ಇಂದು ಉತ್ತರಾಖಂಡ್ಗೆ ಪ್ರಧಾನಿ ಮೋದಿ ಭೇಟಿ; 17,500 ಕೋಟಿ ರೂ.ವೆಚ್ಚದ 23 ಯೋಜನೆಗಳಿಗೆ ಚಾಲನೆ
PM Modi: ರಾಜ್ಯಾದ್ಯಂತ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ರಸ್ತೆ ಸುಧಾರಣೆ, ವಿಸ್ತರಣೆ ಸಂಬಂಧಪಟ್ಟ ಯೋಜನೆಗಳಿಗೆ ಪ್ರಧಾನಿ ಮೋದಿ ಶಂಕುಸ್ಥಾಪನೆ ನೆರವೇರಿಸುವರು. 133 ಗ್ರಾಮಗಳ 1157 ಕಿಮೀ ಉದ್ದರ ರಸ್ತೆ ನಿರ್ಮಾಣಕ್ಕೆ ಅಡಿಗಲ್ಲ ಸ್ಥಾಪಿಸಲಿದ್ದಾರೆ.
ದೆಹಲಿ: ಪ್ರಧಾನಿ ನರೇಂದ್ರ ಮೋದಿ(PM Narendra Modi)ಯವರು ಇಂದು ಉತ್ತರಾಖಂಡ್(Uttarakhand)ಗೆ ಭೇಟಿ ನೀಡಲಿದ್ದು, ಅಲ್ಲಿ ಸುಮಾರು 17,500 ಕೋಟಿ ರೂಪಾಯಿ ಮೌಲ್ಯದ 23 ಯೋಜನೆಗಳಿಗೆ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ. ಹಾಗೇ, ಪೂರ್ಣಗೊಂಡ ಕಾಮಗಾರಿಗಳ್ನು ಉದ್ಘಾಟಿಸಲಿದ್ದಾರೆ. ಒಟ್ಟಾರೆ 23 ಯೋಜನೆಗಳಲ್ಲಿ17 ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ 17 ಯೋಜನೆಗಳು 14,100 ಕೋಟಿ ರೂಪಾಯಿ ಮೌಲ್ಯದ್ದಾಗಿವೆ. ರಾಜ್ಯಾದ್ಯಂತ ವ್ಯಾಪಕ ಕ್ಷೇತ್ರಗಳ ಅಭಿವೃದ್ಧಿ ಯೋಜನೆಗಳು ಇವ ಎಂದು ಪ್ರಧಾನಮಂತ್ರಿ ಕಾರ್ಯಾಲಯ ತಿಳಿಸಿದೆ. ಅಂದರೆ ನೀರಾವರಿ, ರಸ್ತೆ, ವಸತಿ, ಆರೋಗ್ಯ ಮೂಲಸೌಕರ್ಯ, ಉದ್ಯಮ, ಸ್ವಚ್ಛತೆ, ಕುಡಿಯುವ ನೀರು ಪೂರೈಕೆ ಸಂಬಂಧಿ ಯೋಜನೆಗಳಿಗೆ ಇಂದು ಪ್ರಧಾನಿ ಚಾಲನೆ ನೀಡಲಿದ್ದಾರೆ. ಹಾಗೇ, ವಿಸ್ತರಣೆಗೊಂಡ ರಸ್ತೆಗಳು, ಪಿಥೋರ್ಗಢ್ನಲ್ಲಿ ಜಲವಿದ್ಯುತ್ ಯೋಜನೆ, ನೈನಿತಾಲ್ನಲ್ಲಿ ಒಳಚರಂಡಿ ಸುಧಾರಣೆ ಜಾಲ ಸೇರಿ ಒಟ್ಟು 6 ಯೋಜನೆಗಳನ್ನು ಪ್ರಧಾನಿ ಮೋದಿ ಇಂದು ಉದ್ಘಾಟನೆ ಮಾಡಲಿದ್ದಾರೆ. ಇವು ಒಟ್ಟು 3400 ಕೋಟಿ ರೂ.ವೆಚ್ಚದ ಯೋಜನೆಗಳು.
