ವಿಶ್ವ ಜನಸಂಖ್ಯಾ ದಿನ: ಸರ್ಕಾರಿ ಉದ್ಯೋಗಿ ಒಂದೇ ಮಗು ನೀತಿ ಆಳವಡಿಸಿಕೊಂಡರೆ 4 ಇನ್​ಕ್ರಿಮೆಂಟ್ ಎಕ್ಸ್​ಟ್ರಾ! ಏನಿದರ ಹಕೀಕತ್ತು?

| Updated By: ಸಾಧು ಶ್ರೀನಾಥ್​

Updated on: Jul 10, 2021 | 4:50 PM

UP Population Control Draft Bill: ಅಸ್ಸಾಂ ಸರ್ಕಾರವು ಮುಖ್ಯಮಂತ್ರಿ ಹೀಮಂತ್ ಬಿಸ್ವಾ ಶರ್ಮಾ ನೇತೃತ್ವದಲ್ಲಿ ಹಂತ ಹಂತವಾಗಿ 2 ಮಕ್ಕಳ ಜನಸಂಖ್ಯಾ ನೀತಿಯನ್ನು ಜಾರಿಗೆ ತರಲಿದೆ. ಈಗ ಯುಪಿ ಸರ್ಕಾರವು ಸಹ ಅಸ್ಸಾಂ ಸರ್ಕಾರದ ಹಾದಿಯಲ್ಲೇ ಜನಸಂಖ್ಯೆ ನಿಯಂತ್ರಣಕ್ಕೆ 2 ಮಕ್ಕಳ ನೀತಿಯನ್ನು ಜಾರಿಗೆ ತರಲು ನಾಳೆ ವಿಶ್ವ ಜನಸಂಖ್ಯಾ ದಿನದಂದು ಅಧಿಕೃತ ಹೆಜ್ಜೆ ಇಡಲಿದೆ.

ವಿಶ್ವ ಜನಸಂಖ್ಯಾ ದಿನ: ಸರ್ಕಾರಿ ಉದ್ಯೋಗಿ ಒಂದೇ ಮಗು ನೀತಿ ಆಳವಡಿಸಿಕೊಂಡರೆ 4 ಇನ್​ಕ್ರಿಮೆಂಟ್ ಎಕ್ಸ್​ಟ್ರಾ! ಏನಿದರ ಹಕೀಕತ್ತು?
ಭಾನುವಾರ ವಿಶ್ವ ಜನಸಂಖ್ಯಾ ದಿನ: ಸರ್ಕಾರಿ ಉದ್ಯೋಗಿ ಒಂದೇ ಮಗು ನೀತಿ ಆಳವಡಿಸಿಕೊಂಡರೆ 4 ಇನ್​ಕ್ರಿಮೆಂಟ್ ಎಕ್ಸ್​ಟ್ರಾ! ಏನಿದರ ಹಕೀಕತ್ತು?
Follow us on

ಉತ್ತರ ಪ್ರದೇಶದಲ್ಲಿ ಜನಸಂಖ್ಯಾ ನಿಯಂತ್ರಣಕ್ಕೆ ಕರಡು ಮಸೂದೆ ಸಿದ್ದವಾಗಿದೆ. 2 ಮಕ್ಕಳನ್ನು ಹೊಂದಿದವರಿಗೆ ಮಾತ್ರವೇ ಸರ್ಕಾರದ ಸೌಲಭ್ಯಗಳು ಸಿಗಲಿವೆ. 2ಕ್ಕಿಂತ ಹೆಚ್ಚಿನ ಮಕ್ಕಳನ್ನು ಹೊಂದಿದ್ದರೇ, ಸ್ಥಳೀಯ ಚುನಾವಣೆಗೂ ಸ್ಪರ್ಧಿಸುವಂತಿಲ್ಲ. ಉತ್ತರ ಪ್ರದೇಶದ ಕಾನೂನು ಆಯೋಗ ಸಿದ್ದಪಡಿಸಿರುವ ಕರಡು ಮಸೂದೆಯ (Uttar Pradesh population Act-Control, stabilization and Welfare -2021) ಬಗ್ಗೆ ಈಗ ಚರ್ಚೆ ಶುರುವಾಗಿದೆ. ಕರಡು ಮಸೂದೆಯಲ್ಲಿರುವ ಅಂಶಗಳೇನು? ಇದರ ಡೀಟೈಲ್ಸ್ ಇಲ್ಲಿದೆ ನೋಡಿ.

