ದೆಹಲಿ: ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಉತ್ತರಾಖಂಡ್(PM Modi Uttarakhand Visit) ಗೆ ಭೇಟಿ ನೀಡಿ, 17,500 ಕೋಟಿ ರೂಪಾಯಿ ವೆಚ್ಚದ 23 ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ಈ 23 ಯೋಜನೆಗಳಲ್ಲಿ 17ಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದು, ಆರು ಯೋಜನೆಗಳ ಮುಕ್ತಾಯಗೊಂಡ ಕಾಮಗಾರಿಯನ್ನು ಉದ್ಘಾಟನೆ ಮಾಡಿದ್ದಾರೆ. ಬಳಿಕ ಉತ್ತರಾಖಂಡ್ನ ಹಾಲ್ದ್ವಾನಿಯಲ್ಲಿ ಮಾತನಾಡಿ, ಇಂದು ಹಲ್ದ್ವಾನಿಯಲ್ಲಿ ಉದ್ಘಾಟನೆಯಾದ ಎಲ್ಲ ಅಭಿವೃದ್ಧಿ ಯೋಜನೆಗಳು, ಇಲ್ಲಿನ ಜನರಿಗೆ ಅತ್ಯುತ್ತಮ ಸಂಪರ್ಕ ಮತ್ತು ಉತ್ತರ ಆರೋಗ್ಯ ಸೇವೆ ಒದಗಿಸುವಂಥದ್ದಾಗಿದೆ ಎಂದು ಹೇಳಿದರು. ನಾವು ಇಲ್ಲಿನ ನೀರು, ರಸ್ತೆ, ಪಾರ್ಕಿಂಗ್, ಬೀದಿ ದೀಪಗಳು, ಒಳಚರಂಡಿ ವ್ಯವಸ್ಥೆ ಸುಧಾರಣೆಗಾಗಿ ಸುಮಾರು 2 ಸಾವಿರ ಕೋಟಿ ರೂಪಾಯಿ ವೆಚ್ಚದ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದೇವೆ ಎಂದು ಹೇಳಿದರು.
ಉತ್ತರಾಖಂಡ ಜನರ ಸಾಮರ್ಥ್ಯವು ಈ ರಾಜ್ಯವನ್ನು ದಶಕದ ಉತ್ತರಾಖಂಡ್ ಆಗಿ ರೂಪಿಸಿದೆ. ಉತ್ತರಾಖಂಡ್ನಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿ ಕ್ಷಿಪ್ರವಾಗಿ ಆಗುತ್ತಿದೆ. ಚಾರ್ ಧಾಮ್ ಮೆಗಾ ಯೋಜನೆ, ಹೊಸ ರೈಲು ಮಾರ್ಗಗಳಿಂದ ಉತ್ತರಾಖಂಡ್ ಅಭಿವೃದ್ಧಿಯಾಗುತ್ತಿದೆ ಎಂದು ಹೇಳಿದರು. ಉತ್ತರಾಖಂಡ ರಾಜ್ಯ ಸ್ವತಂತ್ರ್ಯವಾದಾಗಿನಿಂದೂ ಎರಡು ರೀತಿಯ ರಾಜಕಾರಣ ನೋಡಿದೆ..ಅದರಲ್ಲಿ ಮೊದಲನೇಯದು, ಈ ಪರ್ವತ ರಾಜ್ಯವನ್ನು ಎಲ್ಲ ರೀತಿಯ ಅಭಿವೃದ್ಧಿಯಿಂದ ವಂಚಿತಗೊಳಿಸಿದ ರಾಜಕಾರಣ ಮತ್ತು ಇನ್ನೊಂದು ಉತ್ತರಾಖಂಡ್ ಅಭಿವೃದ್ಧಿಗಾಗಿ ಎಲ್ಲವನ್ನೂ ಮಾಡಿದ ರಾಜಕಾರಣ ಎಂದು ಹೇಳುವ ಮೂಲಕ ತಮ್ಮ ಸರ್ಕಾವನ್ನು ಹೊಗಳಿ, ಹಿಂದೆ ಆಳಿದ ಸರ್ಕಾರವನ್ನು ಟೀಕಿಸಿದರು.
