ಆಯುರ್ವೇದ ಕ್ಷೇತ್ರದ ದಿಗ್ಗಜ ವೈದ್ಯ, ಶತಾಯುಷಿ ಪಿ.ಕೆ.ವಾರಿಯರ್​ ಇನ್ನಿಲ್ಲ; ದೇಶದ ಹಲವು ವಿವಿಐಪಿಗಳಿಗೆ ಚಿಕಿತ್ಸೆ ನೀಡಿದ್ದರು

P.K.Warrier: ಪಿ.ಕೆ.ವಾರಿಯರ್ 1999ರಲ್ಲಿ ಪದ್ಮಶ್ರೀ ಪ್ರಶಸ್ತಿ ಮತ್ತು 2010ರಲ್ಲಿ ಪದ್ಮ ಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ. 1999ರಲ್ಲಿ ಕ್ಯಾಲಿಕಟ್​ ವಿಶ್ವವಿದ್ಯಾಲಯದಿಂದ ಡಿ ಲಿಟ್​ ಗೌರವ ಸಂದಿದೆ.

ಆಯುರ್ವೇದ ಕ್ಷೇತ್ರದ ದಿಗ್ಗಜ ವೈದ್ಯ, ಶತಾಯುಷಿ ಪಿ.ಕೆ.ವಾರಿಯರ್​ ಇನ್ನಿಲ್ಲ; ದೇಶದ ಹಲವು ವಿವಿಐಪಿಗಳಿಗೆ ಚಿಕಿತ್ಸೆ ನೀಡಿದ್ದರು
ಪಿ.ಕೆ.ವಾರಿಯರ್​
Follow us
TV9 Web
| Updated By: Lakshmi Hegde

Updated on:Jul 10, 2021 | 4:05 PM

ಆಯುರ್ವೇದ ಕ್ಷೇತ್ರದ ವರಿಷ್ಠ, ವಿಶ್ವದಾದ್ಯಂತ ಹೆಸರು ಮಾಡಿದ್ದ ಆರ್ಯವೈದ್ಯ ಪಿ.ಕೆ.ವಾರಿಯರ್ (ಪನ್ನಿಯಂಪಿಲ್ಲಿ ಕೃಷ್ಣಂಕುಟಿ ವಾರಿಯರ್- P.K. Warrier​) ನಿಧನರಾದರು. ಅವರಿಗೆ 100 ವರ್ಷ ವಯಸ್ಸಾಗಿತ್ತು. ಇಂದು ಕೇರಳದ ಕೊಟ್ಟಕಲ್​​ನಲ್ಲಿರುವ ವೈದ್ಯರತ್ನ ಪಿ.ಎಸ್​. ವಾರಿಯರ್ಸ್​ ಅವರ ಆರ್ಯ ವೈದ್ಯ ಶಾಲೆ (Arya vaidya sala)ಯ ಪ್ರಧಾನ ಕಚೇರಿಯಾದ ಕೈಲಾಸ ಮಂದಿರಂನಲ್ಲಿ ಕೊನೆಯುಸಿರೆಳೆದಿದ್ದಾರೆ. 1921ರ ಜೂನ್​ 5ರಂದು ಜನಿಸಿದ್ದ ಪಿ.ಕೆ.ವಾರಿಯರ್ಸ್​ ಇಂದು 2021ರ ಜುಲೈ 10ರಂದು ನಿಧನರಾಗಿದ್ದಾರೆ. ಕೆಲವೇ ದಿನಗಳ ಹಿಂದೆ ಆರ್ಯ ವೈದ್ಯ ಶಾಲೆವತಿಯಿಂದ ಅವರ 100ನೇ ವರ್ಷದ ಜನ್ಮದಿನವನ್ನು ಸಂಭ್ರಮದಿಂದ ಆಚರಿಸಲಾಗಿತ್ತು.

ಆಯುರ್ವೇದ ಲೋಕದಲ್ಲಿ ದಿಗ್ಗಜರೆನಿಸಿಕೊಂಡಿದ್ದ ಡಾ. ಪಿ.ಕೆ.ವಾರಿಯರ್ ಮೂಲತಃ ಕೇರಳದ ಮಲ್ಲಪುರಂನ ಕೊಟ್ಟಕಲ್​ನವರು. ಆರ್ಯ ವೈದ್ಯ ಶಾಲೆಯ ಸಂಸ್ಥಾಪಕರಾದ ವೈದ್ಯರತ್ನ ಪಿ.ಎಸ್. ವಾರಿಯರ್ ಅವರ ಹತ್ತಿರದ ಸಂಬಂಧಿ. 1954ರಿಂದಲೂ ಆರ್ಯ ವೈದ್ಯ ಶಾಲೆಯ ವ್ಯವಸ್ಥಾಪಕ ಟ್ರಸ್ಟಿ ಆಗಿದ್ದಾರೆ. ಶತಮಾನಗಳಷ್ಟು ಹಳೆಯಾದದ ಈ ಆರ್ಯವೈದ್ಯ ಶಾಲೆಯ ಖ್ಯಾತಿಯನ್ನು ಉತ್ತುಂಗಕ್ಕೆ ಏರಿಸುವಲ್ಲಿ ಇವರು ತುಂಬ ಪ್ರಮುಖ ಪಾತ್ರ ವಹಿಸಿದ್ದಾರೆ.