ಯುಪಿಯಲ್ಲಿ 2 ಮಕ್ಕಳು ಹೊಂದಿದ್ದರೇ ಮಾತ್ರ ಸರ್ಕಾರದ ಸೌಲಭ್ಯ
ಉತ್ತರ ಪ್ರದೇಶದಲ್ಲಿ ಇನ್ನೂ ಕೆಲವೇ ದಿನಗಳಲ್ಲಿ ಎಲ್ಲವೂ ಅಂದುಕೊಂಡಂತೆ ನಡೆದರೇ, 2ಮಕ್ಕಳಿಗಿಂತ ಹೆಚ್ಚಿನ ಮಕ್ಕಳನ್ನು ಹೊಂದಿರುವವರು ಸರ್ಕಾರದ ಸೌಲಭ್ಯ, ಸಬ್ಸಿಡಿ ಪಡೆಯಲು ಅನರ್ಹರು. ಅಷ್ಟೇ ಅಲ್ಲ, ಸರ್ಕಾರದ ಉದ್ಯೋಗಕ್ಕೂ ಅರ್ಜಿ ಸಲ್ಲಿಸುವಂತಿಲ್ಲ. ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲೂ ಸ್ಪರ್ಧಿಸುವಂತಿಲ್ಲ. ಹೀಗೊಂದು ಜನಸಂಖ್ಯಾ ನಿಯಂತ್ರಣ ಕಾಯಿದೆಯ ಕರಡು ಪ್ರತಿಯನ್ನು (Population Control Draft Bill) ಈಗ ಉತ್ತರ ಪ್ರದೇಶದ ಕಾನೂನು ಆಯೋಗ ಸಿದ್ದಪಡಿಸಿದೆ.

ಈ ಕರಡು ಪ್ರತಿ, ಕಾಯಿದೆಯಾಗಿ ಜಾರಿಯಾದ ಬಳಿಕ 2 ಕ್ಕಿಂತ ಹೆಚ್ಚು ಮಕ್ಕಳನ್ನ ಹೊಂದಿದವರಿಗೆ ಸರ್ಕಾರದ ಜನ ಕಲ್ಯಾಣ ಯೋಜನೆಯ ಲಾಭ ಪಡೆಯಲಾಗಲ್ಲ. ಆದರೇ, ಅದೇ ವೇಳೆ ಉತ್ತರ ಪ್ರದೇಶದಲ್ಲಿ ಎರಡು ಮಕ್ಕಳು, ಅದಕ್ಕಿಂತ ಕಡಿಮೆ ಮಕ್ಕಳನ್ನು ಹೊಂದಿದವರಿಗೆ ಪೋತ್ಸಾಹವನ್ನು ನೀಡಲಾಗುತ್ತೆ ಎನ್ನುವುದು ವಿಶೇಷ. ಉತ್ತರ ಪ್ರದೇಶದ ಕಾನೂನು ಆಯೋಗದ ಅಧ್ಯಕ್ಷ ಜಸ್ಟೀಸ್ ಎ.ಎನ್. ಮಿತ್ತಲ್ ಉತ್ತರ ಪ್ರದೇಶದ ಜನಸಂಖ್ಯೆ ನಿಯಂತ್ರಣದ ಕರಡು ಸಿದ್ದಪಡಿಸಿ ಬಿಡುಗಡೆ ಮಾಡಿದ್ದಾರೆ. ಈ ಜನಸಂಖ್ಯಾ ನಿಯಂತ್ರಣ ಕರಡು ಪ್ರತಿಯಲ್ಲಿರುವ ಅಂಶಗಳ ಬಗ್ಗೆ ಈಗ ಚರ್ಚೆ ಶುರುವಾಗಿದೆ.

