ಕೃಷಿ ಕಾಯ್ದೆ ತಿದ್ದುಪಡಿಯಿಂದ ರೈತರಿಗೆ ಅನುಕೂಲವಾಗಲಿದೆ: ಬಜೆಟ್ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ ಭಾಷಣ

ಈ ಕಾಯ್ದೆಗಳನ್ನು ಸದ್ಯ ಸುಪ್ರೀಂಕೋರ್ಟ್ ಸ್ಥಗಿತಗೊಳಿಸಿದೆ. ಹಾಗಾಗಿ, ಸುಪ್ರೀಂಕೋರ್ಟ್ ಆದೇಶವನ್ನು ನಾವು ಗೌರವಿಸುತ್ತೇವೆ ಎಂದು ರಾಮನಾಥ್ ಕೋವಿಂದ್ ಈ ವೇಳೆ ಹೇಳಿದರು.

ಕೃಷಿ ಕಾಯ್ದೆ ತಿದ್ದುಪಡಿಯಿಂದ ರೈತರಿಗೆ ಅನುಕೂಲವಾಗಲಿದೆ: ಬಜೆಟ್ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ ಭಾಷಣ
ರಾಷ್ಟ್ರಪತಿ ರಾಮನಾಥ್ ಕೋವಿಂದ್
Follow us
TV9 Web
| Updated By: ganapathi bhat

Updated on:Apr 06, 2022 | 8:34 PM

ದೆಹಲಿ: ಹೊಸ ವರ್ಷ, ಹೊಸ ದಶಕದ ಮೊದಲ ಅಧಿವೇಶನ ಆರಂಭವಾಗಿದೆ. ಸಂಸತ್‌ನ ಈ ಅಧಿವೇಶನ ಅತ್ಯಂತ ಮಹತ್ವಪೂರ್ಣವಾಗಿದೆ. ಸವಾಲುಗಳನ್ನು ಎದುರಿಸಿ ಭಾರತ ಮುನ್ನಡೆಯುತ್ತಿದೆ. ಭಾರತ ಅಸಾಧ್ಯವಾದುದನ್ನೂ ಸಾಧ್ಯ ಮಾಡಿ ತೋರಿಸಿದೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮಾತನಾಡಿದರು.

ಇಂದಿನಿಂದ (ಜ.29) ಸಂಸತ್​ ಬಜೆಟ್ ಅಧಿವೇಶನ ಆರಂಭಗೊಂಡಿದೆ. ವಿಪಕ್ಷಗಳ ಬಹಿಷ್ಕಾರದ‌ ನಡುವೆ ಜಂಟಿ ಅಧಿವೇಶನ ಆರಂಭವಾಗಿದೆ. ಅಧಿವೇಶನದ ಆರಂಭದಲ್ಲಿ, ಜಂಟಿ ಸದನವನ್ನು ಉದ್ದೇಶಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭಾಷಣ ಮಾಡಿದರು. ಭಾರತದಲ್ಲಿ ಎಲ್ಲಾ ಪರಿಸ್ಥಿತಿಗಳನ್ನು ಯಶಸ್ವಿಯಾಗಿ ನಿಭಾಯಿಸಲಾಗಿದೆ. ಭಾರತ ಹೊಸ ಸಾಮರ್ಥ್ಯದಿಂದ ಕೆಲಸ ಮಾಡುತ್ತಿದೆ. ಕೊವಿಡ್ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದೆ. ಕೇಂದ್ರ ಸರ್ಕಾರ ಎಲ್ಲ ವರ್ಗಗಳ ಕಲ್ಯಾಣಕ್ಕೆ ಕೆಲಸ ಮಾಡುತ್ತಿದೆ ಎಂದು ರಾಮನಾಥ್ ಕೋವಿಂದ್ ತಿಳಿಸಿದರು.

