ಕುಸ್ತಿಪಟುಗಳು ಪದಕಗಳನ್ನು ಗಂಗಾ ನದಿಗೆ ಎಸೆಯದಂತೆ ತಡೆದ ರೈತ ನಾಯಕ ನರೇಶ್ ಟಿಕಾಯತ್

|

Updated on: May 30, 2023 | 8:46 PM

ಕುಸ್ತಿಪಟುಗಳು ತಮ್ಮ ಪದಕಗಳನ್ನು ಭಾರತೀಯ ಕಿಸಾನ್ ಯೂನಿಯನ್ ಅಧ್ಯಕ್ಷ ನರೇಶ್ ಟಿಕಾಯತ್ ಅವರಿಗೆ ಹಸ್ತಾಂತರಿಸಿದ್ದಾರೆ. ಐದು ದಿನಗಳಲ್ಲಿ ನ್ಯಾಯ ದೊರಕಿಸಿಕೊಡಲು ಟಿಕಾಯತ್ ಸಹಾಯ ಮಾಡಬೇಕೆಂಬ ಷರತ್ತಿನೊಂದಿಗೆ ಕುಸ್ತಿಪಟುಗಳು ತಮ್ಮ ಪದಕಗಳನ್ನು ಹಸ್ತಾಂತರಿಸಿದ್ದಾರೆ.

ಕುಸ್ತಿಪಟುಗಳು ಪದಕಗಳನ್ನು ಗಂಗಾ ನದಿಗೆ ಎಸೆಯದಂತೆ ತಡೆದ ರೈತ ನಾಯಕ ನರೇಶ್ ಟಿಕಾಯತ್
ನರೇಶ್ ಟಿಕಾಯತ್ ಕೈಗೆ ಪದಕಗಳನ್ನು ಒಪ್ಪಿಸಿದ ಕುಸ್ತಿಪಟುಗಳು
Follow us on

ಮಂಗಳವಾರ ಪ್ರತಿಭಟನಾ ನಿರತ ಕುಸ್ತಿಪಟುಗಳು (Wrestlers Protest) ತಮ್ಮ ಪದಕಗಳನ್ನು ಗಂಗಾ ನದಿಗೆ (Ganga) ಎಸೆಯಲು ನಿರ್ಧರಿಸಿದ್ದರು. ಇದಕ್ಕಾಗಿ ತಾವು ಗೆದ್ದ ಪದಕಗಳನ್ನು ತೆಗೆದುಕೊಂಡು ಕುಸ್ತಿಪಟುಗಳು ಹರಿದ್ವಾರಕ್ಕೆ (Haridwara) ಬಂದಿದ್ದರು. ಈ ಹೊತ್ತಲ್ಲಿ ರೈತರ ನಾಯಕ ನರೇಶ್ ಟಿಕಾಯತ್ (Naresh Tikait)  ಅವರು ಹರಿದ್ವಾರದ ಹರ್ ಕಿ ಪೌರಿ ಘಾಟ್‌ಗೆ ಆಗಮಿಸಿದ್ದಾರೆ. ಅಲ್ಲಿ ಕುಸ್ತಿಪಟುಗಳೊಂದಿಗೆ ಮಾತನಾಡಿ ಅವರು ನೀವು ಕಷ್ಟಪಟ್ಟು ಸಂಪಾದಿಸಿದ ಪದಕಗಳನ್ನು ಪವಿತ್ರ ನದಿಯಾದ ಗಂಗಾದಲ್ಲಿ ಬಿಸಾಡುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ಒತ್ತಾಯಿಸಿದ ನಂತರ ಕುಸ್ತಿಪಟುಗಳು ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.

ಕುಸ್ತಿಪಟುಗಳು ತಮ್ಮ ಪದಕಗಳನ್ನು ಭಾರತೀಯ ಕಿಸಾನ್ ಯೂನಿಯನ್ ಅಧ್ಯಕ್ಷ ನರೇಶ್ ಟಿಕಾಯತ್ ಅವರಿಗೆ ಹಸ್ತಾಂತರಿಸಿದ್ದಾರೆ. ಐದು ದಿನಗಳಲ್ಲಿ ನ್ಯಾಯ ದೊರಕಿಸಿಕೊಡಲು ಟಿಕಾಯತ್ ಸಹಾಯ ಮಾಡಬೇಕೆಂಬ ಷರತ್ತಿನೊಂದಿಗೆ ಕುಸ್ತಿಪಟುಗಳು ತಮ್ಮ ಪದಕಗಳನ್ನು ಹಸ್ತಾಂತರಿಸಿದ್ದಾರೆ.


