ಪೊಂಗಲ್ ಸಮಾರಂಭದಲ್ಲಿ ಬಾಲಕಿಯ ಕಾರ್ಯಕ್ರಮವನ್ನು ಮೆಚ್ಚಿ ಉಡುಗೊರೆ ನೀಡಿದ ಮೋದಿ
ನವದೆಹಲಿಯಲ್ಲಿ ಕೇಂದ್ರ ರಾಜ್ಯ ಸಚಿವ ಎಲ್ ಮುರುಗನ್ ಅವರ ನಿವಾಸದಲ್ಲಿ ನಡೆದ ಪೊಂಗಲ್ ಆಚರಣೆಯಲ್ಲಿ ಪ್ರಧಾನಮಂತ್ರಿ ಭಾಗವಹಿಸಿದ್ದು,ಈ ಏಕತೆಯ ಭಾವನೆಯು 2047 ರ ವೇಳೆಗೆ "ವಿಕಸಿತ್ ಭಾರತ್" ಅನ್ನು ನಿರ್ಮಿಸುವ ದೊಡ್ಡ ಶಕ್ತಿಯಾಗಿದೆ ಎಂದು ಹೇಳಿದರು.
ದೆಹಲಿ ಡಿಸೆಂಬರ್ 14: ಭಾನುವಾರ ದೆಹಲಿಯಲ್ಲಿ ನಡೆದ ಪೊಂಗಲ್ (Pongal)ಆಚರಣೆಯಲ್ಲಿ ಬಾಲಕಿಯ ಕಾರ್ಯಕ್ರಮವನ್ನು ನೋಡಿ ಮೆಚ್ಚಿದ ಪ್ರಧಾನಿ ನರೇಂದ್ರ ಮೋದಿ (Narendra Modi) ಆಕೆಗೆ ಶಾಲನ್ನು ಉಡುಗೊರೆಯಾಗಿ ನೀಡಿದ್ದಾರೆ. ದೆಹಲಿಯಲ್ಲಿರುವ ಕೇಂದ್ರ ರಾಜ್ಯ ಸಚಿವ ಎಲ್ ಮುರುಗನ್ ಅವರ ನಿವಾಸದಲ್ಲಿ ನಡೆದ ಪೊಂಗಲ್ ಆಚರಣೆಯಲ್ಲಿ ಪ್ರಧಾನಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಯುವತಿ ಪ್ರದರ್ಶನ ನೀಡಿದ್ದರು. ಆಕೆಯ ಗಾಯನದಿಂದ ಪ್ರಭಾವಿತರಾದ ಪ್ರಧಾನಮಂತ್ರಿಯವರು ಆಕೆಯನ್ನು ಭೇಟಿಯಾಗಲು ಕರೆದು ಶಾಲನ್ನು ನೀಡಿದ್ದಾರೆ.ಈ ವೇಳೆ ಬಾಲಕಿ ಪ್ರಧಾನಿಯವರ ಪಾದ ಮುಟ್ಟಿ ಆಶೀರ್ವಾದ ಪಡೆದರು.
ಸಚಿವರ ನಿವಾಸದಲ್ಲಿ ನಡೆದ ಕಾರ್ಯಕ್ರಮಕ್ಕೆ ಪ್ರಧಾನಿ ಸಾಂಪ್ರದಾಯಿಕ ಉಡುಗೆ ತೊಟ್ಟಿದ್ದರು. ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ, “ನಿಮ್ಮೆಲ್ಲರಿಗೂ ಪೊಂಗಲ್ ಹಬ್ಬದ ಶುಭಾಶಯಗಳು. ಈ ಪುಣ್ಯ ಸಂದರ್ಭದಲ್ಲಿ, ನಿಮ್ಮ ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ಸಂತೃಪ್ತಿ ಹರಿಯಬೇಕೆಂದು ನಾನು ಬಯಸುತ್ತೇನೆ. ಇಂದು ನಾನು ಆಪ್ತರೊಂದಿಗೆ ಪೊಂಗಲ್ ಆಚರಿಸುತ್ತಿದ್ದೇನೆ ಎಂದು ನನಗೆ ಅನಿಸುತ್ತದೆ ಎಂದು ಹೇಳಿದ್ದಾರೆ.