ಸರ್ಕಾರಿ ಉದ್ಯೋಗಿಗಳು 2 ಮಕ್ಕಳ ನೀತಿಯನ್ನು ಆಳವಡಿಸಿಕೊಂಡರೇ, ಸರ್ಕಾರಿ ಉದ್ಯೋಗದಲ್ಲಿ ಎರಡು ಬಾರಿ ಬಡ್ತಿ ನೀಡಲಾಗುತ್ತೆ. ಸೈಟು, ಮನೆ ಖರೀದಿಗೆ ಸಬ್ಸಿಡಿ ನೀಡಲಾಗುತ್ತೆ. ನ್ಯಾಷನಲ್ ಪೆನ್ಷನ್ ಸ್ಕೀಮ್ ನಡಿ ಪಿಎಫ್ ಹಣದಲ್ಲಿ ಶೇ.3ರಷ್ಟು ಹೆಚ್ಚಳ ಮಾಡಲಾಗುತ್ತೆ. ಸರ್ಕಾರಿ ಉದ್ಯೋಗಿಗಳು ಒಂದೇ ಮಗು ಹೊಂದಿದ್ದರೇ, ನಾಲ್ಕು ಹೆಚ್ಚುವರಿ ಇನ್ ಕ್ರಿಮೆಂಟ್ ನೀಡಲಾಗುತ್ತೆ. ಉಚಿತ ಆರೋಗ್ಯ ಸೇವೆ, ಮಗುವಿಗೆ 20 ವರ್ಷ ವಯಸ್ಸಿನವರೆಗೆ ಉಚಿತ ಶಿಕ್ಷಣ ನೀಡಲಾಗುತ್ತೆ.

ಯೋಗಿ ಆದಿತ್ಯನಾಥ್  ನಾಡಿನಲ್ಲಿ ನಾಳೆ ಭಾನುವಾರ ವಿಶ್ವ ಜನಸಂಖ್ಯಾ ದಿನಕ್ಕೆ (World Population Day) ವಿಶೇಷ ಕೊಡುಗೆ, ಏನದು?
ಸರ್ಕಾರಿ ಉದ್ಯೋಗದಲ್ಲಿ ಇಲ್ಲದೇ ಇರುವವರು, 2 ಮಕ್ಕಳ ನೀತಿಯನ್ನು ಪಾಲಿಸಿದರೇ, ಅಂಥವರಿಗೆ ಬೇರೆ ಬೇರೆ ರೀತಿಯ ಪೋತ್ಸಾಹವನ್ನು ನೀಡಲಾಗುತ್ತೆ. 2 ಮಕ್ಕಳ ನೀತಿ ಪಾಲಿಸುವವರಿಗೆ ನೀರು, ವಿದ್ಯುಚ್ಛಕ್ತಿ ಬಿಲ್ ನಲ್ಲಿ ಸಬ್ಸಿಡಿ ನೀಡಲಾಗುತ್ತೆ. ಜೊತೆಗೆ ಮನೆ ತೆರಿಗೆ, ಗೃಹ ಸಾಲದಲ್ಲೂ ಸಬ್ಸಿಡಿ ನೀಡಲಾಗುತ್ತೆ. ಈ ಕರಡು ಮಸೂದೆಯು ವಾಸೆಕ್ಟಮಿ ಮತ್ತು ಸ್ಟೈರಿಲೈಜೇಷನ್ ಅನ್ನು ಉತ್ತೇಜಿಸುತ್ತೆ ಎಂದು ಉತ್ತರ ಪ್ರದೇಶದ ಕಾನೂನು ಆಯೋಗದ ಅಧ್ಯಕ್ಷ ಜಸ್ಟೀಸ್ ಎ.ಎನ್. ಮಿತ್ತಲ್ ಹೇಳಿದ್ದಾರೆ.