ಟಿಕಾಯತ್ ಘಾಟ್‌ಗೆ ಆಗಮಿಸುವ ಮೊದಲು, ಪವಿತ್ರ ನದಿಯ ವ್ಯವಹಾರಗಳನ್ನು ನೋಡಿಕೊಳ್ಳುವ ಗಂಗಾ ಸಭೆಯು ಪದಕಗಳನ್ನು ಬಿಸಾಡುವುದಕ್ಕೆ ನಿಷೇಧಿಸುವ ಆದೇಶವನ್ನು ಸಂಜೆ ಹೊರಡಿಸಿತ್ತು. ಕುಸ್ತಿಪಟುಗಳು ತಮ್ಮ ಪದಕಗಳನ್ನು ಬಿಸಾಡಲು ಹರಿದ್ವಾರದ ಗಂಗಾ ತೀರದಲ್ಲಿರುವ ಪೂಜ್ಯ ಸ್ಥಳವಾದ ಹರ್ ಕಿ ಪೌರಿಯನ್ನು ಆಯ್ಕೆ ಮಾಡಿಕೊಂಡಿದ್ದರು. ಮೇ 30 ರಂದು ಹರಿದ್ವಾರದಲ್ಲಿ ಗಂಗಾ ದಸರಾ ನಡೆಯುತ್ತಿದೆ.


ಇದಕ್ಕೂ ಮುನ್ನ ತಮ್ಮ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ಹೇಳಿಕೆಯನ್ನು ಹಂಚಿಕೊಂಡ ಸಾಕ್ಷಿ ಮಲಿಕ್, ವಿನೇಶ್ ಫೋಗಟ್ ಮತ್ತು ಬಜರಂಗ್ ಪುನಿಯಾ ಈ ಪದಕಗಳು ನಮ್ಮ ಜೀವನ ಮತ್ತು ಆತ್ಮ. ನಾವು ಅವುಗಳನ್ನು ಗಂಗೆಯಲ್ಲಿ ಬಿಸಾಡಲಿದ್ದೇವೆ,ಏಕೆಂದರೆ ಅವಳು ಮಾ ಗಂಗಾ. ಅದರ ನಂತರ, ಬದುಕುವುದರಲ್ಲಿ ಅರ್ಥವಿಲ್ಲ, ಹಾಗಾಗಿ ನಾವು ಇಂಡಿಯಾ ಗೇಟ್‌ನಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತೇವೆ ಎಂದಿದ್ದಾರೆ.

ಇದನ್ನೂ ಓದಿ: Wrestlers Protest: ಪ್ರತಿಭಟನಾನಿರತ ಕುಸ್ತಿಪಟುಗಳು ಇಲ್ಲಿಯವರೆಗೆ ಗೆದ್ದ ಪದಕಗಳೆಷ್ಟು?

ಇಂಡಿಯಾ ಗೇಟ್ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಹುತಾತ್ಮರ ಸ್ಥಳವಾಗಿದೆ. ನಾವು ಅವರಷ್ಟು ಪವಿತ್ರರಲ್ಲ, ಆದರೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸುವಾಗ ನಮ್ಮ ಭಾವನೆಗಳು ಆ ಸೈನಿಕರನ್ನು ಹೋಲುತ್ತವೆ ಎಂದು 2016 ರ ರಿಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಸಾಕ್ಷಿ ಮಲಿಕ್ ಟ್ವೀಟ್ ಮಾಡಿದ್ದರು. ಏತನ್ಮಧ್ಯೆ, ಇಂಡಿಯಾ ಗೇಟ್ ನಲ್ಲಿ ಪ್ರತಿಭಟನೆ ಮಾಡಲು ಅವಕಾಶ ನೀಡುವುದಿಲ್ಲ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:45 pm, Tue, 30 May 23