ಅಹ್ಮದ್ ಪಟೇಲ್ ನಿಧನಕ್ಕೆ ಪ್ರಧಾನಿ ಸಂತಾಪ; ನಂಬಿಕಸ್ಥ ಒಡನಾಡಿಯನ್ನು ಕಳೆದುಕೊಂಡೆ ಎಂದ ಸೋನಿಯಾ ಗಾಂಧಿ
ಅಹ್ಮದ್ ಪಟೇಲ್ ಅಗಲಿಕೆಗೆ ರಾಷ್ಟ್ರಪತಿ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸೇರಿ ಪ್ರಮುಖ ರಾಜಕೀಯ ಗಣ್ಯರು ಸಂತಾಪ ಸೂಚಿಸಿದ್ದಾರೆ.
ದೆಹಲಿ: ಹಲವು ವರ್ಷಗಳ ಕಾಲ ಸೋನಿಯಾ ಗಾಂಧಿಯವರ ರಾಜಕೀಯ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸಿ, ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ ಹಿರಿಯ ನಾಯಕ ಅಹ್ಮದ್ ಪಟೇಲ್ ಇಂದು ಬಹು ಅಂಗಾಂಗ ವೈಫಲ್ಯದಿಂದ ನಿಧನರಾದರು.
ಅಹ್ಮದ್ ಪಟೇಲ್ ಅಗಲಿಕೆಗೆ ರಾಷ್ಟ್ರಪತಿ, ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸೇರಿ ಪ್ರಮುಖ ರಾಜಕೀಯ ಗಣ್ಯರು ಸಂತಾಪ ಸೂಚಿಸಿದ್ದಾರೆ.
ತೀಕ್ಷ್ಣ ಮತಿಯ ಅಹ್ಮದ್ ಜೀ ಅವರ ನಿಧನದ ಸುದ್ದಿ ಕೇಳಿ ದುಃಖವಾಯಿತು: ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿಯವರು, ಅಹ್ಮದ್ ಜೀ ಅವರ ನಿಧನದ ಸುದ್ದಿ ಕೇಳಿ ದುಃಖವಾಯಿತು. ತಮ್ಮ ತೀಕ್ಷ್ಣ ಮತಿಯಿಂದಲೇ ಹೆಸರಾಗಿದ್ದ ಅವರು ಕಾಂಗ್ರೆಸ್ ಪಕ್ಷ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಪಟೇಲ್ ಜಿ ಪುತ್ರ ಫೈಸಲ್ ಅವರೊಂದಿಗೆ ಮಾತನಾಡಿ, ಸಾಂತ್ವನ ಹೇಳಿದ್ದೇನೆ. ಅಹ್ಮದ್ ಪಟೇಲ್ ಆತ್ಮ ಶಾಂತಿಯಲ್ಲಿ ನೆಲೆಸಲಿ ಎಂದಿದ್ದಾರೆ.
ನಂಬಿಕಸ್ಥ ಒಡನಾಡಿಯನ್ನು ಕಳೆದುಕೊಂಡಿದ್ದೇನೆ: ಆಪ್ತನನ್ನು ಕಳೆದುಕೊಂಡ ಸೋನಿಯಾ ಗಾಂಧಿಯವರು ಟ್ವೀಟ್ ಮಾಡಿ, ಇಡೀ ಜೀವನವನ್ನೇ ಕಾಂಗ್ರೆಸ್ ಪಕ್ಷಕ್ಕಾಗಿ ಮುಡಿಪಾಗಿ ಇಟ್ಟಿದ್ದ ನನ್ನ ನಂಬಿಕಸ್ಥ ಸಹೋದ್ಯೋಗಿ, ಸ್ನೇಹಿತನನ್ನು ಕಳೆದುಕೊಂಡಿದ್ದೇನೆ. ನನ್ನ ಒಡನಾಡಿಯಾಗಿದ್ದ ಅವರ ಜಾಗವನ್ನು ಇನ್ಯಾರೂ ತುಂಬಲು ಸಾಧ್ಯವಿಲ್ಲ. ನಿಷ್ಠೆ, ಕರ್ತವ್ಯ ಬದ್ಧತೆ, ಔದಾರ್ಯ, ಮತ್ತೊಬ್ಬರಿಗೆ ಸಹಾಯ ಮಾಡುವ ಮನೋಭಾವ ಹೊಂದಿದ್ದ ಅಹ್ಮದ್ ಪಟೇಲ್ ಉಳಿದವರಿಗಿಂತ ವಿಭಿನ್ನವಾಗಿದ್ದರು. ಅವರ ನಿಧನದಿಂದ ಶೋಕದಲ್ಲಿರುವ ಕುಟುಂಬಕ್ಕೆ ನನ್ನ ಸಾಂತ್ವನಗಳು. ಎಲ್ಲ ರೀತಿಯ ಬೆಂಬಲ, ಸಹಾಯವನ್ನೂ ನೀಡುತ್ತೇನೆ ಎಂದಿದ್ದಾರೆ.
ತುಂಬ ಚುರುಕಾದ ಯೋಜನಾ ಚತುರತೆ ಹೊಂದಿದ್ದ ಸಂಸದರಾಗಿದ್ದರು: ಸಂತಾಪ ಸೂಚಿಸಿ ರಾಷ್ಟ್ರಪತಿ ರಾಮನಾಥ ಕೋವಿಂದ ಟ್ವೀಟ್ ಮಾಡಿದ್ದು, ಹಿರಿಯ ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ನಿಧನದ ಸುದ್ದಿ ಕೇಳಿ ದುಃಖವಾಗಿದೆ. ತುಂಬ ಚುರುಕಾದ ಸಂಸದರಾಗಿದ್ದರು. ಯೋಜನಾ ಚತುರತೆ ಮತ್ತು ಮಾಸ್ ನಾಯಕನ ಮಿಶ್ರಿತ ಕೌಶಲ ಹೊಂದಿದ್ದರು. ತಮ್ಮ ಸ್ನೇಹಶೀಲ ವ್ಯಕ್ತಿತ್ವದಿಂದಾಗಿ ಬೇರೆ ಪಕ್ಷಗಳವರೊಂದಿಗೂ ಸ್ನೇಹ ಸಂಪಾದಿಸಿದ್ದರು. ಅವರ ಕುಟುಂಬಕ್ಕೆ ನನ್ನ ಸಾಂತ್ವನಗಳು ಎಂದು ಹೇಳಿದ್ದಾರೆ.
ಇನ್ನು ಕಾಂಗ್ರೆಸ್ ನಾಯಕರಾದ ಪಿ.ಚಿದಂಬರಂ, ಡಿ.ಕೆ.ಶಿವಕುಮಾರ್, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ದಿಗ್ವಿಜಯ ಸಿಂಗ್ ಸೇರಿ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್‌ನ ಹಿರಿಯ ನಾಯಕ ಅಹ್ಮದ್ ಪಟೇಲ್ ವಿಧಿವಶ
Published On - 11:28 am, Wed, 25 November 20