೀಸರು ಜನರನ್ನು ಅಟ್ಟಿಸಿಕೊಂಡು ಹೋಗಿ ಥಳಿಸುವುದು ಕ್ಯಾಮೆರಾದಲ್ಲಿ ರೆಕಾರ್ಡ್​ ಆಗಿದೆ. ಹಲವು ವಿಡಿಯೊ ತುಣುಕುಗಳು ವೈರಲ್ ಆಗಿವೆ.

Assam Violence: ಒತ್ತುವರಿ ತೆರವುಗೊಳಿಸಲು ಬಂದ ಪೊಲೀಸರೊಂದಿಗೆ ಸಂಘರ್ಷ: ಇಬ್ಬರ ಸಾವು, ಜನರ ಮೇಲಿನ ಹಲ್ಲೆ ಕ್ಯಾಮೆರಾದಲ್ಲಿ ದಾಖಲು
ಅಸ್ಸಾಂನಲ್ಲಿ ಜನರನ್ನು ಅಟ್ಟಿಸಿಕೊಂಡು ಹೋಗಿ ಥಳಿಸುತ್ತಿರುವ ಪೊಲೀಸರು
Edited By:

Updated on: Sep 23, 2021 | 11:29 PM

ಗುವಾಹತಿ: ಅಸ್ಸಾಂನ ದರಾಂಗ್ ಜಿಲ್ಲೆಯಲ್ಲಿ ಒತ್ತುವರಿ ತೆರವುಗೊಳಿಸುವ ಪೊಲೀಸರ ಪ್ರಯತ್ನ ಹಿಂಸಾಚಾರಕ್ಕೆ ತಿರುಗಿದ ಪರಿಣಾಮ ಇಬ್ಬರು ನಾಗರಿಕರು ಮೃತಪಟ್ಟು, 9 ಪೊಲೀಸರು ಗಾಯಗೊಂಡ ಘಟನೆ ಗುರುವಾರ ವರದಿಯಾಗಿದೆ. ಪೊಲೀಸರು ಮತ್ತು ನಾಗರಿಕ ನಡುವಣ ಸಂಘರ್ಷದ ವೇಳೆ ಬಂದೂಕು, ಲಾಠಿಗಳಿಂದ ಸಜ್ಜಿತರಾಗಿದ್ದ ಪೊಲೀಸರು ಜನರನ್ನು ಅಟ್ಟಿಸಿಕೊಂಡು ಹೋಗಿ ಥಳಿಸುವುದು ಕ್ಯಾಮೆರಾದಲ್ಲಿ ರೆಕಾರ್ಡ್​ ಆಗಿದೆ. ಹಲವು ವಿಡಿಯೊ ತುಣುಕುಗಳು ವೈರಲ್ ಆಗಿವೆ.

ಸಂಘರ್ಷವನ್ನು ವಿಡಿಯೊ ಮಾಡಿಕೊಳ್ಳುತ್ತಿದ್ದ ಕ್ಯಾಮೆರಾಮನ್ ಒಬ್ಬರು ವ್ಯಕ್ತಿಯೊಬ್ಬನನ್ನು ಬೆನ್ನಟ್ಟಿ ಹೋಗಿ ಥಳಿಸುವ ದೃಶ್ಯವೂ ವೈರಲ್ ಆಗಿರುವ ವಿಡಿಯೊದಲ್ಲಿದೆ. ಪೊಲೀಸರಿಂದ ಹೊಡೆತದಿಂದ ನಿಶ್ಚೇಷ್ಟಿತನಾಗಿದ್ದ ವ್ಯಕ್ತಿಯ ಮೇಲೆ ಹಾರಿ ಈಗ ಹಲ್ಲೆ ನಡೆಸಿದ್ದಾನೆ. ಕ್ಯಾಮೆರಾಮನ್​ನನ್ನು ಪೊಲೀಸರು ಬಂಧಿಸಿದ್ದಾರೆ. ಸಂಘರ್ಷದ ಬಗ್ಗೆ ಹೈಕೋರ್ಟ್ ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಧೋಲ್​ಪುರದಲ್ಲಿ ಸುಮಾರು 800 ಕುಟುಂಬಗಳನ್ನು ಸೋಮವಾರ ಅಸ್ಸಾಂ ಸರ್ಕಾರ ತೆರವುಗೊಳಿಸಿತ್ತು. ಕೃಷಿ ಯೋಜನೆಗಾಗಿ 4,500 ಬಿಘಾದಷ್ಟು ಜಮೀನನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳಲು ಸರ್ಕಾರ ಮುಂದಾಗಿದೆ. ಸ್ಥಳೀಯರು ಕಲ್ಲುತೂರಾಟ ನಡೆಸಿದ್ದರಿಂದ ಅನಿವಾರ್ಯವಾಗಿ ಬಲಪ್ರಯೋಗ ಮಾಡಬೇಕಾಯಿತು ಎಂದು ಪೊಲೀಸರು ಪ್ರತಿಕ್ರಿಯಿಸಿದ್ದಾರೆ. ‘ಒಂಭತ್ತು ಪೊಲೀಸ್ ಸಿಬ್ಬಂದಿ, ಇಬ್ಬರು ನಾಗರಿಕರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈಗ ಪರಿಸ್ಥಿತಿ ಸಾಮಾನ್ಯಸ್ಥಿತಿಗೆ ಬಂದಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಸುಶಾಂತ ಬಿಸ್ವಾ ಶರ್ಮಾ ಹೇಳಿದ್ದಾರೆ.

