President of India: ಭಾರತದ ರಾಷ್ಟ್ರಪತಿಯ ವೇತನವೆಷ್ಟು? ನಿವಾಸ ಹೇಗಿದೆ? ಬಳಸುವ ಕಾರು ಎಂಥದ್ದು? ಇತ್ಯಾದಿ ವಿವರಗಳು ಇಲ್ಲಿದೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jun 29, 2022 | 12:50 PM

ಭಾರತದ ಮೊದಲ ಪ್ರಜೆ ಎನಿಸುವ ಈ ಮಹತ್ವದ ಸ್ಥಾನ ಅಲಂಕರಿಸಿದರೆ ಸಿಗುವ ಗೌರವ ಮತ್ತು ಮನ್ನಣೆಗಳು ಅಗಣಿತ. ನೀವು ತಿಳಿಯಲು ಬಯಸುವ ಇಂಥ ಹಲವು ವಿವರಗಳು ಇಲ್ಲಿವೆ.

President of India: ಭಾರತದ ರಾಷ್ಟ್ರಪತಿಯ ವೇತನವೆಷ್ಟು? ನಿವಾಸ ಹೇಗಿದೆ? ಬಳಸುವ ಕಾರು ಎಂಥದ್ದು? ಇತ್ಯಾದಿ ವಿವರಗಳು ಇಲ್ಲಿದೆ
ರಾಷ್ಟ್ರಪತಿ ರಾಮನಾಥ್ ಕೋವಿಂದ್
Follow us on

ರಾಷ್ಟ್ರಪತಿ ಸ್ಥಾನದ ಚುನಾವಣೆಗೆ ಈಗಾಗಲೇ ದಿನಾಂಕ ಪ್ರಕಟವಾಗಿದೆ. ಹಾಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಅಧಿಕಾರ ಅವಧಿ ಮುಕ್ತಾಯವಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ಅವಧಿಯ ರಾಷ್ಟ್ರಪತಿ ಹುದ್ದೆಗೆ ಆಡಳಿತಾರೂಢ ಎನ್​ಡಿಎ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು ಮತ್ತು ಪ್ರತಿಪಕ್ಷಗಳ ಸಹಮತದ ಅಭ್ಯರ್ಥಿಯಾಗಿ ಯಶವಂತ್ ಸಿನ್ಹಾ ನಾಮಪತ್ರ ಸಲ್ಲಿಸಿದ್ದಾರೆ. ರಾಷ್ಟ್ರಪತಿ ಸ್ಥಾನದ ಬಗ್ಗೆ ಜನರಲ್ಲಿ ವ್ಯಾಪಕ ಕುತೂಹಲ ವ್ಯಕ್ತವಾಗಿದೆ. ಭಾರತದ ಮೊದಲ ಪ್ರಜೆ ಎನಿಸುವ ಈ ಮಹತ್ವದ ಸ್ಥಾನ ಅಲಂಕರಿಸಿದರೆ ಸಿಗುವ ಗೌರವ ಮತ್ತು ಮನ್ನಣೆಗಳು ಅಗಣಿತ. ಅದರ ಜೊತೆಗೆ ವೇತನ, ವಸತಿ ಮತ್ತು ಪ್ರವಾಸದ ಸೌಕರ್ಯಗಳು ಸಾಕಷ್ಟು ಇರುತ್ತವೆ. ನೀವು ತಿಳಿಯಲು ಬಯಸುವ ಇಂಥ ಹಲವು ವಿವರಗಳು ಮುಂದಿನ ಸಾಲುಗಳಲ್ಲಿವೆ.

ಅರ್ಹತೆ

ಭಾರತದ ಸಂವಿಧಾನವು ರಾಷ್ಟ್ರಪತಿ ಹುದ್ದೆಗೆ ಸ್ಪರ್ಧಿಸುವವರಿಗಾಗಿ ಕೆಲ ಅರ್ಹತೆಗಳನ್ನು ನಿಗದಿಪಡಿಸಿದೆ. ಅದರಂತೆ ರಾಷ್ಟ್ರಪತಿ ಹುದ್ದೆಗೆ ಸ್ಪರ್ಧಿಸುವವರು ಭಾರತದ ಪ್ರಜೆಯಾಗಿರಬೇಕು, 35 ವರ್ಷ ವಯಸ್ಸು ದಾಟಿರಬೇಕು, ಲೋಕಸಭೆಗೆ ಸ್ಪರ್ಧಿಸುವ ಎಲ್ಲ ಅರ್ಹತೆಗಳನ್ನು ಹೊಂದಿರಬೇಕು. ಸರ್ಕಾರಿ ನೌಕರಿಯಲ್ಲಿ ಇರಬಾರದು.

