ಮೊದಲ ಅಂಧ ಐಎಎಸ್ ಹೆಗ್ಗಳಿಕೆಗೆ ಪಾತ್ರರಾದ ಪ್ರಾಂಜಲ ಮನಸಿನ ಯುವತಿ

|

Updated on: Oct 19, 2019 | 11:17 AM

ತಿರುವನಂತಪುರಂ: ಇವರು ಕೇವಲ ಸಾಮಾನ್ಯ ಮಹಿಳೆ ಅಲ್ಲ. ಇಡೀ ಜಗತ್ತಿಗೆ ಸ್ಫೂರ್ತಿಯೆಂಬ ಬೆಳಕನ್ನು ಹರಡಿರುವ ಮಹಿಳೆ. ಸಾಧನೆಯ ಹಾದಿಯಲ್ಲಿ ಬರುವ ಕಷ್ಟಗಳಿಗೆ ಕುಗ್ಗುವಂತಹವರಿಗೆ ಆಶಾಕಿರಣ. ಐಎಎಸ್ ಎಂಬ ದೊಡ್ಡ ಕನಸು ಹೊತ್ತು ಇಂದು ಸಾಕಾರ ಪಡೆದ ಯುವತಿ ಈ ಪ್ರಾಂಜಲ್ ಪಾಟೀಲ್. ಇವರು ಮೂಲತಃ ಮಹಾರಾಷ್ಟ್ರದ ಉಲ್ಲಾಸನಗರದ ನಿವಾಸಿ. ತಮ್ಮ ಆರನೇ ವಯಸ್ಸಿನಲ್ಲಿ ಶಾಲೆಯಲ್ಲಿ ಓದುತ್ತಿರುವಾಗ ಸಹಪಾಠಿ ಪೆನ್ಸಿಲ್​ನಿಂದ ಕಣ್ಣಿಗೆ ಚುಚ್ಚಿದಾಗ ಇವರ ಜೀವನ ಕಗ್ಗತ್ತಲಾಗತೊಡಗಿತು. ಇದರಿಂದ ಒಂದು ಕಣ್ಣನ್ನು ಕಳೆದುಕೊಂಡ ಪ್ರಾಂಜಲ್ ಪಾಟೀಲ್ ಕೆಲದಿನಗಳ ಬಳಿಕ […]

ಮೊದಲ ಅಂಧ ಐಎಎಸ್ ಹೆಗ್ಗಳಿಕೆಗೆ ಪಾತ್ರರಾದ ಪ್ರಾಂಜಲ ಮನಸಿನ ಯುವತಿ
Follow us on

ತಿರುವನಂತಪುರಂ: ಇವರು ಕೇವಲ ಸಾಮಾನ್ಯ ಮಹಿಳೆ ಅಲ್ಲ. ಇಡೀ ಜಗತ್ತಿಗೆ ಸ್ಫೂರ್ತಿಯೆಂಬ ಬೆಳಕನ್ನು ಹರಡಿರುವ ಮಹಿಳೆ. ಸಾಧನೆಯ ಹಾದಿಯಲ್ಲಿ ಬರುವ ಕಷ್ಟಗಳಿಗೆ ಕುಗ್ಗುವಂತಹವರಿಗೆ ಆಶಾಕಿರಣ. ಐಎಎಸ್ ಎಂಬ ದೊಡ್ಡ ಕನಸು ಹೊತ್ತು ಇಂದು ಸಾಕಾರ ಪಡೆದ ಯುವತಿ ಈ ಪ್ರಾಂಜಲ್ ಪಾಟೀಲ್.

