ರಾಷ್ಟ್ರಪತಿ ಚುನಾವಣೆ: ವಿಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿಗೆ ಸೂಚಕರಾಗಿ ಕರ್ನಾಟಕ ಕಾಂಗ್ರೆಸ್ ಶಾಸಕರ ಸಹಿ

ರಾಹುಲ್ ಗಾಂಧಿ ವಿರುದ್ಧ ಜಾರಿ ನಿರ್ದೇಶನಾಲಯವು ನಡೆಸುತ್ತಿರುವ ವಿಚಾರಣೆಗೆ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ವಿರೋಧ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರಪತಿ ಚುನಾವಣೆ: ವಿಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿಗೆ ಸೂಚಕರಾಗಿ ಕರ್ನಾಟಕ ಕಾಂಗ್ರೆಸ್ ಶಾಸಕರ ಸಹಿ
ವಿಪಕ್ಷ ನಾಯಕ ಸಿದ್ದರಾಮಯ್ಯ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Jun 22, 2022 | 10:56 AM

ದೆಹಲಿ: ರಾಷ್ಟ್ರಪತಿ ಚುನಾವಣೆಗೆ (President of India) ಆಡಳಿತಾರೂಢ ಎನ್​ಡಿಎ ಮತ್ತು ಪ್ರತಿಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಘೋಷಿಸಿವೆ. ಎನ್​ಡಿಎ ಅಭ್ಯರ್ಥಿಯಾಗಿ ಒಡಿಶಾದ ದ್ರೌಪದಿ ಮುರ್ಮು ಕಣಕ್ಕಿಳಿದರೆ, ಪ್ರತಿಪಕ್ಷಗಳ ಅಭ್ಯರ್ಥಿಯಾಗಿ ಮಾಜಿ ಕೇಂದ್ರ ಸಚಿವ ಯಶವಂತ್ ಸಿನ್ಹಾ (Yashvanth Sinha) ನಾಮಪತ್ರ ಸಲ್ಲಿಸುವುದು ಬಹುತೇಕ ಖಚಿತವಾಗಿದೆ. ಪ್ರತಿಪಕ್ಷಗಳ ಅಭ್ಯರ್ಥಿ ಯಶವಂತ್ ಸಿನ್ಹಾ ಅವರ ನಾಮಪತ್ರಕ್ಕೆ ಕರ್ನಾಟಕದ ಕಾಂಗ್ರೆಸ್ ಶಾಸಕರು ಸೂಚಕರಾಗಿ ಸಹಿ ಹಾಕಲಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಭವನದಲ್ಲಿರುವ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿಯಾಗಲೆಂದು ಶಾಸಕರಾದ ಪ್ರಿಯಾಂಕ್ ಖರ್ಗೆ, ಆರ್.ವಿ.ದೇಶಪಾಂಡೆ, ವಿಧಾನ ಪರಿಷತ್ ಸದಸ್ಯ ಸಲಿಂ ಅಹಮದ್ ಸೇರಿದಂತೆ ಹಲವು ಆಗಮಿಸಿದರು. ಕರ್ನಾಟಕದಿಂದ ಸುಮಾರು 40ಕ್ಕೂ ಹೆಚ್ಚು ಶಾಸಕರು ದೆಹಲಿಯಲ್ಲಿದ್ದು, ಉಪಹಾರದ ಬಳಿಕ ಎಐಸಿಸಿ ಕಚೇರಿಗೆ ತೆರಳಲಿದ್ದಾರೆ.

