ರಾಷ್ಟ್ರಪತಿ ರಾಮನಾಥ ಕೋವಿಂದ್ (President Ram Nath Kovind) ಅವರು ಇಂದಿನಿಂದ ಎರಡು ದಿನಗಳ ಕಾಲ ಲಡಾಖ್ ಮತ್ತು ಜಮ್ಮು-ಕಾಶ್ಮೀರ (Jammu-Kahsmir) ಪ್ರವಾಸ ಹಮ್ಮಿಕೊಂಡಿದ್ದಾರೆ. ಅವರು ಈಗಾಗಲೇ ಲಡಾಖ್ ತಲುಪಲಿದ್ದಾರೆ. ಈ ಬಾರಿಯ ದಸರಾ ಹಬ್ಬವನ್ನು ಅವರು ಲಡಾಖ್ನ ದ್ರಾಸ್ ಪ್ರದೇಶದಲ್ಲಿ, ಭಾರತೀಯ ಸೇನೆ ಜತೆ ಆಚರಿಸಲು ನಿರ್ಧರಿಸಿದ್ದು, ತನ್ನಿಮಿತ್ತ ಇಂದೇ ಅಲ್ಲಿಗೆ ತೆರಳಲಿದ್ದಾರೆ. ವಿಶ್ವದಲ್ಲಿ ತಾಪಮಾನ ಅತ್ಯಂತ ಕೆಳಮಟ್ಟಕ್ಕೆ ಇಳಿಯುವ ಪ್ರದೇಶಗಳಲ್ಲಿ ಈ ದ್ರಾಸ್ ಪ್ರದೇಶವೂ ಒಂದು. ಇಲ್ಲಿ ಕೆಲವೊಮ್ಮೆ ತಾಪಮಾನ -40 ಡಿಗ್ರಿ ಸೆಲ್ಸಿಯಸ್ಗಿಂತಲೂ ಕೆಳಗೆ ಇಳಿಯುತ್ತದೆ. ರಾಷ್ಟ್ರಪತಿಗಳು ಸಾಮಾನ್ಯವಾಗಿ ದಸರಾ ಹಬ್ಬವನ್ನು ದೆಹಲಿಯಲ್ಲಿಯೇ ಆಚರಿಸುವುದು ಸಂಪ್ರದಾಯ. ಆದರೆ ರಾಮನಾಥ ಕೋವಿಂದ್ ಈ ಬಾರಿ ಸಂಪ್ರದಾಯ ಮೀರಲಿದ್ದು, ಭಾರತೀಯ ಸೇನೆಯೊಂದಿಗೆ, ದ್ರಾಸ್ನಲ್ಲಿ ನವರಾತ್ರಿ ವಿಜಯದಶಮಿ ಆಚರಣೆ ನಡೆಸಲಿದ್ದಾರೆ.
ರಾಷ್ಟ್ರಪತಿ ರಾಮನಾಥ ಕೋವಿಂದ್ರ ಲಡಾಖ್ ಮತ್ತು ಜಮ್ಮು-ಕಾಶ್ಮೀರ ಭೇಟಿ ಬಗ್ಗೆ ರಾಷ್ಟ್ರಪತಿ ಭವನ ಪ್ರಕಟಣೆ ಬಿಡುಗಡೆ ಮಾಡಿದೆ. ರಾಮನಾಥ ಕೋವಿಂದ್ ಅವರು ಅಕ್ಟೋಬರ್ 14 ಮತ್ತು 15ರಂದು ಲಡಾಖ್, ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡುತ್ತಾರೆ. ಕಾರ್ಗಿಲ್ ಯುದ್ಧದಲ್ಲಿ ಮಡಿದ ಹುತಾತ್ಮರಿಗೆ ಅಕ್ಟೋಬರ್ 15ರಂದು ರಾಮನಾಥ ಕೋವಿಂದ್ ಶ್ರದ್ಧಾಂಜಲಿ ಸಲ್ಲಿಸುವರು. ಅದಾದ ಬಳಿಕ ಅಲ್ಲಿನ ಸೇನಾ ಅಧಿಕಾರಿಗಳು ಮತ್ತು ಸೈನಿಕರೊಟ್ಟಿಗೆ ಸಂವಾದ ನಡೆಸಲಿದ್ದಾರೆ ಎಂದು ಮಾಹಿತಿ ನೀಡಿದೆ.
