ಫಸ್ಟ್ ಕ್ಲಾಸ್ನಲ್ಲಿ ದ್ವಿತೀಯ ಪಿಯುಸಿ ಪಾಸಾದ ಹೈದರಾಬಾದ್ನ ಸಯಾಮಿ ಅವಳಿಗಳು
ಸಯಾಮಿ ಅವಳಿ ಮಕ್ಕಳ ಸಾಧನೆಗೆ ಆದಿವಾಸಿ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸತ್ಯವತಿ ರಾಥೋಡ್ ಅಭಿನಂದಿಸಿದ್ದಾರೆ. ಅವಳಿ ಮಕ್ಕಳ ಉನ್ನತ ಶಿಕ್ಷಣಕ್ಕೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಸರ್ಕಾರ ಒದಗಿಸಲಿದೆ ಎಂದು ಭರವಸೆ ನೀಡಿದ್ದಾರೆ.
ಹೈದರಾಬಾದ್: ಹೈದರಾಬಾದ್ ಮೂಲದ ಸಯಾಮಿ ಅವಳಿ ಮಕ್ಕಳಾದ ವೀಣಾ ಮತ್ತು ವಾಣಿ ತೆಲಂಗಾಣದ (Telangana) ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ. ತೆಲಂಗಾಣ ಇಂಟರ್‌ಮೀಡಿಯೇಟ್ ಪರೀಕ್ಷೆಯಲ್ಲಿ ವೀಣಾ 1000 ಅಂಕಗಳಿಗೆ 712 ಅಂಕಗಳನ್ನು ಪಡೆದಿದ್ದಾರೆ. ವಾಣಿ 1000 ಅಂಕಗಳಿಗೆ 707 ಅಂಕಗಳನ್ನು ಪಡೆದಿದ್ದಾರೆ.
ಈ ಸಯಾಮಿ ಅವಳಿ ಮಕ್ಕಳ ಸಾಧನೆಗೆ ಆದಿವಾಸಿ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸತ್ಯವತಿ ರಾಥೋಡ್ ಅಭಿನಂದಿಸಿದ್ದಾರೆ. ಅವಳಿ ಮಕ್ಕಳ ಉನ್ನತ ಶಿಕ್ಷಣಕ್ಕೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಸರ್ಕಾರ ಒದಗಿಸಲಿದೆ ಎಂದು ಅವರು ಭರವಸೆ ನೀಡಿದ್ದಾರೆ. ವೀಣಾ-ವಾಣಿ ತಮ್ಮ ಸಾಧನೆಯ ಬಗ್ಗೆ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ತಾವಿಬ್ಬರೂ ಚಾರ್ಟೆಡ್ ಅಕೌಂಟೆಂಟ್ಸ್ (ಸಿಎ) ಆಗಲು ಬಯಸಿರುವುದಾಗಿ ತಿಳಿಸಿದ್ದಾರೆ. 2020ರಲ್ಲಿ 10ನೇ ತರಗತಿಯಲ್ಲಿ ವೀಣಾ 9.3 GPA ಮತ್ತು ವಾಣಿ 9.2 GPA ಗಳಿಸಿದ್ದರು.
ಇದನ್ನೂ ಓದಿ: Trending: ಒಂದೇ ದಿನ, ಒಂದೇ ಆಸ್ಪತ್ರೆಯಲ್ಲಿ ಗಂಡುಮಕ್ಕಳಿಗೆ ಜನ್ಮನೀಡಿದ ಅವಳಿ ಸಹೋದರಿಯರು!
ವೀಣಾ-ವಾಣಿ 2003ರಲ್ಲಿ ತೆಲಂಗಾಣದ ಮಹಬೂಬ್‌ನಗರ ಜಿಲ್ಲೆಯಲ್ಲಿ ದಂಪತಿಗೆ ಅವಳಿ ಮಕ್ಕಳಾಗಿ ಜನಿಸಿದರು. ಅವರ ಚಿಕಿತ್ಸೆಗೆ ಹಣವಿಲ್ಲದ ಕಾರಣ ಅವರ ಪೋಷಕರು ಅವರನ್ನು ಕರೆದೊಯ್ಯಲು ನಿರಾಕರಿಸಿದ್ದರು. ಅವಳಿ ಮಕ್ಕಳನ್ನು 12 ವರ್ಷದವರೆಗೆ ನಿಲೋಫರ್ ಆಸ್ಪತ್ರೆಯಲ್ಲಿರಿಸಲಾಗಿತ್ತು. ನಂತರ ಅವರನ್ನು ಸ್ಟೇಟ್ ಹೋಮ್‌ಗೆ ಸ್ಥಳಾಂತರಿಸಲಾಯಿತು.
ವೈದ್ಯರು ಈ ಸಯಾಮಿ ಅವಳಿಗಳನ್ನು ಬೇರ್ಪಡಿಸಲು ಪ್ರಯತ್ನಿಸಿದರೂ ಯಶಸ್ವಿಯಾಗಲಿಲ್ಲ. ಭಾರತ, ಯುನೈಟೆಡ್ ಕಿಂಗ್‌ಡಮ್ ಮತ್ತು ಸಿಂಗಾಪುರದ ಹಲವಾರು ವೈದ್ಯಕೀಯ ಮತ್ತು ಶಸ್ತ್ರಚಿಕಿತ್ಸಕ ತಜ್ಞರು ವರ್ಷಪೂರ್ತಿ ಈ ಅವಳಿಗಳನ್ನು ಬೇರ್ಪಡಿಸಲು ಪ್ರಯತ್ನಿಸಿದ್ದರು. ಈ ಆಪರೇಷನ್ಗೆ ಸುಮಾರು 10 ಕೋಟಿ ರೂ. ವೆಚ್ಚವಾಗಲಿದೆ ಎಂದು ಈ ಹಿಂದೆ ಅಂದಾಜಿಸಲಾಗಿತ್ತು. ಆದರೂ ಅವರ ರಕ್ತನಾಳಗಳು ಸಿಕ್ಕಿಹಾಕಿಕೊಂಡಿರುವುದರಿಂದ ಆ ಆಪರೇಷನ್ ಅಪಾಯಕಾರಿಯಾಗಿದೆ ಎಂದು ಕೈಬಿಡಲಾಗಿತ್ತು.
ತೆಲಂಗಾಣದ ದ್ವಿತೀಯ ಪಿಯುಸಿಯಲ್ಲಿ ಒಟ್ಟು 4,42,895 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ವಿದ್ಯಾರ್ಥಿಗಳಲ್ಲಿ 67.82% ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಅಲ್ಲದೆ, 1,59,432 ವಿದ್ಯಾರ್ಥಿಗಳು ಎ ಗ್ರೇಡ್ ಗಳಿಸಿದ್ದಾರೆ.