ಸಂಬಳ

ಭಾರತದ ರಾಷ್ಟ್ರಪತಿಗೆ ಪ್ರತಿ ತಿಂಗಳು ಸುಮಾರು ₹ 5 ಲಕ್ಷ ಸಂಬಳ ಸಿಗುತ್ತದೆ. ಭಾರತ ಸರ್ಕಾರದಲ್ಲಿ ಅತಿಹೆಚ್ಚು ಸಂಬಳ ಪಡೆಯುವ ವ್ಯಕ್ತಿ ಅವರು. 2018ರಲ್ಲಿ ರಾಷ್ಟ್ರಪತಿ ವೇತನವನ್ನು ₹ 1.50 ಲಕ್ಷದಿಂದ ₹ 5 ಲಕ್ಷಕ್ಕೆ ಹೆಚ್ಚಿಸಲಾಯಿತು. 1998ಕ್ಕೂ ಮೊದಲು ರಾಷ್ಟ್ರಪತಿಗೆ ₹ 10,000 ವೇತನವಿತ್ತು. 1998ರಲ್ಲಿ ಈ ಮೊತ್ತವನ್ನು ₹ 50,000ಕ್ಕೆ ಹೆಚ್ಚಿಸಲಾಗಿತ್ತು. ಮಾಸಿಕ ವೇತನದೊಂದಿಗೆ ಹಲವು ಭತ್ಯೆಗಳನ್ನೂ ರಾಷ್ಟ್ರಪತಿ ಸ್ಥಾನದಲ್ಲಿರುವವರು ಪಡೆಯುತ್ತಾರೆ.

ವಾಸ್ತವ್ಯ

ನವದೆಹಲಿಯಲ್ಲಿರುವ ರಾಷ್ಟ್ರಪತಿ ಭವನವು ವಿಶ್ವದ ಯಾವುದೇ ದೇಶದ ಮುಖ್ಯಸ್ಥರು ಹೊಂದಿರುವ ನಿವಾಸಗಳಲ್ಲಿಯೇ ಅತಿದೊಡ್ಡದು. ಬ್ರಿಟಿಷರು ಇದನ್ನು ವೈಸ್​ರಾಯ್​ ನಿವಾಸಕ್ಕೆಂದು ನಿರ್ಮಿಸಿದರು. ನಂತರದ ದಿನಗಳಲ್ಲಿ ಭಾರತವು ಸ್ವಾತಂತ್ರ್ಯ ಗಳಿಸಿದ ಮೇಲೆ ಇದನ್ನು ರಾಷ್ಟ್ರಪತಿ ಭವನವಾಗಿ ಮರುರೂಪಿಸಲಾಯಿತು. 1929ರಲ್ಲಿ ನಿರ್ಮಾಣ ಕಾಮಗಾರಿ ಪೂರ್ಣಗೊಂಡು ರಾಷ್ಟ್ರಪತಿ ಭವನದಲ್ಲಿ 340 ಕೊಠಡಿಗಳಿವೆ. ಇದರಲ್ಲಿ ಸ್ವಾಗತ ಕೊಠಡಿಗಳು, ವಸತಿ ಗೃಹಗಳು, ಕಚೇರಿಗಳು ಇವೆ. ರಾಷ್ಟ್ರಪತಿ ಭವನದ ಸಮುಚ್ಚಯವು 130 ಹೆಕ್ಟೇರ್ (320 ಎಕರೆ) ವಿಸ್ತೀರ್ಣಕ್ಕೆ ಹರಡಿಕೊಂಡಿದೆ. ಇದರಲ್ಲಿ ಸುಂದರ ಉದ್ಯಾನವನ, ಬಯಲು, ಅಂಗರಕ್ಷಕರು ಮತ್ತು ಸಿಬ್ಬಂದಿ ವಸತಿ ಗೃಹಗಳು ಸೇರಿದಂತೆ ಹಲವು ಸೌಕರ್ಯಗಳಿವೆ.

