Power Crisis: ಕಲ್ಲಿದ್ದಲು ಸಾಗಣೆಗಾಗಿ 1100 ಪ್ಯಾಸೆಂಜರ್ ರೈಲುಗಳು ರದ್ದು

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: May 05, 2022 | 11:48 AM

ದೇಶದ ವಿವಿಧೆಡೆ ಶಾಖೋತ್ಪನ್ನ ವಿದ್ಯುತ್ ಘಟಕಗಳಲ್ಲಿ ಕಲ್ಲಿದ್ದಲು ಕೊರತೆಯಿಂದ ಎದುರಾಗಬಹುದಾದ ಸಂಭಾವ್ಯ ಅಪಾಯಗಳನ್ನು ಮನಗಂಡಿರುವ ಭಾರತ ಸರ್ಕಾರವು ಕಲ್ಲಿದ್ದಲು ತುರ್ತು ಸಾಗಣೆಗೆ ಒತ್ತು ನೀಡುತ್ತಿದೆ.

Power Crisis: ಕಲ್ಲಿದ್ದಲು ಸಾಗಣೆಗಾಗಿ 1100 ಪ್ಯಾಸೆಂಜರ್ ರೈಲುಗಳು ರದ್ದು
ಕಲ್ಲಿದ್ದಲು ಸಾಗಣೆ ರೈಲು
Follow us on

ದೆಹಲಿ: ದೇಶದ ವಿವಿಧೆಡೆ ಶಾಖೋತ್ಪನ್ನ ವಿದ್ಯುತ್ ಘಟಕಗಳಲ್ಲಿ ಕಲ್ಲಿದ್ದಲು ಕೊರತೆಯಿಂದ ಎದುರಾಗಬಹುದಾದ ಸಂಭಾವ್ಯ ಅಪಾಯಗಳನ್ನು ಮನಗಂಡಿರುವ ಭಾರತ ಸರ್ಕಾರವು ಕಲ್ಲಿದ್ದಲು ತುರ್ತು ಸಾಗಣೆಗೆ ಒತ್ತು ನೀಡುತ್ತಿದೆ. ಈ ಪ್ರಯತ್ನದ ಭಾಗವಾಗಿ ಭಾರತೀಯ ರೈಲ್ವೆ ಮತ್ತಷ್ಟು ಪ್ಯಾಸೆಂಜರ್ ರೈಲುಗಳನ್ನು ರದ್ದುಪಡಿಸಿದ್ದು, ಹಳಿ ಮತ್ತು ಇತರ ರೈಲ್ವೆ ಸೌಕರ್ಯಗಳನ್ನು ಕಲ್ಲಿದ್ದಲು ಸಾಗಣೆಗೆ ಮೀಸಲಿಡಲು ಮುಂದಾಗಿದೆ. ಮೇ 24ರವರೆಗೆ ಒಟ್ಟು 1,100 ಪ್ಯಾಸೆಂಜರ್ ರೈಲುಗಳನ್ನು ರದ್ದುಪಡಿಸಿರುವುದಾಗಿ ಭಾರತೀಯ ರೈಲ್ವೆ ಹೇಳಿದೆ. ಎಕ್ಸ್​ಪ್ರೆಸ್​ ರೈಲುಗಳ 500, ಪ್ಯಾಸೆಂಜರ್ ರೈಲುಗಳ 580 ಟ್ರಿಪ್​ಗಳನ್ನು ರದ್ದುಪಡಿಸಲಾಗಿದೆ. ಕಳೆದ ಏಪ್ರಿಲ್ 29ರಂದು 240 ರೈಲುಗಳನ್ನು ರದ್ದುಪಡಿಸಿ ರೈಲ್ವೆ ಇಲಾಖೆಯು ಆದೇಶ ಹೊರಡಿಸಿತ್ತು. ಪ್ರಸ್ತುತ ಕಲ್ಲಿದ್ದಲು ಸಾಗಣೆಗೆ ಮೀಸಲಿರುವ ಸುಮಾರು 400 ಕಲ್ಲಿದ್ದಲು ರೈಲುಗಳು ದೇಶಾದ್ಯಂತ ಸಂಚರಿಸುತ್ತಿವೆ.

ಈ ತಿಂಗಳ ಮಧ್ಯದಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಾಗಬಹುದು ಎಂದು ಕೇಂದ್ರ ಸರ್ಕಾರವು ಅಂದಾಜಿಸಿದೆ. ಹೀಗಾಗಿಯೇ ವಿವಿಧ ವಿದ್ಯುತ್ ಉತ್ಪಾದನಾ ಘಟಕಗಳಿಗೆ ಕಲ್ಲಿದ್ದಲು ಸಾಗಣೆ ಪ್ರಮಾಣ ಹೆಚ್ಚಿಸಲು ಒತ್ತು ನೀಡುತ್ತಿದೆ. ದೇಶೀಯ ಕಲ್ಲಿದ್ದಲು ಘಟಕಗಳಲ್ಲಿ ಕಾರ್ಮಿಕರು ಮುಷ್ಕರ ನಡೆಸಿದ್ದು, ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲು ಮುಖ್ಯ ಕಾರಣವಾಯಿತು.

ದೆಹಲಿ, ರಾಜಸ್ತಾನ, ಪಂಜಾಬ್, ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರಗಳಲ್ಲಿ ವಿದ್ಯುತ್ ಕೊರತೆ ಸಮಸ್ಯೆ ತೀವ್ರವಾಗಿದೆ. ಮುಂದಿನ ದಿನಗಳಲ್ಲಿ ಇದೇ ರಾಜ್ಯಗಳಲ್ಲಿ ಬಿಸಿಗಾಳಿ ಬೀಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ವಿದ್ಯುತ್ ಬೇಡಿಕೆ ಹೆಚ್ಚಾಗುವ ನಿರೀಕ್ಷೆಯಿದೆ. ದೇಶದಲ್ಲಿರುವ ಒಟ್ಟು 173 ಶಾಖೋತ್ಪನ್ನ ಘಟಕಗಳ ಪೈಕಿ, 108 ಘಟಕಗಳಲ್ಲಿ ಕಲ್ಲಿದ್ದಲಿನ ತೀವ್ರ ಕೊರತೆ ಎದುರಾಗಿದೆ. ಮುಂದಿನ ಕೆಲವೇ ದಿನಗಳ ಬೇಡಿಕೆ ಪೂರೈಸುವ ಸಾಮರ್ಥ್ಯ ಈ ಘಟಕಗಳಿಗೆ ಇವೆ.

ಇದನ್ನೂ ಓದಿ: ಆರ್ಥಿಕತೆ ಉತ್ತಮವಾಗಿದೆ, ಬಿಸಿಲು ಭಯಂಕರವಾಗಿದೆ; ಹಾಗಾಗಿ ವಿದ್ಯುತ್​ ಬೇಡಿಕೆ ಅಗಾಧವಾಗಿದೆ- ಕಲ್ಲಿದ್ದಲು ಸಚಿವ ಪ್ರಲ್ಹಾದ ಜೋಶಿ

ಇದನ್ನೂ ಓದಿ: ವಿದ್ಯುತ್ ಸ್ಥಾವರದಲ್ಲಿ ಕಲ್ಲಿದ್ದಲು ದಾಸ್ತಾನು ಇಲ್ಲ ಎಂದ ದೆಹಲಿ ಸರ್ಕಾರ; ಎನ್​ಟಿಪಿಸಿ ಹೇಳಿದ್ದೇ ಬೇರೆ

Published On - 11:48 am, Thu, 5 May 22