ಸ್ಥಳೀಯರು ಸಂಘರ್ಷಕ್ಕೆ ಇಳಿದ ಕಾರಣ ಒತ್ತುವರಿ ತೆರವು ಕಾರ್ಯಾಚರಣೆ ಪೂರ್ಣಗೊಳ್ಳಲಿಲ್ಲ. ಪ್ರಸ್ತುತ ಪೊಲೀಸರು ಅಲ್ಲಿಂದ ವಾಪಸ್ ಬಂದಿದ್ದಾರೆ. ನಂತರದ ದಿನಗಳಲ್ಲಿ ಪರಿಸ್ಥಿತಿಯನ್ನು ಮತ್ತೊಮ್ಮೆ ಅವಲೋಕಿಸುತ್ತೇವೆ ಎಂದಿದ್ದಾರೆ. ಸ್ಥಳೀಯ ವ್ಯಕ್ತಿಯೊಬ್ಬರ ಮೇಲೆ ಗುಂಡು ಹಾರಿಸಿ, ನಂತರ ಹಲ್ಲೆ ಮಾಡಿರುವ ಘಟನೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಆ ಸ್ಥಳ ತುಂಬಾ ದೊಡ್ಡದಿತ್ತು. ನಾನು ಮತ್ತೊಂದು ಭಾಗದಲ್ಲಿದ್ದೆ ಎಂದರು.

ಘಟನೆ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಅಸ್ಸಾಂನ ಬಿಜೆಪಿ ಸರ್ಕಾರವನ್ನು ಹೊಣೆ ಮಾಡಿ ಟ್ವೀಟ್ ಮಾಡಿದ್ದಾರೆ. ಅಸ್ಸಾಂ ರಾಜ್ಯವು ಸರ್ಕಾರ ಪ್ರಾಯೋಜಿತ ಬೆಂಕಿಯಲ್ಲಿ ಬೇಯುತ್ತಿದೆ ಎಂದು ಟೀಕಿಸಿದ್ದಾರೆ. ರಾಜ್ಯದ ಸೋದರ-ಸೋದರರೊಂದಿಗೆ ನಾನು ನಿಲ್ಲುತ್ತೇನೆ. ಭಾರತಾಂಬೆಯ ಯಾವುದೇ ಮಕ್ಕಳಿಗೆ ಹೀಗಾಗಬಾರದು ಎಂದು ಹೇಳಿದ್ದಾರೆ.

ಒತ್ತುವರಿ ತೆರವು ಕಾರ್ಯಾಚರಣೆ ನಡೆದ ಸ್ಥಳದಲ್ಲಿ ಸುಮಾರು 200 ಕುಟುಂಬಗಳು ಇದ್ದವು. ಆಗಸ್ಟ್​ ಅಂತ್ಯದಲ್ಲಿ ಈ ಕುಟುಂಬಗಳು ಗುವಾಹತಿ ಹೈಕೋರ್ಟ್​ ಆದೇಶವನ್ನು ಪ್ರಶ್ನಿಸಿದ್ದವು. ಇದು ಸರ್ಕಾರಿ ಭೂಮಿ, ಅಲ್ಲಿರುವವರಿಗೆ ಭೂಮಿಯ ಮೇಲೆ ಯಾವುದೇ ಹಕ್ಕು ಇಲ್ಲ ಎಂದು ಸರ್ಕಾರವು ನಂತರದ ದಿನಗಳಲ್ಲಿ ಅಫಿಡವಿಟ್ ಸಲ್ಲಿಸಿತ್ತು. ಅಫಿಡವಿಟ್ ಬಗ್ಗೆ ಅರ್ಜಿದಾರರು ಪ್ರತಿಕ್ರಿಯೆ ದಾಖಲಿಸುವ ಮೊದಲೇ ಒತ್ತುವರಿ ತೆರವು ಕಾರ್ಯಾಚರಣೆ ನಡೆದಿದೆ ಎಂಬುದನ್ನು ಹಲವು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ದರಾಂಗ್ ಜಿಲ್ಲಾಡಳಿತ ಮತ್ತು ಅಸ್ಸಾಂ ಪೊಲೀಸರು 800 ಕುಟುಂಬಗಳನ್ನು ತೆರವುಗೊಳಿಸಿ 4500 ಬಿಘಾ ಭೂಮಿಯನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡಿದ್ದಾರೆ. ಅಧಿಕಾರಿಗಳನ್ನು ಅಭಿನಂದಿಸುತ್ತೇನೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಟ್ವೀಟ್ ಮಾಡಿದ್ದರು. ಕಳೆದ ಜೂನ್ ತಿಂಗಳಲ್ಲಿಯೇ ಭೂಮಿಯನ್ನು ವಶಪಡಿಸಿಕೊಳ್ಳಲು ಸರ್ಕಾರ ನಿರ್ಧರಿಸಿತ್ತು ಎಂದು ಅಧಿಕಾರಿಗಳು ಹೇಳುತ್ತಾರೆ.

(Police Try to Evict Families in govt land 2 people Dead due in police firing)