ಈ ಹಬ್ಬವು ‘ಏಕ್ ಭಾರತ್, ಶ್ರೇಷ್ಠ ಭಾರತ’ ಎಂಬ ಭಾವನೆಯನ್ನು ಪ್ರತಿಬಿಂಬಿಸುತ್ತದೆ ಎಂದೂ ಅವರು ಹೇಳಿದರು. ಇದೇ ಒಗ್ಗಟ್ಟಿನಿಂದ 2047ರ ‘ವಿಕಸಿತ್ ಭಾರತ’ಕ್ಕೆ ಶಕ್ತಿ ತುಂಬಲಿದೆ ಎಂದ ಅವರು, ಪೊಂಗಲ್ ಜೊತೆಗೆ ದೇಶದ ವಿವಿಧ ಭಾಗಗಳಲ್ಲಿ ಲೋಹ್ರಿ, ಮಕರ ಸಂಕ್ರಾಂತಿ, ಮಾಘ ಬಿಹು ಹೀಗೆ ವಿವಿಧ ಹೆಸರುಗಳಿಂದ ಸುಗ್ಗಿ ಹಬ್ಬಗಳನ್ನು ಆಚರಿಸಲಾಗುತ್ತಿದೆ. ಈ ಎಲ್ಲಾ ಹಬ್ಬಗಳು ಕೆಲವು ರೀತಿಯಲ್ಲಿ ಅಥವಾ ಇನ್ನೊಂದು ರೀತಿಯಲ್ಲಿ ಕೃಷಿಗೆ ಸಂಬಂಧಿಸಿವೆ ಎಂದು ಹೇಳಿದ್ದಾರೆ.
ಆಹ್ವಾನಕ್ಕಾಗಿ ಕೇಂದ್ರ ಸಚಿವರಿಗೆ ಧನ್ಯವಾದ ಅರ್ಪಿಸಿದ ಮೋದಿ, ಪೊಂಗಲ್ ಹಬ್ಬದ ಶುಭ ಸಂದರ್ಭದಲ್ಲಿ ರಾಷ್ಟ್ರದ ಏಕತೆಯನ್ನು ಬಲಪಡಿಸುವ ಸಂಕಲ್ಪಕ್ಕೆ ಎಲ್ಲರೂ ತಮ್ಮನ್ನು ತಾವು ಸಮರ್ಪಿಸಿಕೊಳ್ಳಬೇಕೆಂದು ಕರೆ ನೀಡಿದರು. “ನಾನು ಕೆಂಪು ಕೋಟೆಯಿಂದ ಕರೆ ನೀಡಿದ ಪಂಚ ಪ್ರಾಣದ ಮುಖ್ಯ ಅಂಶವೆಂದರೆ ದೇಶದ ಏಕತೆಯನ್ನು ಶಕ್ತಿಯುತಗೊಳಿಸುವುದು ಮತ್ತು ಏಕತೆಯನ್ನು ಬಲಪಡಿಸುವುದು” ಎಂದು ಅವರು ಹೇಳಿದರು.
ಇದನ್ನೂ ಓದಿ: ಮಕರ ಸಂಕ್ರಾಂತಿ ಸಂದರ್ಭದಲ್ಲಿ ಗೋವುಗಳಿಗೆ ಆಹಾರ ನೀಡಿದ ಮೋದಿ
ಪ್ರಧಾನಮಂತ್ರಿಯವರು ರಾಷ್ಟ್ರ ನಿರ್ಮಾಣದಲ್ಲಿ ನಾಗರಿಕರು, ಉದ್ಯಮಿಗಳು ಮತ್ತು ಉತ್ತಮ ಬೆಳೆಗಳ ಪಾತ್ರವನ್ನು ಎತ್ತಿ ತೋರಿಸಿದ್ದು, ಭಾರತದಲ್ಲಿನ ಪ್ರತಿ ಹಬ್ಬದಲ್ಲಿ ರೈತರು ಮತ್ತು ಬೆಳೆಗಳಿಗೆ ಸಂಪರ್ಕವನ್ನು ಒತ್ತಿ ಹೇಳಿದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:46 pm, Sun, 14 January 24