ಕೊವಿಡ್ ಸಂದರ್ಭದಲ್ಲಿ ಸರ್ಕಾರ ಹಲವು ಯೋಜನೆ ನೀಡಿದೆ. ಆರ್ಥಿಕ ಪ್ಯಾಕೇಜ್ ಘೋಷಿಸಲಾಗಿದೆ. ಕೊರೊನಾ ಲಸಿಕೆ ವಿಷಯದಲ್ಲಿ ಭಾರತ ಆತ್ಮನಿರ್ಭರವಾಗಿದೆ. ಜೊತೆಗೆ, ಭಾರತ ವಿದೇಶಗಳಿಗೆ ಕೂಡ ಕೊವಿಡ್ ಲಸಿಕೆ ಪೂರೈಸುತ್ತಿದೆ. ಆತ್ಮ ನಿರ್ಭರತೆಯತ್ತ ನಾವು ಇನ್ನಷ್ಟು ವೇಗವಾಗಿ ಮುನ್ನಡೆಯಬೇಕು ಎಂದು ಕೋವಿಂದ್ ತಿಳಿಸಿದರು. ನಮ್ಮ ಒಂದು ಕೈಯಲ್ಲಿ ಕರ್ತವ್ಯ, ಮತ್ತೊಂದು ಕೈಯಲ್ಲಿ ಯಶಸ್ಸಿದೆ ಎಂದು ನಾವು ಮುಂದೆ ನಡೆಸಬೇಕಾಗಿರುವ ಕರ್ತವ್ಯದ ಬಗ್ಗೆಯೂ ಎಚ್ಚರಿಕೆ ಮಾತುಗಳನ್ನು ಹೇಳಿದರು.

ಸಂಕಷ್ಟದ ಪರಿಸ್ಥಿತಿಯಲ್ಲಿ ಭಾರತ ಮಾನವೀಯತೆ ತೋರಿದೆ. ಜನೌಷಧ ಕೇಂದ್ರಗಳ ಮೂಲಕ ಕಡಿಮೆ ದರದಲ್ಲಿ ಔಷಧ ಒದಗಿಸಲಾಗಿದೆ. ದೇಶದಲ್ಲಿ ಬಡವರಿಗೆ ಉಚಿತವಾಗಿ ಚಿಕಿತ್ಸೆ ಸಿಗುತ್ತಿದೆ ಎಂದು ಆರೋಗ್ಯ ಹಾಗೂ ಔಷಧ ವಲಯಗಳ ಬಗ್ಗೆ ರಾಷ್ಟ್ರಪತಿ ಅಭಿಪ್ರಾಯ ವ್ಯಕ್ತಪಡಿಸಿದರು. ಆಯುಷ್ಮಾನ್ ಭಾರತ್ ಯೋಜನೆಯಿಂದ ಬಡವರಿಗೆ ಸಹಾಯವಾಗಿದೆ. ಆಯುಷ್ಮಾನ್ ಭಾರತ್ ಯೋಜನೆಯನ್ನು 24,000 ಆಸ್ಪತ್ರೆಗಳಲ್ಲಿ ಪಡೆಯಬಹುದಾಗಿದೆ. ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಯೋಜನೆಯಂತೆ 7,000 ಕೇಂದ್ರಗಳಲ್ಲಿ ಔಷಧ ಸೇವೆ ಲಭ್ಯವಾಗುತ್ತಿದೆ. ಬಡವರಿಗೆ 5 ಲಕ್ಷ ರೂ.ವರೆಗೂ ಉಚಿತ ಚಿಕಿತ್ಸೆ ಸಿಗುತ್ತಿದೆ. ದೇಶದಲ್ಲಿ ಈಗ 562 ಮೆಡಿಕಲ್ ಕಾಲೇಜುಗಳಿವೆ ಎಂದು ರಾಮನಾಥ್ ಕೋವಿಂದ್ ಹೇಳಿದರು. ಇದನ್ನೂ ಓದಿ:  ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ರಾಷ್ಟ್ರಪತಿ ಭಾಷಣ ಬಹಿಷ್ಕರಿಸಿದ ಮಾಜಿ ಪ್ರಧಾನಿ ಹೆಚ್​.ಡಿ. ದೇವೇಗೌಡ

