ಪಣಜಿ: ಇತ್ತೀಚೆಗಷ್ಟೇ 40 ಸದಸ್ಯ ಬಲದ ಗೋವಾ ವಿಧಾನಸಭೆಗೆ (Goa Assembly) ನಡೆದ ಚುನಾವಣೆಯಲ್ಲಿ ಬಿಜೆಪಿ 20 ಸ್ಥಾನಗಳನ್ನು ಗೆಲ್ಲುವ ಮೂಲಕ ಮುನ್ನಡೆ ಸಾಧಿಸಿತ್ತು. ಈ ಹಿನ್ನೆಲೆಯಲ್ಲಿ ಇಂದು ಪ್ರಮೋದ್ ಸಾವಂತ್ (Pramod Sawant) ಅವರು ಎರಡನೇ ಬಾರಿಗೆ ಗೋವಾ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಪ್ರಮೋದ್ ಸಾವಂತ್ ನೇತೃತ್ವದಲ್ಲಿ ಗೋವಾದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ ರಚನೆಯಾಗಿದೆ. ಗೋವಾದ ರಾಜಧಾನಿ ಪಣಜಿ ಬಳಿಯ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಗೋವಾ ರಾಜ್ಯಪಾಲ ಪಿಎಸ್ ಶ್ರೀಧರನ್ ಪಿಳ್ಳೈ ಅವರು 48 ವರ್ಷದ ಪ್ರಮೋದ್ ಸಾವಂತ್ ಅವರಿಗೆ ಪ್ರಮಾಣ ವಚನ ಬೋಧಿಸಿದರು. ಈ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi), ಕೇಂದ್ರ ಸಚಿವ ನಿತಿನ್ ಗಡ್ಕರಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಹಿಮಾಚಲ ಪ್ರದೇಶದ ರಾಜ್ಯಪಾಲ ರಾಜೇಂದ್ರ ಅರ್ಲೇಕರ್, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.
ಪ್ರಮೋದ್ ಸಾವಂತ್ ಕೊಂಕಣಿ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಈ ಮೂಲಕ 2ನೇ ಬಾರಿಗೆ ಗೋವಾದ ಮುಖ್ಯಮಂತ್ರಿಗಳ ಪ್ರಮಾಣವಚನ ಸಮಾರಂಭವು ರಾಜಭವನದ ಹೊರಗೆ ನಡೆದಿದೆ. 2012ರಲ್ಲಿ ಬಿಜೆಪಿ ಸದನದಲ್ಲಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ನಂತರ ರಾಜ್ಯದ ರಾಜಧಾನಿ ಪಣಜಿಯ ಕ್ಯಾಂಪಲ್ ಮೈದಾನದಲ್ಲಿ ಮನೋಹರ್ ಪರಿಕ್ಕರ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಅದಾದ ಬಳಿಕ ಇಂದು ರಾಜಭವನದಿಂದ ಹೊರಗೆ ಪಣಜಿಯ ಶಾಮ ಪ್ರಸಾದ್ ಮುಖರ್ಜಿ ಕ್ರೀಡಾಂಗಣದಲ್ಲಿ ಪ್ರಮೋದ್ ಸಾವಂತ್ ಪ್ರಮಾಣವಚನ ಸ್ವೀಕರಿಸಿದ್ದಾರೆ.