ಸ್ವಾತಂತ್ರ್ಯ ಹೋರಾಟಗಾರರೂ ಆಗಿದ್ದ ಡಾ. ವಾರಿಯರ್ ತಮ್ಮ ಏಳು ದಶಕಗಳ ಸೇವೆಯಲ್ಲಿ​ ಆಯುರ್ವೇದಕ್ಕೆ ಒಂದು ಹೊಸ ಆಯಾಮವನ್ನು ಕೊಟ್ಟಿದ್ದಾರೆ. ಆಯುರ್ವೇದವೆಂದರೆ ಮನುಷ್ಯನ ದೇಹ ಮತ್ತು ಮನಸು ಎರಡನ್ನೂ ಪರಿಗಣಿಸಿ, ಸಮಗ್ರವಾಗಿ ತಪಾಸಣೆ ಮಾಡುವ ವಿಧಾನ ಎಂದು ಅವರು ಹೇಳಿದ್ದರು. ಇವರು ಬರೆದ ಸ್ಮೃತಿ ಪರ್ವಮ್​ ಆತ್ಮಚರಿತ್ರೆಗೆ 2009ರಲ್ಲಿ ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಇದರ ಇಂಗ್ಲಿಷ್ ತರ್ಜುಮೆಯ ಪುಸ್ತಕ ಕೂಡ ತುಂಬ ಖ್ಯಾತಿ ಗಳಿಸಿದೆ. ಅಖಿಲ ಭಾರತೀಯ ಆಯುರ್ವೇದ ಕಾಂಗ್ರೆಸ್​ಗೆ ಎರಡು ಬಾರಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಕೊಟ್ಟಕ್ಕಲ್​ ಆರ್ಯ ವೈದ್ಯ ಶಾಲಾದ ಮುಖ್ಯ ವೈದ್ಯರಾಗಿದ್ದ ಪಿ.ಕೆ.ವಾರಿಯರ್​, ರಾಷ್ಟ್ರಪತಿಗಳು, ಪ್ರಧಾನಮಂತ್ರಿಗಳು ಸೇರಿ ದೇಶದ ಹಲವು ವಿವಿಐಪಿಗಳಿಗೆ ಚಿಕಿತ್ಸೆಯನ್ನೂ ನೀಡಿದ್ದಾರೆ.

ಪಿ.ಕೆ.ವಾರಿಯರ್ 1999ರಲ್ಲಿ ಪದ್ಮಶ್ರೀ ಪ್ರಶಸ್ತಿ ಮತ್ತು 2010ರಲ್ಲಿ ಪದ್ಮ ಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ. 1999ರಲ್ಲಿ ಕ್ಯಾಲಿಕಟ್​ ವಿಶ್ವವಿದ್ಯಾಲಯದಿಂದ ಡಿ ಲಿಟ್​ ಗೌರವ ಸಂದಿದೆ. ಕೋಪನ್​ಹೇಗನ್​ ಯೂನಿವರ್ಸಿಟಿಯಿಂದ ಡಾಕ್ಟರ್ ಆಫ್​ ಮೆಡಿಸಿನ್ ಪ್ರಶಸ್ತಿ ಲಭಿಸಿದೆ. ಕೆಲವು ವರ್ಷಗಳ ಹಿಂದೆ ಪಿ.ಕೆ.ವಾರಿಯರ್​ ಅವರ ಪತ್ನಿ ಮಾಧವಿಕುಟ್ಟಿ ಮತ್ತು ಮಗ ವಿಜಯನ್​ ವಾರಿಯರ್​ ಮೃತಪಟ್ಟಿದ್ದಾರೆ. ಇನ್ನೊಬ್ಬ ಪುತ್ರ ಬಾಲಚಂದ್ರ ವಾರಿಯರ್ ಮತ್ತು ಮಗಳು ಸುಭದ್ರಾ ರಾಮಚಂದ್ರನ್​ರೊಂದಿಗೆ ವಾಸವಾಗಿದ್ದರು.

ಇದನ್ನೂ ಓದಿ: ವಿಶ್ವ ಸಂಸ್ಥೆಯ ಕಾರ್ಮಿಕ ಕಾರ್ಡ್ ನೀಡೋದಾಗಿ ಮಹಿಳೆಯರಿಗೆ ವಂಚನೆ‌: ಆರೋಪಿಗೆ ಹಿಗ್ಗಾಮುಗ್ಗಾ ಥಳಿಸಿದ ಸ್ಥಳೀಯರು

Indian Ayurveda practitioner P K Warrier Died In Kottakkal Kerala

Published On - 4:05 pm, Sat, 10 July 21