Interpol General Assembly: ದೆಹಲಿಯಲ್ಲಿ ಇಂದು 90ನೇ ಇಂಟರ್​ಪೋಲ್ ಸಭೆಯನ್ನು ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ

| Updated By: ಸುಷ್ಮಾ ಚಕ್ರೆ

Updated on: Oct 18, 2022 | 9:01 AM

ಇಂಟರ್‌ಪೋಲ್‌ನ 90ನೇ ಸಾಮಾನ್ಯ ಸಭೆಯು ಇಂದಿನಿಂದ ಅಕ್ಟೋಬರ್ 21ರವರೆಗೆ ನಡೆಯಲಿದೆ. ಸುಮಾರು 25 ವರ್ಷಗಳ ನಂತರ ಭಾರತದಲ್ಲಿ ಇಂಟರ್ ಪೋಲ್ ಜನರಲ್ ಅಸೆಂಬ್ಲಿ ಸಭೆ ನಡೆಯುತ್ತಿದೆ.

Interpol General Assembly: ದೆಹಲಿಯಲ್ಲಿ ಇಂದು 90ನೇ ಇಂಟರ್​ಪೋಲ್ ಸಭೆಯನ್ನು ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ
ಪ್ರಧಾನಿ ನರೇಂದ್ರ ಮೋದಿ
Follow us on

ನವದೆಹಲಿ: ನವದೆಹಲಿಯ ಪ್ರಗತಿ ಮೈದಾನದಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಇಂದು ಮಧ್ಯಾಹ್ನ 1.45ಕ್ಕೆ (ಮಂಗಳವಾರ) 90ನೇ ಇಂಟರ್‌ಪೋಲ್ ಸಾಮಾನ್ಯ ಸಭೆಯನ್ನು (Interpol General Assembly) ಉದ್ದೇಶಿಸಿ ಮಾತನಾಡಲಿದ್ದಾರೆ. ಇಂಟರ್‌ಪೋಲ್‌ನ 90ನೇ ಸಾಮಾನ್ಯ ಸಭೆಯು ಇಂದಿನಿಂದ ಅಕ್ಟೋಬರ್ 21ರವರೆಗೆ ನಡೆಯಲಿದೆ. ಈ ಸಭೆಯಲ್ಲಿ 195 ಇಂಟರ್‌ಪೋಲ್ ಸದಸ್ಯ ರಾಷ್ಟ್ರಗಳ ನಿಯೋಗಗಳು, ದೇಶಗಳ ಪೊಲೀಸ್ ಮುಖ್ಯಸ್ಥರು, ರಾಷ್ಟ್ರೀಯ ಕೇಂದ್ರ ಬ್ಯೂರೋಗಳ ಮುಖ್ಯಸ್ಥರು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಒಳಗೊಂಡ ನಿಯೋಗಗಳು ಭಾಗವಹಿಸಲಿವೆ.

ಅಕ್ಟೋಬರ್ 21ರಂದು ಈ ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಪಾಲ್ಗೊಳ್ಳಲಿದ್ದಾರೆ. ಇಂಟರ್‌ಪೋಲ್ ಅಧ್ಯಕ್ಷ ಅಹ್ಮದ್ ನಾಸರ್ ಅಲ್ ರೈಸಿ, ಪ್ರಧಾನ ಕಾರ್ಯದರ್ಶಿ ಜುರ್ಗೆನ್ ಸ್ಟಾಕ್ ಮತ್ತು ಕೇಂದ್ರ ತನಿಖಾ ದಳದ ನಿರ್ದೇಶಕರು ಈ ಸಂದರ್ಭದಲ್ಲಿ ಉಪಸ್ಥಿತರಿರುತ್ತಾರೆ. ಇಂಟರ್‌ಪೋಲ್‌ನ ತನ್ನ ಕಾರ್ಯಚಟುವಟಿಕೆಗೆ ಸಂಬಂಧಿಸಿದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ವರ್ಷಕ್ಕೊಮ್ಮೆ ಸಭೆ ಸೇರುತ್ತದೆ. ಸುಮಾರು 25 ವರ್ಷಗಳ ನಂತರ ಭಾರತದಲ್ಲಿ ಇಂಟರ್ ಪೋಲ್ ಜನರಲ್ ಅಸೆಂಬ್ಲಿ ಸಭೆ ನಡೆಯುತ್ತಿದೆ. ಈ ಹಿಂದೆ ಕೊನೆಯದಾಗಿ 1997ರಲ್ಲಿ ಭಾರತದಲ್ಲಿ ಈ ಸಭೆ ನಡೆದಿತ್ತು.

ಇದನ್ನೂ ಓದಿ: ಗುಜರಾತ್‌ನಲ್ಲಿ 50 ಲಕ್ಷ ಆರೋಗ್ಯ ಆಯುಷ್ಮಾನ್ ಕಾರ್ಡ್‌ಗಳ ವಿತರಿಸಿದ ಪ್ರಧಾನಿ ನರೇಂದ್ರ ಮೋದಿ, ಅದರಿಂದ ಸಿಗುವ ಲಾಭಗಳು ಹೀಗಿವೆ

ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷಗಳ ಆಚರಣೆಯ ಸಂದರ್ಭದಲ್ಲಿ 2022ರಲ್ಲಿ ಇಂಟರ್‌ಪೋಲ್ ಜನರಲ್ ಅಸೆಂಬ್ಲಿಯನ್ನು ಆಯೋಜಿಸುವ ಭಾರತದ ಪ್ರಸ್ತಾಪವನ್ನು ಇಂಟರ್​​ಪೋಲ್ ಸಾಮಾನ್ಯ ಸಭೆಯು ಬಹುಮತದೊಂದಿಗೆ ಅಂಗೀಕರಿಸಿತ್ತು. ಇಂಟರ್‌ಪೋಲ್ ಅಪರಾಧಗಳು ಮತ್ತು ಅಪರಾಧಿಗಳ ಹೆಸರುಗಳು, ಡಿಎನ್‌ಎ ಡೇಟಾಬೇಸ್, ಮುಖದ ಗುರುತಿಸುವಿಕೆ ಇಂಪ್ರೆಶನ್‌ಗಳು ಮತ್ತು ಫಿಂಗರ್‌ಪ್ರಿಂಟ್‌ಗಳಿಂದ ಕದ್ದ ಪಾಸ್‌ಪೋರ್ಟ್‌ಗಳಿಂದ ಹಿಡಿದು ಪೊಲೀಸ್ ಡೇಟಾಬೇಸ್‌ಗಳನ್ನು ನಿರ್ವಹಿಸುತ್ತದೆ. ಭಯೋತ್ಪಾದನೆಯಿಂದ ಕೊಲೆ ಆರೋಪಿಗಳವರೆಗೆ, ಮಾನವ ಕಳ್ಳಸಾಗಣೆ, ಹಣಕಾಸಿನ ವಂಚನೆಯಿಂದ ಕ್ರಿಪ್ಟೋ ವಂಚನೆಗಳವರೆಗೆ, ಇಂಟರ್‌ಪೋಲ್ ತನ್ನ ಸದಸ್ಯ ರಾಷ್ಟ್ರಗಳು ಮತ್ತು ಲಭ್ಯವಿರುವ ತಂತ್ರಜ್ಞಾನಗಳ ಸಹಾಯದಿಂದ ಅಂತಹ ಅಪರಾಧಗಳಿಗೆ ಕಡಿವಾಣ ಹಾಕಲು ಸಹಾಯ ಮಾಡುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