ನವದೆಹಲಿ: ಮುಂಬರಲಿರುವ ರಾಷ್ಟ್ರಪತಿ ಚುನಾವಣೆ(Presidential Election)ಗೆ ಎನ್ಡಿಎ ಅಭ್ಯರ್ಥಿಯಾಗಿರುವ ದ್ರೌಪದಿ ಮುರ್ಮು ಅವರಿಗೆ ಕೇಂದ್ರ ಸರ್ಕಾರವು ಝಡ್ ಪ್ಲಸ್ ಭದ್ರತೆ ಕಲ್ಪಿಸಿದೆ. ಬುಧವಾರದಿಂದಲೇ ಅನ್ವಯವಾಗುವಂತೆ ಝಡ್ ಪ್ಲಸ್ ಶ್ರೇಣಿಯ ಭದ್ರತೆ ಒದಗಿಸಿರುವ ಕುರಿತು ಮಾಹಿತಿ ಲಭ್ಯವಾಗಿದೆ. ಕೇಂದ್ರ ಮೀಸಲು ಪೊಲೀಸ್ ಪಡೆಯು (ಸಿಆರ್‌ಪಿಎಫ್) ದ್ರೌಪದಿ ಮುರ್ಮುಗೆ ಝಡ್ ಪ್ಲಸ್ ಶ್ರೇಣಿಯ ಭದ್ರತೆ ಒದಗಿಸಿದೆ. ಇಂದಿನಿಂದಲೇ ಇದು ಜಾರಿಗೆ ಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮಂಗಳವಾರ ದ್ರೌಪದಿ ಮುರ್ಮು ಅವರನ್ನು ಎನ್ಡಿಎಯ ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಘೋಷಿಸಿದ್ದರು. ಬುಡಕಟ್ಟು ಸಮುದಾಯಕ್ಕೆ ಸೇರಿದ ಮುರ್ಮು ಅವರು ಮೂಲತಃ ಒಡಿಶಾದವರಾಗಿದ್ದಾರೆ.
64 ವರ್ಷದ ದ್ರೌಪದಿ ಮುರ್ಮು ಅವರು ಜಾರ್ಖಂಡ್ನ ರಾಜ್ಯಪಾಲರಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಮುರ್ಮು ಅವರನ್ನು ಆಯ್ಕೆ ಮಾಡಲಾಗಿತ್ತು.
ದ್ರೌಪದಿ ಮುರ್ಮು ಅವರು ದಶಕಗಳಿಂದ ರಾಜಕೀಯ, ಸಾಮಾಜಿಕ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಇವರು ಅಂತಿಮವಾಗಿ ಭಾರತದ ಮುಂದಿನ ರಾಷ್ಟ್ರಪತಿಯಾಗಿ ಆಯ್ಕೆಯಾದರೆ ಆದಿವಾಸಿ ಸಮುದಾಯದಿಂದ ದೇಶದ ಅತ್ಯುನ್ನತ ಸ್ಥಾನ ಅಲಂಕರಿಸಿದ ಸಾಧನೆಗೆ ಪಾತ್ರರಾಗುತ್ತಾರೆ.
ದ್ರೌಪದಿ ಮುರ್ಮು ಅವರು ಮೊಟ್ಟಮೊದಲ ಬಾರಿಗೆ ಜಾರ್ಖಂಡ್ನ ರಾಜ್ಯಪಾಲರಾಗಿ ನೇಮಕಗೊಂಡ ಮಹಿಳೆ. ತಮ್ಮ 59ನೇ ವಯಸ್ಸಿನಲ್ಲಿ 2015ರ ಮೇ ನಲ್ಲಿ ಇವರು ಜಾರ್ಖಂಡ್ನ ರಾಜ್ಯಪಾಲರಾಗಿ ನೇಮಕಗೊಂಡರು. ಒಡಿಶಾ ರಾಜ್ಯದ ಕುಸುಮಿ ಬ್ಲಾಕ್ನ ಊಪರ್ಬೇಡಾ ಗ್ರಾಮದ ನಿವಾಸಿ. ಒಡಿಶಾ ರಾಜ್ಯದಿಂದ ಯಾವುದೇ ರಾಜ್ಯದ ರಾಜ್ಯಪಾಲ ಹುದ್ದೆಗೆ ನೇಮಕಗೊಂಡ ಮೊದಲ ಮಹಿಳೆ ಇವರು.
ಜುಲೈ 18ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಗೆ ವಿರೋಧ ಪಕ್ಷಗಳ ಅಭ್ಯರ್ಥಿಯಾಗಿ ಯಶವಂತ್ ಸಿನ್ಹಾ(Yashwant Sinha) ಅವರ ಹೆಸರನ್ನು ಘೋಷಣೆ ಮಾಡುವ ಸಾಧ್ಯತೆ ಇದೆ.
ಮಾಜಿ ಕೇಂದ್ರ ಸಚಿವ ಯಶವಂತ್ ಸಿನ್ಹಾ ಅವರು ಟ್ವೀಟ್ ಮಾಡಿದ್ದಾರೆ. ಟಿಎಂಸಿಯಲ್ಲಿ ಮಮತಾ ಅವರು ನನಗೆ ನೀಡಿದ ಗೌರವ ಮತ್ತು ಪ್ರತಿಷ್ಠೆಗೆ ನಾನು ಅವರಿಗೆ ಕೃತಜ್ಞನಾಗಿದ್ದೇನೆ. ವಿರೋಧ ಪಕ್ಷಗಳ ಏಕತೆಗಾಗಿ ಕೆಲಸ ಮಾಡಲು ಈಗ ಒಂದು ದೊಡ್ಡ ರಾಷ್ಟ್ರೀಯ ಉದ್ದೇಶಕ್ಕಾಗಿ ನಾನು ಪಕ್ಷದಿಂದ ದೂರ ಸರಿಯಬೇಕಾದ ಸಮಯ ಬಂದಿದೆ ಎಂದು ಹೇಳಿಕೊಂಡಿದ್ದರು.
ದೇಶದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