ಇವರು ಮೂಲತಃ ಮಹಾರಾಷ್ಟ್ರದ ಉಲ್ಲಾಸನಗರದ ನಿವಾಸಿ. ತಮ್ಮ ಆರನೇ ವಯಸ್ಸಿನಲ್ಲಿ ಶಾಲೆಯಲ್ಲಿ ಓದುತ್ತಿರುವಾಗ ಸಹಪಾಠಿ ಪೆನ್ಸಿಲ್​ನಿಂದ ಕಣ್ಣಿಗೆ ಚುಚ್ಚಿದಾಗ ಇವರ ಜೀವನ ಕಗ್ಗತ್ತಲಾಗತೊಡಗಿತು. ಇದರಿಂದ ಒಂದು ಕಣ್ಣನ್ನು ಕಳೆದುಕೊಂಡ ಪ್ರಾಂಜಲ್ ಪಾಟೀಲ್ ಕೆಲದಿನಗಳ ಬಳಿಕ ತನ್ನ ಎರಡೂ ಕಣ್ಣಿನ ದೃಷ್ಟಿ ಕಳೆದುಕೊಂಡರು. ಈಗ 30 ವರ್ಷದವರಾಗಿರುವ ಪ್ರಾಂಜಲ್ ದೃಷ್ಟಿಹೀನರಾದರೂ ಎದೆಗುಂದದೆ ಸದೃಢ ಮನಸ್ಸಿನಿಂದ ಎಲ್ಲ ಅಡೆತಡೆಗಳನ್ನು ನಿಭಾಯಿಸಿ ಮುಂದೆ ಬಂದಿದ್ದಾರೆ.

ಪ್ರಾಂಜಲ್ ಪಾಟೀಲ್ ಅಂಧರಿಗಾಗಿ ಇದ್ದ ಕಮಲಾ ಮೆಹ್ತಾ ದಾದರ್ ಶಾಲೆಯಲ್ಲಿ ಓದಿ, ಸೇಂಟ್ ಝೇವಿಯರ್ಸ್ ಕಾಲೇಜಿನಲ್ಲಿ ರಾಜಕೀಯ ಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ. ಜವಾಹರ್ ಲಾಲ್ ನೆಹರು (ಜೆಎನ್​ಯು) ಯುನಿವರ್ಸಿಟಿಯಲ್ಲಿ ‘ಅಂತರಾಷ್ಟ್ರೀಯ ಸಂಬಂಧಗಳು’ ಎಂಬ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆದಿದ್ದಾರೆ.

ನಂತರ ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆ ನಡೆಸಿದ ಪ್ರಾಂಜಲ್ ಪಾಟೀಲ್ 2016ರಲ್ಲಿ ತಮ್ಮ ಪ್ರಥಮ ಪ್ರಯತ್ನದಲ್ಲೇ 773ನೇ ಸ್ಥಾನ ಪಡೆದು ಐಆರ್‌ಎಎಸ್‌ ವಿಭಾಗಕ್ಕೆ ಆಯ್ಕೆಯಾಗಿದ್ದರು. ಆದರೆ ಅವರ ಅಂಧತ್ವದ ಕಾರಣದಿಂದ ನೇಮಕಾತಿ ರದ್ದುಗೊಳಿಸಲಾಗುತ್ತೆ. ಪುನಃ ಸಿದ್ಧತೆ ನಡೆಸಿದ ಅವರು ಯಾವುದೇ ಐಎಎಸ್ ತರಬೇತಿ ಶಿಬಿರಗಳಲ್ಲಿ ಭಾಗವಹಿಸದೆ, 2017ರಲ್ಲಿ ನಡೆದ ಯುಪಿಎಸ್‌ಸಿ ಪರೀಕ್ಷೆಯಲ್ಲಿ 124ನೇ ಱಂಕ್‌ ಪಡೆದು ಯಶಸ್ವಿಯಾಗಿದ್ದಾರೆ.

ಅಕ್ಟೋಬರ್‌ 14ರಂದು ಸೋಮವಾರ ಕೇರಳದ ತಿರುವನಂತಪುರಂನಲ್ಲಿ ಉಪ ಜಿಲ್ಲಾಧಿಕಾರಿಯಾಗಿ ಹೊಸ ಜವಾಬ್ದಾರಿ ಸ್ವೀಕರಿಸಿದ ಇವರು, ಭಾರತದ ಮೊದಲ ಅಂಧ ಐಎಎಸ್‌ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಹೊಸ ಹುದ್ದೆಯನ್ನು ಸ್ವೀಕರಿಸಿದ ಪ್ರಾಂಜಲ್ ಪಾಟೀಲ್, ನಾವು ಜೀವನದಲ್ಲಿ ಎಂದಿಗೂ ಸೋಲೊಪ್ಪಿಕೊಳ್ಳಬಾರದು. ನಿರಂತರವಾಗಿ ಶ್ರಮ ಪಟ್ಟರೆ ಕೊನೆಗೊಮ್ಮೆ ಗುರಿಯನ್ನು ತಲುಪಬಹುದು ಎಂದಿದ್ದಾರೆ.

Published On - 7:10 am, Sat, 19 October 19