ನೂತನ ಕೃಷಿ ಕಾಯ್ದೆ ಹಾಗೂ ರೈತಪರ ಯೋಜನೆಗಳ ಬಗ್ಗೆ ರಾಷ್ಟ್ರಪತಿ ಮಾತು ರೈತರ ಉತ್ಪನ್ನಕ್ಕೆ ಒಂದೂವರೆ ಪಟ್ಟು MSP ನೀಡಲು ನಿರ್ಧಾರ ಮಾಡಲಾಗಿದೆ. ನೀರಾವರಿ ಯೋಜನೆಗಳಲ್ಲಿ ಸುಧಾರಣೆ ಸಾಧ್ಯವಾಗಿದೆ. ದೇಶದಲ್ಲಿ ತರಕಾರಿ, ಹಣ್ಣುಗಳ ಉತ್ಪಾದನೆ ಹೆಚ್ಚಾಗಿದೆ. 6 ರಾಜ್ಯಗಳಲ್ಲಿ ಗರೀಬ್ ಕಲ್ಯಾಣ್ ರೋಜ್‌ಗಾರ್ ಯೋಜನೆ ಜಾರಿಯಲ್ಲಿದೆ ಎಂದು ಗ್ರಾಮೀಣ ಹಾಗೂ ಕೃಷಿ ಜೀವನ ಗುಣಮಟ್ಟದ ಬಗ್ಗೆ ರಾಷ್ಟ್ರಪತಿ ವಿವರಣೆ ನೀಡಿದರು.

ದೇಶದಲ್ಲಿ ಶೇಕಡಾ 80ರಷ್ಟು ಸಣ್ಣರೈತರಿದ್ದಾರೆ. ಸರ್ಕಾರ ಸ್ವಾಮಿನಾಥನ್ ವರದಿಯನ್ನು ಜಾರಿಗೆ ತಂದಿದೆ. 3 ಕೃಷಿ ಕಾಯ್ದೆಗಳನ್ನು ಕೂಡ ತಿದ್ದುಪಡಿ ಮಾಡಿ ಜಾರಿಗೆ ತರಲಾಗಿದೆ. ಇದರಿಂದ ರೈತರಿಗೆ ಅನುಕೂಲವಾಗಲಿದೆ ಎಂದು ಕೋವಿಂದ್ ಅಭಿಪ್ರಾಯಪಟ್ಟರು. ಕೇಂದ್ರದ ಮೂರು ನೂತನ ಕೃಷಿ ಕಾಯ್ದೆಗಳಿಗೆ ಮಾಡಿರುವ ತಿದ್ದುಪಡಿಯಿಂದ, ಈ ಮೊದಲು ನೀಡುತ್ತಿದ್ದ ಸೌಲಭ್ಯಗಳಿಗೆ ಕಡಿವಾಣ ಉಂಟಾಗಿಲ್ಲ. ಬದಲಾಗಿ, ಹೊಸ ಕಾಯ್ದೆಗಳಿಂದ ರೈತರಿಗೆ ಹೆಚ್ಚಿನ ಅನುಕೂಲವೇ ಆಗಲಿದೆ. ಹಲವು ರಾಜಕೀಯ ಪಕ್ಷಗಳು ಈ ಕಾಯ್ದೆಗಳನ್ನು ಬೆಂಬಲಿಸಿವೆ. ಈ ಕಾಯ್ದೆಗಳನ್ನು ಸದ್ಯ ಸುಪ್ರೀಂಕೋರ್ಟ್ ಸ್ಥಗಿತಗೊಳಿಸಿದೆ. ಹಾಗಾಗಿ, ಸುಪ್ರೀಂಕೋರ್ಟ್ ಆದೇಶವನ್ನು ನಾವು ಗೌರವಿಸುತ್ತೇವೆ ಎಂದು ರಾಮನಾಥ್ ಕೋವಿಂದ್ ಈ ವೇಳೆ ಹೇಳಿದರು.

ಸಣ್ಣ ರೈತರಿಗೆ ದೊಡ್ಡ ರೈತರಷ್ಟೇ ಆದಾಯ ಸಿಗುವಂತಾಗಬೇಕು. ಕೃಷಿ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡುತ್ತಿದೆ. 100ಕ್ಕೂ ಹೆಚ್ಚು ಕೃಷಿ ರೈಲುಗಳನ್ನು ಓಡಿಸಲಾಗುತ್ತಿದೆ. ಡೈರಿ ಕ್ಷೇತ್ರದ ಅಭಿವೃದ್ಧಿ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ. ಅನ್ನದಾತರನ್ನು ಇಂಧನದಾತರನ್ನಾಗಿ ಮಾಡಲು ಕೂಡ ಯೋಜನೆ ಇದೆ. ಎಥೆನಾಲ್ ಉತ್ಪಾದನೆಯಿಂದ ರೈತರ ಆದಾಯ ಹೆಚ್ಚಾಗಲಿದೆ. ಗ್ರಾಮಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ ಎಂದು ಕೋವಿಂದ್ ತಿಳಿಸಿದರು.

ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ, 1,13,000 ಕೋಟಿ ರೂ.ಗಳನ್ನು ರೈತರ ಖಾತೆಗೆ ನೇರವಾಗಿ ವರ್ಗಾಯಿಸಲಾಗಿದೆ. ಸಣ್ಣ ಹಾಗೂ ಮಧ್ಯಮ ವರ್ಗದ ರೈತರಿಗೆ ಆದ್ಯತೆ ನೀಡಿ ಸರ್ಕಾರ ಕ್ರಮಗಳನ್ನು ಕೈಗೊಳ್ಳುತ್ತಿದೆ. ಎಲ್ಲ ಮನೆಗಳಿಗೂ ನಲ್ಲಿ ನೀರು ತಲುಪಿಸಲು ಸರ್ಕಾರದ ಕೆಲಸವಾಗುತ್ತಿದೆ. ಏಕಲವ್ಯ ಮಾದರಿ ಶಾಲೆಗಳನ್ನು ಆರಂಭಿಸಲಾಗುತ್ತಿದೆ. ಜಲ ಸಂರಕ್ಷಣೆ ಬಗ್ಗೆಯೂ ಕೇಂದ್ರ ಸರ್ಕಾರ ಒತ್ತು ನೀಡುತ್ತಿದೆ. ಉಮಂಗ್ ಆ್ಯಪ್ ಮೂಲಕ ಹಲವು ಸೇವೆ ಒದಗಿಸಲಾಗುತ್ತಿದೆ ಎಂದು ಹೇಳಿದರು. ಇದನ್ನೂ ಓದಿ: Budget 2021: ಇಂದು ಮಧ್ಯಾಹ್ನ 2.30ಕ್ಕೆ ಮಂಡನೆಯಾಗಲಿದೆ ಆರ್ಥಿಕ ಸಮೀಕ್ಷೆ: ಹಿಂದಿನ ವರ್ಷದಂತೆಯೇ ಸರ್ಕಾರದ ಕೈಹಿಡಿಯಲಿದೆಯೇ ಥಾಲಿನಾಮಿಕ್ಸ್?

ಗಣರಾಜ್ಯೋತ್ಸವ ದಿನ ನಡೆದ ಅಪಮಾನ ದೌರ್ಭಾಗ್ಯಪೂರ್ಣ ಗಣರಾಜ್ಯೋತ್ಸವ ದಿನದ ಅಪಮಾನ ದೌರ್ಭಾಗ್ಯಪೂರ್ಣ. ರಾಷ್ಟ್ರಕ್ಕೆ ಅಥವಾ ರಾಷ್ಟ್ರಧ್ವಜಕ್ಕೆ ಆದ ಅಪಮಾನ ಒಳ್ಳೆಯ ಬೆಳವಣಿಗೆಯಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯ ನೀಡಿದ ಪ್ರಜಾಪ್ರಭುತ್ವವೇ ನಿಯಮ, ಕಾನೂನುಗಳನ್ನು ವಿಧಿಸಿದೆ. ನಾವು ಅದನ್ನು ಕೂಡ ಗಂಭೀರವಾಗಿ ಪರಿಗಣಿಸಿ, ಪಾಲಿಸಬೇಕು ಎಂದು ರೈತರ ಹೋರಾಟ ಅನುಚಿತ ತಿರುವು ಪಡೆದು, ಹಿಂಸಾತ್ಮಕ ರೂಪ ಪಡೆದುಕೊಂಡ ಬಗ್ಗೆ ಬೇಸರ ವ್ಯಕ್ತಪಡಿಸಿದರು.