ಕೆಲ ನಿರ್ದಿಷ್ಟ ದಿನಗಳಂದು ರಾಷ್ಟ್ರಪತಿ ಭವನಕ್ಕೆ ಸಾರ್ವಜನಿಕ ಭೇಟಿಗೂ ಅವಕಾಶವಿದೆ. ರಾಷ್ಟ್ರಪತಿ ಭವನ ವೆಬ್​ಸೈಟ್ ಮೂಲಕ ಯಾರು ನೀವು ವರ್ಚುವಲ್ ಆಗಿಯೂ ರಾಷ್ಟ್ರಪತಿ ಭವನದಲ್ಲಿ ಸಂಚರಿಸುವ ಅನುಭವ ಪಡೆದುಕೊಳ್ಳಬಹುದು. ನವದೆಹಲಿಯಲ್ಲಿರುವ ರಾಷ್ಟ್ರಪತಿ ಭವನದ ಜೊತೆಗೆ ಎರಡು ಪ್ರತ್ಯೇಕ ವಸತಿಗೃಹಗಳು ರಾಷ್ಟ್ರಪತಿಗಾಗಿ ಮೀಸಲಾಗಿರುತ್ತವೆ. ಈ ಪೈಕಿ ಒಂದು ಉತ್ತರ ಭಾರತದ ಶಿಮ್ಲಾದಲ್ಲಿದ್ದರೆ, ಮತ್ತೊಂದು ದಕ್ಷಿಣ ಭಾರತದ ಹೈದರಾಬಾದ್​ನಲ್ಲಿದೆ. ಶಿಷ್ಟಾಚಾರದಂತೆ ರಾಷ್ಟ್ರಪತಿ ಹೈದರಾಬಾದ್ ನಿವಾಸಕ್ಕೆ ವರ್ಷದಲ್ಲಿ ಕನಿಷ್ಠ ಒಮ್ಮೆಯಾದರೂ ಭೇಟಿ ನೀಡಿ, ಅಲ್ಲಿಂದಲೇ ತಮ್ಮ ಕರ್ತವ್ಯ ನಿರ್ವಹಿಸುತ್ತಾರೆ.

ರಾಷ್ಟ್ರಪತಿ ಬಳಸುವ ಕಾರು ಹೀಗಿರುತ್ತೆ

ಕಾಲಕ್ಕೆ ತಕ್ಕಂತೆ ಲಭ್ಯವಿರುವ ಅತ್ಯುತ್ತಮ ತಂತ್ರಜ್ಞಾನದ ಕಾರುಗಳನ್ನೇ ರಾಷ್ಟ್ರಪತಿಗೆ ಒದಗಿಸಲಾಗುತ್ತದೆ. ರಾಷ್ಟ್ರಪತಿ ಬಳಸುವ ಕಾರಿನ ವಿವರಗಳನ್ನು ಗೌಪ್ಯವಾಗಿ ಇರಿಸಲಾಗುತ್ತದೆ. ಈ ಕಾರುಗಳಿಗೆ ನಂಬರ್​ ಪ್ಲೇಟ್​ ಇರುವುದಿಲ್ಲ. ಬದಲಾಗಿ ಅಶೋಕ ಸ್ತಂಭದ ಚಿತ್ರ ಇರುತ್ತದೆ. ಆಗಸ್ಟ್ 15, 2021ರಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ‘ಮರ್ಸಿಡೆಸ್ ಬೆಂಜ್ ಎಸ್​600 ಪುಲ್​ಮನ್ ಗಾರ್ಡ್’​ ಕಾರು ಒದಗಿಸಲಾಯಿತು.

