
ಅಮೃತಸರ, ಜೂನ್ 6: ಅಮೃತಸರದ ಸುವರ್ಣ ಮಂದಿರದಲ್ಲಿ (Golden Temple) ಇಂದು ಆಚರಿಸಲಾದ ‘ಆಪರೇಷನ್ ಬ್ಲೂ ಸ್ಟಾರ್’ನ 42ನೇ ವರ್ಷಾಚರಣೆಯ ಸಂದರ್ಭದಲ್ಲಿ ಖಲಿಸ್ತಾನ್ ಪರ ಘೋಷಣೆಗಳು ಮತ್ತು ಜರ್ನೈಲ್ ಸಿಂಗ್ ಭಿಂದ್ರನ್‌ವಾಲೆ ಪೋಸ್ಟರ್‌ಗಳನ್ನು ಪ್ರದರ್ಶಿಸಲಾಗಿದೆ. ಗೋಲ್ಡನ್ ಟೆಂಪಲ್ ಸಂಕೀರ್ಣದಲ್ಲಿ ನೆರೆದಿದ್ದ ನೂರಾರು ಸಿಖ್ ಧರ್ಮದವರು ‘ಖಲಿಸ್ತಾನ್ ಜಿಂದಾಬಾದ್’ ಎಂಬ ದೇಶವಿರೋಧಿ ಘೋಷಣೆಗಳನ್ನು ಕೂಗಿದರು. 1984ರ ಮಿಲಿಟರಿ ಕಾರ್ಯಾಚರಣೆಯಲ್ಲಿ ಹತನಾದ ಉಗ್ರಗಾಮಿ ಸಂಘಟನೆ ದಮ್ದಮಿ ತಕ್ಸಾಲ್‌ನ ಮುಖ್ಯಸ್ಥ ಜರ್ನೈಲ್ ಸಿಂಗ್ ಭಿಂದ್ರನ್‌ವಾಲೆ, ಭಾಯ್ ಅಂಬ್ರಿಕ್ ಸಿಂಗ್ ಮತ್ತು ಮೇಜರ್ ಜನರಲ್ ಶಬೇಗ್ ಸಿಂಗ್ ಅವರ ಪೋಸ್ಟರ್‌ಗಳನ್ನು ಹಿಡಿದು ಪ್ರದರ್ಶಿಸಲಾಯಿತು ಹಾಗೂ ಸಾರ್ವಜನಿಕರಿಗೆ ವಿತರಿಸಲಾಯಿತು.
ಈ ಘೋಷಣೆ ಕೂಗುವ ವೇಳೆ ಕೆಲವು ಯುವಕರು ಸಾಂಪ್ರದಾಯಿಕ ಖಡ್ಗಗಳನ್ನು ಗಾಳಿಯಲ್ಲಿ ಬೀಸಿ ಪ್ರದರ್ಶನ ನಡೆಸಿದರು. ಅಕಾಲ ತಖ್ತ್‌ನ ಜತೇದಾರ್ ಆಗಿರುವ ಗಿಯಾನಿ ಕುಲದೀಪ್ ಸಿಂಗ್ ಗರಗಜ್ ಅವರು ಈ ಸಂದರ್ಭದಲ್ಲಿ ಸಿಖ್ ಸಮುದಾಯವನ್ನುದ್ದೇಶಿಸಿ ಸಂದೇಶ ನೀಡಿದರು. ವಿದೇಶಗಳಲ್ಲಿ ನೆಲೆಸಿರುವ ಸಿಖ್ ಸಮುದಾಯದವರು ಪಂಜಾಬ್‌ನೊಂದಿಗೆ ತಮ್ಮ ಸಂಪರ್ಕವನ್ನು ಕಾಯ್ದುಕೊಳ್ಳಬೇಕು ಮತ್ತು ಬೇರೆಡೆ ನೆಲೆಸಿದ್ದರೂ ಪಂಜಾಬ್‌ನಲ್ಲಿರುವ ತಮ್ಮ ಜಮೀನುಗಳನ್ನು ಮಾರಾಟ ಮಾಡಬಾರದು ಎಂದು ಮನವಿ ಮಾಡಿದರು.