ಕೇಂದ್ರವು ನೂತನ ಸಂಸತ್ ಭವನ ನಿರ್ಮಾಣ ಯೋಜನೆಗೆ ಕಾರ್ಯಪ್ರವೃತ್ತವಾಗಿದೆ. ಭಾರತ, ಸ್ವಾತಂತ್ರ್ಯ ಪಡೆದು 75ನೇ ವರ್ಷಕ್ಕೆ ಕಾಲಿಡುತ್ತಿರುವ ಈ ಸಂದರ್ಭದಲ್ಲಿ ಈ ಯೋಜನೆ ಆರಂಭವಾಗಿರುವುದು ಸಂತಸದ ವಿಚಾರವಾಗಿದೆ. ಭಾರತವು, ಕೊರೊನಾ ಕಾಲದಲ್ಲಿ ಎದುರಿಸಿದ ಆರ್ಥಿಕ ಹೊಡೆತದಿಂದ ಚೇತರಿಸಿಕೊಳ್ಳುತ್ತಿದೆ. ಹೂಡಿಕೆ ವಿಚಾರದಲ್ಲಿ ಭಾರತವು ಜಾಗತಿಕ ಮಟ್ಟದ ಗಮನ ಸೆಳೆಯುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಈಶಾನ್ಯ ರಾಜ್ಯಗಳಲ್ಲಿ ಇದ್ದ, ತೀವ್ರಗಾಮಿ ಮನಸ್ಥಿತಿ ಕಡಿಮೆಯಾಗುತ್ತಿದೆ. ಹಿಂಸಾತ್ಮಕ ಕೃತ್ಯಗಳು ಕಡಿಮೆಯಾಗಿ, ಯುವಸಮುದಾಯ ಸಾಮಾಜಿಕ ಸ್ಥರದಲ್ಲಿ ಮುಂದೆ ಬಂದು ಸಹಜ ಜೀವನ ನಡೆಸುತ್ತಿದ್ದಾರೆ. ಇದು, ದೇಶದ ಬೆಳವಣಿಗೆ ಹಾಗೂ ಅಭಿವೃದ್ಧಿಗೆ ಪೂರಕವಾಗಿದೆ. ಬೋಡೊ ಶಾಂತಿ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಯಶಸ್ವಿಯಾಗಿ ಕಾರ್ಯರೂಪಕ್ಕೆ ತರಲಾಗಿದೆ ಎಂದು ಮಾತನಾಡಿದರು.

ಗಾಲ್ವಾನ್ ಕಣಿವೆಯಲ್ಲಿ ಮೃತಪಟ್ಟ ಯೋಧರು ಹಾಗೂ ಕೊರೊನಾದಿಂದ ಮೃತರಾದವರಿಗೆ ಸಂತಾಪ ಕಳೆದ ವರ್ಷ ಜೂನ್ ತಿಂಗಳಲ್ಲಿ, ಪೂರ್ವ ಲಡಾಖ್​ನ ಗಾಲ್ವಾನ್ ಕಣಿವೆ ಭಾಗದಲ್ಲಿ ಉಂಟಾದ ಭಾರತ-ಚೀನಾ ಘರ್ಷಣೆಯಿಂದ 20 ವೀರಯೋಧರು ಹುತಾತ್ಮರಾಗಿದ್ದಾರೆ. ಭಾರತ ಸರ್ಕಾರವು, ದೇಶದ ಭದ್ರತೆಯ ಕಾಪಾಡಲು ಬದ್ಧವಾಗಿದೆ. ಭಾರತದ ಸಾರ್ವಭೌಮತೆಯನ್ನು ಕಾಪಾಡಲು, ವಾಸ್ತವ ಗಡಿ ನಿಯಂತ್ರಣಾ ರೇಖೆಯ ಭಾಗದಲ್ಲಿ ಹೆಚ್ಚುವರಿ ಸೈನಿಕರನ್ನು ನಿಯೋಜಿಸಲಾಗಿದೆ ಎಂದು ದೇಶದ ಭದ್ರತೆಯ ಕುರಿತಾಗಿ ಹೇಳಿಕೆ ನೀಡಿದರು.

ಇಂದಿನಿಂದ ನಡೆಯಲಿರುವ ಸಂಸತ್ ಬಜೆಟ್ ಅಧಿವೆಶನದ ಭಾಷಣದ ಆರಂಭದಲ್ಲಿ, ಕೊವಿಡ್‌ನಿಂದ ಮೃತಪಟ್ಟ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹಾಗೂ ಇತರ ಸಂಸದರಿಗೆ ಸಂತಾಪ ಸೂಚಿಸಿದರು.

ಈ ಮೊದಲು, ಸಂಸತ್ ಭವನಕ್ಕೆ ಆಗಮಿಸಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್

Budget 2021 ಇಂದಿನಿಂದ ಸಂಸತ್ ಬಜೆಟ್ ಅಧಿವೇಶನ.. ಸರ್ಕಾರದ ವಿರುದ್ಧ ಮುಗಿಬೀಳಲು ವಿಪಕ್ಷಗಳು ಸಜ್ಜು

Published On - 11:28 am, Fri, 29 January 21