ಈ ಕರಡು ಪ್ರತಿಯನ್ನು ಉತ್ತರ ಪ್ರದೇಶದ ಕಾನೂನು ಆಯೋಗದ ವೆಬ್ ಸೈಟ್ ಗೆ ಅಪ್ ಲೋಡ್ ಮಾಡಲಾಗಿದೆ. ಉತ್ತರ ಪ್ರದೇಶ ಜನಸಂಖ್ಯೆ (ನಿಯಂತ್ರಣ, ಸ್ಥಿರತೆ, ಕಲ್ಯಾಣ) ಮಸೂದೆ 2021 ರ ಬಗ್ಗೆ ಜನರು ತಮ್ಮ ಸಲಹೆ, ಅಭಿಪ್ರಾಯ, ಆಕ್ಷೇಪಣೆಯನ್ನು ಜುಲೈ 19ರವರೆಗೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಆದರೆ ಬಹುಪತ್ನಿತ್ವ, ಬಹುಪತಿತ್ವ ಪಾಲಿಸುವವರಿಗೆ ಯಾವುದೇ ವಿನಾಯಿತಿ ಇಲ್ಲ. ಈ ಕರಡು ಪ್ರತಿಯನ್ನು ಪ್ರಶ್ನಿಸುವವರು, ತಿಳಿದುಕೊಳ್ಳಬೇಕಾದ್ದು ಏನೆಂದರೆ, ಜನರ ತೆರಿಗೆ ಹಣವನ್ನು ಎರಡಕ್ಕಿಂತ ಹೆಚ್ಚಿನ ಮಕ್ಕಳು ಹೊಂದಿರುವವರ ಮೇಲೆ ಹೂಡಿಕೆ ಮಾಡಲು ಸಾಧ್ಯವಿಲ್ಲ ಎಂದು ಜಸ್ಟೀಸ್ ಎ.ಎನ್.ಮಿತ್ತಲ್ ಹೇಳಿದ್ದಾರೆ.

ನಾಳೆ (ಜುಲೈ 11ರ ಭಾನುವಾರ) ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ 2021-2030 ರವರೆಗಿನ ಜನಸಂಖ್ಯಾ ನೀತಿಯನ್ನು ಬಿಡುಗಡೆ ಮಾಡಲಿದ್ದಾರೆ. ಅದಕ್ಕೂ ಮುನ್ನ ಜನಸಂಖ್ಯಾ ನಿಯಂತ್ರಣದ ಕರಡು ಪ್ರತಿ ಬಿಡುಗಡೆ ಆಗಿದೆ. ಮಸೂದೆ ಅಂಗೀಕಾರವಾಗಿ ಗೆಜೆಟ್ ನಲ್ಲಿ ಪ್ರಕಟವಾದ ಒಂದು ವರ್ಷದ ಬಳಿಕ ಜಾರಿಯಾಗಲಿದೆ ಎಂದು ಮಸೂದೆಯಲ್ಲಿ ಹೇಳಲಾಗಿದೆ.

ಒಂದೇ ಮಗು ಹೊಂದಿದವರಿಗೆ ಉಚಿತ ಹೆಲ್ತ್ ಕೇರ್ ಸೌಲಭ್ಯ ನೀಡಲಾಗುತ್ತೆ. ಒಂದೇ ಮಗು ಇದ್ದವರಿಗೆ 20 ವರ್ಷದವರಿಗೆ ವಿಮಾ ಸೌಲಭ್ಯವನ್ನು ನೀಡಲಾಗುತ್ತೆ. ಒಂದು ಮಗು ಇದ್ದರೆ ಐಐಟಿ, ಐಐಎಂ, ಏಮ್ಸ್ ಸೇರಿದಂತೆ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲೂ ದಾಖಲಾತಿಯಲ್ಲಿ ಆದ್ಯತೆ ನೀಡಲಾಗುತ್ತೆ. ಪದವಿವರೆಗೂ ಉಚಿತ ಶಿಕ್ಷಣ ನೀಡಲಾಗುತ್ತೆ. ಒಂದೇ ಹೆಣ್ಣು ಮಗು ಇದ್ದರೆ ಉನ್ನತ ಶಿಕ್ಷಣಕ್ಕೆ ಸ್ಕಾಲರ್ ಶಿಪ್ ನೀಡಲಾಗುತ್ತೆ. ಸರ್ಕಾರದ ಉದ್ಯೋಗದಲ್ಲೂ ಒಂದೇ ಮಗು ಇದ್ದವರಿಗೆ ಆದ್ಯತೆ ನೀಡಲಾಗುತ್ತೆ.