ಇದನ್ನೂ ಓದಿ: ಆಪರೇಷನ್ ಬ್ಲೂ ಸ್ಟಾರ್ ಒಂದು ಮಿಸ್ಟೇಕ್, ಇಂದಿರಾ ಗಾಂಧಿ ತಮ್ಮ ಜೀವವನ್ನೇ ತೆತ್ತರು; ಪಿ. ಚಿದಂಬರಂ
1984ರಲ್ಲಿ ಭಾರತೀಯ ಸೇನೆಯು ಗೋಲ್ಡನ್ ಟೆಂಪಲ್ ಒಳಗೆ ಟ್ಯಾಂಕ್ ಮತ್ತು ಆಯುಧಗಳನ್ನು ಬಳಸಿ ದಾಳಿ ನಡೆಸಿದ್ದು ಸಿಖ್ ಇತಿಹಾಸದ ಕಪ್ಪು ಅಧ್ಯಾಯ ಎಂದು ಆರೋಪಿಸಿದರು
ಆಪರೇಷನ್ ಬ್ಲೂ ಸ್ಟಾರ್ ಎಂದರೇನು?:
ಜೂನ್ 1984ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರ ಆದೇಶದ ಮೇರೆಗೆ ಭಾರತೀಯ ಸೇನೆಯು ಅಮೃತಸರದ ಸುವರ್ಣ ಮಂದಿರದೊಳಗೆ ಅಡಗಿದ್ದ ಜರ್ನೈಲ್ ಸಿಂಗ್ ಭಿಂದ್ರನ್‌ವಾಲೆ ಮತ್ತು ಆತನ ಸಶಸ್ತ್ರ ಉಗ್ರಗಾಮಿಗಳನ್ನು ಹೊರಹಾಕಲು ‘ಆಪರೇಷನ್ ಬ್ಲೂ ಸ್ಟಾರ್’ ಕಾರ್ಯಾಚರಣೆ ನಡೆಸಿತ್ತು. ಭಿಂದ್ರನ್‌ವಾಲೆ ಸುವರ್ಣ ಮಂದಿರದ ಆವರಣದಲ್ಲಿ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿಟ್ಟಿದ್ದನೆಂದು ವರದಿಯಾಗಿತ್ತು. ಈ ಕಾರ್ಯಾಚರಣೆಯ ಸಮಯದಲ್ಲಿ ಆತ ಮತ್ತು ಆತನ ಸಶಸ್ತ್ರ ಬೆಂಬಲಿಗರು ಹತರಾಗಿದ್ದ. ಆದರೆ, ಈ ದಾಳಿ ವ್ಯಾಪಕ ಟೀಕೆಗೆ ಗುರಿಯಾಗಿತ್ತು.
ಇದನ್ನೂ ಓದಿ: Watch ಆಪರೇಷನ್ ಬ್ಲೂಸ್ಟಾರ್ನ 38ನೇ ವಾರ್ಷಿಕೋತ್ಸವ ವೇಳೆ ಸ್ವರ್ಣ ಮಂದಿರದಲ್ಲಿ ಖಲಿಸ್ತಾನ್ ಪರ ಘೋಷಣೆ
ಈ ಜೂನ್ 6ರಂದು ಭಿಂದ್ರನ್‌ವಾಲೆ ಹತನಾಗಿದ್ದ ದಿನವನ್ನು ಪ್ರತಿ ವರ್ಷ ಸಿಖ್ ಹಾರ್ಡ್‌ಲೈನರ್‌ಗಳು ಆಚರಿಸುತ್ತಾ ಬಂದಿದ್ದಾರೆ. ಇದಾಗಿ ಕೆಲವೇ ತಿಂಗಳುಗಳ ನಂತರ, ಅಂದರೆ ಅಕ್ಟೋಬರ್ 31, 1984ರಂದು ಪ್ರಧಾನಿ ಇಂದಿರಾ ಗಾಂಧಿ ಅವರನ್ನು ನವದೆಹಲಿಯ ಅವರ ಅಧಿಕೃತ ನಿವಾಸದಲ್ಲಿ ಅವರದೇ ಇಬ್ಬರು ಸಿಖ್ ಅಂಗರಕ್ಷಕರಾದ ಬೀಯಂತ್ ಸಿಂಗ್ ಮತ್ತು ಸತ್ವಂತ್ ಸಿಂಗ್ ಗುಂಡಿಕ್ಕಿ ಹತ್ಯೆ ಮಾಡಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