ಉತ್ತರಾಖಂಡ ಅಸ್ತಿತ್ವಕ್ಕೆ ಬಂದು 20ವರ್ಷ ಪೂರ್ಣವಾಯಿತು. ಈ ಅವಧಿಯಲ್ಲಿ ಉತ್ತರಾಖಂಡ ಸಂಪೂರ್ಣವಾಗಿ ಲೂಟಿಯಾದರೂ ಅಡ್ಡಿಯಿಲ್ಲ, ನನ್ನ ಸರ್ಕಾರ ಉಳಿಯಬೇಕು ಎಂಬ ದುರಾಸೆಯಿಂದ ರಾಜ್ಯವನ್ನು ಆಳಿದವರನ್ನು ಇಲ್ಲಿನ ಜನರು ನೋಡಿದ್ದಾರೆ. ಅವರು ಎರಡೂ ಕೈಗಳಿಂದ ಈ ರಾಜ್ಯವನ್ನು ಬಾಚಿ, ಲೂಟಿ ಮಾಡಿದ್ದಾರೆ. ಆದರೆ ಉತ್ತರಾಖಂಡವನ್ನು ಪ್ರೀತಿಸುವವರು ಎಂದಿಗೂ ಹಾಗೆ ಮಾಡಿಲ್ಲ. ಇಲ್ಲಿಯ ಅಭಿವೃದ್ಧಿಯನ್ನೇ ಬಯಸಿದರು ಎಂದು ಹೇಳಿದರು. ಈ ಮೂಲಕ ಹಿಂದಿನ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಪ್ರತಿಪಕ್ಷಗಳು ಈಗೀಗ ಹೊಸ ಉದ್ಯೋಗ ಮಾಡುತ್ತಿವೆ. ಏನಿದ್ದರೂ ಸುಳ್ಳು, ಗಾಳಿ ಸುದ್ದಿ ಹಬ್ಬಿಸುವುದೆ ಅವರ ಕೆಲಸವಾಗಿದೆ. ಆದರೆ ಜನರಿಗೂ ಈಗೀಗ ಅದು ಅರ್ಥವಾಗುತ್ತಿದೆ. ತನಕ್‌ಪುರ-ಬಾಗೇಶ್ವರ್ ರೈಲು ಮಾರ್ಗದ ಬಗ್ಗೆಯೂ ವದಂತಿ ಹಬ್ಬಿಸುತ್ತಿದ್ದಾರೆ. ಆದರೆ ಇದಕ್ಕೆಲ್ಲ ನಮ್ಮ ಸರ್ಕಾರ ತಲೆ ಕೆಡಿಸಿಕೊಳ್ಳುವುದಿಲ್ಲ. ಇಂದು ಶುರುವಾಗಿರುವ ಲಖ್ವಾರ್ ಯೋಜನೆ ಮೊದಲು ರೂಪಿಸಲ್ಪಟ್ಟಿದ್ದು 1976ರಲ್ಲಿ. ಆದರೆ ಅಲ್ಲಿಗೇ ನಿಂತು ಹೋಗಿತ್ತು. ಇದೀಗ 46ವರ್ಷಗಳ ಬಳಿಕ ನಮ್ಮ ಸರ್ಕಾರ ಅದಕ್ಕೆ ಶಂಕುಸ್ಥಾಪನೆ ನೆರವೇರಿಸುವ ಮೂಲಕ ಚಾಲನೆ ನೀಡಿದೆ ಎಂದು ಹೇಳಿದರು.
ಹಿಮಾಲಯ ರಾಜ್ಯವಾದ ಉತ್ತರಾಖಂಡ್ನಲ್ಲಿ ಒಟ್ಟು 23 ಯೋಜನೆಗಳಿಗೆ ಇಂದು ಪ್ರಧಾನಿ ನರೇಂದ್ರ ಮೋದಿಯವರಿಂದ ಚಾಲನೆ ದೊರೆತಿದೆ. ಆರೋಗ್ಯ, ನೀರಾವರಿ, ರಸ್ತೆ, ವಸತಿ, ಉದ್ಯಮ, ಕುಡಿಯುವ ನೀರು ಪೂರೈಕೆ ಸಂಬಂಧ ಅಭಿವೃದ್ಧಿ ಯೋಜನೆಗಳನ್ನು ಮೋದಿಯವರು ಉದ್ಘಾಟನೆ ಮಾಡಿದ್ದಾರೆ. ಏಮ್ಸ್ ರಿಶಿಕೇಶ ಸೆಟಲೈಟ್ ಕೇಂದ್ರ, ಜಗಜೀವನ ರಾಮ್ ಸರ್ಕಾರಿ ವೈದ್ಯಕೀಯ ಕಾಲೇಜುಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ವಿವಿಧ ರಸ್ತೆ ವಿಸ್ತರಣೆ ಯೋಜನೆಗಳು, ಜಲವಿದ್ಯುತ್ ಯೋಜನೆಗಳನ್ನು ಉದ್ಘಾಟನೆ ಮಾಡಿದ್ದಾರೆ.
ಇದನ್ನೂ ಓದಿ: ಇಂದು ಉತ್ತರಾಖಂಡ್ಗೆ ಪ್ರಧಾನಿ ಮೋದಿ ಭೇಟಿ; 17,500 ಕೋಟಿ ರೂ.ವೆಚ್ಚದ 23 ಯೋಜನೆಗಳಿಗೆ ಚಾಲನೆ