ರಾಹುಲ್ ವಿಚಾರಣೆ ರಾಜಕೀಯ ಪ್ರೇರಿತ: ಡಿ.ಕೆ.ಸುರೇಶ್

ರಾಹುಲ್ ಗಾಂಧಿ ವಿರುದ್ಧ ಜಾರಿ ನಿರ್ದೇಶನಾಲಯವು ನಡೆಸುತ್ತಿರುವ ವಿಚಾರಣೆಗೆ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಕುರಿತು ಟಿವಿ9ಗೆ ಪ್ರತಿಕ್ರಿಯಿಸಿದ ಅವರು, ಇದೊಂದು ರಾಜಕೀಯ ಪ್ರೇರಿತ ವಿಚಾರಣೆ. ನಮ್ಮ ಪಕ್ಷದ ನಾಯಕರ ತೆಜೋವಧೆ ಮಾಡುವುದಕ್ಕೆ, ಪಕ್ಷಕ್ಕೆ ಕಪ್ಪುಚುಕ್ಕೆ ತರುವುದಕ್ಕೆ ಬಿಜೆಪಿ ಈ ಕೆಲಸ ಮಾಡುತ್ತಿದೆ. ಬಿಜೆಪಿಯವರು ನಮಗೆ ರಾಜಕೀಯ ಹಿಂಸೆಯನ್ನು ನೀಡುತ್ತಿದ್ದಾರೆ. ಇದನ್ನು ಖಂಡಿಸಿ ನಿರಂತರ ಹೋರಾಟ ಮಾಡುತ್ತೇವೆ’ ಎಂದು ಹೇಳಿದರು.

ಬಿಜೆಪಿಯು ಭ್ರಷ್ಟ್ರಾಚಾರವನ್ನು ಮರೆಮಾಚಲು ಈ ಕೆಲಸ ಮಾಡುತ್ತಿದೆ. ಕಾಂಗ್ರೆಸ್​ ಪಕ್ಷದ ಶಾಸಕರು ಹಾಗೂ ವಿಧಾನ ಪರಿಷತ್​ ಸದಸ್ಯರು ದೆಹಲಿಯಲ್ಲಿ ನಡೆಯುವ ಸಾಂಕೇತಿಕ ಪ್ರತಿಭಟನೆಯಲ್ಲಿ ಭಾಗವಹಿಸುತ್ತಾರೆ. ಕಾಂಗ್ರೆಸ್​ ಪಕ್ಷವು ಈ ಹೋರಾಟದಿಂದ ದೂರ ಸರಿಯುವ ಮಾತೇ ಇಲ್ಲ. ತ್ಯಾಗ ಮತ್ತು ಬಲಿದಾನಗಳಿಗೆ ಕಾಂಗ್ರೆಸ್ ಎಂದಿಗೂ ಹೆದರುವುದಿಲ್ಲ. ನಾವು ಎಲ್ಲ ರೀತಿಯ ಹೋರಾಟಕ್ಕೆ ಸಿದ್ಧರಿದ್ದೇವೆ ಎಂದು ಅವರು ತಿಳಿಸಿದರು.

ರಾಹುಲ್, ಸೋನಿಯಾ ಜೊತೆಗೆ ನಾವಿದ್ದೇವೆ: ಡಿಕೆಶಿ

ಇಡಿ ವಿಚಾರಣೆ ಎದುರಿಸುತ್ತಿರುವ ಕಾಂಗ್ರೆಸ್​ನ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಜೊತೆಗೆ ನಾವಿದ್ದೇವೆ. ರಾಹುಲ್‌ಗಾಂಧಿಗೆ ಸಂದೇಶ ಕೊಡಲು ಬಂದಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು. ರಾಹುಲ್‌ಗಾಂಧಿಗೆ ಕಿರುಕುಳ ಕೊಟ್ಟು ಬಿಜೆಪಿಯವರು ಖುಷಿ ಪಡುತ್ತಿದ್ದಾರೆ. ರಾಜಕೀಯ ಪ್ರೇರಿತ ಘಟನೆಯಾಗಿದೆ. ಜಾರಿ ನಿರ್ದೇಶನಾಲಯದ ಹಿಂದಿನ ಅಧಿಕಾರಿಗಳ ಜೊತೆ ನಾನು ಚರ್ಚೆ ಮಾಡಿದ್ದೇನೆ. ಅಕ್ರಮ ಹಣ ವರ್ಗಾವಣೆ ನಡೆದೇ ಇಲ್ಲ. ಇವರು ಬೇಕೆಂದೇ ಕಿರುಕುಳ ಕೊಡುತ್ತಿದ್ದಾರೆ. ಸೋನಿಯಾಗಾಂಧಿ ಅವರಿಗೆ ಧೈರ್ಯ ತುಂಬಲು ನಾವು 50 ಶಾಸಕರು ಬಂದಿದ್ದೇವೆ ಎಂದರು.

ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:47 am, Wed, 22 June 22