ನವದೆಹಲಿ: ರಾಷ್ಟ್ರಪತಿ ಚುನಾವಣೆಯ ವಿರೋಧ ಪಕ್ಷದ ಅಭ್ಯರ್ಥಿ ಯಶವಂತ್ ಸಿನ್ಹಾ (Yashwant Sinha) ನಿನ್ನೆ (ಶುಕ್ರವಾರ) ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಅವರಿಗೆ ಕರೆ ಮಾಡಿ, ಜುಲೈ 18ರ ಚುನಾವಣೆಯಲ್ಲಿ ತಮಗೆ ಬೆಂಬಲ ನೀಡಲು ಕೋರಿದ್ದಾರೆ. ಯಶವಂತ್ ಸಿನ್ಹಾ ಅವರು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರಿಗೆ ಕೂಡ ಕರೆ ಮಾಡಿದ್ದಾರೆ. ಅಟಲ್ ಬಿಹಾರಿ ವಾಜಪೇಯಿ ಮತ್ತು ಚಂದ್ರಶೇಖರ್ ನೇತೃತ್ವದ ಸರ್ಕಾರಗಳಲ್ಲಿ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ 84 ವರ್ಷದ ಯಶವಂತ್ ಸಿನ್ಹಾ ಅವರು ಭಾರತೀಯ ಜನತಾ ಪಕ್ಷದ (ಬಿಜೆಪಿ) ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ (LK Adani) ಅವರನ್ನು ಕೂಡ ಫೋನ್ ಮೂಲಕ ಸಂಪರ್ಕಿಸಿದ್ದಾರೆ.
ಯಶವಂತ್ ಸಿನ್ಹಾ ಅವರು ಪಿಎಂ ನರೇಂದ್ರ ಮೋದಿ ಮತ್ತು ರಾಜನಾಥ್ ಸಿಂಗ್ ಅವರ ಕಚೇರಿಗಳಿಗೆ ಕರೆ ಮಾಡಿದ್ದಾರೆ. ಚುನಾವಣೆಯಲ್ಲಿ ಬೆಂಬಲವನ್ನು ಕೋರಿ ಅವರಿಗೆ ಸಂದೇಶವನ್ನು ಕಳುಹಿಸಿದ್ದಾರೆ. ಅಲ್ಲದೆ, ತಮ್ಮ ಆಪ್ತ ಮತ್ತು ಬಿಜೆಪಿ ನಾಯಕ ಎಲ್‌ಕೆ ಅಡ್ವಾಣಿಯವರ ಬಳಿಯೂ ತಮಗೆ ಬೆಂಬಲ ನೀಡಲು ಮನವಿ ಮಾಡಿದ್ದಾರೆ. ಸೋಮವಾರ ಯಶವಂತ್ ಸಿನ್ಹಾ ಅವರು ಪ್ರತಿಪಕ್ಷದ ಉನ್ನತ ನಾಯಕರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ.
ಶುಕ್ರವಾರ ನಾಮಪತ್ರ ಸಲ್ಲಿಸಿದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಡಿಎ) ಅಧ್ಯಕ್ಷೀಯ ಅಭ್ಯರ್ಥಿ ದ್ರೌಪದಿ ಮುರ್ಮು ಅವರಿಗೆ ಜೆಎಂಎಂ ಮತ್ತು ಜೆಡಿಎಸ್ ಬೆಂಬಲಿಸಲಿವೆ ಎನ್ನಲಾಗಿದೆ.
ಇದನ್ನೂ ಓದಿ: Draupadi Murmu: ಸೋನಿಯಾ, ಮಮತಾ, ಶರದ್ ಪವಾರ್ ಬಳಿ ಬೆಂಬಲ ನೀಡುವಂತೆ ಮನವಿ ಮಾಡಿದ ದ್ರೌಪದಿ ಮುರ್ಮು
ಶುಕ್ರವಾರ ತಮ್ಮ ತವರು ರಾಜ್ಯ ಜಾರ್ಖಂಡ್‌ನಿಂದ ಅಧ್ಯಕ್ಷೀಯ ಚುನಾವಣೆಯ ಪ್ರಚಾರವನ್ನು ಪ್ರಾರಂಭಿಸುವ ನಿರೀಕ್ಷೆಯಿದ್ದ ಯಶವಂತ್ ಸಿನ್ಹಾ ಜಾರ್ಖಂಡ್ನ ಹೇಮಂತ್ ಸೋರೆನ್ ಸಹ ಸಂತಾಲ್ ಸಮುದಾಯದ ಸದಸ್ಯರಾದ ದ್ರೌಪದಿ ಮುರ್ಮು ಅವರ ಪರವಾಗಿ ಒಲವು ತೋರಿದ್ದರಿಂದ ಪ್ರಚಾರವನ್ನು ಕೈಬಿಟ್ಟರು. ಜುಲೈ 18ರ ಚುನಾವಣೆಗೆ ತಮ್ಮನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿದ ಎಲ್ಲಾ ವಿರೋಧ ಪಕ್ಷದ ನಾಯಕರಿಗೆ ಯಶವಂತ್ ಸಿನ್ಹಾ ಪತ್ರ ಬರೆದಿದ್ದಾರೆ.
ಯಶವಂತ್ ಸಿನ್ಹಾ ಅವರಿಗಿಂತ ಮೊದಲು, ದ್ರೌಪದಿ ಮುರ್ಮು ಅವರು ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ, ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಮುಖ್ಯಸ್ಥ ಶರದ್ ಪವಾರ್ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿದಂತೆ ವಿರೋಧ ಪಕ್ಷದ ನಾಯಕರಿಗೆ ಫೋನ್ ಮಾಡಿ ಬೆಂಬಲ ಕೋರಿದ್ದಾರೆ.
ಜುಲೈ 18ರಂದು ದೇಶದಲ್ಲಿ ರಾಷ್ಟ್ರಪತಿ ಚುನಾವಣೆ ನಡೆಯಲಿದ್ದು, ಜುಲೈ 21ಕ್ಕೆ ಫಲಿತಾಂಶ ಹೊರಬೀಳಲಿದೆ. ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರ ಅಧಿಕಾರಾವಧಿ ಜುಲೈ 24ರಂದು ಕೊನೆಗೊಳ್ಳಲಿದೆ.
Published On - 9:58 am, Sat, 25 June 22