(ಲೇಖನ: ಎಸ್.​ ಚಂದ್ರಮೋಹನ್​, ಹಿರಿಯ ವರದಿಗಾರ, ಟಿವಿ9)

ಸರ್ಕಾರಿ ಉದ್ಯೋಗಿಗಳು 2 ಮಕ್ಕಳ ನೀತಿ ಪಾಲಿಸಿದರೆ 12 ತಿಂಗಳವರೆಗೆ ಮಾತೃತ್ವ ರಜೆ, ಪಿತೃತ್ವ ರಜೆಯನ್ನು ಸಂಬಳ ಸಹಿತ ನೀಡಲಾಗುತ್ತೆ. ಸರ್ಕಾರಿ ಉದ್ಯೋಗಿಯ ಪತಿ ಅಥವಾ ಪತ್ನಿಗೂ ವಿಮಾ ಸೌಲಭ್ಯ ನೀಡಲಾಗುತ್ತೆ. ಸರ್ಕಾರಿ ಉದ್ಯೋಗಿಯು ಒಂದೇ ಮಗು ನೀತಿ ಆಳವಡಿಸಿಕೊಂಡರೇ, ಹೆಚ್ಚುವರಿಯಾಗಿ ನಾಲ್ಕು ಇನ್ ಕ್ರಿಮೆಂಟ್ ಅನ್ನು ಪಡೆಯಲು ಅರ್ಹರು.

ಇನ್ನು ಬಡತನ ರೇಖೆಯ ಕೆಳಗಿರುವವರು ಒಂದು ಮಗು ಮಾತ್ರ ಪಡೆದರೆ ಸರ್ಕಾರದಿಂದ 80 ಸಾವಿರ ರೂಪಾಯಿ ನೀಡಲಾಗುತ್ತೆ. ಒಂದು ಹೆಣ್ಣು ಮಗು ಮಾತ್ರ ಹುಟ್ಟಿದ್ದರೆ, ಅಂಥವರಿಗೆ 1 ಲಕ್ಷ ರೂಪಾಯಿ ಹಣವನ್ನು ಸರ್ಕಾರ ಒಮ್ಮೆಲ್ಲೇ ನೀಡಲಿದೆ.

ಜನರ ತೆರಿಗೆ ಹಣವನ್ನು ಎರಡಕ್ಕಿಂತ ಹೆಚ್ಚು ಮಕ್ಕಳು ಹೊಂದಿರುವವರ ಮೇಲೆ ಹೂಡಿಕೆ ಮಾಡಲು ಸಾಧ್ಯವಿಲ್ಲ:
ಈ ಕಾಯಿದೆ ಜಾರಿಯಾದ ಬಳಿಕ ಉತ್ತರ ಪ್ರದೇಶ ರಾಜ್ಯ ಸರ್ಕಾರದ ಉದ್ಯೋಗಿಗಳು 2 ಕ್ಕಿಂತ ಹೆಚ್ಚಿನ ಮಕ್ಕಳನ್ನು ಹೊಂದಿದ್ದರೆ, ಈ ಕಾಯಿದೆಗೆ ವಿರುದ್ಧವಾಗಿ ಹೆಚ್ಚಿನ ಮಕ್ಕಳನ್ನು ಹೊಂದಲ್ಲ ಎಂದು ಸರ್ಕಾರಕ್ಕೆ ಮುಚ್ಚಳಿಕೆ ಬರೆದುಕೊಡಬೇಕು.

ಒಂದು ವೇಳೆ ಕಾಯಿದೆ ಜಾರಿಯಾದ ಬಳಿಕ ರಾಜ್ಯ ಸರ್ಕಾರದ ಯಾವುದೇ ಉದ್ಯೋಗಿ ಕಾಯಿದೆಯನ್ನು ಉಲಂಘಿಸಿದರೇ, ಅಂಥ ಉದ್ಯೋಗಿಯನ್ನು ತಕ್ಷಣದಿಂದಲೇ ಸೇವೆಯಿಂದ ವಜಾ ಮಾಡಲಾಗುತ್ತೆ. ಭವಿಷ್ಯದಲ್ಲಿ ಸರ್ಕಾರದ ಯಾವುದೇ ಉದ್ಯೋಗಕ್ಕೆ ಅರ್ಜಿ ಸಲ್ಲಿಸದಂತೆ ನಿರ್ಬಂಧ ವಿಧಿಸಲಾಗುತ್ತೆ ಎಂದು ಈ ಜನಸಂಖ್ಯಾ ನಿಯಂತ್ರಣ ಕರಡು ಪ್ರತಿಯಲ್ಲಿ ವಿವರಿಸಲಾಗಿದೆ.