PM Shri @narendramodi attends oath-taking ceremony of Goa CM @DrPramodPSawant at Panaji, Goa. https://t.co/tVLf5ZdkdI
— BJP (@BJP4India) March 28, 2022
ಗೋವಾ ರಾಜ್ಯಪಾಲ ಪಿಎಸ್ ಶ್ರೀಧರನ್ ಪಿಳ್ಳೈ ಮಂಗಳವಾರದಿಂದ ಎರಡು ದಿನಗಳ ಹೊಸ ವಿಧಾನಸಭೆಯ ಅಧಿವೇಶನವನ್ನು ಕರೆದಿದ್ದಾರೆ. ಈ ಸಂದರ್ಭದಲ್ಲಿ ಪ್ರಮೋದ್ ಸಾವಂತ್ ಅವರು ವಿಶ್ವಾಸ ಮತ ಯಾಚಿಸಬೇಕಾಗುತ್ತದೆ ಎಂದು ಅಧಿಕಾರಿಗಳು ಈ ಹಿಂದೆ ತಿಳಿಸಿದ್ದರು. ಈ ಅಧಿವೇಶನದಲ್ಲಿ ಹೊಸ ಸ್ಪೀಕರ್ ಕೂಡ ಆಯ್ಕೆಯಾಗುತ್ತಾರೆ.
ಇತ್ತೀಚೆಗೆ ಮುಕ್ತಾಯಗೊಂಡ ರಾಜ್ಯ ಚುನಾವಣೆಯಲ್ಲಿ ಬಿಜೆಪಿ 20 ಸ್ಥಾನಗಳನ್ನು ಗೆದ್ದುಕೊಂಡಿತ್ತು. 40 ಸದಸ್ಯರ ಸದನದಲ್ಲಿ ಬಹುಮತಕ್ಕೆ ಒಂದು ಸ್ಥಾನ ಕೊರತೆಯಿತ್ತು. ಮಹಾರಾಷ್ಟ್ರವಾದಿ ಗೋಮಾಂತಕ್ ಪಕ್ಷದ (ಎಂಜಿಪಿ) ಮೂವರು ಸ್ವತಂತ್ರ ಶಾಸಕರು ಮತ್ತು ಇಬ್ಬರು ಶಾಸಕರು ಬಿಜೆಪಿಗೆ ಬೆಂಬಲ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಸಂಪೂರ್ಣ ವಿಶ್ವಾಸದಿಂದ ಸರ್ಕಾರ ರಚಿಸಲು ಮುಂದಾಗಿದೆ.
48 ವರ್ಷದ ಪ್ರಮೋದ್ ಸಾವಂತ್ ಉತ್ತರ ಗೋವಾದ ಸಂಖಾಲಿಮ್ ಕ್ಷೇತ್ರದ ಶಾಸಕರಾಗಿದ್ದಾರೆ. 2017ರಲ್ಲಿ ಮನೋಹರ್ ಪರಿಕ್ಕರ್ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ರಚಿಸಿದಾಗ ಅವರು ವಿಧಾನಸಭೆಯ ಸ್ಪೀಕರ್ ಆಗಿ ಆಯ್ಕೆಯಾಗಿದ್ದರು. ಮನೋಹರ್ ಪರಿಕ್ಕರ್ ಅವರ ನಿಧನದ ನಂತರ ಪ್ರಮೋದ್ ಸಾವಂತ್ ಮಾರ್ಚ್ 2019ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಇದೀಗ 2ನೇ ಅವಧಿಗೆ ಅವರು ಪ್ರಮಾಣವಚನ ಸ್ವೀಕರಿಸಿದ್ದಾರೆ.
ಇದನ್ನೂ ಓದಿ: ಮಾರ್ಚ್ 28ರಂದು ಗೋವಾ ಮುಖ್ಯಮಂತ್ರಿಯಾಗಿ ಪ್ರಮೋದ್ ಸಾವಂತ್ ಪ್ರಮಾಣ ವಚನ ಸ್ವೀಕಾರ
ಗೋವಾದಲ್ಲಿ ನಾವೇ ಸರ್ಕಾರ ರಚನೆ ಮಾಡುತ್ತೇವೆ, ರಾಜ್ಯಪಾಲರನ್ನು ಭೇಟಿಯಾಗುತ್ತೇವೆ: ಸಿಎಂ ಪ್ರಮೋದ್ ಸಾವಂತ್
Published On - 12:33 pm, Mon, 28 March 22