ಈ ಕಾರು ವಿಆರ್​-09 ಸಾಮರ್ಥ್ಯದ ಖಂಡಾಂತರ ಕ್ಷಿಪಣಿಗಳು, .44ರ ವರೆಗಿನ ಹ್ಯಾಂಡ್​ಗನ್​ಗಳ ಗುಂಡು, ಮಿಲಿಟರಿ ರೈಫಲ್​ನ ಗುಂಡುಗಳು, ಬಾಂಬ್, ಇತರ ಸ್ಫೋಟಕಗಳು ಮತ್ತು ಗ್ಯಾಸ್ ದಾಳಿಗಳನ್ನು ತಡೆದುಕೊಳ್ಳಬಲ್ಲದು. ಬದಲಿ ವಾಹನವಾಗಿ ‘ಮರ್ಸಿಡಿಸ್ ಮೇಬ್ಯಾಕ್’ ಇರುತ್ತದೆ. ರಾಷ್ಟ್ರಪತಿಗಳ ಬೆಂಗಾವಲು ವಾಹನದ ಭಾಗವಾಗಿರುವ ಈ ವಾಹನವನ್ನು ತುರ್ತು ಸಂದರ್ಭದಲ್ಲಿ ರಾಷ್ಟ್ರಪತಿ ಬಳಸುತ್ತಾರೆ. ಈ ಹಿಂದೆ ಭಾರತದ ರಾಷ್ಟ್ರಪತಿಗಳು ಕ್ಯಾಡಿಲಾಕ್, ರೋಲ್ಸ್​ ರಾಯ್ಸ್ ಇತರ ಕಾರುಗಳನ್ನು ಬಳಸಿದ್ದರು.

ಭದ್ರತೆ

ರಾಷ್ಟ್ರಪತಿಗಳ ಭದ್ರತೆಗಾಗಿ ಪ್ರತ್ಯೇಕ ಬೆಂಗಾವಲು ಪಡೆ (The Presidents Bodyguard – PBG) ಇದೆ. ಭಾರತೀಯ ಸೇನೆಯ ಅತ್ಯಂತ ಹಳೆಯ ತುಕಡಿ ಇದು. ಪ್ರಸ್ತುತ ಅಸ್ತಿತ್ವದಲ್ಲಿರುವ ವಿಶ್ವದ ಏಕೈಕ ಕುದುರೆ ಸವಾರರಿರುವ ತುಕಡಿ ಇದು. ಶಾಂತಿಕಾಲದಲ್ಲಿ ಈ ಸೈನಿಕರು ಕಾರ್ಯಕ್ರಮಗಳಲ್ಲಿ ಕವಾಯತು ಮಾಡುವುದು ಮತ್ತಿತರ ಶಿಷ್ಟಾಚಾರದ ಕರ್ತವ್ಯ ನಿರ್ವಹಿಸುತ್ತಾರೆ. ಅತ್ಯುತ್ತಮ ತರಬೇತಿ ಪಡೆದ ಪ್ಯಾರಾಟ್ರೂಪರ್​ಗಳಾದ ಇವರನ್ನು ಯುದ್ಧದ ಪ್ರಸಂಗದಲ್ಲಿ ಇವರನ್ನು ಹೋರಾಟಕ್ಕೆ ನಿಯೋಜಿಸಬಹುದಾಗಿದೆ.

ನಿವೃತ್ತಿ

ನಿವೃತ್ತಿಯ ನಂತರವೂ ರಾಷ್ಟ್ರಪತಿಗೆ ಹಲವು ಸೌಲಭ್ಯಗಳು ಸಿಗುತ್ತವೆ. ತಿಂಗಳಿಗೆ ₹ 1.5 ಲಕ್ಷ ಪಿಂಚಣಿ, ಕರ್ತವ್ಯ ನಿರ್ವಹಣೆಗೆ ಸಹಕರಿಸಿದ್ದಕ್ಕಾಗಿ ರಾಷ್ಟ್ರಪತಿಯ ಪತ್ನಿಗೆ ₹ 30,000 ಭತ್ಯೆ, ಬಾಡಿಗೆ ವಿನಾಯ್ತಿ ಇರುವ ಎಲ್ಲ ಫರ್ನಿಚರ್​ಗಳನ್ನು ಹೊಂದಿರುವ ಬಂಗ್ಲೆ, ಎರಡು ಲ್ಯಾಂಡ್​ಲೈನ್ ಮತ್ತು ಒಂದು ಮೊಬೈಲ್ ಫೋನ್, ಐವರು ಸಹಾಯಕ ಸಿಬ್ಬಂದಿ, ಒಬ್ಬ ಸಹಾಯಕನೊಂದಿಗೆ ವಿಮಾನ ಅಥವಾ ರೈಲಿನಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಇರುತ್ತದೆ.

Published On - 12:48 pm, Wed, 29 June 22