ಅವಳಿ-ಜವಳಿ ಮಕ್ಕಳು ಆದರೆ, ಮಗುವನ್ನು ದತ್ತು ಪಡೆದರೆ, ಮಗು ಮೃತಪಟ್ಟರೆ ಜನಸಂಖ್ಯಾ ನೀತಿ ಹೇಗೆ ಅನ್ವಯ?
ಇನ್ನು ಈಗಾಗಲೇ ಒಂದು ಮಗು ಇದ್ದು, ಎರಡನೇ ಭಾರಿ ಗರ್ಣಿಣಿಯಾದಾಗ, ಅವಳಿ-ಜವಳಿ ಮಕ್ಕಳು ಹುಟ್ಟಬಹುದು. ಅದನ್ನು ಕಾಯಿದೆಯ ಉಲಂಘನೆ ಎಂದು ಪರಿಗಣಿಸಲ್ಲ. ಜೊತೆಗೆ ಮೂರನೇ ಮಗುವನ್ನು ದತ್ತು ಪಡೆದರೆ, ಅಂಥವರಿಗೂ ಈ ಕಾಯಿದೆ ಅನ್ವಯಿಸಲ್ಲ. ಇನ್ನು ಇಬ್ಬರು ಮಕ್ಕಳಲ್ಲಿ ಒಬ್ಬರು ಅಂಗವೈಕಲ್ಯ ಹೊಂದಿದ್ದು, ಮೂರನೇ ಮಗು ಪಡೆದರೇ, ಅಂಥವರಿಗೂ ಕಾಯಿದೆ ಅನ್ವಯಿಸಲ್ಲ. ಒಂದು ಅಥವಾ 2ನೇ ಮಗು ಸಾವನ್ನಪ್ಪಿದ್ದಾಗ, ಮೂರನೇ ಮಗು ಹುಟ್ಟಿದರೇ, ಅದನ್ನು ಕಾಯಿದೆಯ ಉಲಂಘನೆ ಅಂತ ಪರಿಗಣಿಸಲ್ಲ.

ಈಗಾಗಲೇ ಮದುವೆಯಾಗಿರುವ ದಂಪತಿ 2 ಮಕ್ಕಳನ್ನು ಹೊಂದಿದ್ದು, ಕಾಯಿದೆ ಜಾರಿಯಾದ ಒಂದು ವರ್ಷದೊಳಗೆ 3ನೇ ಮಗು ಪಡೆದಾಗ, ಅದು ಕಾಯಿದೆಯ ಉಲಂಘನೆಯಲ್ಲ. ಉತ್ತರ ಪ್ರದೇಶ ಜನಸಂಖ್ಯಾ ನೀತಿಯ ಜಾರಿಗೆ ಜನಸಂಖ್ಯಾ ನಿಧಿಯನ್ನು ಸ್ಥಾಪಿಸಲಾಗುತ್ತೆ. ಈ ನಿಧಿಯ ಮೂಲಕ ಪ್ರಗ್ನೆನ್ಸಿ, ಮಕ್ಕಳ ಡೆಲಿವರಿ, ಜನನ, ಮರಣವನ್ನು ಕಡ್ಡಾಯವಾಗಿ ರಿಜಿಸ್ಟ್ರೇಷನ್ ಮಾಡಲಾಗುತ್ತೆ. ಪ್ರೌಢಶಾಲೆಗಳಲ್ಲಿ ಜನಸಂಖ್ಯಾ ನಿಯಂತ್ರಣದ ಬಗ್ಗೆ ಕಡ್ಡಾಯ ಪಠ್ಯ ಆಳವಡಿಸಲಾಗುತ್ತೆ.

