ನವದೆಹಲಿ: ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಸೇರ್ಪಡೆಯ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡಿದ್ದವು. ಜುಲೈನಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಜೊತೆಗೆ ಚರ್ಚೆ ನಡೆಸಿದ ನಂತರವಂತೂ ಅವರು ಕಾಂಗ್ರೆಸ್ ಸೇರುವುದು ಖಚಿತ ಎನ್ನಲಾಗಿತ್ತು. ಆದರೆ, ಕೆಲವು ದಿನಗಳ ಹಿಂದೆ ಉತ್ತರ ಪ್ರದೇಶದ ಲಖಿಂಪುರ ಖೇರಿ ಹಿಂಸಾಚಾರದ ಘಟನೆಗೆ ಸಂಬಂಧಿಸಿದಂತೆ ಕಾಂಗ್ರೆಸ್ಗೆ ಮುಜುಗರ ಉಂಟಾಗುವಂತೆ ಪ್ರಶಾಂತ್ ಕಿಶೋರ್ ಹೇಳಿಕೆ ನೀಡಿದ್ದೇ ಅವರ ದಾರಿಗೆ ಅಡ್ಡವಾದಂತಾಗಿದೆ.
ನಿನ್ನೆ ಮತ್ತೊಮ್ಮೆ ಲಖಿಂಪುರ ಖೇರಿ ಹಿಂಸಾಚಾರದ ಬಗ್ಗೆ ಟ್ವೀಟ್ ಮಾಡಿರುವ ಪ್ರಶಾಂತ್ ಕಿಶೋರ್ ಗ್ರ್ಯಾಂಡ್ ಓಲ್ಡ್ ಪಾರ್ಟಿ (ಜಿಓಪಿ)ಯನ್ನು ಲಖಿಂಪುರ ಖೇರಿಯಲ್ಲಿ ನಡೆದ ಘಟನೆಯ ಬಳಿಕ ತ್ವರಿತವಾಗಿ ಪುನಶ್ಚೇತನಗೊಳಿಸಬಹುದು ಎಂಬ ನಿರೀಕ್ಷೆಯಲ್ಲಿದ್ದವರಿಗೆ ನಿರಾಸೆ ಉಂಟಾಗಿದೆ. ದುರದೃಷ್ಟವಶಾತ್ ಹಳೆಯ ಪಕ್ಷವಾದ ಕಾಂಗ್ರೆಸ್ನಲ್ಲಿ ಆಳವಾಗಿ ಬೇರೂರಿರುವ ಸಮಸ್ಯೆಗಳಿಗೆ ಮತ್ತು ಪಕ್ಷದ ದೌರ್ಬ್ಯಗಳಿಗೆ ಯಾವುದೇ ತ್ವರಿತ ಪರಿಹಾರಗಳೂ ಇಲ್ಲ ಎಂದು ಪ್ರಶಾಂತ್ ಕಿಶೋರ್ ಟ್ವೀಟ್ ಮಾಡಿದ್ದಾರೆ.
ಉತ್ತರ ಪ್ರದೇಶದಲ್ಲಿ ಉಂಟಾದ ಹಿಂಸಾಚಾರವನ್ನು ವಿಪಕ್ಷವಾಗಿರುವ ಕಾಂಗ್ರೆಸ್ ಬಳಸಿಕೊಂಡು ಸರ್ಕಾರದ ವಿರುದ್ಧ ಸೂಕ್ತ ರೀತಿಯಲ್ಲಿ ಧ್ವನಿಯೆತ್ತಬಹುದಿತ್ತು. ಆದರೆ, ಕಾಂಗ್ರೆಸ್ನಲ್ಲಿ ಇರುವ ದೌರ್ಬಲ್ಯ ಮತ್ತು ಬೇರೂರಿರುವ ಸಮಸ್ಯೆಗಳಿಗೆ ತಕ್ಷಣದ ಪರಿಹಾರಗಳಿಲ್ಲ ಎಂದು ಪ್ರಶಾಂತ್ ಕಿಶೋರ್ ನೀಡಿರುವ ಹೇಳಿಕೆ ಅವರು ಕಾಂಗ್ರೆಸ್ ಸೇರುವುದು ಅನುಮಾನ ಎಂಬುದಕ್ಕೆ ಪುಷ್ಠಿ ನೀಡಿದೆ.
People looking for a quick, spontaneous revival of GOP led opposition based on #LakhimpurKheri incident are setting themselves up for a big disappoinment.
Unfortunately there are no quick fix solutions to the deep-rooted problems and structural weakness of GOP.