ಹಾಗೇ, ಇಂದು ಪ್ರಧಾನಿ ಮೋದಿಯವರು, 5750 ಕೋಟಿ ರೂಪಾಯಿ ವೆಚ್ಚದ ಲಖ್ವಾರ್ ವಿವಿಧೋದ್ದೇಶ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಯೋಜನೆ ಮೊದಲ ಬಾರಿಗೆ 1976ರಲ್ಲಿ ರೂಪಿತಗೊಂಡಿತ್ತು. ಆದರೆ ಮುಂದೆ ಹೋಗಿರಲಿಲ್ಲ. ಹೀಗೆ ಬಹುಕಾಲದಿಂದ ಬಾಕಿ ಉಳಿದಿರುವ ಯೋಜನೆಗಳನ್ನು ಪೂರ್ಣಗೊಳಿಸುವುದು ಪ್ರಧಾನಿ ಮೋದಿಯವರ ಮೊದಲ ಆದ್ಯತೆಯಾಗಿದೆ ಎಂದು ಪಿಎಂಒ ತಿಳಿಸಿದೆ. ಈ ಲಖ್ವಾರ್ ವಿವಿಧೋದ್ದೇಶ ಯೋಜನೆ ಸುಮಾರು 34 ಸಾವಿರ ಹೆಕ್ಟೇರ್ ಹೆಚ್ಚುವರಿ ಭೂಮಿಗೆ ನೀರಾವರಿ ಒದಗಿಸಲಿದೆ. ಸುಮಾರು 300 ಮೆಗಾವ್ಯಾಟ್ ಜಲವಿದ್ಯುತ್ ಉತ್ಪನ್ನ ಮಾಡಲಿದೆ. ಹಾಗೇ, ಉತ್ತರಾಖಂಡ್, ಉತ್ತರಪ್ರದೇಶ, ಹರ್ಯಾಣ, ದೆಹಲಿ, ಹಿಮಾಚಲ ಪ್ರದೇಶ ಮತ್ತು ರಾಜಸ್ಥಾನಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲಿದೆ.
ಇದರೊಂದಿಗೆ ರಾಜ್ಯಾದ್ಯಂತ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ರಸ್ತೆ ಸುಧಾರಣೆ, ವಿಸ್ತರಣೆ ಸಂಬಂಧಪಟ್ಟ ಯೋಜನೆಗಳಿಗೆ ಪ್ರಧಾನಿ ಮೋದಿ ಶಂಕುಸ್ಥಾಪನೆ ನೆರವೇರಿಸುವರು. 133 ಗ್ರಾಮಗಳ 1157 ಕಿಮೀ ಉದ್ದರ ರಸ್ತೆ ನಿರ್ಮಾಣಕ್ಕೆ ಅಡಿಗಲ್ಲ ಸ್ಥಾಪಿಸಲಿದ್ದಾರೆ. ಇದರ ವೆಚ್ಚ 625 ಕೋಟಿ ರೂಪಾಯಿ. ಇದರೊಂದಿಗೆ 450 ಕೋಟಿ ರೂ.ವೆಚ್ಚದ 151 ಸೇತುವೆಗಳ ನಿರ್ಮಾಣಕ್ಕೂ ಪ್ರಧಾನಿ ಮೋದಿ ಅಡಿಗಲ್ಲು ಸ್ಥಾಪನೆ ಮಾಡುವರು. ಹಾಗೇ, ಆರೋಗ್ಯ ಕ್ಷೇತ್ರದ ಸುಧಾರಣೆಯ ಆದ್ಯತೆಯಾಗಿ ಉಧಾಂನಗರದಲ್ಲಿ ಏಮ್ಸ್ ರಿಶಿಕೇಶ ಸೆಟಲೈಟ್ ಕೇಂದ್ರ ಮತ್ತು ಪಿಥೋರ್ಗಡ್ನಲ್ಲಿ ಜಗಜೀವನ್ ರಾಮ್ ಸರ್ಕಾರಿ ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಲಿದ್ದಾರೆ. ವಸತಿ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ, ಆರ್ಥಿಕವಾಗಿ ಹಿಂದುಳಿದ ವರ್ಗದವರಿಗಾಗಿ 2400 ಮನೆಗಳ ನಿರ್ಮಾಣಕ್ಕೆ ಅವರು ಅಡಿಗಲ್ಲು ಸ್ಥಾಪಿಸುವರು. ಹಾಗೇ, 13 ಜಿಲ್ಲೆಗಳಲ್ಲಿ 73 ನೀರು ಪೂರೈಕೆ ಯೋಜನೆಗಳಿಗೂ ಚಾಲನೆ ನೀಡಲಿದ್ದಾರೆ. ಕಾಶಿಪುರ್ನಲ್ಲಿ 41 ಎಕರೆ ಅರೋಮಾ ಪಾರ್ಕ್ ಮತ್ತು ಸಿತಾರ್ಗಂಜ್ನಲ್ಲಿ 40 ಎಕರೆ ವಿಸ್ತೀರ್ಣದ ಪ್ಲಾಸ್ಟಿಕ್ ಇಂಡಸ್ಟ್ರಿಯಲ್ ಪಾರ್ಕ್ಗೆ ಕೂಡ ಅಡಿಗಲ್ಲು ಸ್ಥಾಪಿಸುವರು. ಬರುವ ವರ್ಷದ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಯವರ ಈ ಭೇಟಿ ಮತ್ತು ಅತ್ಯಂತ ದೊಡ್ಡ ಮೊತ್ತದ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡುತ್ತಿರುವುದು ತುಂಬ ಮಹತ್ವದ್ದಾಗಿದೆ.
ಇದನ್ನೂ ಓದಿ: Love You Rachchu: ‘ಲವ್ ಯೂ ರಚ್ಚು’ನಲ್ಲಿ ಮಿಲನಾ, ಡಾರ್ಲಿಂಗ್ ಕೃಷ್ಣಗೆ ಇಷ್ಟ ಆಗಿದ್ದೇನು? ವಿಡಿಯೋ ನೋಡಿ
Published On - 10:10 am, Thu, 30 December 21