ಉತ್ತರ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆಗೆ ಇನ್ನೂ ಆರೇಳು ತಿಂಗಳು ಬಾಕಿ ಇರುವಾಗ ಜನಸಂಖ್ಯಾ ನಿಯಂತ್ರಣ ಕರಡು ಮಸೂದೆ ಸಿದ್ದಪಡಿಸಿ ಅಂಗೀಕರಿಸಲು ಹೊರಟಿರೋದು ರಾಜಕೀಯವಾಗಿಯೂ ಚರ್ಚೆಗೆ ಕಾರಣವಾಗಿದೆ. ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡು, ಚುನಾವಣೆ ಮೇಲೆ ಕಣ್ಣಿಟ್ಟು, ಈ ಮಸೂದೆ ಸಿದ್ದಪಡಿಸಲಾಗಿದೆ ಎಂಬ ಟೀಕೆಯನ್ನು ವಿಪಕ್ಷಗಳು ಮಾಡುತ್ತಿವೆ. ಕೇವಲ ಉತ್ತರ ಪ್ರದೇಶದಲ್ಲಿ ಮಾತ್ರ ಏಕೆ ಜನಸಂಖ್ಯಾ ನಿಯಂತ್ರಣ ಮಸೂದೆ ಜಾರಿಗೆ ತರಬೇಕು, ಇಡೀ ದೇಶದಲ್ಲಿ ಜನಸಂಖ್ಯಾ ನಿಯಂತ್ರಣ ಮಸೂದೆ ಜಾರಿಗೆ ತರಲಿ. ಇದು ಚುನಾವಣಾ ಗಿಮಿಕ್ ಎಂದು ಕಾಂಗ್ರೆಸ್ ನಾಯಕ ಪಿ.ಎಲ್.ಪೂನಿಯಾ ಹೇಳಿದ್ದಾರೆ.

ಅಸ್ಸಾಂ ರಾಜ್ಯ ಅನುಸರಿಸಿದ ಯುಪಿ
ಕಳೆದ ತಿಂಗಳು ಅಸ್ಸಾಂ ಸಿಎಂ ಹೀಮಂತ್ ಬಿಸ್ವಾ ಶರ್ಮಾ, ಅಸ್ಸಾಂ ಸರ್ಕಾರ ಹಂತ ಹಂತವಾಗಿ 2 ಮಕ್ಕಳ ನೀತಿಯನ್ನು ಜಾರಿಗೆ ತರಲಿದೆ ಎಂದು ಹೇಳಿದ್ದರು. ಸಾಲ ಮನ್ನಾ ಯೋಜನೆಯಾಗಲೀ, ಬೇರೆ ಯಾವುದೇ ಸರ್ಕಾರಿ ಯೋಜನೆಯಾಗಲೀ, ಜನಸಂಖ್ಯಾ ನೀತಿಯನ್ನು ಈ ಯೋಜನೆಗಳಿಗೆ ಆಳವಡಿಸಲಾಗುತ್ತೆ ಎಂದು ಹೀಮಂತ್ ಬಿಸ್ವಾ ಶರ್ಮಾ ಹೇಳಿದ್ದರು.

ಜನಸಂಖ್ಯಾ ನಿಯಮಗಳು ಟೀ ಗಾರ್ಡನ್ ಕಾರ್ಮಿಕರರಿಗೆ, ಎಸ್ಸಿ, ಎಸ್‌.ಟಿ. ಸಮುದಾಯಕ್ಕೆ ಅನ್ವಯವಾಗಲ್ಲ ಎಂದೂ ಅಸ್ಸಾಂ ಸಿಎಂ ಹೀಮಂತ್ ಬಿಸ್ವಾ ಶರ್ಮಾ ಹೇಳಿದ್ದರು. ಈಗ ಯುಪಿ ಸರ್ಕಾರವು ಅಸ್ಸಾಂ ಸರ್ಕಾರದ ಹಾದಿಯಲ್ಲೇ ಜನಸಂಖ್ಯೆ ನಿಯಂತ್ರಣಕ್ಕೆ 2 ಮಕ್ಕಳ ನೀತಿಯನ್ನು ಜಾರಿಗೆ ತರಲು ಅಧಿಕೃತ ಹೆಜ್ಜೆಗಳನ್ನು ಇಟ್ಟಿದೆ.

ಇದನ್ನೂ ಓದಿ:

Population control: ಹೆಚ್ಚು ಜನಸಂಖ್ಯೆಯ ಉತ್ತರ ಪ್ರದೇಶದಲ್ಲಿ ಕಡಿಮೆ ಮಕ್ಕಳ ಹೊಂದಿದವರಿಗೆ ಮಾತ್ರವೇ ಸರ್ಕಾರಿ ಸೌಲಭ್ಯ ಪ್ರಾಪ್ತಿ!

(Population Control Draft Bill to be introduced on World Population Day tomorrow in Uttar Pradesh in Key Points)