— Prashant Kishor (@PrashantKishor) October 8, 2021
ಗೋವಾದ ಕಾಂಗ್ರೆಸ್ ನಾಯಕರಾಗಿದ್ದ ಫೆಲೆರಿಯೋ ಸೆಪ್ಟೆಂಬರ್ನಲ್ಲಿ ಕಾಂಗ್ರೆಸ್ ತೊರೆದು ಟಿಎಂಸಿ ಸೇರಿದ್ದರು. ನನಗೆ ಯಾವ ನಿರ್ಧಾರ ತೆಗೆದುಕೊಳ್ಳಬೇಕೆಂಬ ಗೊಂದಲವಿತ್ತು. ಆಗ ನಾನು ಪ್ರಶಾಂತ್ ಕಿಶೋರ್ ಅವರ ಸಲಹೆಯನ್ನು ಕೇಳಿದ್ದೆ. ಅವರ ಜೊತೆ ಸಾಕಷ್ಟು ಚರ್ಚೆ ನಡೆಸಿದ ನಂತರ ಕಾಂಗ್ರೆಸ್ ತೊರೆದು ಟಿಎಂಸಿಗೆ ಸೇರಲು ನಿರ್ಧರಿಸಿದೆ ಎಂದು ಹೇಳಿದ್ದರು. ಅದಾದ ಬಳಿಕ ಪ್ರಶಾಂತ್ ಕಿಶೋರ್ ನನಗೆ ಟಿಎಂಸಿ ಸೇರಲು ಸಲಹೆ ನೀಡಿರಲಿಲ್ಲ, ಅದು ನನ್ನ ಸ್ವಂತ ನಿರ್ಧಾರ ಎಂದು ಕೂಡ ಹೇಳಿದ್ದರು. ಹಾಗೇ, ಸುಮಾರು 1 ತಿಂಗಳ ಹಿಂದೆ ಕಾಂಗ್ರೆಸ್ ಉನ್ನತ ನಾಯಕರೊಂದಿಗೆ ಪ್ರಶಾಂತ್ ಕಿಶೋರ್ ಭೇಟಿ ಮಾಡಿದಾಗ ಹಲವು ಬೇಡಿಕೆಗಳನ್ನು ಇಟ್ಟಿದ್ದರು ಎನ್ನಲಾಗಿದೆ. ಇದರಿಂದ ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಸೇರ್ಪಡೆಯ ಹಾದಿಗಳು ಮುಚ್ಚಿವೆ ಎನ್ನಲಾಗುತ್ತಿದೆ.
ಮುಂಬರುವ ದಿನಗಳಲ್ಲಿ ಹಲವು ರಾಜ್ಯಗಳ ವಿಧಾನಸಭೆ ಚುನಾವಣೆ ಮತ್ತು ಇದಾದ ನಂತರ ಸಾರ್ವತ್ರಿಕ ಚುನಾವಣೆ ಬರುವ ಹಿನ್ನಲೆಯಲ್ಲಿ ಪಕ್ಷದಲ್ಲಿ ಅವರಿಗೆ ನೀಡುವ ಸ್ಥಾನದ ವಿಚಾರವಾಗಿ ಚರ್ಚೆಗಳನ್ನು ಮಾಡಲಾಗಿದೆ ಎಂದು ಮೂಲಗಳು ಹೇಳಿತ್ತು. 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯ ತಂತ್ರವನ್ನು ಸಿದ್ಧಪಡಿಸುವ ನಿಟ್ಟಿನಲ್ಲಿ ಪ್ರಶಾಂತ್ ಕ್ರಿಶೋರ್ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಕಾಂಗ್ರೆಸ್ ನಿರ್ಧರಿಸಿದೆ ಎನ್ನಲಾಗಿತ್ತು. ಏಪ್ರಿಲ್-ಮೇ ತಿಂಗಳಲ್ಲಿ ನಡೆದ ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ಚುನಾವಣೆಗಳಲ್ಲಿ ಪ್ರಶಾಂತ್ ಕಿಶೋರ್ ತಂತ್ರಗಾರಿಕೆ ರೂಪಿಸುವಲ್ಲಿ ಯಶಸ್ವಿಯಾಗಿದ್ದರು. ಈ ವರ್ಷ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಮತ್ತು ತಮಿಳುನಾಡು ಚುನಾವಣೆಯಲ್ಲಿ ಡಿಎಂಕೆ ಗೆಲ್ಲಲು ಹಾಗೂ ಕಳೆದ ವರ್ಷ ದೆಹಲಿಯಲ್ಲಿ ಆಮ್ ಆದ್ಮಿ ಪಾರ್ಟಿ ಗೆಲ್ಲಲು ಪ್ರಶಾಂತ್ ಕಿಶೋರ್ ಅವರ ತಂತ್ರಗಾರಿಕೆಯೂ ಕಾರಣ.
ಇದನ್ನೂ ಓದಿ: Prashant Kishor: ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಸೇರ್ಪಡೆಗೆ ಹಿನ್ನಡೆಯಾಗಲು ಇದೇ ಕಾರಣ
ಕಾಂಗ್ರೆಸ್ ಪಕ್ಷ ಸೇರಲು ಪ್ರಶಾಂತ್ ಕಿಶೋರ್ ಪ್ಲ್ಯಾನ್?-ರಾಹುಲ್ ಗಾಂಧಿ ಭೇಟಿ ಬೆನ್ನಲ್ಲೇ ಹೊರಬಿತ್ತು ಅಚ್ಚರಿಯ ವಿಚಾರ