ಮೊದಲ ದಿನ ಅಂದರೆ ಇಂದು ರಾಮನಾಥ ಕೋವಿಂದ್ ಅವರು, ಲಡಾಖ್ಗೆ ತೆರಳಲಿದ್ದಾರೆ. ಅಲ್ಲಿ ಲೇಹ್ನ ಸಿಂಧು ಘಾಟ್ನಲ್ಲಿ ಸಿಂಧು ದರ್ಶನ ಪೂಜೆ ನೆರವೇರಿಸಲಿದ್ದಾರೆ. ಈ ಪ್ರದೇಶ ಶೇಯ್ ಎಂಬ ಗ್ರಾಮದ ಬಳಿಯಿದ್ದು, ನೈಸರ್ಗಿಕವಾಗಿ ಅತ್ಯಂತ ಸುಂದರವಾದ ಪ್ರದೇಶವಾಗಿದೆ. ಇಂದು ಸಂಜೆ ರಾಮನಾಥ ಕೋವಿಂದ್ ಜಮ್ಮು-ಕಾಶ್ಮಿರಕ್ಕೆ ತೆರಳಿ ಅಲ್ಲಿ ಭಾರತೀಯ ಸೇನೆಯ ಉತ್ತರ ಕಮಾಂಡ್ನ ಪ್ರಧಾನ ಕಚೇರಿಯಿರುವ ಉಧಾಂಪುರ ಸ್ಟೇಶನ್ನಲ್ಲಿ ಯೋಧರೊಟ್ಟಿಗೆ ಸಂವಾದ ನಡೆಸುವರು.
ಅಕ್ಟೋಬರ್ 15ರಂದು ಅಂದರೆ ವಿಜಯದಶಮಿ ದಿನದಂದು ರಾಷ್ಟ್ರಪತಿಗಳು ಲಡಾಖ್ನ ದ್ರಾಸ್ನಲ್ಲಿರಲಿದ್ದಾರೆ. 1999ರ ಕಾರ್ಗಿಲ್ ಯುದ್ಧದಲ್ಲಿ ಮಡಿದ ಯೋಧರ ಸ್ಮಾರಕಕ್ಕೆ ಗೌರವ ನಮನ ಸಲ್ಲಿಸುವರು. ಈ ದ್ರಾಸ್ನ್ನು ಲಡಾಖ್ನ ಗೇಟ್ವೇ ಎಂದೇ ಕರೆಯಲಾಗುತ್ತದೆ. ಸಮುದ್ರಮಟ್ಟದಿಂದ ಎತ್ತರವಾಗಿರುವ ಈ ಗುಡ್ಡ ಪ್ರದೇಶ ಟ್ರೆಕ್ಕಿಂಗ್ಗೆ ಹೆಸರಾದ ತಾಣ. ಪ್ರವಾಸಿಗರ ಅಚ್ಚುಮೆಚ್ಚಿನ ಪ್ರದೇಶವಾಗಿದೆ. ಹಾಗೇ, ಅತ್ಯಂತ ಮಹತ್ವವಾದ ಸೇನಾ ತಾಣವೂ ಹೌದು. ತುಂಬ ಚಳಿಯಿರುವ ಈ ಜಾಗದಲ್ಲಿ ಭಾರತೀಯ ಯೋಧರು ನಿಂತು ದೇಶ ರಕ್ಷಣೆ ಮಾಡುತ್ತಿದ್ದಾರೆ. ಅಂಥ ಸೈನಿಕರೊಟ್ಟಿಗೆ ರಾಮನಾಥ ಕೋವಿಂದ್ ವಿಜಯದಶಮಿ ಆಚರಿಸಲಿದ್ದಾರೆ.
ಇದನ್ನೂ ಓದಿ: Coronavirus cases in India ಭಾರತದಲ್ಲಿ 18,987 ಹೊಸ ಕೊವಿಡ್ ಪ್ರಕರಣ ಪತ್ತೆ, 246 ಮಂದಿ ಸಾವು
Mysore Palace Ayudha Puja: ಮೈಸೂರಿನಲ್ಲಿ ಆಯುಧ ಪೂಜೆ ಸಂಭ್ರಮ, ರಾಜ ವಂಶಸ್ಥರಿಂದ ಪಟ್ಟದ ಕತ್ತಿ, ಪಲ್ಲಕ್ಕಿ ಪೂಜೆ