ಜಮ್ಮು ಮತ್ತು ಕಾಶ್ಮೀರದಲ್ಲಿ ವಲಸೆ ಕಾರ್ಮಿಕರ ಮೇಲೆ ಗ್ರೆನೇಡ್ ದಾಳಿ: ಇಬ್ಬರು ಸಾವು

ಮೃತರು ಉತ್ತರ ಪ್ರದೇಶದ ಕನೌಜ್ ಜಿಲ್ಲೆಯವರು ಎಂದು ಪೊಲೀಸರು ತಿಳಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ವಲಸೆ ಕಾರ್ಮಿಕರ ಮೇಲೆ ಗ್ರೆನೇಡ್ ದಾಳಿ: ಇಬ್ಬರು ಸಾವು
ಪ್ರಾತಿನಿಧಿಕ ಚಿತ್ರ
Follow us
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Oct 18, 2022 | 7:07 AM

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ (Shopian)​ ನಗರದಲ್ಲಿ ಉಗ್ರರು ಕೈಬಾಂಬ್ (ಗ್ರೆನೇಡ್) ಎಸೆದು ಇಬ್ಬರು ವಲಸೆ ಕಾರ್ಮಿಕರನ್ನು (Migrant Workers) ಹತ್ಯೆ ಮಾಡಿದ್ದಾರೆ. ಮೃತರು ಉತ್ತರ ಪ್ರದೇಶದ ಕನೌಜ್ ಜಿಲ್ಲೆಯವರು ಎಂದು ಪೊಲೀಸರು ತಿಳಿಸಿದ್ದಾರೆ. ಇತ್ತೀಚೆಗಷ್ಟೇ ಭಯೋತ್ಪಾದಕರು ಕಾಶ್ಮೀರಿ ಪಂಡಿತರೊಬ್ಬರನ್ನು ಗುಂಡಿಕ್ಕಿ ಕೊಂದ ಕೆಲವೇ ದಿನಗಳ ನಂತರ ಈ ಆಘಾತಕಾರಿ ಘಟನೆ ನಡೆದಿದೆ. ಶೋಪಿಯಾನ್​ನ ಹಾರ್ಮೆನ್ ಎಂಬಲ್ಲಿ ಭಯೋತ್ಪಾದಕರು ಕೈಬಾಂಬ್ ಎಸೆದಿದ್ದು, ಉತ್ತರ ಪ್ರದೇಶದ ಕನೌಜ್ ನಿವಾಸಿಗಳಾದ ಮೊನೀಶ್ ಕುಮಾರ್ ಮತ್ತು ರಾಮ್ ಸಾಗರ್ ಎಂಬ ಇಬ್ಬರು ಕಾರ್ಮಿಕರು ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಅಲ್ಲಿಯೇ ಅವರು ಕೊನೆಯುಸಿರೆಳೆದರು. ಗ್ರೆನೇಡ್ ಎಸೆದ ಪ್ರದೇಶವನ್ನು ಭದ್ರತಾ ಪಡೆಗಳು ಸುತ್ತುವರಿದಿವೆ ಎಂದು ಕಾಶ್ಮೀರದ ಪೊಲೀಸರು ಮಂಗಳವಾರ ಟ್ವೀಟ್​ನಲ್ಲಿ ತಿಳಿಸಿದ್ದಾರೆ.

ಕೆಲ ಸಮಯದ ನಂತರ ಮತ್ತೊಂದು ಟ್ವೀಟ್ ಪೋಸ್ಟ್ ಮಾಡಿರುವ ಜಮ್ಮು ಕಾಶ್ಮೀರ ಪೊಲೀಸರು ಪ್ರಕರಣದ ಅಪ್​ಡೇಟ್ ನೀಡಿದ್ದಾರೆ. ‘ಶೋಪಿಯಾನ್ ಪೊಲೀಸರು ಗ್ರೆನೇಡ್ ಎಸೆದ ಇಮ್ರಾನ್ ಬಶೀರ್ ಗನಿ ಎಂಬಾತನನ್ನು ಬಂಧಿಸಿದ್ದಾರೆ. ಈತ ನಿಷೇಧಿತ ಲಷ್ಕರ್ ಎ ತಯ್ಯಬಾ ಸಂಘಟನೆಗೆ ಸೇರಿದವನು. ತನಿಖೆ ಮುಂದುವರಿದಿದೆ’ ಎಂದು ಪೊಲೀಸರು ಹೇಳಿದ್ದಾರೆ. ಬಾಂಬ್ ಸ್ಫೋಟಗೊಂಡಾಗ ಈ ಕಾರ್ಮಿಕರು ನಿದ್ರಿಸುತ್ತಿದ್ದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ದಕ್ಷಿಣ ಕಾಶ್ಮೀರದ ಈ ಜಿಲ್ಲೆಯ ಚೌಧರಿ ಗುಂಡ್ ಎಂಬಲ್ಲಿ ಇರುವ ತನ್ನ ಮನೆಯ ಸಮೀಪದಲ್ಲೇ ಪೂರನ್ ಕೃಷ್ಣ ಭಟ್ ಎಂಬ ಕಾಶ್ಮೀರಿ ಪಂಡಿತನ ಮೇಲೆ ಅ 15ರಂದು ಗುಂಡಿನ ದಾಳಿ ನಡೆದಿತ್ತು. ಶೋಪಿಯಾನ್​ನಲ್ಲಿ ವಾಸವಾಗಿದ್ದ ಅವರು ಕಾಶ್ಮೀರದಿಂದ ಹೊರಗೆ ಹೋದವರಲ್ಲ ಎಂದು ಸ್ಥಳೀಯರು ಹೇಳಿದ್ದರು.

ಈ ಸಾವಿನ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದ ಕಾಶ್ಮೀರಿ ಪಂಡಿತರ ಪ್ರಾತಿನಿಧಿಕ ಸಂಘಟನೆ ಕಾಶ್ಮೀರಿ ಪಂಡಿತರ ಸಂಘರ್ಷ ಸಮಿತಿಯು ಅಮಿತ್ ಶಾ ಅವರನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿತ್ತು. ‘ಕಾಶ್ಮೀರದಿಂದ ಎಂದಿಗೂ ವಲಸೆ ಹೋಗದ ಕಾಶ್ಮೀರಿ ಪಂಡಿತನನ್ನು ಕೊಲ್ಲಲಾಗಿದೆ. ಕಳೆದ ಅ 13ರಂದು ನಾವು ಈ ಸಂಬಂಧ ಟ್ವೀಟ್ ಮಾಡಿದ್ದರೂ ಪ್ರಯೋಜನವಾಗಿಲ್ಲ’ ಎಂದು ಅವರು ತಿಳಿಸಿದರು.

Published On - 7:02 am, Tue, 18 October 22